ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಹಬ್ಬದಲ್ಲಿ ಕೇಳಿದ್ದು ಕಂಡಿದ್ದು...

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್‌ ಸಿಟಿಯ ಪಂಚತಾರಾ ಹೋಟೆಲ್‌ನ ಹಸಿರು ಹಾಸಿನ ಮೇಲೆ ನಡೆದ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಕಾರ್ಪೊರೇಟ್‌ ಕಲರವದ ನಡುವೆ ಕನ್ನಡದ ದನಿ ಕ್ಷೀಣಿಸಿದಂತೆ ಇತ್ತು. ಇಂಗ್ಲಿಷ್‌, ಹಿಂದಿ ಮಾತುಗಳೇ ಹೆಚ್ಚು. ಅಧ್ಯಾತ್ಮ ಹಾಗೂ ಸಿನಿಮಾಕ್ಕೆ ಚಪ್ಪಾಳೆಗಳ ಮಳೆ ಸುರಿದರೆ  ಗಂಭೀರ ಸಾಹಿತ್ಯದ ಗೋಷ್ಠಿಗಳು ಮೌನದ ಮನೆಯಾಗಿದ್ದವು.

ಮೊದಲ ದಿನವೇ ಇವುಗಳಿಗೆ ಸಿಕ್ಕ ಉದಾಹರಣೆಗಳೆಂಬಂತೆ ಶ್ರೀಶ್ರೀರವಿಶಂಕರ್‌ ಹಾಗೂ ಫರಾನ್‌ ಅಖ್ತರ್‌ ಗೋಷ್ಠಿಗಳು ತುಂಬಿ ತುಳುಕುತ್ತಿದ್ದವು. ಈ ನಡುವೆ ಉತ್ಸಾಹದಿಂದಲೇ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕನ್ನಡ ಬಾರದ ದೇಶಿಯರ ನಡುವೆ ಇದ್ದ ವಿದೇಶಿಯರಲ್ಲಿ ಬೆರಗು ಹಾಗೂ ಉತ್ಸಾಹ ತುಂಬಿತ್ತು. ಸಾಹಿತ್ಯ ವಿದ್ಯಾರ್ಥಿಗಳಾದ ನೈಜೀರಿಯಾದ ಅರ್ನೆಸ್ಟ್‌ ಹಾಗೂ ಡೆಕ್ಲಾನ್‌ ಅವರಂಥ ವಿದ್ಯಾರ್ಥಿಗಳು ಭಾರತೀಯ ಸಾಹಿತಿಗಳಂತೆಯೇ ಖಾದಿ ಕುರ್ತಾ, ಪೈಜಾಮ ತೊಟ್ಟು, ಕೈಯಲ್ಲೊಂದು ನೋಟ್‌ಬುಕ್‌ ಹಿಡಿದು ಶಿಸ್ತಿನ ವಿದ್ಯಾರ್ಥಿಗಳಂತೆ ಗೋಷ್ಠಿ ನಡೆಯುತ್ತಿದ್ದ ಮೈಸೂರು ಪಾರ್ಕ್‌ ಹಾಗೂ ಲಾನ್‌ ಬಾಗ್‌ ವೇದಿಕೆಗಳ ನಡುವೆ ಓಡಾಡಿಕೊಂಡಿದ್ದರು.


ಎಲೆಕ್ಟ್ರಾನಿಕ್‌ ಸಿಟಿಯ ವೆಲಂಕಣಿ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ‘ಬೆಂಗಳೂರು ಲಿಟರೇಚರ್‌ ಫೆಸ್ಟ್‌’ನಲ್ಲಿ ಸೇರಿದ್ದು ಬಗೆಬಗೆಯ ಮನಸ್ಸುಗಳು.

ಸಾಹಿತ್ಯದ ಜೊತೆಗೆ ಫ್ಯಾಷನ್‌, ಸಿನಿಮಾ ಕೂಡ ವಿಚಾರ ಮಂಥನದ ಭಾಗವಾಗಿದ್ದವು. ಇದಕ್ಕಿಂತ ಕುತೂಹಲ ಎನಿಸಿದ್ದು ವಿದೇಶಿ ಸಾಹಿತ್ಯಾಭಿಮಾನಿಗಳ ಉಪಸ್ಥಿತಿ. ಬೆಂಗಳೂರಿನ ಆಕರ್ಷಣೆಗೆ ಒಳಗಾದ ಅನೇಕ ವಿದೇಶೀಯರು ಸಾಹಿತ್ಯ ಹಬ್ಬದಲ್ಲಿ ಸಂತಸದಿಂದ ಓಡಾಡಿಕೊಂಡಿದ್ದರು. ಈ ಊರಿನ ಬಗ್ಗೆ,  ‘ಲಿಟರೇಚರ್‌ ಫೆಸ್ಟ್‌’ನ ಬಗ್ಗೆ ವಿದೇಶಿಯರೂ ಸೇರಿದಂತೆ ಅನೇಕರು ತಮ್ಮ ಅನಿಸಿಕೆಯನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.

ಎಲೆಕ್ಟ್ರಾನಿಕ್‌ ಸಿಟಿಯ ವೆಲಂಕಣಿ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ‘ಬೆಂಗಳೂರು ಲಿಟರೇಚರ್‌ ಫೆಸ್ಟ್‌’ನಲ್ಲಿ ಸೇರಿದ್ದು ಬಗೆಬಗೆಯ ಮನಸ್ಸುಗಳು.

ಸಾಹಿತ್ಯದ ಜೊತೆಗೆ ಫ್ಯಾಷನ್‌, ಸಿನಿಮಾ ಕೂಡ ವಿಚಾರ ಮಂಥನದ ಭಾಗವಾಗಿದ್ದವು. ಇದಕ್ಕಿಂತ ಕುತೂಹಲ ಎನಿಸಿದ್ದು ವಿದೇಶಿ ಸಾಹಿತ್ಯಾಭಿಮಾನಿಗಳ ಉಪಸ್ಥಿತಿ. ಬೆಂಗಳೂರಿನ ಆಕರ್ಷಣೆಗೆ ಒಳಗಾದ ಅನೇಕ ವಿದೇಶೀಯರು ಸಾಹಿತ್ಯ ಹಬ್ಬದಲ್ಲಿ ಸಂತಸದಿಂದ ಓಡಾಡಿಕೊಂಡಿದ್ದರು. ಈ ಊರಿನ ಬಗ್ಗೆ,  ‘ಲಿಟರೇಚರ್‌ ಫೆಸ್ಟ್‌’ನ ಬಗ್ಗೆ ವಿದೇಶಿಯರೂ ಸೇರಿದಂತೆ ಅನೇಕರು ತಮ್ಮ ಅನಿಸಿಕೆಯನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.

ಊಟಕ್ಕಾಗಿ ಹುಡುಕಾಡಿದ ಕಂಬಾರರು
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಸಾವಿರಾರು ಮಂದಿ ಸೇರಿ ಊಟಕ್ಕಾಗಿ ಪರದಾಡುವುದು ಸಾಮಾನ್ಯ. ಆದರೂ ಅಲ್ಲಿ ಸಾವಿರಾರು ಮಂದಿ ಹಬ್ಬದೂಟವನ್ನೇ ಮಾಡಿರುತ್ತಾರೆ. ಆದರೆ ಬೆಂಗಳೂರು ಲಿಟರೇಚರ್‌ ಫೆಸ್ಟ್‌ನಲ್ಲಿ ಮೊದಲ ದಿನ ಸೇರಿದ್ದು ನೂರಿನ್ನೂರು ಅಷ್ಟೇ. ಆದರೂ ಅಲ್ಲಿ ಅತಿಥಿಗಳನ್ನು ಕೇಳುವವರೇ ಇರಲಿಲ್ಲ. 50 ರೂಪಾಯಿಯ ಕೂಪನ್‌ ತೋರಿಸಿ ತಿಂಡಿ ತಿನ್ನುವ ವ್ಯವಸ್ಥೆ ಇತ್ತಷ್ಟೆ.

ಮಧ್ಯಾಹ್ನ 12.30ಕ್ಕೆ ‘ಹೇಳತೇನ ಕೇಳ’ ಸಂವಾದ ಮುಗಿದು ಕಂಬಾರರು ವೇದಿಕೆಯಿಂದ ಕೆಳಗಿಳಿದರೆ ಅಲ್ಲಿ ಕೇಳುವವರಿಲ್ಲ. ಸ್ವಲ್ಪಹೊತ್ತು ಸಭಿಕರ ನಡುವೆ ಕೂತು ರವಿಶಂಕರ ಗುರೂಜಿಯವರ ಭಾಷಣ ಕೇಳಿದ ಕಂಬಾರರು ಊಟಕ್ಕಾಗಿ ಹುಡುಕಾಡುತ್ತಿದ್ದರು. ಅಲ್ಲೊಂದು ಕಡೆ ತಟ್ಟೆ ಹಿಡಿದು ಜನ ಅಡ್ಡಾಡುತ್ತಿದ್ದರು. ಅಲ್ಲಿಗೆ ಬಂದ ಅವರು ‘ಇಲ್ಲಿ ಊಟ ಕೊಡುತ್ತಾರಾ’ ಎಂದು ಸಿಕ್ಕವರಲ್ಲಿ ಕೇಳುತ್ತಿದ್ದರು. ಅಂತೂ ಯಾರೋ ಒಂದು ಇಡ್ಲಿ, ಒಂದು ವಡೆ ಕೊಡಿಸಿದರು. ಅದನ್ನು ತಿಂದು ಕಂಬಾರರು ಅಲ್ಲಿಂದ ಹೊರಟರು. ಕಡೇ ಪಕ್ಷ ವೇದಿಕೆಯ ಅತಿಥಿಗಳನ್ನಾದರೂ ಸತ್ಕರಿಸುವ ಸ್ವಯಂ ಸೇವಕರು ಇಲ್ಲದ್ದು ಕೊರತೆಯಾಗಿ ಕಂಡಿತು.

ಅಲ್ಲದೆ ಅಲ್ಲಿ ಐನೂರು ಜನ ಕುಳಿತುಕೊಳ್ಳುವ ಕೆನೊಪಿ ಕೂಡಾ ಹಾಕಿರಲಿಲ್ಲ. ಪುಟ್ಟಪುಟ್ಟ ಮೂರ್ನಾಲ್ಕು ಪೆಂಡಾಲ್‌ಗಳು ಇದ್ದವಷ್ಟೆ. ಉಳಿದಂತೆ ಮಾಧ್ಯಮದ ಮಂದಿ, ಸಾಹಿತ್ಯಾಭಿಮಾನಿಗಳು ಉರಿಬಿಸಿಲಿನಲ್ಲಿಯೇ ಕಳೆದರು. ಕೆಲವರು ಕೊಡೆ ಹಿಡಿದು, ಕೆಲವರು ಮರಗಳಡಿ ಅವಿತು ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಅರಿವು ವಿಸ್ತರಿಸುವ ವೇದಿಕೆ

ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಇಂತಹ ಹಬ್ಬ ವೇದಿಕೆಯಾಗುತ್ತದೆ. ನಮ್ಮ ಸಾಹಿತ್ಯದ ಬಗ್ಗೆ ಬೇರೆ ಭಾಷೆಯ ಸಾಹಿತಿಗಳು ಯಾವ ನಿಲುವು ಹೊಂದಿದ್ದಾರೆ ಎಂದು ತಿಳಿದುಕೊಳ್ಳಲು ಇಲ್ಲಿ ಸಾಧ್ಯವಾಗುತ್ತದೆ. ಅಲ್ಲದೆ ಬೇರೆ ಬೇರೆ ಕಡೆಯ ಸಾಹಿತಿಗಳೆಲ್ಲ ಒಂದೆಡೆ ಸೇರುವ ಅವಕಾಶ ಸಿಗುವುದೇ ಅಪರೂಪ. ಇದರಿಂದ ನಮ್ಮ ಅರಿವು ಕೂಡ ವಿಸ್ತಾರವಾಗುತ್ತದೆ. ನಮ್ಮ ಬಗ್ಗೆಯೇ ನಡೆವ ಅನೇಕ ವಿಚಾರಗಳು ನಮಗೇ ಗೊತ್ತಿರುವುದಿಲ್ಲ. ನನ್ನ ‘ಸಿರಿಸಂಪಿಗೆ’ ಪಠ್ಯವಾದದ್ದು ನನಗೆ ಎಷ್ಟೋ ದಿನ ತಿಳಿದಿರಲಿಲ್ಲ.
–ಚಂದ್ರಶೇಖರ ಕಂಬಾರ



ಇಲ್ಲಿನ ವಾತಾವರಣ ಇಷ್ಟ

ಕಳೆದ ವರ್ಷ ನಡೆದ ಲಿಟರೇಚರ್‌ ಫೆಸ್ಟ್‌ ಬಗ್ಗೆ ಕೇಳಿ ಈ ವರ್ಷ ಬಂದಿದ್ದೇನೆ. ಇಲ್ಲಿನ ವಾತಾವರಣ ತುಂಬ ಹಿಡಿಸಿದೆ. ವೇಗವಾಗಿ ಬೆಳವಣಿಗೆ ಕಾಣುತ್ತಿರುವ ನಗರ ಬೆಂಗಳೂರು.

ನಾನು ದೆಹಲಿಯ ಗೋಥೆ ಇನ್‌ಸ್ಟಿಟ್ಯೂಷನ್‌ನ ಮಾಹಿತಿ ಮತ್ತು ಗ್ರಂಥಾಲಯ ಸೇವೆಯ ನಿರ್ದೇಶಕಿಯಾಗಿದ್ದೇನೆ. ಮ್ಯಾಕ್ಸ್‌ಮುಲ್ಲರ್‌ ಭವನದ ಈ ವರ್ಷದ ಕಾರ್ಯಕ್ರಮವೇ ಭಾರತ ಮತ್ತು ಜರ್ಮನಿ ನಡುವಿನ ಸಾಹಿತ್ಯ ವಿನಿಮಯ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಟ್ರಾಫಿಕ್‌ ಮಾತ್ರ ಕಿರಿಕಿರಿ ಎನಿಸಿದೆ.
-ಉಟೇ ರೀಮರ್‌ ಬೊನರ್,ಜರ್ಮನಿ



ಬೆಂಗಳೂರಿಗೆ ಇದು ನನ್ನ ಮೊದಲ ಭೇಟಿ. ಇದು ಸುಂದರ ನಗರ. ರೆಲ್ಯಾಕ್ಸೇಷನ್‌ಗೆ ಹೇಳಿ ಮಾಡಿಸಿದ ಸಿಟಿ. ನಾನು ಬೆಂಗಳೂರು ಸಾಹಿತಿಗಳ ಬಗ್ಗೆ ತುಂಬಾ ಕೇಳಿದ್ದೇನೆ. ಸಾಹಿತಿಗಳ ಭೇಟಿಯ ಜೊತೆಗೆ ರವಿಶಂಕರ್‌ ಗುರೂಜಿ ಅವರ ಭಾಷಣ ಕೇಳಲು ಇಲ್ಲಿಗೆ ಬಂದಿದ್ದೇನೆ. ಇದೊಂದು ದೊಡ್ಡ ಅವಕಾಶವಾಗಿದೆ.   
-ವೆಸ್ತಾ, ಲಿಥಾನಿಯಾ

ಕಿಟೆಲ್‌, ಸಂಸ್ಕಾರದ ನೆನಪು

ಜರ್ಮನಿ ಮತ್ತು ಭಾರತದ ಸಂಬಂಧ ಬಹಳ ಪುರಾತವಾದುದು. ಅದರಲ್ಲೂ ಕರ್ನಾಟಕದೊಂದಿಗೆ ಬಿಡಿಸಲಾದ ನಂಟು. ಜರ್ಮನಿಯ ಕಿಟೆಲ್‌ ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಜಮರ್ನಿಯ ಜನರೂ ನೆನೆಯುತ್ತಾರೆ. ಕಿಟೆಲ್‌- ಕನ್ನಡ ಅರ್ಥಕೋಶವೇ ಕನ್ನಡದ ಮೊದಲ ಅರ್ಥಕೋಶ ಎಂಬುದು ಜರ್ಮನರ ಹೆಮ್ಮೆ. ಆ ಸಂಬಂಧ  ಈಗಲೂ ಮುಂದುವರಿದಿದೆ. ಗೋಥೆ ಇನ್‌ಸ್ಟಿಟ್ಯೂಟ್‌ ಆ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತವಾಗಿದೆ. ಈ ಇಡೀ ವರ್ಷದ ನಮ್ಮ ಕಾರ್ಯಕ್ರಮ ಭಾರತದೊಂದಿಗೆ ಸಾಹಿತ್ಯಕ ವಿನಿಮಯವಾಗಿದೆ.

ಹಾಗಾಗಿ ಜರ್ಮನಿಯ ನಾಲ್ವರು ಸಾಹಿತಿಗಳನ್ನು ಇಲ್ಲಿಗೆ ಕರೆತಂದಿದ್ದೇವೆ. ಯುವಕರನ್ನು ಸೆಳೆಯುವುದೇ ನಮ್ಮ ಗುರಿ. ಕನ್ನಡದ ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರನ್ನು ಈವರೆಗೆ ಭೇಟಿಯಾಗಿಲ್ಲ. ಆದರೆ, ಅವರ ಬಗ್ಗೆ ತುಂಬ ಕೇಳಿದ್ದೇನೆ. ಅವರ ಸಂಸ್ಕಾರ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಜರ್ಮನಿಯಲ್ಲೂ ಅನೇಕರು ನೋಡಿದ್ದಾರೆ. ಅದರ ಪ್ರದರ್ಶನವನ್ನು ಸದ್ಯದಲ್ಲೇ ಮ್ಯಾಕ್ಸ್‌ಮುಲ್ಲರ್‌ ಭವನದಲ್ಲಿ ಪ್ರದರ್ಶನ ಏರ್ಪಡಿಸಲಿದ್ದೇವೆ.
–ಕ್ರಿಸ್ಟೋಫ್ ಬೆರ್‌ಟ್ರಾಮ್ಸ್,
ಗೋಥೆ ಇನ್‌ಸ್ಟಿಟ್ಯೂಟ್‌ ಮ್ಯಾಕ್ಸ್‌ಮುಲ್ಲರ್‌ ಭವನದ ನಿರ್ದೇಶಕ

ರವಿಶಂಕರ್‌ ಅಭಿಮಾನಿ

ಬೆಂಗಳೂರಿಗೆ ಇದು ನನ್ನ ಮೊದಲ ಭೇಟಿ. ಇದು ಸುಂದರ ನಗರ. ರೆಲ್ಯಾಕ್ಸೇಷನ್‌ಗೆ ಹೇಳಿ ಮಾಡಿಸಿದ ಸಿಟಿ. ನಾನು ಬೆಂಗಳೂರು ಸಾಹಿತಿಗಳ ಬಗ್ಗೆ ತುಂಬಾ ಕೇಳಿದ್ದೇನೆ. ಸಾಹಿತಿಗಳ ಭೇಟಿಯ ಜೊತೆಗೆ ರವಿಶಂಕರ್‌ ಗುರೂಜಿ ಅವರ ಭಾಷಣ ಕೇಳಲು ಇಲ್ಲಿಗೆ ಬಂದಿದ್ದೇನೆ. ಇದೊಂದು ದೊಡ್ಡ ಅವಕಾಶವಾಗಿದೆ.  
-ವೆಸ್ತಾ, ಲಿಥಾನಿಯಾ


ದಂಪತಿ ವಸ್ತು ಪ್ರದರ್ಶನ
ಬೋರಿಯಾ ಮಜುಮ್ದಾರ್‌ ಹಾಗೂ ಶರ್ಮಿಷ್ಠ ಗುಪ್ತ ದಂಪತಿ ಎರಡು ವಿಭಿನ್ನ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು. ಪತಿ ಬೋರಿಯಾ 1932ರಿಂದ 1971ರವರೆಗಿನ ಭಾರತೀಯ ಕ್ರಿಕೆಟ್‌ ಕುರಿತ ಚಿತ್ರಗಳು, ತಂಡಗಳ ನಾಯಕರು ಪರಸ್ಪರ ಬರೆದುಕೊಳ್ಳುತ್ತಿದ್ದ ಪತ್ರಗಳು, ಟೆಸ್ಟ್‌ ಕ್ರಿಕೆಟ್‌ನ ಟಿಕೆಟ್‌ ಹಾಗೂ ಬಿತ್ತಿ ಪತ್ರಗಳು, ಬ್ರಿಟಿಷ್‌ ಕಾಲದ ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಒಳಗೊಂಡ ಸುಮಾರು 50ಕ್ಕೂ ಹೆಚ್ಚು ವಸ್ತುಗಳು ಗಮನ ಸೆಳೆದವು.

ಮತ್ತೊಂದೆಡೆ ಬೋರಿಯಾ ಅವರ ಪತ್ನಿ ಶರ್ಮಿಷ್ಠ ಅವರು ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ, 1913ರಲ್ಲಿ ತೆರೆಕಂಡ ಭಾರತದ ಮೊದಲ ಚಿತ್ರ , ದಾದಾಸಾಹೇಬ್‌ ಫಾಲ್ಕೆ ಅವರ ‘ರಾಜಾ ಹರಿಶ್ಚಂದ್ರ’ದ ಪೋಸ್ಟರ್‌ನಿಂದ ಹಿಡಿದು 1980ರವರೆಗೆ ತೆರೆಕಂಡ ಪ್ರಮುಖ ಚಿತ್ರಗಳ ಪೋಸ್ಟರ್‌, ಟಿಕೆಟ್‌ ಹಾಗೂ ಚಿತ್ರಗಳ ಕುರಿತ ಪುಸ್ತಕಗಳ ಸಂಗ್ರಹಗಳನ್ನು ಇಟ್ಟಿದ್ದರು. ಅದನ್ನು ನೋಡಲು ಬಂದಿದ್ದ ಆಸಕ್ತರ ದಂಡೂ ದೊಡ್ಡದಿತ್ತು.

ಇಲ್ಲಿನವರನ್ನು ಕಂಡರೆ ಹೆಮ್ಮೆ

ಭಾರತ ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರ. ಅದರಲ್ಲೂ ನಮ್ಮಂಥ ಸಾಹಿತ್ಯಾಸಕ್ತರಿಗೆ ಇಲ್ಲಿ ಸಿಗುವ ಜ್ಞಾನ ಬೇರೆಲ್ಲೂ ಸಿಗಲಾರದು. ಭಾರತದಲ್ಲೂ ನೈಜೀರಿಯಾದ ವೊಲಾ ಶೊಯೆಂಕಾ ಅವರಂಥ ಸಾಹಿತಿಗಳ ಕೃತಿಗಳನ್ನು ಕಂಡು ನಮಗೆ ಈ ದೇಶದ ಹಾಗೂ ಇಲ್ಲಿನ ಜನರ ಕುರಿತು ಹೆಮ್ಮೆ ಎನಿಸುತ್ತದೆ. ಇಂಥ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಬಹಳ ನಿರೀಕ್ಷೆ ಇದೆ. ಜತೆಗೆ ಮುಂದಿನ ನಮ್ಮ ಭವಿಷ್ಯಕ್ಕೆ ಇದು ನೆರವಾಗುವ ಭರವಸೆ ಇದೆ.
– ಎರ್ನೆಸ್ಟ್‌ ಮತ್ತು ಡೆಕ್ಲಾನ್‌

ಹೊಸ ಅನುಭವ

ಅಕ್ಷರಶಃ ಯುರೋಪ್‌ ನೋಡಿದಂಥ ಅನುಭವವಾಗುತ್ತಿದೆ. ಓದುವುದರಲ್ಲಿ ಆಸಕ್ತಿ ಇದ್ದರೂ ಸಾಹಿತಿಯಾಗುವ ಬದಲು ಕೆಮಿಕಲ್‌ ಎಂಜಿನಿಯರ್‌ ಆದೆ. ಅದೇ ವೃತ್ತಿಯ ಕಾರಣ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದೇವೆ. ಇಂಥ ಸಂದರ್ಭದಲ್ಲೇ ನಡೆಯುತ್ತಿರುವ ಈ ಕಾರ್ಯಕ್ರಮ ನಮಗೊಂದು ಹೊಸ ಅನುಭವ. ದೇಶದ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರವನ್ನು ಮುಕ್ತವಾಗಿ ಚರ್ಚಿಸುವ ರೀತಿ ಇಷ್ಟವಾಯಿತು. ಸಾಹಿತ್ಯದ ಜತೆಗೆ ಪ್ರಸಕ್ತ ವಿಷಯಗಳ ಕುರಿತ ಗೋಷ್ಠಿಗಳು ನನ್ನಲ್ಲಿ ಸಾಹಿತ್ಯ ಕುರಿತ ಆಸಕ್ತಿ ಮೂಡುವಂತೆ ಮಾಡಿವೆ.
ನಿಕ್ಲೋ, ಲೂಸಿಯಾ

ಜೀಜಾ ಹಾಗೂ ಸ್ನೇಹಿತರು
ಓದುವುದರಲ್ಲಿ ಮೊದಲಿಂದಲೂ ಆಸಕ್ತಿ ಇದೆ. ಐಪಿಎಸ್‌ ಅಧಿಕಾರಿಣಿಯಾದ್ದರಿಂದ ಪತ್ತೆದಾರಿ ಕೃತಿಗಳನ್ನು ಓದುತ್ತೇನೆಂದುಕೊಳ್ಳಬೇಡಿ. ತತ್ವಶಾಸ್ತ್ರ, ಅಧ್ಯಾತ್ಮ ನನ್ನ ಆಸಕ್ತ ಕ್ಷೇತ್ರಗಳು. ಜತೆಗೆ ಇಂಥ ಗೋಷ್ಠಿಗಳಲ್ಲಿ ಸಾಹಿತ್ಯಾಸಕ್ತರನ್ನು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿರುವ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯುವುದರಿಂದ ಉತ್ಸಾಹದಿಂದ ಬಂದಿದ್ದೇನೆ. ನನ್ನ ಮಗಳು ಪುಸ್ತಕದ ಹುಳು. ಹೀಗಾಗಿ ಮಗಳೊಂದಿಗೆ ಇಂಥ ಕಾರ್ಯಕ್ರಮಕ್ಕೆ ಬಂದು ಒಂದಷ್ಟು ಸ್ನೇಹಿತರನ್ನು ಭೇಟಿ ಮಾಡುವ ಹಾಗೂ ಒಂದಷ್ಟು ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಯೋಜನೆ ಇದೆ.
–ಜೀಜಾ ಹರಿಸಿಂಗ್‌, ಮಾಜಿ ಐಪಿಎಸ್‌ ಅಧಿಕಾರಿ

ಖ್ಯಾತನಾಮರ ನೋಡು ಅವಕಾಶ
ಬೇರೆ ಬೇರೆ ಭಾಷೆಯ ಖ್ಯಾತ ಸಾಹಿತಿಗಳನ್ನು ನೋಡುವ ಅವಕಾಶ ಲಭಿಸಿದೆ. ನಾನು ಗುಲ್ಜಾರ್‌ ಅಭಿಮಾನಿ. ಅವರನ್ನು ನೋಡಿ ಮಾತನಾಡಿಸುವ ಅವಕಾಶ ಇನ್ನೆಲ್ಲೂ ಸಿಗದು ಎಂದು ಬಂದಿದ್ದೇನೆ. ಇಂತಹ ಹಬ್ಬ ಪ್ರತಿ ವರ್ಷವೂ ನಡೆಯಬೇಕು. ಆದರೆ ವ್ಯವಸ್ಥೆ ಇನ್ನೂ ಉತ್ತಮವಾಗಬೇಕು. ಒಂದಷ್ಟು ಪುಸ್ತಕ ಮಳಿಗೆಗಳಿಗೆ  ಅವಕಾಶ ನೀಡಬೇಕು.
-ಜಯಾದೇವಿ,
ಕೋರಮಂಗಲ

ಸಂಸ್ಕೃತವೂ ಇದೆ
ನಮ್ಮದು ಸ್ವಯಂ ಸೇವಾ ಸಂಸ್ಥೆ. ನಮ್ಮ ಉದ್ದೇಶ ಸಂಸ್ಕೃತ ಭಾಷೆಯ ಹಾಗೂ ಅದರ ಸಾಹಿತ್ಯಗಳ ಪ್ರಚಾರ. ಹೀಗಾಗಿ ಅಗ್ಗದ ದರಕ್ಕೆ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ. ಚಿಕ್ಕವರಿಂದ ದೊಡ್ಡವರೆಗೂ ಸಂಸ್ಕೃತ ಭಾಷಾ ಕಲಿಕೆಗೆ ಅನುಕೂಲವಾಗುವ ಪುಸ್ತಕಗಳು ನಮ್ಮಲ್ಲಿವೆ.
– ಶಿವಶಂಕರ್‌,
ಸಂಸ್ಕೃತ ಭಾರತಿ ಪ್ರಕಾಶನ ಮಳಿಗೆ

ಕಥಾಸರಣಿ ಮಕ್ಕಳಿಗಿಷ್ಟ
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮಕ್ಕಳ ಹಾಗೂ ಯುವಕರಿಗೆ ಇಷ್ಟವಾಗುವ ಸಾಹಿತ್ಯ ಪುಸ್ತಕಗಳು ನಮ್ಮಲ್ಲಿವೆ. ಇತ್ತೀಚಿನ ದಿನಗಳಲ್ಲಿ ಕಾಮಿಕ್ಸ್‌ ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕಥಾಸರಣಿಗಳನ್ನು ಓದುವ ಹವ್ಯಾಸವುಳ್ಳ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಗುಲ್ಜಾರ್ ಅವರ ಹೊಸ ಕೃತಿಯ ಜತೆಗೆ ವಿದೇಶಗಳ ಹಲವಾರು ಕಥಾಸರಣಿಗಳು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇತ್ತೀಚೆಗೆ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಿರುವುದರಿಂದ ಪುಸ್ತಕ ಮಾರಾಟವೂ ಉತ್ತಮವಾಗಿದೆ.
– ಮಹಮ್ಮದ್‌ ಕರೀಮ್‌,
ಸ್ಕಾಲೆಸ್ಟಿಕ್ಸ್‌ ಪುಸ್ತಕ ಮಳಿಗೆ ವ್ಯಾಪಾರಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT