ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಯುವ ರೈತ

Last Updated 27 ಜೂನ್ 2012, 11:50 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಸಾವಿರಾರು ರೂಪಾಯಿ ಸಂಬಳ ಕೊಡುವ ನೌಕರಿಯನ್ನು ಬಿಟ್ಟು ಸ್ವಾವಲಂಬಿ ಬದುಕನ್ನು ಅರಸಿ ಸಾವ ಯವ ಕೃಷಿಯಲ್ಲಿ ತೊಡಗಿಕೊಂಡು ಲಕ್ಷಾಂತರ ರೂ ಲಾಭವನ್ನು ಕಂಡ ಉಮೇಶ ಶಿವಾನಂದಪ್ಪ ಬಣಕಾರ ಇವರ ಸಾಹಸಗಾಥೆಯಿದು.

ಹೌದು ! ಇದು ನಿಮಗೆ ಅಚ್ಚರಿಯಾಗಿ ಕಾಣಬಹುದು. ರಟ್ಟೀಹಳ್ಳಿ ಸಮೀಪದ ಮಕರಿ ಗ್ರಾಮದ ಯುವಕ ಉಮೇಶ ಐಟಿಐ ಮುಗಿಸಿ ಅನೇಕ ವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಸಾವಿರಾರು ರೂ ಸಂಬಳ ಸಿಗುತ್ತಿತ್ತು. ಕೆಲಸದ ಸಂದರ್ಭ ದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡ ಬೇಕಾಗುತ್ತಿತ್ತು. ಈ ಸಂದರ್ಭದಲ್ಲಿ ರೈತ ರಿಂದ ಕಂಪೆನಿಗಳಿಗೆ ಆಗುತ್ತಿದ್ದ ಲಾಭ ವನ್ನು ಕಂಡು ತಾನೂ ಏಕೆ ಸ್ವಾವಲಂಬಿ ಬದುಕನ್ನು ಕಾಣಬಾರದು ಎಂದು ಚಿಂತಿಸಿ ಕೆಲಸಕ್ಕೆ ರಾಜೀನಾಮೆ ನೀಡಿ, ಗ್ರಾಮಕ್ಕೆ ಮರಳಿದ. ಇದ್ದ 3 ಎಕರೆ ಜಮೀನಿನಲ್ಲಿ ತೋಟಗಾರಿಕೆ ಆರಂಭಿಸಿದ.

ಇಂದು ಈ ತೋಟದಲ್ಲಿ 30ಕ್ಕೂ ಹೆಚ್ಚಿನ ಬೆಳೆಗಳನ್ನು ಕಾಣಬಹುದು. ಅಡಿಕೆ, ತೆಂಗು, ಬಾಳೆ, ಚಿಕ್ಕು, ಪೇರಲ, ನಿಂಬೆ, ಆಸ್ಟ್ರೇಲಿಯನ್ ನಿಂಬೆ, ಮಹಾ ಗನಿ, ನುಗ್ಗೆ, ಶಿವನಿ, ಬೆಟ್ಟದ ನೆಲ್ಲಿ, ಕರಿ ಬೇವು, ಶುಂಠಿ, ತೊಂಡೆ, ಮೆಣಸಿನ ಕಾಯಿ, ಅಂಜೂರ, ಪಪ್ಪಾಯಿ, ಹಾಗಲ ಕಾಯಿ, ನಿಂಬೆಹುಲ್ಲು, ಚಕ್ರಮುನಿ, ಮೋಸಂಬಿ, ಕಿತ್ತಲೆ, ಬೆಣ್ಣೆ ಹಣ್ಣು, ಎಲೆ ಬೆಳ್ಳುಳ್ಳಿ, ದಾಲ್ಚಿನ್ನಿ, ಚೆಕ್ಕೆ, ಮರಗೆಣಸು, ಸಿಲ್ವರ ಓಕ್, ನೇರಳೆ, ಸುವರ್ಣ ಗೆಡ್ಡೆ, ದಾಳಿಂಬೆ ಹೀಗೆ ಬೆಳೆಗಳ ಪಟ್ಟಿ ಬೆಳೆಯು ತ್ತಲೇ ಹೋಗುತ್ತದೆ. ತೋಟವನ್ನು ಹೊಕ್ಕರೆ ಬೇರೆ ಪ್ರಪಂಚವನ್ನು ಹೊಕ್ಕಂತೆ ಆಗುತ್ತದೆ. ಕೃಷಿ ತರಬೇತಿಗಳಿಗೆ ಹೋದಾಗ ವಿಶೇಷವಾಗಿ ಕಂಡು ಬರುವ ಬೆಳೆಗಳನ್ನು ತಂದು ತೋಟದಲ್ಲಿ ಪ್ರಾಯೋಗಿಕವಾಗಿ ಬೆಳೆಸುವ ಇವರ ಹವ್ಯಾಸ ನಿಜಕ್ಕೂ ಅಚ್ಚರಿ ತರುತ್ತದೆ.

ತೋಟದಲ್ಲಿ ಕೆಲಸ ಮಾಡುವಾಗ ಚಪ್ಪಲಿಯನ್ನು ಹಾಕದೇ ಬರಿಗಾಲಿನಿಂದಲೇ ಕಾರ್ಯ ನಿರ್ವಹಿ ಸುತ್ತಾರೆ. ಅಂದರೆ ತೋಟವನ್ನು ದೇವರಿ ಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ.

ಪ್ರಸ್ತುತ ಬಾಳೆಯಲ್ಲಿ 2.50 ಲಕ್ಷ ರೂ ಲಾಭದ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ವರ್ಷ 1.50 ಎಕರೆಯಲ್ಲಿ ಬೆಳೆದ ಬಾಳೆ 2 ಲಕ್ಷಕ್ಕೂ ಹೆಚ್ಚಿನ ಲಾಭ ತಂದು ಕೊಟ್ಟಿದೆ. ತೊಂಡೆಯಲ್ಲಿ ವಾರಕ್ಕೊಮ್ಮೆ ಸಾವಿರಾರು ರೂ ಗಳಿಸುತ್ತಿದ್ದಾರೆ. ತೋಟದ ಸುತ್ತಲೂ ಇರುವ 250 ಸಿಲ್ವರ್ ಓಕ್ ಮರಗಳು ಮುಂದಿನ ವರ್ಷಗಳಲ್ಲಿ ಕಟಾವಿಗೆ ಬರುತ್ತವೆ. ಮುಂದಿನ ಎರಡೇ ವರ್ಷದಲ್ಲಿ ವಾರ್ಷಿಕ 2 ಲಕ್ಷಕಕ್ಕಿಂತಲೂ ಹೆಚ್ಚಿನ ಲಾಭವನ್ನು ಕಾಣಬಹುದು ಎಂದು ಉಮೇಶ ತಿಳಿಸುತ್ತಾರೆ.

ಸಾವಯವ ಕೃಷಿಯ ಜೀವಾಳವಾದ ಜೀವಾಮೃತ, ರಸಗೊಬ್ಬರ ಘಟಕ, ಎರೆಹುಳು ಗೊಬ್ಬರ ಘಟಕ, ಹನಿ ನೀರಾವರಿ ಮುಂತಾದ ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಕೆಲಸದಲ್ಲಿ ಅವರ ಪತ್ನಿ ಸುನೀತಾ ಕೂಡಾ ಕೈ ಜೋಡಿಸಿದ್ದಾರೆ. 

ತಂದೆ ತಾಯಿಯವರ ಅನುಭವದ ನೆರಳಿನಲ್ಲಿ ಸ್ವಾವಲಂಬಿ ಬದುಕು ಕಂಡು ಕೊಂಡ ಉಮೇಶ ಎಲ್ಲ ಯುವಕರಿಗೆ ಆದರ್ಶವಾಗಿದ್ದಾರೆ. ಇವರ ಸಂಪರ್ಕ ವಿಳಾಸ  9611963778.                                                                                   
ವಿನಾಯಕ ಭೀಮಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT