ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಮಾಡಿದ ತೋಳಗಳು!

Last Updated 17 ಅಕ್ಟೋಬರ್ 2015, 19:38 IST
ಅಕ್ಷರ ಗಾತ್ರ

ತೋಳಗಳ ಬದುಕಿನ ಕುರಿತು ಕೃಪಾಕರ್‌–ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿಶ್ವದ ಗಮನಸೆಳೆದಿದೆ. ಇದೇ ಸಾಕ್ಷ್ಯಚಿತ್ರ, ದೆಹಲಿಯಲ್ಲಿ ನಡೆದ ‘ವನ್ಯಜೀವಿ ಸಾಕ್ಷ್ಯಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದಿದೆ.

ತೋಳಗಳು ಕಾಲಾಂತರದಿಂದ ಮನುಷ್ಯನ ಒಡನಾಡಿಯಾಗಿ ಬದುಕುತ್ತಿವೆ. ಜೀವಜಾಲದಲ್ಲಿ ಸಂಘಜೀವನದ ಭಾಗವಾಗಿದ್ದ ಅವುಗಳ ನೆಲೆ ಈಗ ಛಿದ್ರಗೊಂಡಿದೆ. ಸಂತತಿ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ನಾಯಿಗಳು, ಬೇಟೆ, ಜಾನುವಾರು ಹಾವಳಿಯಿಂದ ಅವುಗಳ ಮರಿಗಳಿಗೆ ಉಳಿಗಾಲವಿಲ್ಲ. ಹೀಗಾಗಿ, ತೋಳಗಳು ತಮ್ಮ ಎಲ್ಲ ಮರಿಗಳನ್ನು ಒಂದೇ ಸ್ಥಳದಲ್ಲಿ ಜತನ ಮಾಡುವುದಿಲ್ಲ. ದೂರ ದೂರದ ಸ್ಥಳದಲ್ಲಿ ಇರಿಸುತ್ತವೆ. ಒಂದು ಮರಿ ಸತ್ತರೂ ಉಳಿದ ಮರಿಗಳ ಮೂಲಕ ತನ್ನ ಸಂತತಿಯನ್ನು ಕವಲೊಡೆಸಿ, ಅನಂತತೆ ಕಾಪಾಡಿಕೊಳ್ಳುವ ಉದ್ದೇಶ ಅವುಗಳದು.

ಖ್ಯಾತ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಕೃಪಾಕರ – ಸೇನಾನಿ ಅವರು ನಿರ್ಮಿಸಿರುವ ‘ವಾಕಿಂಗ್‌ ವಿತ್‌ ವುಲ್ವ್ಸ್’ ಪ್ರಥಮ ಬಾರಿಗೆ ಭಾರತದ ತೋಳಗಳ ಜೀವನ ಕುರಿತು ಅಧ್ಯಯನ ನಡೆಸಿ ಚಿತ್ರೀಕರಿಸಿರುವ ಸಾಕ್ಷ್ಯಚಿತ್ರ ಎನ್ನುವ ಹೆಗ್ಗಳಿಕೆ ಪಡೆದಿದೆ. ದೆಹಲಿಯಲ್ಲಿ ಕಳೆದ ಅ. 9ರಿಂದ 13ರವರೆಗೆ ನಡೆದ ವನ್ಯಜೀವಿ ಸಾಕ್ಷ್ಯಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರವು ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಸಹಯೋಗದಡಿ ‘ಎನ್ವಿರಾನ್ಮೆಂಟ್‌ ಅಂಡ್‌ ವೈಲ್ಡ್‌ಲೈಫ್‌ ಫಿಲ್ಮ್‌ ಫೆಸ್ಟಿವಲ್‌ ಅಂಡ್‌ ಫೋರಂ’ನಿಂದ 8ನೇ ಸಿಎಂಎಸ್‌ ವಾತಾವರಣ್‌ ಸಾಕ್ಷ್ಯಚಿತ್ರೋತ್ಸವ ಆಯೋಜಿಸಲಾಗಿತ್ತು. ಚಿತ್ರೋತ್ಸವದಲ್ಲಿ 178 ವನ್ಯಜೀವಿ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡವು. ಜಪಾನ್‌, ಭಾರತ, ದಕ್ಷಿಣ ಕೊರಿಯಾದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಶ್ರಮಿಸು ತ್ತಿರುವವರನ್ನು ಪ್ರೋತ್ಸಾಹಿಸಲು ಈ ಚಿತ್ರೋತ್ಸವ ಆಯೋಜಿಸ ಲಾಗುತ್ತದೆ.

‘ವಾಕಿಂಗ್‌ ವಿತ್‌ ವುಲ್ವ್ಸ್’ ಭಾರತೀಯ ವಿಭಾಗದಲ್ಲಿ ರಾಷ್ಟ್ರೀಯ ‘ವನ್ಯಜೀವಿ ಸಂರಕ್ಷಣೆ ಪ್ರಶಸ್ತಿ’ ಹಾಗೂ ‘ಅತ್ಯುತ್ತಮ ಸಿನಿಮಾಟೋಗ್ರಫಿ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಂಡಿದೆ.

‘ವಾಕಿಂಗ್‌ ವಿತ್‌ ವುಲ್ವ್ಸ್’– ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ತೋಳಗಳ ಬಗ್ಗೆ ಮೂರು ವರ್ಷಗಳ ಕಾಲ ನಡೆಸಿದ ವಿಸ್ತೃತ ಅಧ್ಯಯನದ ರೂಪವಾಗಿದೆ. ಈ ಸಾಕ್ಷ್ಯಚಿತ್ರವು 2014ರ ಡಿಸೆಂಬರ್‌ನಲ್ಲಿ ಯೂರೋಪ್‌ ದೇಶಗಳಲ್ಲಿ ಪ್ರಸಾರ ಕಂಡಿತು. ತೋಳಗಳು ಪರಿಸರದ ಎಡರು ತೊಡರು ಎದುರಿಸಿ ಸಂತಾನಾಭಿವೃದ್ಧಿಗಾಗಿ ಅನುಭವಿಸುತ್ತಿರುವ ಸಂಕಷ್ಟ, ತಂತ್ರಗಾರಿಕೆಯು ಅಲ್ಲಿನವರಿಗೆ ವಿಸ್ಮಯ ಮೂಡಿಸಿದೆ. ಜರ್ಮನಿಯಲ್ಲಿ ತೋಳಗಳ ಜೀವನ ಕುರಿತು ಅಧ್ಯಯನ ನಡೆಸುತ್ತಿರುವ ಜರ್ಮನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ವುಲ್ವ್ಸ್ ಮಾನಿಟರಿಂಗ್‌ ಅಂಡ್‌ ರಿಸರ್ಚ್‌ ಕೇಂದ್ರವಿದೆ.

ಸಾಕ್ಷ್ಯಚಿತ್ರವು ಈ ಕೇಂದ್ರದ ಜೀವ ವಿಜ್ಞಾನಿಗಳಲ್ಲಿ ಬೆರಗು ಮೂಡಿಸಿದೆ. ಯೂರೋಪ್‌ ದೇಶಗಳಲ್ಲಿ ತೋಳಗಳು ಕಾಣಸಿಕೊಂಡರೆ ಅಲ್ಲಿನ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗುತ್ತದೆ. ಪರಿಣತರನ್ನು ಕರೆಯಿಸಿ ಅವುಗಳನ್ನು ಕೊಲ್ಲುವ ಪದ್ಧತಿ ಅಲ್ಲಿದೆ. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಮರೆಯಾಗುತ್ತಿರುವ ಅಲೆಮಾರಿ ಸಂಸ್ಕೃತಿಯೊಂದು ನಾಶದ ಅಂಚಿನಲ್ಲಿರುವ ತೋಳಗಳ ಉಳಿವಿಗೆ ನೆರವಾಗುತ್ತಿ ರುವ ನಿದರ್ಶನ ಕಂಡು ಅಲ್ಲಿನ ವಿಜ್ಞಾನಿಗಳು ಬೆರಗಾಗಿದ್ದಾರೆ. ದಂತಕಥೆ ಯೊಂದು ನಂಬಿಕೆಯಾಗಿ ಸಾಂಪ್ರದಾಯಿಕ ವೈರಿಗಳಿಬ್ಬರು ಸಹೋದರರಾಗಿ ಬದುಕುವ ವಿಪರ್ಯಾಸದ ಕಥೆಯು ಅವರ ಮನಸ್ಸನ್ನು ಕಲಕಿದೆ.

ಜರ್ಮನಿಗೆ ಆಹ್ವಾನ
ಜರ್ಮನಿ, ಸ್ವಿಡ್ಜರ್‌ಲೆಂಡ್‌, ಇಸ್ರೇಲ್‌ ವಿಜ್ಞಾನಿಗಳು ಕೃಪಾಕರ ಸೇನಾನಿ ಅವರೊಂದಿಗೆ ಈಗಲೂ ನಿರಂತರ ಸಂಪರ್ಕದಲ್ಲಿದ್ದಾರೆ. ಭಾರತೀಯ ತೋಳಗಳ ವಿಸ್ಮಯದ ಬದುಕಿನ ಬಗ್ಗೆ ಉಪನ್ಯಾಸ ನೀಡುವಂತೆ ಆಹ್ವಾನಿಸಿದ್ದಾರೆ.

‘ಯೂರೋಪ್‌ ದೇಶಗಳ ನಾಗರಿಕರು ವನ್ಯಜೀವಿ ಸಾಕ್ಷ್ಯಚಿತ್ರಗಳ ವೀಕ್ಷಣೆಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನಮ್ಮ ಸಾಕ್ಷ್ಯಚಿತ್ರವು ಜರ್ಮನಿಯಲ್ಲಿ ತೋಳಗಳ ಬಗ್ಗೆ ಅಧ್ಯಯನ ನಿರತವಾಗಿರುವ ವಿಜ್ಞಾನಿಗಳ ಮನಸೆಳೆದಿದೆ. ಅವರು ಆಹ್ವಾನವಿತ್ತರೂ ಕೆಲಸದ ಒತ್ತಡದಿಂದ ಅಲ್ಲಿಗೆ ತೆರಳಲು ಆಗಿಲ್ಲ’ ಎನ್ನುತ್ತಾರೆ ಕೃಪಾಕರ ಸೇನಾನಿ.

‘ಅಲೆಮಾರಿ ಕುರಿಗಾಹಿಗಳ ವಲಸೆ ಮಾರ್ಗ ಅನುಸರಿಸಿ ತೋಳಗಳು ಬದುಕುತ್ತವೆ ಎಂಬ ನಂಬಿಕೆ ಇತ್ತು. ಆದರೆ, ತಮ್ಮ ಆವಾಸ ನೆಲೆಗಳಲ್ಲಿಯೇ ಮರಿಗಳನ್ನು ಜತನದಿಂದ ಕಾಪಾಡಿಕೊಂಡು ಬದುಕುತ್ತವೆ. ಅಲೆಮಾರಿಗಳ ಹಿಂದೆ ಅವು ವಲಸೆ ಹೋಗುವುದಿಲ್ಲ. ಈ ಅಂಶ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿದೆ’ ಎನ್ನುತ್ತಾರೆ ಅವರು. ‘ರೈತರ ಜಮೀನುಗಳಲ್ಲಿ ಕುರಿ, ಮೇಕೆಗಳನ್ನು ಅಲೆಮಾರಿಗಳು ಮಂದೆ ಬಿಡುತ್ತಾರೆ. ಬೆಳಿಗ್ಗೆ ಸುತ್ತಲೂ ಬಲೆ ಹಾಕಿ ಮರಿಗಳನ್ನು ಒಂದೆಡೆ ಕೂಡಿಹಾಕುತ್ತಾರೆ. ಅಲ್ಲಿಗೆ ತೆರಳುವ ತೋಳಗಳು ಚಾಣಾಕ್ಷತನದಿಂದ ಕುರಿ, ಮೇಕೆ ಮರಿಗಳನ್ನು ಬೇಟೆಯಾಡುತ್ತವೆ. ಅವುಗಳ ಈ ತಂತ್ರಗಾರಿಕೆ ಜರ್ಮನಿ ವಿಜ್ಞಾನಿಗಳಿಗೆ ಸೋಜಿಗ ಮೂಡಿಸಿದೆ’ ಎಂಬುದು ಅವರ ವಿವರಣೆ.

ಹಳ್ಳಿ ಬದುಕಿನ ವಿಸ್ಮಯ
ಜೋಸೆಫ್‌ ಕೆ. ರಾಜ ಅವರು ಕೃಪಾಕರ ಸೇನಾನಿ ಅವರೊಟ್ಟಿಗೆ ಹಲವು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ‘ವಾಕಿಂಗ್‌ ವಿತ್‌ ವುಲ್ವ್ಸ್’ ಸಾಕ್ಷ್ಯಚಿತ್ರಕ್ಕೆ ಸಹ ಛಾಯಾಗ್ರಾಹಕ ಹಾಗೂ ಸಂಕಲನಕಾರನಾಗಿ ಅವರು ಕೆಲಸ ನಿರ್ವಹಿಸಿದ್ದಾರೆ.

‘ಭಾರತೀಯ ವಿಭಾಗದಲ್ಲಿ ಸಿಂಹ ಮತ್ತು ಹುಲಿಗಳ ಬಗ್ಗೆ ಚಿತ್ರೀಕರಿಸಿದ್ದ ಸಾಕ್ಷ್ಯಚಿತ್ರಗಳು ವಾಕಿಂಗ್‌ ವಿತ್‌ ವುಲ್ವ್ಸ್ ಸಾಕ್ಷ್ಯಚಿತ್ರಕ್ಕೆ ಪೈಪೋಟಿ ನೀಡಿದವು. ಆದರೆ, ಇವುಗಳನ್ನು ಹಿಂದಿಕ್ಕಿ ತೋಳಗಳು ಪ್ರಶಸ್ತಿ ಪಡೆದಿವೆ. ಜತೆಗೆ, ಅತ್ಯುತ್ತಮ ಸಿನಿಮಾಟೋಗ್ರಫಿ ಪ್ರಶಸ್ತಿ ಲಭಿಸಿರುವುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಜೋಸೆಫ್‌.

‘ನಿಜವಾದ ಭಾರತ ಇರುವುದೇ ಹಳ್ಳಿಗಳಲ್ಲಿ. ಮೂರು ವರ್ಷದ ಅಧ್ಯಯನದಲ್ಲಿ ಸಾಕಷ್ಟು ಕಲಿತೆ. ಸಾಕ್ಷ್ಯಚಿತ್ರದಲ್ಲಿ ಬರುವ ಕುರಿಗಾಹಿ ರಾಮಪ್ಪನಂತಹ ಅಲೆಮಾರಿಗಳಲ್ಲಿ ಇರುವ ನಂಬಿಕೆಯ ಮೇಲೆ ಸಾಂದ್ರಪಾಯಿಕ ವೈರಿಗಳಾದ ಅಲೆಮಾರಿಗಳು ಮತ್ತು ತೋಳಗಳು ಸಹೋದರರಾಗಿ ಇಂದಿಗೂ ಬದುಕುತ್ತಿವೆ’ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT