ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯೋತ್ಸವದ ಸಂಭ್ರಮಕ್ಕೆ ಬಿತ್ತು ತೆರೆ

ಪ್ರೇಕ್ಷಕರನ್ನು ಸೆಳೆದ ಸಿನಿಮಾ ಮಂದಿ: ಮಕ್ಕಳ ಉತ್ಸಾಹಕ್ಕೆ ರಂಗು ತುಂಬಿದ ಕವಿ ಗುಲ್ಜಾರ್‌
Last Updated 29 ಸೆಪ್ಟೆಂಬರ್ 2013, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಹುಭಾಷಾ ಸಂಸ್ಕೃತಿಯ ಸೊಗಡಿಗೆ ವೇದಿಕೆಯಾಗಿದ್ದ ‘ಬೆಂಗಳೂರು ಸಾಹಿತ್ಯೋತ್ಸವ–2013’ಕ್ಕೆ ಭಾನುವಾರ ಸಂಜೆ ತೆರೆಬಿತ್ತು. ರಾಜ್ಯದಲ್ಲಿ 20 ಕ್ಕೂ ಅಧಿಕ ಲೇಖಕರು ಸಹಿತ ದೇಶ ವಿದೇಶದ 120ಕ್ಕೂ ಬರಹಗಾರರು ಉತ್ಸವದಲ್ಲಿ ವಿಚಾರ ಮಂಡಿಸಿದರು.

ಮೂರು ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿಗಳನ್ನು ಆಯೋಜಿಸಿದ್ದು ಈ ಸಲದ ವಿಶೇಷ. ‘ಮಕ್ಕಳ ಕೂಟ’ದಲ್ಲಿ ಚಿಣ್ಣರ ಸಂಭ್ರಮ ಮುಗಿಲು ಮುಟ್ಟಿತ್ತು. ಮಕ್ಕಳ ಉತ್ಸಾಹಕ್ಕೆ ರಂಗು ತುಂಬಿದವರು ಹಿರಿಯ ಕವಿ ಗುಲ್ಜಾರ್‌ ಅವರು. ಈ ಸಲ  ಪ್ರೇಕ್ಷಕರು ಹಿರಿಯ ಸಾಹಿತಿಗಳಿಗಿಂತ ಸಿನಿಮಾ ಮಂದಿಯ ನೋಡಲೇ ಹೆಚ್ಚು ಆಸಕ್ತಿ ತೋರಿದರು. ಗುಲ್ಜಾರ್‌, ಫರ್‌ಹಾನ್‌ ಅಕ್ತರ್‌ ಅವರ ಗೋಷ್ಠಿಗಳಲ್ಲಿ ಕಂಡುಬಂದ ಸಾಹಿತ್ಯ ಪ್ರೇಮಿಗಳ ಉಲ್ಲಾಸ ಉಳಿದ ಗೋಷ್ಠಿಗಳಲ್ಲಿ ಕಂಡು ಬರಲಿಲ್ಲ. ಕೆಲವು ವಿದ್ವತ್‌ ಪೂರ್ಣ ಗೋಷ್ಠಿಗಳಲ್ಲೂ ಪ್ರೇಕ್ಷಕರ ಕೊರತೆ ಇತ್ತು.

ಕನ್ನಡ ಭಾಷೆಯ ಗೋಷ್ಠಿಗಳಲ್ಲಿ ಪ್ರೇಕ್ಷಕರ ಕೊರತೆ ಬಗ್ಗೆ ಭಾನುವಾರದ ಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತವಾಯಿತು. ‘ನಾದದ ನದಿಯೊಂದು ನಡೆದಾಂಗ’ ಗೋಷ್ಠಿಯಲ್ಲಿ ಹಿರಿಯ ಕವಿ ಎಚ್.ಎಸ್‌.ವೆಂಕಟೇಶ­ಮೂರ್ತಿ, ಸಿದ್ದಲಿಂಗಯ್ಯ, ವಿಮರ್ಶಕಿ ಎಂ.ಎಸ್‌. ಆಶಾದೇವಿ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು. ‘ಕವಿಗೆ ಹಾಡುವುದು ಮುಖ್ಯ. ಉಳಿದವರು ಕೇಳುತ್ತಾರೆ ಎಂಬ ಬಗ್ಗೆ ಚಿಂತೆ ಇಲ್ಲ.

ಪ್ರೇಕ್ಷಕರು ಕಡಿಮೆ ಇದ್ದಾರೆ ಎಂಬ ಬಗ್ಗೆ ವಿಷಾದ ಇಲ್ಲ’ ಎಂದು ಅವರು ನುಡಿದರು. ‘ಇಲ್ಲಿ ಒಂದೇ ಒಂದು ಕನ್ನಡದ ನಾಮಫಲಕ ಇಲ್ಲ. ಕಳೆದ ವರ್ಷವೇ ಈ ಬಗ್ಗೆ ತಿಳಿಸಿದ್ದೆ’ ಎಂದು ಹಿರಿಯ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅಸಮಾಧಾನ ವ್ಯಕ್ತಪಡಿಸಿದರು. ‘ಗುಲ್ಜಾರ್‌ ಹಾಗೂ ಫರ್‌್ಹಾನ್‌  ಅಕ್ತರ್‌ ಪಾಲ್ಗೊಂಡ ಗೋಷ್ಠಿಗಳು ಹೊರತುಪಡಿಸಿ ಉಳಿದ ಗೋಷ್ಠಿಗಳಲ್ಲಿ ಕನ್ನಡ ಗೋಷ್ಠಿಗಳಷ್ಟೇ ಪ್ರೇಕ್ಷಕರು ಇದ್ದರು. ನೂರಾರು ಪ್ರೇಕ್ಷಕರು ಕನ್ನಡ ವಿದ್ವಾಂಸರ ಭಾಷಣಗಳನ್ನು ಕೇಳಿದ್ದಾರೆ. ಸುಮ್ಮನೆ ಜನ ಕಡಿಮೆ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ಐಟಿ ತಂತ್ರಜ್ಞ ಜಯತೀರ್ಥ ತಿಳಿಸಿದರು.

‘ಕಳೆದ ಬಾರಿಯ ಗೋಷ್ಠಿಗಳಿಗಿಂತ ಈ ಸಲದ ಗೋಷ್ಠಿಗಳು ಚೆನ್ನಾಗಿದ್ದವು. ಕಳೆದ ವರ್ಷ ಸೆಲೆಬ್ರಿಟಿಗಳಿಗೆ ಒತ್ತು ನೀಡಲಾಗಿತ್ತು. ಈ ಸಲ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಗುಜರಾತ್‌ ವಿಷಯ, ಮಹಿಳೆಯರ ಮೇಲಿನ ದೌರ್ಜನ್ಯ, ಬಂದೂಕಿನ ನೆರಳಿನಲ್ಲಿ ಸಾಹಿತ್ಯ ರಚನೆ, ಪ್ರಾದೇಶಿಕ ಭಾಷೆಗಳ ಸಾಹಿತಿಗಳು ಎದುರಿಸುತ್ತಿರುವ ಸವಾಲುಗಳು ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ’ ಎಂದು ಅವರು ವಿಶ್ಲೇಷಿಸಿದರು.

‘ಅಶೋಕ ವಾಜಪೇಯಿ, ನವನೀತ ದೇವಸೇನ್‌ ಮತ್ತಿತರ ಲೇಖಕರು ನಾಲ್ಕಕ್ಕೂ ಅಧಿಕ ಗೋಷ್ಠಿಗಳಲ್ಲಿ ವಿಚಾರ ಮಂಡಿಸಿದರು. ಕೆಲವು ವಿಷಯಗಳ ಪುನರಾವರ್ತನೆ ತಪ್ಪಿಸಬೇಕಿತ್ತು. ಆಗ ಇನ್ನಷ್ಟು ಚೆನ್ನಾಗಿರುತ್ತಿತ್ತು. ಅಲ್ಲದೆ ನಗರದೊಳಗೆ ಉತ್ಸವವನ್ನು ಆಯೋಜಿಸಬೇಕಿತ್ತು’ ಎಂದು ಸಾಹಿತ್ಯ ವಿದ್ಯಾರ್ಥಿ ಅನಿಲ್‌ ಅಭಿಪ್ರಾಯಪಟ್ಟರು.

‘ಬೆಂಗಳೂರಿನ ಸಾಹಿತ್ಯಾಸಕ್ತರ ಸಹಕಾರದಿಂದ ಉತ್ಸವ ಯಶಸ್ಸು ಸಾಧಿಸಿದೆ. ಈ ಸಲ ವಿದೇಶಿ ವಿದ್ವಾಂಸರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ವರ್ಷ ಇನ್ನಷ್ಟು ವೈವಿಧ್ಯಮಯವಾಗಿ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳ ನಡುವಿನ ಅಂತರ ಕಡಿಮೆ ಆಗಬೇಕು ಎಂಬುದು ಉತ್ಸವದ ಉದ್ದೇಶಗಳಲ್ಲಿ ಒಂದು’ ಎಂದು ಸಂಘಟಕರಲ್ಲಿ ಒಬ್ಬರಾದ ವಿಕ್ರಮ್‌ ಸಂಪತ್‌ ತಿಳಿಸಿದರು.

ಮದುವೆ ಮುಂದೂಡಿದರು!
ಬೆಂಗಳೂರು: ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಂಭ್ರಮ. ಕೆಲವರಿಗೆ ವಾರಾಂತ್ಯದ ಉಲ್ಲಾಸವಾದರೆ, ಹಿರಿಯ ಜೀವಗಳಿಗೆ ಗಂಭೀರ ಚಿಂತನ ಮಂಥನದ ವೇದಿಕೆ. ಜಮ್ಮು ಕಾಶ್ಮೀರದ ಯುವ ಕವಿ ಫಾರೂಕ್‌ ಶಾಹೀನ್‌ ಅವರಿಗೆ ಸಾಹಿತ್ಯ ಜೀವಾಳ. ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಮದುವೆಯನ್ನೇ ಮುಂದೂಡಿ ಆಗಮಿಸಿದ್ದರು.

ಉದ್ಘಾಟನಾ ಸಮಾರಂಭದಿಂದ ಹಿಡಿದು ಹೆಚ್ಚಿನ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಭಾನುವಾರ ನಡೆದ ‘ಭಾರತದ ಧ್ವನಿ– ಪ್ರಾದೇಶಿಕ ಭಾಷೆಗಳಲ್ಲಿ ಯುವ ಸಾಹಿತ್ಯ’ ಗೋಷ್ಠಿಯಲ್ಲಿ ಶಾಹೀನ್‌ ಅವರು ತಮ್ಮ ಎರಡು ಕವನಗಳನ್ನು ವಾಚಿಸಿದರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪುರಸ್ಕೃತರೂ ಹೌದು. ‘ಸಾಹಿತ್ಯ ಸಮ್ಮೇಳನಕ್ಕಾಗಿಯೇ ವಿವಾಹ ಸಮಾರಂಭವನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಿದ್ದಾರೆ. ಸಾಹಿತ್ಯ ಪ್ರೇಮಿಯಾಗಿರುವ ಭಾವಿ ಪತ್ನಿ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು’ ಎಂದು ಅವರು ತಿಳಿಸಿದರು.

‘ನನ್ನ ಬಾಲ್ಯದಲ್ಲಿ ಕಾಶ್ಮೀರದಲ್ಲಿ ಹಸಿರು ಕಾಡು, ತಣ್ಣನೆ ನೀರು ಇತ್ತು. ಹಿತವಾದ ವಾತಾವರಣ ಇತ್ತು. ಕಬಡ್ಡಿ ಮತ್ತಿತರ ಆಟಗಳನ್ನು ಆಡುತ್ತಿದ್ದೆವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಆದರೂ, ನಾವು ವಿಶ್ವಾಸ ಕಳೆದುಕೊಂಡಿಲ್ಲ’ ಎಂದು ಅವರು ಹೇಳಿದರು.
ಅಸ್ಸಾಂನ ಯುವಕವಿ ಅರಿಂದಮ್ ಬೊರ್ಕಟಕಿ, ‘ಗುಲ್ಜಾರ್‌, ಚಂದ್ರಶೇಖರ ಕಂಬಾರ ಅವರು ಉತ್ಸವದಲ್ಲಿ ಮಾತೃಭಾಷೆಯಲ್ಲೇ ಮಾತನಾಡಿದ್ದಾರೆ.  ಇದು ಪ್ರಾದೇಶಿಕ ಭಾಷೆಗಳ ಲೇಖಕರ ಮಾತೃಭಾಷಾ ಪ್ರೀತಿಗೆ ಸಾಕ್ಷಿ. ಪ್ರಾದೇಶಿಕ ಭಾಷೆಗಳ ಲೇಖಕರ ಕೃತಿಗಳು ದೊಡ್ಡ ಸಮುದಾಯವನ್ನು ತಲುಪಲು ಕೃತಿಗಳ ಭಾಷಾಂತರದ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು.

ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ನಲ್ಲಿ ಬೇರೆಯವರ ಸುಂದರ ಛಾಯಾಚಿತ್ರಗಳನ್ನು ಹಾಕಿ ಸ್ನೇಹ ಸಂಪಾದಿಸುವ ಪರಿಯ ಬಗ್ಗೆ ಮರಾಠಿಯ ಯುವಕವಿ ಧರ್ಮಕೀರ್ತಿ ಸುಮಂತ್‌ ಬೆಳಕು ಚೆಲ್ಲಿದರು. ತೆಲುಗುವಿನ ಯುವಕವಿ ಮೆಂಪಲ್ಲಿ ಗಂಗಾಧರ ಅವರು ‘ಹಂಪಿ ಬಜಾರ್‌’ ಅನ್ನು ಈಗ ಮ್ಯೂಸಿಯಂ ಹಾಗೂ ಛಾಯಾಚಿತ್ರಗಳಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ವಿಷಾದಿಸಿದರು.

ಸಮನ್ವಯಕಾರರಾಗಿದ್ದ ಜಯಂತ್‌ ಕೋಡ್ಕಣಿ, ‘ಪ್ರಾದೇಶಿಕ ಭಾಷಾ ಸಂಸ್ಕೃತಿ ಶ್ರೀಮಂತವಾದುದು. ನಗರ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅವರು ಈಗ ಇಂಗ್ಲಿಷ್‌ ಭಾಷೆ ಮಾತ್ರ ಮಾತನಾಡುತ್ತಾರೆ’ ಎಂದರು.

‘1970ರಲ್ಲಿ ಮಲ್ಲೇಶ್ವರದಲ್ಲಿ ನೆಲೆಸಿದ್ದ ಮರಾಠಿ ಕುಟುಂಬವೊಂದರ ಹಿರಿಯ ಸದಸ್ಯೆ ಮಗುವಿಗೆ ಮನೆಯ ಟೆರೆಸ್‌ನಲ್ಲಿ ‘ಆಕಾಶದಲ್ಲಿ ವಿಮಾನ ಹಾರುತ್ತಿದೆ’ ಎಂದು ಮರಾಠಿಯಲ್ಲಿ ಹೇಳಿಕೊಡುತ್ತಿದ್ದರು. ಮೊದಲನೇ ಮಹಡಿಯಲ್ಲಿದ್ದ ಕನ್ನಡಿಗ ಇದನ್ನು ಮಗುವಿಗೆ ಕನ್ನಡದಲ್ಲಿ ಹೇಳಿಕೊಡುತ್ತಿದ್ದ. ಶಾಲೆಯಲ್ಲಿ ಶಿಕ್ಷಕಿ ಇಂಗ್ಲಿಷ್‌ನಲ್ಲಿ ಹೇಳಿಕೊಡುತ್ತಿದ್ದರು. ಮಗುವಿಗೆ ಬಹುಭಾಷೆಗಳ ಅರಿವಾಗುತ್ತಿತ್ತು. ಈಗ ಮಗುವಿಗೆ ಇದನ್ನು ಕುಟುಂಬ ಹಿರಿಯ ಸದಸ್ಯೆ ಇಂಗ್ಲಿಷ್‌ನಲ್ಲೇ ಹೇಳಿಕೊಡುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT