ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ,ಕಾಮೆಡ್‌–ಕೆ ಫಲಿತಾಂಶ ಮುಂದಕ್ಕೆ

ಪಿಯುಸಿ ಗೊಂದಲ: ಪೋಷಕರ ಒತ್ತಡಕ್ಕೆ ಮಣಿದ ಇಲಾಖೆ
Last Updated 22 ಮೇ 2015, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ದ್ವಿತೀಯ ಪಿಯು ಫಲಿತಾಂಶದಲ್ಲಿನ ಗೊಂದಲ ನಿವಾರಣೆ ಆಗುವವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟಿಸಬಾರದು’ ಎಂದು ಪೋಷಕರು ಮುಂದಿಟ್ಟಿದ್ದ ಆಗ್ರಹಕ್ಕೆ ಶಿಕ್ಷಣ ಇಲಾಖೆ ಮಣಿದಿದೆ. ಜೂನ್‌ 1ರವರೆಗೆ ಸಿಇಟಿ ಫಲಿತಾಂಶ ಪ್ರಕಟಿಸದೇ ಇರಲು ಅದು ತೀರ್ಮಾನಿಸಿದೆ.

ತಪ್ಪು ಫಲಿತಾಂಶ ಪ್ರಕಟಿಸಿದ ವೆಬ್‌ಸೈಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಿಯುಸಿ ಫಲಿತಾಂಶ ಪ್ರಕಟಣೆಯಲ್ಲಿ ಆದ ಲೋಪಗಳ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ವಿಚಾರಣೆ ಆರಂಭಿಸಿದೆ. ಪಿಯು ಮಂಡಳಿ ಬಳಿ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸುತ್ತಿದ್ದ ಪ್ರತಿಭಟನೆ ಸದ್ಯಕ್ಕೆ ಅಂತ್ಯವಾಗಿದೆ.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ‘ಸಿಇಟಿ ಫಲಿತಾಂಶವನ್ನು ಮೇ 26ರಂದು ಪ್ರಕಟಿಸುವುದಿಲ್ಲ. ಇದಕ್ಕೆ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರೂ ಒಪ್ಪಿದ್ದಾರೆ’ ಎಂದು ತಿಳಿಸಿದರು.

ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ತಪ್ಪಾಗಿದೆ ಎಂದು ಭಾವಿಸಿದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಮೊದಲು ಪಡೆದಿದ್ದ ಅಂಕಕ್ಕಿಂತ ಮರು ಮೌಲ್ಯಮಾಪನದಲ್ಲಿ ಆರು ಅಥವಾ ಅದಕ್ಕಿಂತ ಹೆಚ್ಚು ಅಂಕ ದೊರೆತರೆ, ವಿದ್ಯಾರ್ಥಿಗಳಿಂದ ಪಡೆದ ಶುಲ್ಕ ಮರಳಿಸಲಾಗುವುದು ಎಂದು ರತ್ನಾಕರ ಹೇಳಿದರು.

ಕಾಮೆಡ್‌–ಕೆ ಸಮ್ಮತಿ: ಸಿಇಟಿ ಫಲಿತಾಂಶ ಪ್ರಕಟವಾದ ನಂತರವೇ ಕಾಮೆಡ್‌–ಕೆ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ (ಕಾಮೆಡ್‌ಕೆ) ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಯು ಫಲಿತಾಂಶದ ಗೊಂದಲ ನಿವಾರಣೆ ಆಗುವವರೆಗೆ ಫಲಿತಾಂಶ ಪ್ರಕಟಿಸಬೇಡಿ ಎಂದು ಇಲಾಖೆ ಕಡೆಯಿಂದ ನಮಗೆ ಕೋರಿಕೆ ಬಂದಿದೆ. ಇದಕ್ಕೆ ನಾವು ಒಪ್ಪಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಸಹಾಯವಾಣಿ: ಪಿಯು ಫಲಿತಾಂಶದಲ್ಲಿನ ಗೊಂದಲಗಳ ನಿವಾರಣೆಗೆ ಪಿಯು ಶಿಕ್ಷಣ ಮಂಡಳಿ ಸಹಾಯವಾಣಿ ಆರಂಭಿಸಿದೆ. ಆಸಕ್ತರು 080 – 2308 3900 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಅರ್ಜಿ ಸಲ್ಲಿಕೆಯ ಕಡೆಯ ದಿನ, ಮರುಮೌಲ್ಯಮಾಪನ ಕೊನೆಗೊಳ್ಳುವ ದಿನ ಮತ್ತಿತರ  ಮಾಹಿತಿಗಳನ್ನು ಪಡೆಯಬಹುದು.
*
ಮೌಲ್ಯಮಾಪನದಲ್ಲಿ ತಪ್ಪಿಲ್ಲ
ಉಂಟಾಗಿರುವ ಗೊಂದಲಕ್ಕೆ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳನ್ನು ಇದಕ್ಕೂ ಮೊದಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ರಾಜಕೀಯ ಮುಖಂಡರಿಗೆ ಮೌಲ್ಯಮಾಪನದಲ್ಲಿ ಯಾವುದೇ ತಪ್ಪಿಲ್ಲ ಎಂದು ಮನವರಿಕೆಯಾದ ಘಟನೆಯೂ ಶುಕ್ರವಾರ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷಮಾ ಗೋಡ್‌ಬೋಲೆ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಹೋಗುವಾಗ ಕುಮಾರಸ್ವಾಮಿ, ಎಸ್‌. ಸುರೇಶ್‌ ಕುಮಾರ್ ಹಾಗೂ ರವಿಕೃಷ್ಣಾ ರೆಡ್ಡಿ ಅವರು ‘ಕಡಿಮೆ ಅಂಕಗಳು ಬಂದಿದೆ’, ‘ಕೃಪಾಂಕ ನೀಡಿಲ್ಲ’ ಎಂದು ಆರೋಪಿಸಿದ್ದ  ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದರು. ಈ ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳನ್ನು ತರಿಸಿದ ಇಲಾಖೆಯ ಅಧಿಕಾರಿಗಳು, ಮೌಲ್ಯಮಾಪನ ಹಾಗೂ ನೀಡಿರುವ ಅಂಕಗಳನ್ನು ಮುಖಂಡರ ಮುಂದೆ ಮತ್ತೊಮ್ಮೆ ಪರಿಶೀಲಿಸಿದರು.
*
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೂ ಕಾಳಜಿ ಇದೆ. ಈ ವಿಷಯದಲ್ಲಿ ಮಕ್ಕಳು ಮತ್ತು ಪೋಷಕರಿಗೆ ಆತಂಕ ಬೇಡ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ

*
ಈ ಸಮಸ್ಯೆ ಇಲಾಖೆಯಿಂದಾಗಿ ಆಗಿಲ್ಲ.  ಆದರೆ, ಆಗಿರುವ ತಪ್ಪನ್ನು ಜನರಿಗೆ ಮನವರಿಕೆ ಮಾಡಲು ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.
- ಕಿಮ್ಮನೆ ರತ್ನಾಕರ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT