ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಮಯ ಆರೋಗ್ಯ ಕೇಂದ್ರ

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರವೀಗ ಸಂಪೂರ್ಣ ಸೌರಮಯ. ವಿದ್ಯುತ್‌ ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯಲ್ಲಿಯೂ  ಸೋಲಾರ್‌ ಬಳಸಬಹುದೆಂಬ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿರುವ ಕೀರ್ತಿ ಈ ಕೇಂದ್ರದ್ದು.

ವಿದ್ಯುತ್‌ ವ್ಯವಸ್ಥೆ ಇಲ್ಲದ ಗ್ರಾಮಗಳಲ್ಲಿ ಸೋಲಾರ್‌ ಬಳಕೆ ಸಾಮಾನ್ಯವಾಗುತ್ತಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇದನ್ನು ಅಳವಡಿಸುವ ಮೂಲಕ ಬೆಂಗಳೂರಿನ ಫಿಲಿಪ್ಸ್‌ ಇನೊವೇಷನ್‌ ಕ್ಯಾಂಪಸ್‌ ಜೊತೆಗೂಡಿ ಮಣಿಪಾಲ್‌ ವಿಶ್ವವಿದ್ಯಾಲಯ ವಿನೂತನ ಪ್ರಾಯೋಗಿಕ ಯೋಜನೆಯನ್ನು ಜಾರಿ ಮಾಡಿದೆ. ಮಣಿಪಾಲ್‌ ವಿಶ್ವವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗವು ಈ ಕೇಂದ್ರವನ್ನು ನಡೆಸುತ್ತಿದೆ.

ಸಾಂಪ್ರದಾಯಿಕ ವಿದ್ಯುತ್‌ ಉತ್ಪಾದನಾ ವ್ಯವಸ್ಥೆಯಿಂದ ಈಗಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಇದೇ ಕಾರಣಕ್ಕೆ ಅಸಾಂಪ್ರದಾಯಿಕ ಇಂಧನ ಮೂಲದ ಶೋಧನೆ ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಇಂಥ ಇಂಧನ ಮೂಲಗಳಲ್ಲಿ ಸೋಲಾರ್‌ಗೆ ಮಹತ್ವ ಹೆಚ್ಚು. ಸೋಲಾರ್‌ ಫಲಕಗಳನ್ನು ಅಳವಡಿಸಿ ಸೂರ್ಯನ ಕಿರಣಗಳಿಂದ ವಿದ್ಯುತ್‌ ಉತ್ಪಾದಿಸಿ ಬಳಸುವುದು ಜನಪ್ರಿಯ ವಿಧಾನವಾಗಿದೆ. ಇದಕ್ಕೆ ಈ ಆರೋಗ್ಯ ಕೇಂದ್ರವೂ ಹೊರತಾಗಿಲ್ಲ.

ಸಮುದಾಯ ಆರೋಗ್ಯ ಸೇವೆ, ಮಹಿಳಾ ಮತ್ತು ಶಿಶು ಆರೋಗ್ಯ, ಕ್ಯಾನ್ಸರ್‌ ಪ್ರಾಥಮಿಕ ತಪಾಸಣೆ ಕೇಂದ್ರವನ್ನು ಈ ಕೇಂದ್ರ ಹೊಂದಿದ್ದು, 25 ಹಾಸಿಗೆಗಳಿಂದ ಕೂಡಿದೆ. ಕೇಂದ್ರಕ್ಕೆ ಪ್ರತಿ ದಿನ ಸುಮಾರು ಎಂಟು ಯುನಿಟ್‌ ವಿದ್ಯುತ್‌ ಅಗತ್ಯವಿದೆ. ಆದರೆ ಇಲ್ಲಿ ಸುಮಾರು 15 ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲು ಸಹಕಾರಿಯಾಗುವಷ್ಟು ಸೋಲಾರ್‌ ಫಲಕಗಳನ್ನು (3ಕೆಡಬ್ಲ್ಯುಪಿ) ಅಳವಡಿಸಲಾಗಿದೆ. ದಿನದ ಬಳಕೆಯ ಎಂಟು ಯುನಿಟ್‌ಗಳನ್ನು ಕಳೆದರೆ ಇನ್ನೂ 7 ಯುನಿಟ್‌ ವಿದ್ಯುತ್‌ ಹೆಚ್ಚುವರಿಯಾಗಿ ಸಿಗುತ್ತದೆ. ಮಿಗತೆಯ ವಿದ್ಯುತ್‌ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದಕ್ಕಾಗಿ ಅಧಿಕ ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಅಂದರೆ ವಾರವೊಂದಕ್ಕೆ ಸುಮಾರು 50 ಯುನಿಟ್‌ ವಿದ್ಯುತ್‌ ಸಂಗ್ರಹಿಸಬಹುದಾಗಿದೆ.

ಉತ್ತಮ ಗುಣಮಟ್ಟದ ಸೋಲಾರ್‌ ಫಲಕಗಳನ್ನು ಬಳಸಿರುವುದರಿಂದ ಬಿರು ಬಿಸಿಲಿನಲ್ಲಿ ಮಾತ್ರವಲ್ಲದೆ ಸ್ವಲ್ಪವೇ ಸ್ವಲ್ಪ ಬಿಸಿಲು ಇದ್ದರೂ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಮೋಡ ಕವಿದ ವಾತಾವರಣ ಇದ್ದಾಗಲೂ ಒಂದಿಷ್ಟು ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆಗುತ್ತದೆ.

ಉಡುಪಿಯಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಮಳೆ ಅಬ್ಬರಿಸುತ್ತದೆ. ಆದ್ದರಿಂದ ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರುತ್ತದೆ. ಒಂದು ವಾರ ಬಿಸಿಲು ಇಲ್ಲದಿದ್ದರೂ ಸಂಗ್ರಹದಲ್ಲಿರುವ ವಿದ್ಯುತ್‌ ಬಳಸಿ ಆರೋಗ್ಯ ಕೇಂದ್ರವನ್ನು ನಡೆಸಲು ಅವಕಾಶ ಇರುವುದರಿಂದ ಮಳೆಗಾಲದಲ್ಲಿಯೂ ಸೋಲಾರ್‌ನಿಂದಲೇ ನಿರ್ವಹಣೆ ಮಾಡಬಹುದು. ಸಮುದಾಯ ಆರೋಗ್ಯ ಕೇಂದ್ರಕ್ಕೆ ವಿದ್ಯುತ್‌ ಸಂಪರ್ಕವೂ ಇರುವುದರಿಂದ ಸಮಸ್ಯೆಯಾಗದು.

ಈ ಪ್ರಾಯೋಗಿಕ ಯೋಜನೆ ಸೋಲಾರ್‌ ವಿದ್ಯುತ್‌ನ ದೃಷ್ಟಿಕೋನದಿಂದ ಮಾತ್ರವಲ್ಲದೆ ಸಮುದಾಯ ಆರೋಗ್ಯ ಸೇವೆಯಿಂದ ಹೆಚ್ಚು ಮಹತ್ವ ಅನಿಸುತ್ತದೆ. ವೈದ್ಯ, ಸಿಬ್ಬಂದಿ ಜೊತೆ ಮೂಲ ಸೌಕರ್ಯಗಳ ಕೊರತೆಯ ಜೊತೆಗೆ ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ವಿದ್ಯುತ್‌ ಕೊರತೆ. ಸಾಕಷ್ಟು ವಿದ್ಯುತ್‌ ಉತ್ಪಾದನೆ ಮಾಡಿದರೂ ಅದನ್ನು ಮೂಲೆ ಮೂಲೆಗೆ ತಲುಪಿಸಲು ಗ್ರಿಡ್‌ ವ್ಯವಸ್ಥೆ ಇಲ್ಲ.

ವಿದ್ಯುತ್‌ ಇಲ್ಲದೆ ಆರೋಗ್ಯ ಕೇಂದ್ರ ನಡೆಸಲಾಗದು. ಆದ್ದರಿಂದ ವಿದ್ಯುತ್‌ ಸಂಪರ್ಕವೇ ಇಲ್ಲದಿರುವ ಪ್ರದೇಶಗಳಲ್ಲಿ ಸೋಲಾರ್‌ ಆಧರಿತ ಸಮುದಾಯ ಆರೋಗ್ಯ ಕೇಂದ್ರ ತೆರೆದು ಜನರಿಗೆ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ. ವಿದ್ಯುತ್‌ ಸಂಪರ್ಕವೂ ಇರುವ ಕೇಂದ್ರಕ್ಕೆ ಸೋಲಾರ್‌ ಅಳವಡಿಸಿ ಸೋಲಾರ್‌ನಿಂದ ಉತ್ಪಾದನೆ ಆಗುವ ವಿದ್ಯುತ್‌ ಬಳಸುವುದು ಸುಲಭ. ಆದರೆ ಸೋಲಾರ್‌ನ ವಿದ್ಯುತ್‌ ಅನ್ನು ಮಾತ್ರ ಅವಲಂಬಿಸುವ ಆರೋಗ್ಯ ಕೇಂದ್ರಗಳಿಗೆ ನಿಗದಿತ ಪ್ರಮಾಣದ ವಿದ್ಯುತ್‌ ಪೂರೈಕೆಯ ಖಚಿತತೆ ನೀಡುವುದು ಬಹಳ ಮುಖ್ಯವಾಗುತ್ತದೆ.

ಪ್ರಾಯೋಗಿಕ ಹಂತದ ಯೋಜನೆಯಲ್ಲಿ ಕಂಡುಬರುವ ಲೋಪಗಳನ್ನು, ನ್ಯೂನತೆಗಳನ್ನು ಸರಿಪಡಿಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ‘ಆರೋಗ್ಯ ಸೇವೆ ಎಲ್ಲರಿಗೂ ಸಿಗಬೇಕು ಎಂಬುದು ಪ್ರಮುಖ ಉದ್ದೇಶ. ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಮಾಡಲಾಗುವುದು’ ಎನ್ನುತ್ತಾರೆ ಫಿಲಿಪ್ಸ್‌ ಇನೊವೇಷನ್‌ ಕ್ಯಾಂಪಸ್‌ನ ಪ್ರಧಾನ ವಿಜ್ಞಾನಿ ಡಾ. ನರೇಂದ್ರನಾಥ್‌ ಉಡುಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT