ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ವಲಯದ ಪ್ರತಿಭಟನೆ ಗಂಭೀರವಾಗಿ ಪರಿಗಣಿಸಿ

Last Updated 11 ಅಕ್ಟೋಬರ್ 2015, 19:27 IST
ಅಕ್ಷರ ಗಾತ್ರ

ವೈಚಾರಿಕತೆ ಹಾಗೂ ನಿರ್ದಿಷ್ಟ ಆಹಾರ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಪ್ರತಿಭಟಿಸಿ ರಾಷ್ಟ್ರದ ಅನೇಕ ಲೇಖಕರು ಕಳೆದ ಕೆಲವು ದಿನಗಳಿಂದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಪ್ರಕ್ರಿಯೆ ಮುಂದುವರಿದಿದೆ. ಕೆಲವರು ಅಕಾಡೆಮಿ ಸದಸ್ಯತ್ವ ಅಥವಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ  ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಹಾಗೂ ಗೋಮಾಂಸ ಇಟ್ಟಿದ್ದರೆಂದು ಶಂಕಿಸಿ ಮನೆಗೆ ನುಗ್ಗಿ ಪೈಶಾಚಿಕ ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ದಾದ್ರಿ ಘಟನೆಗಳಿಗೆ ಸಾಹಿತ್ಯ ವಲಯ ತೋರುತ್ತಿರುವ ಈ ಪ್ರತಿಭಟನೆ ಸಕಾಲಿಕ. ಈಗಾಗಲೇ, ಕರ್ನಾಟಕದಲ್ಲಿ ಹಿರಿಯ ಲೇಖಕ ಚಂದ್ರಶೇಖರ ಪಾಟೀಲ ಸೇರಿದಂತೆ ಏಳು ಮಂದಿ ಕನ್ನಡ ಲೇಖಕರು ವಿವಿಧ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.

ರಾಷ್ಟ್ರದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಬೌದ್ಧಿಕ ವಲಯ ತೋರಿರುವ ಈ ತೀವ್ರ ಅಸಮಾಧಾನದ ಹಿಂದಿರುವ ಆತಂಕವನ್ನು ಸರಿಯಾಗಿ ಗ್ರಹಿಸಬೇಕು. ಹಿಂದುತ್ವ ಸಿದ್ಧಾಂತಗಳಿಗೆ ಸರಿ ಹೊಂದುವ ಸಾಂಸ್ಕೃತಿಕ ನಿಯಮಗಳನ್ನು ಪ್ರತಿಪಾದಿಸುವುದಕ್ಕಾಗಿ ಅನುಸರಿಸಲಾಗುತ್ತಿರುವ ಹಿಂಸಾಮಾರ್ಗಗಳ ವಿರುದ್ಧ ಸಾಹಿತ್ಯವಲಯ ತೋರುತ್ತಿರುವ ಪ್ರತಿಭಟನೆಯನ್ನು ಸುತ್ತಲ ಸಮಾಜ ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಈ ಹಿಂದೆಯೂ ಲೇಖಕರು ಇಂತಹ ಪ್ರತಿಭಟನೆ ತೋರಿದ್ದಾರೆ. ಅಮೃತಸರದ ಸ್ವರ್ಣಮಂದಿರದಲ್ಲಿ ನಡೆದ ಬ್ಲೂಸ್ಟಾರ್ ಕಾರ್ಯಾಚರಣೆ ನಂತರ ಖುಷ್‌ವಂತ್ ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ನಯನತಾರಾ ಸೆಹಗಲ್ ಪ್ರತಿಭಟನೆ ಮಾಡಿದ್ದರು.

ಈಗ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನಯನತಾರಾ ಹಿಂದಿರುಗಿಸಿದ್ದಾರೆ. ಆದರೆ ಇದನ್ನು ಕೆಲವರು ಟೀಕಿಸಿದ್ದಾರೆ. ಕಾಂಗ್ರೆಸ್ ಆಡಳಿತವಿದ್ದಾಗ ನಡೆದ 1984ರ ಸಿಖ್ ವಿರೋಧಿ ದಂಗೆಯನ್ನು ಪ್ರಶ್ನೆ ಮಾಡದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸೋದರ ಸಂಬಂಧಿ ನಯನತಾರಾ ಅವರ ಆಕ್ರೋಶ, ಆಯ್ದ ಕೆಲವರ ವಿರುದ್ಧವಷ್ಟೇ ಎಂದು ಕೆಲವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದೇ ವರ್ಷದ ಆರಂಭದಲ್ಲಿ, ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರು ತಮ್ಮ ‘ಮಾಧೊರುಬಾಗನ್’ ಕಾದಂಬರಿ ವಿರುದ್ಧ ಹಿಂದುತ್ವ ಶಕ್ತಿಗಳ ತೀವ್ರ ಆಕ್ರಮಣಗಳನ್ನು ತಡೆಯಲಾಗದೆ, ಕಡೆಗೆ ‘ಲೇಖಕನಾಗಿ’ ತಮ್ಮ ಸಾವನ್ನು ಫೇಸ್‌ಬುಕ್ ಪುಟದಲ್ಲಿ ಸ್ವತಃ ಪ್ರಕಟಿಸಿಕೊಳ್ಳಬೇಕಾದ ಸ್ಥಿತಿ ಸೃಷ್ಟಿಯಾದದ್ದನ್ನು ಮರೆಯುವಂತಿಲ್ಲ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ರಾಜಕೀಯ ನಾಯಕತ್ವದ ನಿಷ್ಕ್ರಿಯತೆ, ಪ್ರಧಾನಿಯವರ ಮೌನ, ಮೂಲಭೂತವಾದ ಪ್ರತಿಪಾದಕರನ್ನು    ದಿಟ್ಟಗೊಳಿಸುತ್ತಾ ಸಾಗಿರುವುದು ದುರಂತ. ಮುಂಬೈನಲ್ಲಿ ನಡೆಯಬೇಕಿದ್ದ ಪಾಕಿಸ್ತಾನದ ಗಜಲ್ ಗಾಯಕ ಗುಲಾಂ ಅಲಿ ಕಛೇರಿಯನ್ನು ಶಿವಸೇನೆ ಬೆದರಿಕೆಯಿಂದ ರದ್ದು ಮಾಡಿದ ಕ್ರಮವಂತೂ  ಅಸಹನೀಯ. ಇಂತಹ ಪ್ರವೃತ್ತಿ ಭಾರತದ ಮೂಲಧಾತುವಾದ ಬಹುಸಂಸ್ಕೃತಿಯನ್ನು ನಾಶ ಮಾಡುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು. ಮೌನವಾಗಿ ಉಳಿಯುವುದು ಅನುಕೂಲಕರ ಎನಿಸಿರುವಂತಹ ಸಮಕಾಲೀನ ಸಂದರ್ಭದಲ್ಲಿ ಸಾಹಿತಿಗಳು ದಿಟ್ಟ ದನಿ ಎತ್ತಿದ್ದಾರೆ. ಪ್ರಶಸ್ತಿಗಳನ್ನು ಹಿಂದಿರುಗಿಸುವುದು ಅಥವಾ ಹುದ್ದೆಗಳನ್ನು ತೊರೆಯುವ ಕ್ರಿಯೆ ಸರ್ಕಾರಕ್ಕೆ ನೀಡಿದ ಬಲವಾದ ಎಚ್ಚರಿಕೆಯಾಗಿ ಪರಿಗಣಿಸಬೇಕು. ‘ಕಾರ್ಯಕ್ರಮ ಸಂಘಟನೆ ಹಾಗೂ ಬಹುಮಾನ ನೀಡುವುದರಾಚೆಗೂ ಸಾಹಿತ್ಯ  ಅಕಾಡೆಮಿ ಕೆಲಸ ಮಾಡಬೇಕು’ ಎಂದು ಸಾಹಿತ್ಯ ಅಕಾಡೆಮಿ ಸಾಮಾನ್ಯ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಶಿ ದೇಶಪಾಂಡೆ ಸೂಚಿಸಿರುವುದು ಸರಿಯಾಗಿಯೇ ಇದೆ.

ಭಾರತೀಯ ಲೇಖಕರ ಮಾತನಾಡುವ, ಬರೆಯುವ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ವಿಚಾರಗಳ ಬಗ್ಗೆ ಅಕಾಡೆಮಿ ಸಕ್ರಿಯವಾಗಬೇಕು, ಮೌನ ಸಲ್ಲದು ಎಂಬಂತಹ ನಿಲುವು ಸರಿಯಾದುದು. ಸಮಾಜದ ಸಾಕ್ಷಿಪ್ರಜ್ಞೆಗೆ ಸಂಕೇತವಾದ ಲೇಖಕರು ಇಂದು ಬೌದ್ಧಿಕ ಮುಂದಾಳುಗಳಾಗಿ ಉಳಿದಿಲ್ಲ, ಅವರ ದನಿಗಳಿಗೆ ಬೆಲೆ ಇಲ್ಲ. ಹೀಗಾಗಿ ತಮ್ಮ ದನಿ ಮರಳಿ ಪಡೆಯಲು ಇದು ಸಕಾಲ ಎಂಬಂಥ ಶಶಿ ದೇಶಪಾಂಡೆ ಮಾತು ಅರ್ಥಪೂರ್ಣ. ಆದರೆ ‘ಇಂತಹ ವಿಚಾರಗಳ ಬಗ್ಗೆ ಹೇಳಿಕೆ ನೀಡುವ ಸಂಪ್ರದಾಯ ಅಕಾಡೆಮಿಗೆ ಇಲ್ಲ’ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ವಿಶ್ವನಾಥ್ ಪ್ರಸಾದ್ ತಿವಾರಿ ಹೇಳಿರುವುದು ಅಚ್ಚರಿದಾಯಕ. ‘ರಾಜಕೀಯಗೊಳಿಸಲಾದ ವಿಚಾರಗಳಿಗೆ ಬೆಂಬಲ ನೀಡಲು ಅಕಾಡೆಮಿ ಬೀದಿಗಿಳಿಯಲಾಗದು. ಅಂತಹ ಕೆಲಸ ಮಾಡಲು ನಮಗೆ ಅವಕಾಶವಿಲ್ಲ ಅಥವಾ ಅದಕ್ಕೆ ಸಂಪನ್ಮೂಲಗಳೂ ಇಲ್ಲ’ ಎಂದು ಹೇಳಿರುವುದು ನಾಚಿಕೆಗೇಡು. ಇಂತಹ ವಾತಾವರಣದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ಸೃಜನಾತ್ಮಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿರುವುದು ಸಾಹಿತ್ಯದ ಉನ್ನತ ಪರಂಪರೆಗೆ ಅನುಗುಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT