ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಪಿಒ ಕಚೇರಿಯಲ್ಲಿ ಅರಾಜಕತೆ: ಶಾಸಕ

Last Updated 5 ಸೆಪ್ಟೆಂಬರ್ 2015, 11:39 IST
ಅಕ್ಷರ ಗಾತ್ರ

ಕುಷ್ಟಗಿ: ಅನಧಿಕೃತ ಗೈರಾಗಿರುವ ಇಲ್ಲಿನ ಸಿಡಿಪಿಒ ಶಿವರುದ್ರಯ್ಯ ಅವರನ್ನು ಅಮಾನತುಗೊಳಿಸುವಂತೆ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯುವುದಾಗಿ ಶಾಸಕ ದೊಡ್ಡನಗೌಡ ಪಾಟೀಲ ಶುಕ್ರವಾರ ಇಲ್ಲಿ ಹೇಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿಯಲ್ಲಿ ಅಧಿಕಾರಿ ಮತ್ತು ಬಹುತೇಕ ಸಿಬ್ಬಂದಿ ಅನಧಿಕೃತ ಗೈರಾಗಿದ್ದಾರೆ. ಅಧಿಕಾರಿ ಮತ್ತು ಅಂಗನವಾಡಿ ಸಿಬ್ಬಂದಿ ನಡುವೆ ಸಮನ್ವಯ ಕೊರತೆ ಇದೆ. ಸಿಡಿಪಿಒ ಬೇಜವಾಬ್ದಾರಿಯಿಂದ ಕಚೇರಿಯಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ವಿವರಿಸಿದರು.

ಬೇರೆಯವರನ್ನು ಸಿಡಿಪಿಒ ಸ್ಥಾನಕ್ಕೆ ನಿಯೋಜಿಸುವಂತೆ ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪ್ರೇಮಾ ವಸಂತ ಅವರಿಗೆ ಸೂಚಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಪಾವತಿಸಲು ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.

ಇಲ್ಲಿಯ ಶಿಶು ಅಭಿವೃದ್ಧಿ ಯೋಜನೆ ಕಚೇರಿಯಲ್ಲಿ ₹1 ಕೋಟಿಗೂ ಅಧಿಕ ಮೊತ್ತದ ಹಣ ದುರ್ಬಳಕೆ ನಡೆದಿರುವುದು ಬೆಳಕಿಗೆ ಬಂದಿದೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸಿರುವುದಾಗಿ ಹೇಳಿದರು.

ಧರಣಿ ನಡೆಸುತ್ತಿರುವ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಮೇಲ್ವಿಚಾರಕರ ಮಧ್ಯೆ ಶಾಸಕ ಪಾಟೀಲ ಮತ್ತು ಉಪನಿರ್ದೇಶಕರ ಸಮ್ಮುಖದಲ್ಲಿಯೇ ಮಾತಿನ ಚಕಮಕಿ ನಡೆಯಿತು. ಕೆಲವು ಮೇಲ್ವಿಚಾರಕಿಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರನ್ನು ವರ್ಗಮಾಡಬೇಕೆಂದು ಸಂಘದ ಪ್ರಮುಖರು ಹೇಳಿದರು. ಉಪನಿರ್ದೇಶಕಿ ಪ್ರೇಮಾ ವಸಂತ ಅದಕ್ಕೆ ಒಪ್ಪದಿದ್ದಾಗ ಕೆಲಸ ಮಾಡುವರನ್ನು ಬಿಟ್ಟು ಕೆಟ್ಟದಾಗಿ ವರ್ತಿಸುವವರಿಗೆ ಸೊಪ್ಪು ಹಾಕುತ್ತಿದ್ದೀರಿ ಎಂದು ಆರೋಪಿಸಿದರು.

ಇದರಿಂದ ಸಿಡಿಮಿಡಿಗೊಂಡ ಶಾಸಕರು ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು. ಸಿಡಿಪಿಒ ಕಚೇರಿಯ ಲೆಕ್ಕಶಾಖೆ ನೌಕರ ಸಿದ್ದನಗೌಡ ಪಾಟೀಲ ಕಚೇರಿಯಲ್ಲಿರುವುದಿಲ್ಲ. ಮಹಿಳೆಯರಿಗೆ ಗೌರವ ನೀಡದೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಗೌರವಧನ ಬಿಡುಗಡೆಯಾದರೂ ಬಿಲ್‌ ಮಾಡುವುದಿಲ್ಲ ಎಂದು ಆರೋಪಿಸಿದರು. ಅಲ್ಲಿಯೇ ಇದ್ದ ಸಿದ್ದನಗೌಡ ದೇವರ ಫೋಟೊ ಬಡಿದು ಆಣೆ ಮಾಡಲು ಮುಂದಾದಾಗ ಶಾಸಕರು ನೌಕರರನ್ನು ಗದರಿಸಿದರು.

ಶಾಸಕರಿಗೆ ಮುಜುಗರ: ಸಿಡಿಪಿಒ ಕಚೇರಿಯಲ್ಲಿ ₹1 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದ್ದನ್ನು  ಪತ್ತೆಹಚ್ಚಿದ್ದೇನೆ. ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ದಶಕದಿಂದಲೂ ಇಲ್ಲಿಯ ಸಿಡಿಪಿಒ ಕಚೇರಿಯಲ್ಲಿಯೇ ಠಿಕಾಣಿ ಹೂಡಿರುವ ಸಿಬ್ಬಂದಿಯನ್ನು ವರ್ಗ ಮಾಡುವಂತೆ ಕೋರಲಾಗಿತ್ತು. ಆದರೆ ಹಾಲಿ, ಮಾಜಿ ಶಾಸಕರು, ಮಂತ್ರಿ ಸೇರಿದಂತೆ ಗ್ರಾ.ಪಂನಿಂದ ಹಿಡಿದು ಜಿಲ್ಲಾ ಪಂಚಾಯಿತಿ ಸದಸ್ಯರು ಯಾರನ್ನೂ ವರ್ಗ ಮಾಡಬೇಡಿ ಎಂದು ಒತ್ತಡ ಹೇರಿದ್ದಾರೆ ಎಂದರು.

ಹಾಗಾದರೆ ದೊಡ್ಡನಗೌಡರೂ ಒತ್ತಡ ಹೇರಿದ್ದರೆ ಎಂದು ಪ್ರಶ್ನಿದಾಗ ಉಪನಿರ್ದೇಶಕಿ ಮೌನಕ್ಕೆ ಶರಣಾದರು. ಮುಜಗರಗೊಂಡ ಶಾಸಕ ಪಾಟೀಲ ಅವರು, ತಾವು ಅಂಥ ಯಾವುದೇ ಒತ್ತಡ ಹೇರಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT