ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಮುಂದೂಡಿಕೆ ಇಲ್ಲ: ಪಾಟೀಲ

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಲಬುರ್ಗಿ/ ಬೆಂಗಳೂರು: ‘ವೈದ್ಯಕೀಯ ಮತ್ತು ದಂತ ವೈದ್ಯ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ  ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಶನಿವಾರ (ಏ. 30) ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ  ರಾಜ್ಯದ ನಿಲುವು ಪ್ರಕಟಿಸಲಾಗುವುದು. ಆದರೆ, ಈ ಸಲದ ಸಿಇಟಿ ಮುಂದೂಡಿಕೆ ಇಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.

‘ವೇಳಾಪಟ್ಟಿ ಪ್ರಕಾರ ಮೇ 4 ಮತ್ತು 5ರಂದು ಸಿಇಟಿ ನಡೆಯಲಿದೆ. ಆದರೆ, ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಏನು ಮಾಡಬೇಕು ಎಂಬುದು ಮಾತ್ರ ಪ್ರಶ್ನೆಯಾಗಿದೆ’ ಎಂದು ಅವರು ಶುಕ್ರವಾರ ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ತೀರ್ಪಿನಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ ಎಂಬ ಭಾವನೆ ವ್ಯಕ್ತವಾದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಎನ್ಇಇಟಿ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ವೇಳಾಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡುವ ಮುನ್ನ ರಾಜ್ಯಗಳೊಂದಿಗೆ ಸಿಬಿಎಸ್‌ಇ ಸಮಾಲೋಚನೆ ನಡೆಸಬೇಕಿತ್ತು. ರಾಜ್ಯ ಪ್ರತಿವಾದಿ ಆಗಿರದ  ಕಾರಣ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಈ ತೀರ್ಮಾನಕ್ಕೆ ಈಗಾಗಲೇ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಅವಶ್ಯ ಬಿದ್ದರೆ ನಾವೇ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದರು.

ಅಧಿಕಾರಿಗಳ ಸಭೆ: ಸುಪ್ರೀಂ ಕೋರ್ಟ್ ತೀರ್ಪಿನ ನಂತರದ ಬೆಳವಣಿಗೆಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಸ್‌.ರಮೇಶ್‌, ವೈದ್ಯಕೀಯ ಶಿಕ್ಷಣ  ನಿರ್ದೇಶಕ ಡಾ.ಎಸ್‌.ಎಸ್‌.ಹರಸೂರು  ಸೇರಿ  ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಶುಕ್ರವಾರ ಸಭೆ ನಡೆಸಿದರು.

ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳಷ್ಟೇ ಅಲ್ಲದೆ ಎಂಜಿನಿಯರಿಂಗ್‌ ಪ್ರವೇಶಕ್ಕೂ ಸಿಇಟಿ ನಡೆಸಲಾಗುತ್ತಿದೆ. ಆದ್ದರಿಂದ ಈ ಹಂತದಲ್ಲಿ ಸಿಇಟಿ ಬೇಡ ಎನ್ನುವುದು ಸರಿಯಲ್ಲ ಎನ್ನುವ ಬಗ್ಗೆಯೂ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT