ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಯ ಸಾವಿನ ಬಳಿಕವೂ ನಿಲ್ಲದ ಅವಹೇಳನ

ನೋವು ತೋಡಿಕೊಂಡ ಅನಂತಮೂರ್ತಿ ಪತ್ನಿ, ಪುತ್ರಿ
Last Updated 26 ಸೆಪ್ಟೆಂಬರ್ 2014, 5:15 IST
ಅಕ್ಷರ ಗಾತ್ರ

ಮಂಗಳೂರು: ‘ಯು.ಆರ್‌.ಅನಂತಮೂರ್ತಿ ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಈಗಲೂ ಅವರ ಬರವಣಿಗೆ, ವ್ಯಕ್ತಿತ್ವ-­ವನ್ನು ಟೀಕಿಸಲಾಗುತ್ತಿದೆ. ಅಮ್ಮನ ಬಗ್ಗೆಯೂ ಅವಹೇಳನ­ಕಾರಿಯಾಗಿ ಟೀಕಿಸುವ ಪತ್ರಗಳು ಬರುತ್ತಿವೆ. ಅಂತರ್ಜಾಲ­ದಲ್ಲೂ ಅವಹೇಳನಕಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ನಮ್ಮ ಮನಸ್ಸಿಗೆ ಬೇಸರವನ್ನುಂಟು ಮಾಡಿದೆ’  ಸಾಹಿತಿ ಯು.ಆರ್‌.ಅನಂತಮೂರ್ತಿ ಕಾಲವಾದ ಬಳಿಕವೂ ಕಿಡಿಗೇಡಿಗಳಿಂದಾಗಿ ಅವರ ಕುಟುಂಬ ಎದುರಿಸುತ್ತಿರುವ ನೋವನ್ನು ಅವರ ಪುತ್ರಿ ಅನುರಾಧಾ ಹಂಚಿಕೊಂಡಿದ್ದು ಹೀಗೆ.  
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಇಂಗ್ಲಿಷ್‌ ಸಂಘ ಹಾಗೂ ಕನ್ನಡ ಸಂಘ ಹಮ್ಮಿಕೊಂಡಿದ್ದ ‘ಯು.ಆರ್.­ಅನಂತಮೂರ್ತಿ’ ಕುರಿತ ವಿಚಾರಗೋಷ್ಠಿಯಲ್ಲಿ ಅನುರಾಧಾ, ಮತಾಂಧರಿಂದಾಗಿ ಕುಟುಂಬ ಎದುರಿಸುತ್ತಿರುವ ಕಿರಿಕಿರಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

‘ಧರ್ಮಗಳ ಬಗ್ಗೆ ಅನಂತಮೂರ್ತಿ ಅವರು ದ್ವಂದ್ವ ನೀತಿ ಅನುಸರಿಸುತ್ತಿದ್ದರು ಎಂದು ಹಲವರು ತಿಳಿದಿದ್ದಾರೆ. ಅವರು ಮೃತರಾದ ನಂತರವೂ ಈ ಬಗ್ಗೆ ಅನೇಕ ಅಪವಾದಗಳು ಬಂದವು. ಆದರೆ ವಾಸ್ತವ ಬೇರೆಯೇ. ಎಲ್ಲ ಧರ್ಮಗಳ ಬಗ್ಗೆ ಅವರು ಗೌರವ ಭಾವನೆ ಹೊಂದಿದ್ದರು. ಸಾಹಿತ್ಯ ರಚನೆ ಮಾಡುವಾಗಲೂ ಅವರು ಏಕಾಂತವನ್ನು ಬಯಸುತ್ತಿರಲಿಲ್ಲ. ಎಲ್ಲರ ಮಧ್ಯೆ ಕುಳಿತು ಬರೆಯುತ್ತಿದ್ದರು. ಯಾವುದೇ ಪ್ರಶಸ್ತಿ, ಪುರಸ್ಕಾರಗಳು ಬಂದರೂ ಮಗುವಿನಂತೆ ಖುಷಿ ಪಡುತ್ತಿದ್ದರೇ ಹೊರತು ಅವರ ವ್ಯಕ್ತಿತ್ವದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ’ ಎಂದು ಹೇಳಿದರು.

ಪತಿಯ ಜತೆಗಿನ ಸಾಂಗತ್ಯವನ್ನು ಹಂಚಿಕೊಂಡ ಎಸ್ತರ್‌, ‘ನರೇಂದ್ರ ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಯು.ಆರ್.ಅನಂತಮೂರ್ತಿ ಅವರು ಹೇಳಿಲ್ಲ. ಮೋದಿ ಆಡಳಿತದಲ್ಲಿ ಇರಲು ಇಷ್ಟವಿಲ್ಲ ಎಂದು ಹೇಳಿದರೇ ವಿನಃ ಬೇರೆ ಯಾವ ಉದ್ದೇಶವೂ ಅವರಲ್ಲಿ ಇರಲಿಲ್ಲ’ ಎಂದು ಭಾವುಕರಾಗಿ ನುಡಿದರು.

ಪತ್ರಕರ್ತೆ ದೀಪಾ ಗಣೇಶ್‌ ಮಾತನಾಡಿ, ‘ಅನಂತಮೂರ್ತಿಯವರ ಜೀವನೋತ್ಸಾಹ, ಭರವಸೆಗಳು ನಮ್ಮಲ್ಲಿ ನಾಳೆಯ ಬಗ್ಗೆ ಹೊಸ ಹೊಸ ಹುಮ್ಮಸ್ಸುಗಳು ಬೆಳೆಯುವಂತೆ ಮಾಡಿವೆ. ಸಮುದಾಯಕ್ಕೆ ಅವರು ಸ್ಫೂರ್ತಿಯ ಚಿಲುಮೆಯಂತಿದ್ದರು’ ಎಂದರು. ‘ಶಿವರಾಮ ಕಾರಂತ, ಮಹಾತ್ಮ ಗಾಂಧೀಜಿ ಹಾಗೂ ಬಸವಣ್ಣರಂತಹ ಮೇರು ವ್ಯಕ್ತಿಗಳನ್ನು ಅವರು ತಮ್ಮ ಗುರುಗಳಂತೆ ಭಾವಿಸಿದ್ದರು. ಇಂದು ನಮ್ಮ ನಡುವೆ ಅವರು ಜೀವಂತವಿಲ್ಲದಿದ್ದರೂ ಅವರ ಕೃತಿ, ಕೊಡುಗೆ, ನೆನಪುಗಳ ಮೂಲಕ ನಮ್ಮೊಳಗೆ ಅವರನ್ನು ಜೀವಂತವಾಗಿರಿಸಿಕೊಳ್ಳಬೇಕು’ ಎಂದರು.

ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ, ಇಂಗ್ಲಿಷ್‌ ಮತ್ತು ಕನ್ನಡ ಸಂಘದ ಸಂಯೋಜಕರಾದ ಎಚ್‌. ಪಟ್ಟಾಭಿರಾಮ ಸೋಮಯಾಜಿ, ಡಾ. ನಾಗಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ನಗರದ ಡಾ. ಶಶಿಕಾಂತ್‌ ಮತ್ತು ತಂಡದವರು  ನಡೆಸಿಕೊಟ್ಟ ಅನಂತಮೂರ್ತಿ­ಅವರ ಕುರಿತ ಸಂಗೀತ ಕಾರ್ಯಕ್ರಮ ಅಮೋಘವಾಗಿತ್ತು. ಗಿರೀಶ್‌ ಕಾಸರವಳ್ಳಿ ಅವರ ನಿರ್ದೇಶನದ ‘ಯು. ಆರ್‌. ಅನಂತಮೂರ್ತಿ– ನಾಟ್‌ ಎ ಬಯೋಗ್ರಫಿ ಬಟ್‌ ಎ ಹೈಪೊಥೀಸಿಸ್‌’ ಚಿತ್ರವನ್ನು ಪ್ರದರ್ಶಿಸಲಾಯಿತು. 
ಅನಂತಮೂರ್ತಿಯವರ ಕಾದಂಬರಿ, ಜೀವನಗಾಥೆ, ಪತ್ರಿಕೆಗಳಲ್ಲಿ ಅವರ ಬಗ್ಗೆ ಪ್ರಕಟವಾದ ಲೇಖನದ ತುಣುಕು­ಗಳನ್ನು ಹಾಗೂ ಅವರ ಕೃತಿಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT