ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಅಮಾನುಷ ಹಲ್ಲೆ

ಸುಮಾರು ನೂರು ಮಂದಿ ಮುಸುಕುಧಾರಿಗಳಿಂದ ಕೃತ್ಯ
Last Updated 30 ಜನವರಿ 2016, 15:57 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌ (ಏಜೆನ್ಸೀಸ್‌): ಸ್ವೀಡನ್‌ನ ಸ್ಟಾಕ್‌ಹೋಮ್‌ ಬಳಿಯ ಮರ್ಸ್ಟ್ರಾದಲ್ಲಿನ ನಿರಾಶ್ರಿತರ ನೋಂದಣಿ ಕೇಂದ್ರದ ಹೊರಭಾಗದಲ್ಲಿರುವ ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.

ಶುಕ್ರವಾರ ಸಂಜೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಒಟ್ಟಾಗಿ ನಿರಾಶ್ರಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಬಹುತೇಕರು ನಿರಾಶ್ರಿತ ಮಕ್ಕಳು ಎಂದು ಸ್ವೀಡಿಷ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಮುಸುಕುಧಾರಿಗಳು ನಿರಾಶ್ರಿತ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ’ ಎಂದು ಸ್ಟಾಕ್‌ಹೋಮ್‌ ಪೊಲೀಸ್‌ ವಕ್ತಾರ ಟೋವ್‌ ಹಗ್‌ ಹೇಳಿದ್ದಾರೆ.

‘ಮುಸುಕುಧಾರಿಗಳು ಸುಮಾರು ಮೂರು ಮಂದಿಗೆ ಕಾಲಿನಿಂದ ಮನಬಂದಂತೆ ಒದ್ದರು. ಅವರು ವಲಸಿಗರನ್ನೇ ಗುರಿಯಾಗಿಸಿಕೊಂಡಂತಿತ್ತು. ಅವರು ಹಲ್ಲೆ ಮಾಡುತ್ತಿದ್ದುದನ್ನು ನೋಡಿ ನಾನು ಭಯದಿಂದ ಓಡತೊಡಗಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿ ಸ್ಥಳೀಯ ಪತ್ರಿಕೆ ‘ಆಫ್ಟನ್‌ಬ್ಲಾಡಟ್‌’ ವರದಿ ಮಾಡಿದೆ.

ಗುಂಪುಗೂಡಿದ್ದ ಹಲ್ಲೆಕೋರರು, ‘ಇದು ಇಲ್ಲಿಗೆ ಕೊನೆಯಾಗಲಿದೆ’ ಎಂಬರ್ಥದ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

‘ಸ್ವೀಡಿಷ್‌ ರಿಸಿಸ್ಟನ್ಸ್‌ ಮೂವ್‌ಮೆಂಟ್‌’ ಸಂಘಟನೆ ಈ ದಾಳಿಯ ಹೊಣೆಹೊತ್ತಿದೆ. ಘಟನೆ ಸಂಬಂಧ ಈವರೆಗೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT