ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಸುಳಿಯಿಂದ ಸೆಳೆಯುವುದು ಹೇಗೆ?

Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನೀವು ಬಹಳ ಸಮಯದ ಬಳಿಕ ನಿಮ್ಮ ಪಕ್ಕದ ಮನೆಯ ಮಹಿಳೆಯೊಬ್ಬರ ಬಳಿ ಮಾತನಾಡಲು ನಿಂತಿದ್ದೀರಿ. ದಿನನಿತ್ಯದ ಸಂಗತಿಗಳು, ಮಕ್ಕಳು, ಸಂಸಾರ, ಟ್ರಾಫಿಕ್ ಇತ್ಯಾದಿ ವಿಚಾರಗಳ ಕುರಿತು ಮಾತನಾಡುತ್ತೀರಿ. ಹೀಗೆ ಕೆಲ ಕಾಲ ಮಾತಾಡುತ್ತ ನಿಂತಿರುವಾಗ ಅಚಾನಕ್ಕಾಗಿ ಆಕೆ ತುಸು ಹಿಂಜರಿಕೆಯಿಂದಲೇ ತನ್ನ ಜೀವನ ಬದುಕಲು ಯೋಗ್ಯವಲ್ಲ ಎಂಬ ತನ್ನೊಳಗಿನ ಆಲೋಚನೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ.

ಸಹಜವಾಗಿ ಈ ಹೇಳಿಕೆ ಒಂದು ಕ್ಷಣ ನಿಮ್ಮನ್ನು ತಲ್ಲಣಗೊಳಿಸಬಹುದು. ಆದರೆ ತಕ್ಷಣ ಆಕೆಗೆ ನೀವೇನು ಹೇಳುತ್ತೀರಿ ಅಥವಾ ನೀವೇನು ಮಾಡುತ್ತೀರಿ? ನೀವೇನಾದರೂ ಸಹಾಯ ಮಾಡುವಿರಾ? ಎಂಬುದು ಇಲ್ಲಿ ಬಹಳ ಮುಖ್ಯ. ಮೊದಲು ನೀವು ಆಕೆ ಹೇಳುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಲು ನಿಮ್ಮ ಸಮಯ ನೀಡಿ. ಆಕೆಗೆ ಹತ್ತಿರವಾಗಿ ಮತ್ತು ನೀವು ಆ ಪರಿಸ್ಥಿತಿಯಲ್ಲಿ ಆಕೆಯ ಕುರಿತು ಕಾಳಜಿ ತೋರಿಸುವುದು ಅತ್ಯಂತ ಮಹತ್ವದ್ದು.

ಗಂಭೀರವಾಗಿ ನಿರ್ಧರಿಸಿದ ಯಾವುದೇ ತರಹದ ಆತ್ಮಹತ್ಯೆ ಆಲೋಚನೆ ಖಂಡಿತ ಒಂದು ಸಲ ಸಹಾಯಕ್ಕೆ ಕೈಚಾಚುತ್ತದೆ. ನೀವು ಆತ್ಮಹತ್ಯೆ ಯೋಚನೆ ಕುರಿತು ಆಕೆಯ ಬಳಿ ಮತ್ತಷ್ಟು ಮಾಹಿತಿ ಕೇಳುವುದರಿಂದ ಆಕೆಯನ್ನು ಪರೋಕ್ಷವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗುತ್ತದೆ ಎಂಬುದಾಗಿ ಚಿಂತೆ ಪಡಬಹುದು. ಆದರೆ ಇಂಥ ಸಮಯದಲ್ಲಿ ಆಕೆಯ ಆಲೋಚನೆ ಕುರಿತು ಮುಕ್ತವಾಗಿ ಮಾತನಾಡುವುದು ಆಕೆಗೆ ಅತ್ಯಂತ ಸಹಾಯಕಾರಿ.

ನಿಮಗೆ ಆಕೆಯ ಬದುಕಿನ ಕುರಿತು ಕಾಳಜಿ ಇದೆ ಎಂದು ಹೇಳುವ ಮೂಲಕ ಸಂರಕ್ಷಣೆಗೆ ಒಂದು ಪುಟ್ಟ ಹೆಜ್ಜೆ ಮುಂದಿಡಿ. ಆಕೆಯ ಕಥೆಯನ್ನು ಸಮಾಧಾನದಿಂದ ಮತ್ತು ಸ್ವೀಕಾರದ ರೀತಿಯಲ್ಲಿ ಕೇಳಿ. ಇದು ಆಕೆಗೆ ತಾನು ಏಕಾಂಗಿಯಲ್ಲ ಮತ್ತು ತನಗೆ ಸಹಾಯ ಲಭ್ಯವಿದೆ ಎಂಬ ಭಾವನೆ ಮೂಡಿಸುತ್ತದೆ. ‘ನೀವು ಹೇಗೆ ಯೋಚಿಸುತ್ತಿರುವಿರಿ ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ, ನಾನು ನಿಮ್ಮ ಕುರಿತು ಕಾಳಜಿ ಹೊಂದಿದ್ದೇನೆ ಮತ್ತು ನಿಮಗೆ ಸಹಾಯ ಬೇಕಾ’ ಎಂಬುದಾಗಿ ಕೇಳಿ. ಅಥವಾ ‘ಯಾವಾಗಿನಿಂದ ನೀವು ಈ ಭಾವನೆ ತಳೆದಿರುವಿರಿ? ಬದುಕಿನಲ್ಲಿ ಯಾವುದಾದರೂ ಘಟನೆ ನಿಮ್ಮನ್ನು ಈ ರೀತಿ ಆಲೋಚಿಸುವಂತೆ ಮಾಡಿದೆಯಾ’ ಎಂದು ಕೇಳಿ.

ಕೆಲವು ಸಲ ಆಕೆಯ ಮನಃಪರಿವರ್ತನೆ ನಿಟ್ಟಿನಲ್ಲಿ ನಾವು ತ್ವರಿತವಾಗಿ ಬುದ್ಧಿವಾದ ಹೇಳಲು ಮುಂದಾಗಬಹುದು. ಇದೇ ಅವಸರದಲ್ಲಿ ‘ನೀವು ಬದುಕಬೇಕು’ ಅಥವಾ ‘ನಿಮ್ಮ ಆತ್ಮಹತ್ಯೆ ಕುಟುಂಬಕ್ಕೆ ನೋವು ಉಂಟು ಮಾಡುತ್ತದೆ’ ಎಂದೆಲ್ಲ ಹೇಳಬಹುದು. ‘ನೀವು ಸ್ವಾಭಿಮಾನಿ ಮತ್ತು ದುರ್ಬಲರು’ ಎಂದು ಆಕೆಯ ಬಳಿ ಹೇಳಬಹುದು. ಈ ಎಲ್ಲ ಹೇಳಿಕೆಗಳನ್ನು ನಾವು ಸಹಾಯ ಮಾಡಲೆಂದು ಹೇಳಿರುತ್ತೇವೆ. ಆದರೆ ಇಂಥ ಹೇಳಿಕೆಗಳು ಒಳಿತಿಗಿಂತ ಹೆಚ್ಚು ಹಾನಿ ಮಾಡಬಹುದು. ಹೀಗಾಗಿ ನಾವು ಅವರ ಮಾತುಗಳಿಗೆ ಪ್ರತಿಕ್ರಿಯಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಆಕೆಯೊಂದಿಗೆ ಹೆಜ್ಜೆ ಹಾಕಿ ಆಕೆಯ ಮನದಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವವರ ಅಗತ್ಯ ಏನು? ಅವರು ಹಾಗೆ ಯೋಚಿಸಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳಿ.

ಮುಂದೇನು ಮಾಡುವಿರಿ? ಆತ್ಮಹತ್ಯೆ ಕುರಿತು ಬಹಳ ಕಾಲದಿಂದ ಯೋಚಿಸುತ್ತಿದ್ದೆ ಎಂಬ ಸಂಗತಿಯನ್ನು ನಿಮ್ಮ ಪಕ್ಕದ ಮನೆಯವಳು ಹೊರಹಾಕಬಹುದು. ಇದಕ್ಕಾಗಿ ಹಲವು ಭಿನ್ನ ಮಾರ್ಗಗಳನ್ನು ಆಲೋಚಿಸಿ ಇಟ್ಟಿದ್ದೆ ಎಂದು ತಿಳಿಸಬಹುದು. ಇದೇ ವೇಳೆ ಆಕೆ, ‘ಇದು ಗಂಭೀರವಾಗಿದ್ದಲ್ಲ. ನಾನೆ ಇದನ್ನು ನಿಭಾಯಿಸಿಕೊಳ್ಳುತ್ತೇನೆ. ಹೀಗಾಗಿ ನೀವು ಈ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ’ ಎಂಬುದಾಗಿ ನಿಮ್ಮ ಮನವರಿಕೆಗೆ  ಪ್ರಯತ್ನಿಸಬಹುದು. ಆಗ ನೀವು ಈ ನಿಮ್ಮ ಚರ್ಚೆಯನ್ನು ರಹಸ್ಯವಾಗಿಡುತ್ತೇನೆ ಎಂದು ಭರವಸೆ ನೀಡಬೇಡಿ. ಅವರ ಬದಲಾವಣೆಯ ಜವಬ್ದಾರಿ ತೆಗೆದುಕೊಳ್ಳಬೇಡಿ. ಬದಲಾಗಿ ಆಕೆಯ ಅಗತ್ಯ ತಿಳಿಯಲು ಪ್ರಯತ್ನಿಸಿ. ಹೇಗೆ ತಮ್ಮ ಬದುಕನ್ನು ಅಂತ್ಯ ಗೊಳಿಸಿಕೊಳ್ಳಬೇಕು ಎಂದು ನಿರ್ದಿಷ್ಟವಾಗಿ ಯೋಚಿಸಿಕೊಳ್ಳುತ್ತಿರುವವರು ಅಥವಾ ಆತ್ಮಹತ್ಯೆ ಪ್ರಯತ್ನ ಮಾಡುತ್ತಿರುವವರನ್ನು ಏಕಾಂಗಿಯಾಗಿ ಬಿಡಬೇಡಿ. ಅವರಿಗೆ ಸಮಸ್ಯೆ ನಿರ್ವಹಣೆ ಸಹಾಯವಾಣಿ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಭೇಟಿ ಮಾಡಲು ಸಲಹೆ ನೀಡಿ.

ಆತ್ಮಹತ್ಯೆ ತಡೆ ಆಧಾರಿತ ಮಾದರಿಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರನ್ನು ಹುಡುಕುವುದು, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನೆ ಅಧ್ಯಯನಗಳು ಆತ್ಮಹತ್ಯೆ ಕುರಿತು ಯೋಚಿಸುತ್ತಿರುವ ವ್ಯಕ್ತಿಯ ಬದುಕಿನಲ್ಲಿ ಇನ್ನೊಬ್ಬರು ಪ್ರವೇಶಿಸುವುದರ ಮಹತ್ವವನ್ನು ಸಾರುತ್ತವೆ.

ಆತ್ಮಹತ್ಯೆ ಎಂಬುದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ವಿಷಯವಾಗಿದ್ದು, ಸಮುದಾಯ ಆಧಾರಿತ ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡಿವೆ ಎಂದು ಸಂಶೋಧನೆ ಅಧ್ಯಯನಗಳು ಹೇಳುತ್ತವೆ. ‘ಲೈಫ್‌ಲೈನ್’ ಮೂಲದ ವಿಪತ್ತು ನಿವಾರಣೆ ಸೇವೆಯಾಗಿದ್ದು ಆತ್ಮಹತ್ಯೆ ಕುರಿತು ಜಾಗೃತಿ ನಿಟ್ಟಿನಲ್ಲಿ ಸದಸ್ಯರಿಗೆ ತರಬೇತಿ ನೀಡುತ್ತದೆ. ಶಾಲೆ, ಕಾಲೇಜು ಮತ್ತು ಕಾರ್ಯಾಗಾರಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನಡೆಯುವ ಜಾಗೃತಿ ಕಾರ್ಯಕ್ರಮಗಳು ಶಿಕ್ಷಕರು ಮತ್ತು ಇತರರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ದೃಷ್ಟಿ ಹಾಯಿಸಿವೆ.

‘ನಾವು ಪ್ರತಿಯೊಬ್ಬರಿಗೂ ಸಹಾಯ ಮಾಡದೇ ಇರಬಹುದು. ಆದರೆ ಸಹಾಯ ಮಾಡಬಹುದು’. ಮಾತನಾಡಿ ನೀವು ಕೆಲವರ ಬದುಕಿನಲ್ಲಿ ಬದಲಾವಣೆ ತರಬಹುದು.

-ಡಾ.ಪೂಣಿರ್ಮಾ ಭೋಲ
ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕೊಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT