ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ಸಮರ!

Last Updated 11 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಣ್ಣೋಟದ ಲಜ್ಜೆಯಲ್ಲಿ, ಅರೆಬಿರಿದ ತುಟಿಗಳ ಹೂನಗುವಿನಲ್ಲಿ, ಹೆಜ್ಜೆಯ ಜಾಡಿನಲ್ಲಿ, ವಸ್ತ್ರಗಳ ಚುಂಗಿನಲ್ಲಿ ಹೀಗೆ ಎಲ್ಲೆಲ್ಲೂ ಸೌಂದರ್ಯ ಸಮರ. ತಾರೆಗಳ ಗುಂಪಿಂದ ರಿಚಾ ಚೆಡ್ಡಾ, ಅದಿತಿ ರಾವ್‌ ಹೈದರಿ, ಪ್ರಣೀತಾ ಸುಭಾಷ್‌ ಮೊದಲಾದವರು ರ್‌್ಯಾಂಪ್‌ ಮೇಲೆ ಕ್ಯಾಟ್‌ವಾಕ್‌ ಮಾಡುತ್ತಾ, ವಯ್ಯಾರದ ಮಿಂಚು ಹರಿಸಿದಾಗ ಅಲ್ಲಿ ಚೆಲುವು ಇನ್ನಷ್ಟು ಪ್ರವಹಿಸಿತು.

ಮಿಂಟ್ರಾ ಬೆಂಗಳೂರು ಫ್ಯಾಷನ್‌ವೀಕ್‌ ವಿಂಟರ್‌ ಫೆಸ್ಟಿವಲ್‌ನ ಮೊದಲ ದಿನ ಫ್ಯಾಷನ್‌ಪ್ರಿಯರಿಗೆ ರಸದೌತಣ ನೀಡಿತು. ಖ್ಯಾತ ವಿನ್ಯಾಸಕರ ವಸ್ತ್ರವೈಭವದ ಸುಗ್ಗಿ ಒಂದೆಡೆಯಾದರೆ, ಆ ದಿರಿಸುಗಳಿಗೆ ಮೈಯೊಡ್ಡಿದ್ದ ಚೆಂದದ ರೂಪದರ್ಶಿಗಳ ಸೊಬಗಿನ ಹುಗ್ಗಿ ಮತ್ತೊಂದೆಡೆ. ಇವುಗಳನ್ನು ಕಣ್ತುಂಬಿಕೊಂಡ ‘ಫ್ಯಾಷನ್ ಪ್ರಭು’ ಸುಖದ ಅಲೆಯಲ್ಲಿ ಜೀಕಿದ್ದಂತೂ ಸುಳ್ಳಲ್ಲ.

ಮೊದಲ ದಿನ ಷೋ ಉದಯೋನ್ಮುಖ ಹಾಗೂ ಅನುಭವ ವಸ್ತ್ರವಿನ್ಯಾಸಕರ ಜುಗಲ್‌ಬಂದಿಯಂತಿತ್ತು. ಹಳಬರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹೊಸಬರು ತಮ್ಮ ಸೃಜನಶೀಲತೆ ತೋರಿದ್ದು ವಿಶೇಷವಾಗಿತ್ತು. ವಸ್ತ್ರವಿನ್ಯಾಸ ಕ್ಷೇತ್ರದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಡ್ರೀಂ ಜೋನ್‌ ಫ್ಯಾಷನ್‌ ಸ್ಕೂಲ್‌ನ ವಿನ್ಯಾಸಕರು ತೋರಿದ ಕೈಚಳಕದೊಂದಿಗೆ ಮೊದಲ ದಿನದ ಷೋಗೆ ಚಾಲನೆ ದೊರಕಿತು.

ಡ್ರೀಂ ಜೋನ್‌ನ ವಿನ್ಯಾಸಗಳು ಗಮನ ಸೆಳೆದ ನಂತರ ಪ್ರದರ್ಶನಗೊಂಡಿದ್ದು ವೃಂದಾ ಅಶ್ವಿನಿ ಅವರ ‘ಸಿಲ್ವೆನ್ಸ್‌’ ದಿರಿಸುಗಳು. ಇವು ಆಧುನಿಕ ಮಹಿಳೆಯರು ಇಷ್ಟಪಡುವ ವಸ್ತ್ರಗಳ ಪ್ರತೀಕದಂತಿದ್ದವು. ನಮ್ಮದೇ ನೆಲದ ಸಂಸ್ಕೃತಿಯನ್ನು ಆವಾಹಿಸಿಕೊಂಡಂತೆ ರೂಪುಗೊಂಡಿದ್ದ ಈ ವಸ್ತ್ರಗಳಲ್ಲಿ ವಿಶಿಷ್ಟ ಸೆಳೆತವಿತ್ತು. ವೃಂದಾ ವಿನ್ಯಾಸದ ವಸ್ತ್ರ ಧರಿಸಿ ರ್‌್ಯಾಂಪ್‌ ವಾಕ್‌ ಮಾಡಿದ ರೂಪದರ್ಶಿಗಳಿಗೆ ಕಣ್ಣುಕುಕ್ಕುವ ಆಭರಣಗಳು ಸಾಥಿಯಾಗಿ ಷೋಗೆ ಮತ್ತಷ್ಟು ಮೆರುಗು ತುಂಬಿದವು. ಯುವ ವಿನ್ಯಾಸಕರಾದ ಡಿಯೊನೆ ಕ್ಲೌಡೆಟ್‌ ಅಲ್ವೆಸ್‌ ಅವರ ಕಪ್ಪು ಬಣ್ಣದ ವಸ್ತ್ರಗಳು ರ್‌್ಯಾಂಪ್‌ ಮೇಲೆ ಮಿಂಚು ಹರಿಸಿದವು. ಬಿಳಿ ತೊಗಲಿನ ರೂಪದರ್ಶಿಯರ ಮೈಮೇಲೆ ಅವು ವಿಜೃಂಭಿಸಿದ ಪರಿ ಅನನ್ಯವಾಗಿತ್ತು.

ಡಿಯೊನೆ ವಿನ್ಯಾಸದ ಕಪ್ಪು ಬಣ್ಣದ ವಸ್ತ್ರಗಳಿಗೆ ಮನಸೋತಿದ್ದ ಫ್ಯಾಷನ್‌ಪ್ರಿಯರು ಆನಂತರ ಲಲಿತ್‌ ದಾಲ್ಮಿಯಾ ಅವರ ಸಂಗ್ರಹ ಕಣ್ತುಂಬಿಕೊಂಡು ದಂಗಾದರು. ಕತ್ತಿನ ಕೆಳಭಾಗದ ಸೌಂದರ್ಯ, ನುಣುಪು ಬೆನ್ನಿನ ಚೆಲುವು, ಸಿಂಹಕಟಿ  ಹಾಗೂ ನಾಭಿಯ ಅಂದ ಕವಿಯ ಕಲ್ಪನೆಯಂತೆ ಈ ವಸ್ತ್ರಗಳಲ್ಲಿ ಧಾರೆಯಾಗಿ ಹರಿಯಿತು. ಗಾಢ ನೀಲಿ, ತಿಳಿ ಹಸಿರು ಮತ್ತು ಬಣ್ಣಗಳ ಆಯ್ಕೆ ವಸ್ತ್ರಗಳಿಗೊಂದು ವಿಶೇಷ ಚೌಕಟ್ಟು ಹಾಕಿತ್ತು. ಹೆಣ್ಣಿನ ದೇಹದ ಪ್ರತಿ ಅಂಗವೂ ಸುಂದರ ಎಂಬುದು ಈ ವಸ್ತ್ರಗಳಲ್ಲಿ ರುಜುವಾತುಗೊಂಡಿತು. ಲಲಿತ್‌ ವಿನ್ಯಾಸಕ್ಕೆ ಷೋ ಸ್ಟಾಪರ್‌ ಆಗಿ ಆಗಮಿಸಿದ್ದು ನಟಿ ಅದಿತಿ ರಾವ್‌ ಹೈದರಿ. ಆಮೇಲೆ ಶಿವಾಲಿ ಸಿಂಗ್‌ ವಿನ್ಯಾಸದ ಟೈಟಾನಿಯಂ ಸಂಗ್ರಹಕ್ಕೆ ನಟಿ ಪ್ರಣೀತಾ ಸುಭಾಷ್‌ ಷೋ ಸ್ಟಾಪರ್‌ ಆಗಿ ಪಾಲ್ಗೊಂಡು ಮಿಂಚು ಹರಿಸಿದರು.

ಮೊದಲ ದಿನದ ಷೋ ಮುಕ್ತಾಯಗೊಂಡಿದ್ದು ಅಂತರರಾಷ್ಟ್ರೀಯ ಮಟ್ಟದ ವಿನ್ಯಾಸಕಾರ್ತಿ ಅರ್ಚನಾ ಕೊಚ್ಚಾರ್‌ ಅವರ ವಸ್ತ್ರ ವಿನ್ಯಾಸಗಳ ಪ್ರದರ್ಶನದೊಂದಿಗೆ. ಅರ್ಚನಾ ಅವರು ವಿನ್ಯಾಸ ಮಾಡಿದ್ದ ಸೀರೆ, ಲೆಹೆಂಗಾ, ಕುರ್ತಿಯಲ್ಲಿ ಆಕರ್ಷಕ ಕುಸುರಿ ಕಲೆಯಿತ್ತು. ಈ ವಸ್ತ್ರಗಳು ನೋಡುಗರನ್ನು ಸಮ್ಮೋಹನಗೊಳಿಸಿದವು. ಮತ್ತೊಂದು ಬಣ್ಣದ ಕನಸಿಗೆ ಮುನ್ನುಡಿ ಬರೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT