ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗದಲ್ಲಿ ಮೆಟ್ರೊ ತರಂಗ!

ಪ್ರಬಂಧ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಮುಂಜಾನೆ ದಿನಪತ್ರಿಕೆ ನೋಡಿದರೆ ಒಂದು ಕಡೆ ಮಳೆಯಿಂದಾಗಿ ನಗರದಲ್ಲೆಲ್ಲಾ ವಾಹನ ದಟ್ಟಣೆ ಎಂಬ ಸುದ್ದಿ. ನನಗೆ ಯಾವತ್ತೂ ಆಗದ ಅಚ್ಚರಿ. ಯಾಕೆಂದರೆ ಹಿಂದಿನ ದಿನ ನಾನು ಅದೇ ಹೊತ್ತಿಗೆ ಆಫೀಸು ಬಿಟ್ಟಿದ್ದೆ. ಬರೀ ಅರ್ಧ ಗಂಟೆಯಲ್ಲಿ ಮನೆ ತಲುಪಿದ್ದೆ. ಆದರೆ ವಾಹನ ದಟ್ಟಣೆಯಲ್ಲಿ ನಾನು ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದ್ದರಿಂದ ನನಗಿದು ನಂಬಲಾರದ ಸುದ್ದಿ.

ಹೌದು, ಯಾವಾಗ ಮೆಟ್ರೊ ರೈಲು ಪಾತಳದಲ್ಲಿ ಓಡಾಡಲಿಕ್ಕೆ ಆರಂಭವಾಯಿತೋ ಆವಾಗಿನಿಂದ ನಾನೇ ಬೇರೆ, ನನ್ನ ಸ್ಟೈಲೇ ಬೇರೆಯಾಗಿದೆ. ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿ ಸಿಕ್ಕಿ ನರಳುತ್ತಿದ್ದವನಿಗೆ ಮೆಟ್ರೊ ಸುರಂಗ ಮಾರ್ಗ ಸಂಚಾರಕ್ಕೆ ಸಿದ್ಧವಾದಂತೆ ಆಗಾಗ ಸುಳ್ಳು ಕನಸು ಬೀಳುತಿದ್ದುದು ಮಾತ್ರ ಸುಳ್ಳಲ್ಲ.

ಆದ್ದರಿಂದಲೇ ಮೊನ್ನೆ ನಿಜವಾಗಲೂ ಸುರಂಗದಲ್ಲಿ ರೈಲು ಸಂಚಾರ ಉದ್ಘಾಟನೆಯಾಯಿತು ನೋಡಿ. ಅಂದು ಮನೆಗೆ ಲಾಡು ತೆಗೆದುಕೊಂಡು ಹೋಗಿದ್ದೆ. ಇದು ನಾನು  ಕಾತರದಿಂದ ಕಾಯುತ್ತಿದ್ದ ದಿನ ಅನ್ನುವುದಕ್ಕಿಂತಲೂ ನನ್ನ ಜೀವನದ ಕೊನೆಯ ಆಸೆ ಎಂದು ಟಿವಿ ಯವರು ಬೈಟ್ಸ್ ಕೇಳಿಕೊಂಡು ಬಂದಿದ್ದರೆ  ಹೇಳಬಹುದಿತ್ತೇನೋ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇಷ್ಟು ವರ್ಷಗಳ ನನ್ನ  ಬದುಕಿನಲ್ಲಿ ಯದ್ವಾತದ್ವಾ ಬದಲಾವಣೆಯಾಗಿಬಿಟ್ಟಿದೆ. ನಾನೀಗ ಭೂಲೋಕದಿಂದ  ಪಾತಾಳಕ್ಕೆ ಹೋಗಬಲ್ಲೆ. ಅಲ್ಲಿಂದ ತ್ರಿಶಂಕು ಸ್ವರ್ಗದಲ್ಲೂ ಸುಳಿದಾಡಬಲ್ಲೆ. ಮತ್ತೆ ಧುಮ್ಮಿಕ್ಕಿ ಇಳಿದರೆ ನೇರ ನನ್ನ ಕಚೇರಿಗೆ. ‘ಹ್ಯಾರಿ ಪೋಟರ್’ನಲ್ಲಿ ಬರುವ ವಿಸ್ಮಯಗಳಂತೆ! ಇದೆಲ್ಲಾ ‘ನಮ್ಮ ಮೆಟ್ರೊ’ ಚಮತ್ಕಾರ!

ಬಿಎಂಟಿಸಿ ಬಸ್‌ಗಳಲ್ಲಿ ಒಂದುವರೆ-ಎರಡು ಗಂಟೆಯ ಪ್ರಯಾಣ. ರಾಮನವಮಿ– ರಂಜಾನ್ ಬಂದರೆ ಅದು ಮೂರು  ಗಂಟೆಯ ಪ್ರಯಾಸ. ಮೆಟ್ರೊ ಸುರಂಗ ಕೊರೆಯುವ ‘ಹೆಲೆನ್’ ಮೆಜೆಸ್ಟಿಕ್ ಮುಟ್ಟಿದೆ... ಆರು ತಿಂಗಳಲ್ಲಿ ಓಡಾಟ ಆರಂಭ..’ ಎಂಬ ಹೆಡ್‌ಲೈನ್ ಓದಿ ಖುಷಿಪಟ್ಟ ಬೆಂಗಳೂರಿಗರು ಅದು ಒಂದು ವರ್ಷಕ್ಕೆ ವಿಸ್ತರಣೆಯಾಗಿ ಅನೇಕ ಬೆಂಗಳೂರಿಗರ ಸಹನೆ ಪರೀಕ್ಷಿಸಿದರೂ ಎಲ್ಲೋ ಒಂದು ಕಡೆ ‘ಅಚ್ಚೇ ದಿನ್’ ಬಂದೇ ಬರುತ್ತದೆ ಎಂಬ ಅಚಲವಾದ ನಂಬಿಕೆ ನಿಜವಾಯಿತು.

ಮೆಟ್ರೊ ಕೃಪೆಯಿಂದಾಗಿ ಈಗ ನಾನು ಮನೆ-ಕಚೇರಿ ತಲುಪುವ ಸಮಯ  ಬರೀ ಅರ್ಧ ಗಂಟೆಗೆ ಇಳಿದಿದೆ. ಬಿಎಂಟಿಸಿ ಬಸ್ಸುಗಳಿಂದ ಮುಕ್ತಿ ಸಿಗುವುದೇನೂ ಪುಟ್ಟ ವಿಷಯವಲ್ಲ. ಬಸ್ಸಿನ ಕಿಟಿಕಿಯಿಂದಾಚೆ ನಿಮಿಷಕ್ಕೊಮ್ಮೆ ಉಗಿಯುವವರ ಬಗ್ಗೆ ನಾನಿನ್ನು ಬೆಂಕಿಯಾಗಬೇಕಾಗಿಲ್ಲ. ಕುಡುಕರ ಅಮಲಿನ  ಘಮ ಘಮಕ್ಕೇ ನಾನು ಟೈಟಾಗಬೇಕಾಗಿಲ್ಲ.

ಜಗಳಗಂಟಿ ಗಟ್ಟಿಗರು ಅಖಾಡಕ್ಕೆ ಇಳಿದಾಗ ಮೂಕ ಪ್ರೇಕ್ಷಕನಾಗಬೇಕಾಗಿಲ್ಲ. ಆಗಾಗ ತಡೆಯುವ ಸಿಗ್ನಲ್ ಭೂತಗಳನ್ನು ಶಪಿಸಬೇಕಾಗಿಲ್ಲ. ಎಲ್ಲಿ ಬಸ್ಸು ಮಿಸ್ಸಾಗುತ್ತೋ ಎಂದು ಗಡಿಬಿಡಿ ಗುಂಡ [ಅಥವಾ ಗಂಡ] ನಾಗಬೇಕಾಗಿಲ್ಲ. ಹೀಗೆ ಎಷ್ಟೋ ‘ಇನ್ನು ಆಗಬೇಕಾಗಿಲ್ಲ’ಗಳ ನಡುವೆ ಕೆಲವನ್ನು ಕಳಕೊಳ್ಳುತಿದ್ದೇನೆ ಎಂದೂ ಅನಿಸತೊಡಗಿದೆ.

ದಿನಾ ನೋಡುತ್ತಿದ್ದ ನಿಧಾನಸೌಧ , ಐ ಮೀನ್ ವಿಧಾನಸೌಧ, ಉಚ್ಚಕೋರ್ಟ್, ಹುಚ್ಚು ಮಾರ್ಕೆಟ್ ರಸ್ತೆ, ಒಂದಲ್ಲ ಒಂದು ಪ್ರತಿಭಟನೆಗೆ ಸಾಕ್ಷಿಯಾಗುವ ಟೌನ್‌ಹಾಲ್ ಮೆಟ್ಟಿಲುಗಳು, ಸಾಯಂಕಾಲ ಕಡಲೆಕಾಯಿ ತಿನ್ನಲು ಬಡಿದೆಬ್ಬಿಸುವ ಬೀದಿಬದಿಯ ‘ಢಣ ಢಣ’ ಬಾಣಲೆಗಳು, ಕಂಡಕ್ಟರ್‌ಗಳ ‘ಬಾಗಿಲಲ್ಲಿ ನಿಲ್ಲಬೇಡಿ... ಹಿಂದೆ ಹೋಗಿ...

ಮುಂದೆ ಹೋಗಿ... ಎಲ್ಲಿಗಪ್ಪಾ? ಎಲ್ಲಿಗೆ ಸಾರ್? ಎಲ್ಲಿಗಮ್ಮಾ? ...’ ಅನ್ನುವ ಮಂತ್ರಪಠಣ, ತನ್ನ ಮತ್ತು ಸರ್ಕಾರದ ಬೊಕ್ಕಸ ತುಂಬಲು ಬರೀ ‘ದಂಡ’ಕ್ಕಿರುವ ಟ್ರಾಫಿಕ್ ಪೊಲೀಸರು, ತಮಾಷೆಯಾಗಿ ಕಾಣುವ ‘ಗ್ರಾಸ್ ರೂಟ್’ ವ್ಯಕ್ತಿಗಳ  ನಡೆನುಡಿಗಳು, ಮತ್ತವರ ಮೂರ್ಖತನಗಳನ್ನೆಲ್ಲಾ ಆಸ್ವಾದಿಸಬೇಕಾದರೆ ನಮ್ಮ ಬಿಎಂಟಿಸಿ ಬಸ್ಸೇ ಬೇಕು.
ಮೆಟ್ರೊ ರೈಲಲ್ಲಿ ನಾನು ಮೊತ್ತಮೊದಲು ಕಂಡದ್ದು ಬಸ್ಸು ಪ್ರಯಾಣದ ಗುಂಗಿನಲ್ಲೇ ಇರುವ ಪ್ರಯಾಣಿಕರನ್ನು. 

ಇವರು ರೈಲು ಹೊಕ್ಕಿದೊಡನೆ  ಬಾಗಿಲ ಬಳಿಯೇ ನಿಂತುಬಿಟ್ಟರೆ ಮತ್ತೆ ಅಲ್ಲಿಂದ ಕದಲುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಅಲ್ಲಿ ಮುಂದೆ ಹೋಗಿ... ಹಿಂದೆ ಹೋಗಿ..’ ಎಂದು ಅರಚುವ ಕಂಡಕ್ಟರ್ ಇರುವುದಿಲ್ಲ! ಬಸ್‌ನಲ್ಲಿ ಫುಟ್‌ಬೋರ್ಡ್ ಚಟವಿರುವವರಿಗಂತೂ ಇಲ್ಲಿ ಅಕಟಕಟಾ ಸಂಕಟ! 

ಇನ್ನು ಉಗುಳುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡವರು ತಪ್ಪಿಯೂ ಕೂಡಾ ಇದರಲ್ಲಿ ಪ್ರಯಾಣಿಸಕೂಡದು. ಅಂತಹ ಮಹಾನುಭಾವರು ರೈಲಿನ ಒಳಗೇ ಮೂಲೆಗಳನ್ನು ಉಗುಳುವ ಸಾಧ್ಯತೆ ಇದೆ.  ಮೆಟ್ರೊ ರೈಲಿನ ವಿಶೇಷವೇನೆಂದರೆ ಸೀಟಿಗಾಗಿ ಕಾದಾಡುವ ಪ್ರಮೇಯವೇ ಬರುವುದಿಲ್ಲ. ಯಾಕೆಂದರೆ ಇಲ್ಲಿ ಕನಿಷ್ಠ ಆಸನಗಳಿವೆ.

ಬಹುತೇಕ ನಿಂತುಕೊಂಡೇ ಪ್ರಯಾಣ ಮಾಡಬೇಕು. ಆದ್ದರಿಂದ ಮುಖ್ಯವಾಗಿ ಸ್ತ್ರೀಯರು ‘ರಾಣಿರೋಷ’ವಾಗಿ ನಮ್ಮ ಸೀಟುಗಳೆಂದು ಕುಳಿತುಕೊಳ್ಳುವ ಹಾಗಿಲ್ಲ. ಅಷ್ಟೇ ಅಲ್ಲ, ಪಕ್ಕದಲ್ಲಿ ಬಂದು ಕುಳಿತುಕೊಳ್ಳುವ ಗಂಡಸರನ್ನು ಎಬ್ಬಿಸುವ ಸ್ತ್ರೀ- ಸ್ವಾತಂತ್ರ್ಯವನ್ನೂ ಮೆಟ್ರೊ ಅವರಿಂದ ಕಸಿದುಕೊಂಡಿದೆ.

ಬಸ್ಸಿನಲ್ಲಿ ಇರುವಂತೆ ಹಿರಿಯ ನಾಗರಿಕರನ್ನು ಗೌರವಿಸುವ ಸೀಟುಗಳೂ ಇಲ್ಲಿಲ್ಲ. ಧ್ವನಿವರ್ಧಕದಲ್ಲಿ ‘ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಸೀಟು ಕೊಡಿ’ ಎಂಬ ಸಂದೇಶ ಬರುತ್ತಿದ್ದರೂ ಸೀಟು ಭಾಗ್ಯ ಸಿಕ್ಕಿದವರು ಆ ಹೊತ್ತಿಗೆ ಪಕ್ಕಾ ರಾಜಕಾರಣಿಯಾಗಿ ಬಿಡುತ್ತಾರೆ. 

ಇನ್ನು ಮೊಬೈಲ್‌ನಲ್ಲಿ ಹರಟುವ ಚಟವುಳ್ಳವರ ಅವಸ್ಥೆ ಕೇಳಿ.  ಸುರಂಗ ಮಾರ್ಗದಲ್ಲಿ ಸಂಪರ್ಕ ಕಡಿತವಾಗುವುದರಿಂದ ಅವರ ಬದುಕೇ ಕಗ್ಗತ್ತಲೆಯಾದಂತೆ ಒಮ್ಮೆ ಭಾಸವಾದರೆ ಆಶ್ಚರ್ಯವಿಲ್ಲ.

ಮೊನ್ನೆ ಸುರಂಗ ಮಾರ್ಗದಲ್ಲಿ ಸಂಚರಿಸುವಾಗ ಆಳವಾದ ಪ್ರಶ್ನೆಯೊಂದು ನನ್ನನ್ನು ಕಾಡತೊಡಗಿತು. ಜೋರು ಮಳೆ ಬಂದರೆ ನಮ್ಮ ನೆಚ್ಚಿನ ನಗರದ ಅಂಡರ್ ಪಾಸ್‌ಗಳೆಲ್ಲಾ ತುಂಬಿಬಿಡುವಾಗ ಈ ಸುರಂಗ ಮಾರ್ಗದ ನಿಲ್ದಾಣಗಳ ಒಳಗೆ ನೀರು ಹರಿದರೆ? ನಿಲ್ದಾಣಕ್ಕೆ ಬಂದ ನೀರು ಸುರಂಗ ಮಾರ್ಗಕ್ಕೆ ಪ್ರವೇಶಿಸದೆ ಇರುತ್ಯೇ?

ಅಯ್ಯೋ, ಏನು ಅಪಶಕುನ ಹೇಳ್ತಿದ್ದಾರಪ್ಪಾ ಎಂದು ಎದೆಗುಂದಬೇಡಿ. ಮೆಟ್ರೊ ಅಂದರೆ ಏನು ತಿಳಿದು ಕೊಂಡಿರಿ? ಎಲ್ಲಾ ಹೈಟೆಕ್ಕು ಸ್ವಾಮಿ! ಇದು ಎಸಿ ರೈಲಾಗಿರುವುದರಿಂದ ತೆರೆಯಲಾಗದ ಗ್ಲಾಸ್ ಕಿಟಿಕಿಗಳು ಮತ್ತು ಅಟೋಮ್ಯಾಟಿಕ್ ಬಾಗಿಲುಗಳಿರುತ್ತವೆ.

ಆದ್ದರಿಂದ ನೆರೆ ಬಂದರೂ ನೀರು ಒಳಗೆ ಪ್ರವೇಶಿಸುವುದಿಲ್ಲ ಎಂದು ನಾನು ಸಿದ್ರಾಮಣ್ಣರ ಪರವಾಗಿ ಆಶ್ವಾಸನೆ ಕೊಡಬಲ್ಲೆ. ಆದರೆ ಅಂತಹ ಸಂದರ್ಭಗಳಲ್ಲಿ ರೈಲು ಸುರಂಗದ ನಿಲ್ದಾಣಗಳಲ್ಲಿ ನಿಲ್ಲಬಾರದಷ್ಟೆ! ಒಂದು ವೇಳೆ ತಪ್ಪಿ ನಿಂತರೆ...! ಹಾಗಾಗುವ ಸಾಧ್ಯತೆಗಳಿರಬಹುದೆಂದು ನಮ್ಮ ಮೆಟ್ರೊ ನಮಗಾಗಿ ‘ಸ್ಕ್ಯೂಬಾ ಡೈವಿಂಗ್’ಗೆ ಬೇಕಾದ ಸಾಧನಗಳನ್ನು ಮೊದಲೇ ವ್ಯವಸ್ಥೆ ಮಾಡಬೇಕಾಗುತ್ತದೆ. ವಿಮಾನದಲ್ಲಿ ಸುರಕ್ಷಾ ಸಾಧನಗಳಿವೆಯಲ್ಲ ಹಾಗೆ.

ಸುಮ್ಮನೆ ಟೆನ್ಶನ್ ತೆಗೆದುಕೊಳ್ಳಬೇಡಿ.  ಒಳ್ಳೆಯದನ್ನೇ ಯೋಚಿಸ್ತೀನಿ, ಒಳ್ಳೆಯದು ಬಿಟ್ಟು ಬೇರೆ ಯಾವುದನ್ನು ಯೋಚಿಸುವುದಿಲ್ಲ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡರಾಯಿತು ಬಿಡಿ. ಅದು ಸರಿ, ಈ ಶರವೇಗದ ಸವಾರಿಯಲ್ಲಿ ಮುಂದೆ ಆಗುವ ಅಪಾಯಕಾರಿ ಸೂಚನೆಗಳನ್ನು ಈಗಲೇ ಕಾಣಬಹುದು. ಕೆಲವು ನಿಮಿಷಗಳಲ್ಲಿ ನಮ್ಮ ಜಾಗ ತಲುಪುತ್ತೇವೆ ಎಂದು ಬಿಟ್ಟರೆ ಇಲ್ಲಿ ಆರಾಮವಾಗಿ ಪ್ರಯಾಣಿಸಬಹುದೆಂಬ ಭ್ರಮೆ ಬೇಡ.

ಯಾಕೆಂದರೆ ಯಾವತ್ತೂ ‘ಪ್ಯಾಕ್ಡ್’ ಇರುವ ರೈಲಿನ ಒಳಗೆ ಆಗಲೇ ಕಿಸೆಗಳ್ಳರು, ಮೊಬೈಲ್ ಕಳ್ಳರು ಒಂದಲ್ಲ ಎರಡೂ ಕಣ್ಣಿಟ್ಟಿರಬಹುದು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಇಲ್ಲದಿರುವುದರಿಂದ ಶೀಘ್ರದಲ್ಲೇ ‘ನಮ್ಮ ಮೆಟ್ರೊದಲ್ಲಿ ಲೈಂಗಿಕ ದೌರ್ಜನ್ಯ’ದ ಸುದ್ದಿಗಳು ಬಂದರೆ ಆಶ್ಚರ್ಯವಿಲ್ಲ. ನನಗೆ ಇನ್ನೂ ಒಂದು ಭಯವಿದೆ. ಬಸ್ಸಿನಲ್ಲಿ ಕುಖ್ಯಾತ ಜಗಳಗಂಟಿಗಳನ್ನು ಕಂಡಿದ್ದೇನೆ. ಅವರು ಇಲ್ಲೂ ಬಂದುಬಿಟ್ಟರೆ! ವಾಕ್ಸಮರವಾದರೆ ಪರವಾಗಿಲ್ಲ. ಬಲ ಪ್ರದರ್ಶನ ಶುರು ಮಾಡಿದರೆ ಏನು ಗತಿ? ಬೇರೆನಾಗುತ್ತೆ?   ಮಲ್ಲಯುದ್ಧದ ರಿಂಗ್‌ನ ಒಳಗೇ ನಿಂತು ಕೊಂಡು ‘ಡಬ್ಲ್ಯೂಡಬ್ಲ್ಯೂಈ’  ನೋಡಿದರೆ ಏನಾಗಬಹುದು ಯೋಚಿಸಿ.

ಅಂದ ಹಾಗೇ ನಮ್ಮ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೆಟ್ರೊ ರೈಲು ತಡೆ ಚಳವಳಿಯ ಸ್ಕೆಚ್ಚು ಹಾಕುತ್ತಿರಬಹುದೇ? ವಾಟಾಳರ ಹೋರಾಟ ಅಂದಾಗ ಈಚೆಗೆ ‘ಗುಂಡಿ ಮುಕ್ತ ನಗರ’ ಹೋರಾಟಕ್ಕೆ ಮುನ್ನುಗ್ಗಿದ ನನ್ನ ಗೆಳೆಯರೊಬ್ಬರು ನೆನಪಾಗುತ್ತಾರೆ. ಯಾವಾಗ ಬೆಂಗಳೂರಿನ ರಸ್ತೆ ಗುಂಡಿಗಳಿಗಿಂತ ಎಷ್ಟೋ ಆಳದಲ್ಲಿ ರೈಲುಗಳು ಓಡಲಾರಂಭಿಸಿತೋ, ಅಂದೇ ‘ಗುಂಡಿ ಮುಕ್ತ ನಗರ’ ಹೋರಾಟದ ಮುಂದಾಳತ್ವಕ್ಕೆ ‘ಗುಡ್ ಬೈ’ ಅಂದಿದ್ದಾರಂತೆ.

ಇಷ್ಟೆಲ್ಲ ಸುಸಜ್ಜಿತ, ಸುಗಮ, ಶರವೇಗದ ಸಂಚಾರ ಇದ್ದರೂ ತಮ್ಮನ್ನು ತಾವು ‘ವಿಐಪಿ’ ಎಂದು ಪರಿಗಣಿಸಿಕೊಂಡವರು  ಸಂಚಾರ ದಟ್ಟಣೆಯಲ್ಲೇ ನರಳದೆ ಬೇರೆ ವಿಧಿಯಿಲ್ಲ.

ಮುಂದೆ ಖ್ಯಾತರಿಗೆ ಹೇಗಾದರೂ ಮಾಡಿ ಮೆಟ್ರೊ ಅನುಭವ ಪಡೆಯಬೇಕೆಂದು ಅನಿಸಿದರೆ ಇಡೀ ರೈಲನ್ನು ಬುಕ್ ಮಾಡುವ ಯೋಚನೆ ಬರಬಹುದು ಅನ್ನಿ. ಇನ್ನು ದಪ್ಪ ಪ್ರಯಾಣಿಕರು ಬಹಳ ತುರ್ತಾಗಿ ತೆಳ್ಳಗಾಗುವುದಕ್ಕೆ ಪ್ರಯತ್ನಿಸಬೇಕಾಗುತ್ತದೆ. ತೆಳ್ಳಗಿರುವವರು ಕಾಲಿಡಲು ಜಾಗ ಸಿಕ್ಕಿದರೆ ಸಾಕು ಅನ್ನಬಹುದು. ಆದರೆ ಕಾಲ ಮೇಲಿನ ಭಾಗ ಇದೆಯಲ್ಲ, ಅದು ಅಡ್ಡಾದಿಡ್ಡಿಯಾಗಿ ಬೆಳೆದಿದ್ದರೆ ತಾಪತ್ರಯ ಸ್ವಾಮಿ! [ತಮಗೂ, ಸಹಪ್ರಯಾಣಿಕರಿಗೂ]

‘ರೈಲಿನ ಒಳಗೆ ತಿನ್ನಬಾರದು’ ಎಂದು ಬರುವ ಸಂದೇಶ ಕೇಳಿದಾಗ  ‘ತೂಕದ ಪ್ರಯಾಣಿಕರು ರೈಲಿನ ಹೊರಗೂ [ಮನೆಯಲ್ಲೂ] ಹೆಚ್ಚು ತಿನ್ನಬಾರದು’ ಎಂಬ ಸಂದೇಶ ಸೇರಿಸಬಾರದೇ ಅನಿಸತೊಡಗಿದೆ.

ಸದ್ಯ ಮೆಟ್ರೊ ಗುಂಗಿನಲ್ಲಿರುವ ನನಗೆ ರಾತ್ರಿ ನಿದ್ದೆಯಲ್ಲೂ  ಪ್ರಯಾಣದುದ್ದಕ್ಕೂ ಅಪರ್ಣಾ ಅವರ ಮುದ್ರಿತ ಸಂದೇಶಗಳು ಕೇಳುತ್ತಿರುತ್ತವೆ. ‘ರೈಲು ಈಗ ಅಂಬೇಡ್ಕರ್ ನಿಲ್ದಾಣ, ವಿಧಾನ ಸೌಧ ತಲುಪಲಿದೆ. ಬಾಗಿಲು ಬಲ ಬದಿಯಲ್ಲಿ ತೆರೆಯಲಿದೆ.. ರೈಲು ಈಗ ಬೈಯಪ್ಪನಹಳ್ಳಿಗೆ ಹೊರಡಲಿದೆ... ರೈಲು ಹತ್ತುವ ಮುನ್ನ ಮತ್ತು ಇಳಿಯುವ ಮುನ್ನ ಅಂತರದ ಬಗ್ಗೆ ಗಮನವಿರಲಿ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT