ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಯೋಜನೆಗೆ ಜರ್ಮನಿ ನೆರವು

18 ಒಪ್ಪಂದಕ್ಕೆ ಮೋದಿ–ಮರ್ಕೆಲ್‌ ಸಹಿ * ಸ್ವಚ್ಛ ಇಂಧನಕ್ಕೆ ₹ 7,304 ಕೋಟಿ
Last Updated 5 ಅಕ್ಟೋಬರ್ 2015, 20:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐರೋಪ್ಯ ಒಕ್ಕೂಟದಲ್ಲಿ ಭಾರತದ ಅತಿದೊಡ್ಡ ಪಾಲುದಾರ ದೇಶವಾಗಿರುವ ಜರ್ಮನಿಯು ಭಾರತದ ಸೌರವಿದ್ಯುತ್‌ ಯೋಜನೆಗಳಿಗೆ ಮುಂದಿನ ಐದು ವರ್ಷಗಳ ಕಾಲ ₹ 7,304 ಕೋಟಿ (100 ಕೋಟಿ ಯುರೊ) ನೆರವು ನೀಡುವುದಾಗಿ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನ್‌ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ನಡುವೆ ದೆಹಲಿಯಲ್ಲಿ ಸೋಮವಾರ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಉಭಯ ದೇಶಗಳು ಹಲವು ಕ್ಷೇತ್ರಗಳಲ್ಲಿ ಕೈಜೋಡಿಸಲು ನಿರ್ಧರಿಸಿದ್ದು, 18 ಒಪ್ಪಂದಗಳಿಗೆ ಸಹಿ ಹಾಕಿವೆ.

ಭಾರತದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಅಗತ್ಯವನ್ನು ಮನಗಂಡು ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಪರಿಸರ ಸ್ನೇಹಿ, ದಕ್ಷ  ಹಾಗೂ ಸುಸ್ಥಿರ ಇಂಧನ ಯೋಜನೆಗಳಿಗೆ ನೆರವು ನೀಡುವುದಾಗಿ ಜರ್ಮನಿ ಹೇಳಿದೆ. ಜರ್ಮನಿಯ ಕಂಪೆನಿಗಳಿಗೆ, ಭಾರತದಲ್ಲಿ ಸುಲಭವಾಗಿ ವ್ಯವಹಾರ ಹಾಗೂ ಉದ್ದಿಮೆ ಸ್ಥಾಪಿಸಲು  ನೆರವು ನೀಡುವಂತೆ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆಯಲ್ಲಿ ‘ತ್ವರಿತ ವ್ಯವಸ್ಥೆ ’ ಆರಂಭಿಸುವುದಾಗಿ ಭಾರತ ಹೇಳಿದೆ. ಮುಂದಿನ ವರ್ಷದ ಮಾರ್ಚ್ ವೇಳೆ ಈ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಲಿದೆ.

‘ಭಾರತದಲ್ಲೇ ತಯಾರಿಸಿ’ ಯೋಜನೆ ಗಮನದಲ್ಲಿಟ್ಟುಕೊಂಡು ಹೂಡಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೇನಾ ಸಲಕರಣೆಗಳ ತಯಾರಿಕೆ, ಅಭಿವೃದ್ಧಿಯಲ್ಲಿ  ಜರ್ಮನಿ ಸಹಕಾರ ನೀಡಲಿದೆ. ಭಾರತ– ಜರ್ಮನಿ ಮೂರನೆಯ ಅಂತರ್‌– ಸರ್ಕಾರ ಸಲಹಾ ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದ ಮೋದಿ ಹಾಗೂ ಮರ್ಕೆಲ್‌ ಅವರು ಸೇನೆ, ಸುರಕ್ಷತೆ, ಬೇಹುಗಾರಿಕೆ, ರೈಲ್ವೆ, ವಾಣಿಜ್ಯ ವ್ಯವಹಾರ, ಹೂಡಿಕೆ ಹಾಗೂ ಶುದ್ಧ ಇಂಧನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಸಿಕೊಳ್ಳಲು ನಿರ್ಧರಿಸಿದರು.

ಜಾಗತಿಕ ಭಯೋತ್ಪಾದನೆ ನಿಗ್ರಹದಲ್ಲೂ ಪರಸ್ಪರ ಕೈಜೋಡಿಸಲು ಉಭಯ ದೇಶಗಳು ನಿರ್ಧರಿಸಿವೆ. ಭಾರತದಲ್ಲಿ ಜರ್ಮನ್‌ ಭಾಷೆಯ ಹಾಗೂ ಜರ್ಮನಿಯಲ್ಲಿ ಆಧುನಿಕ ಭಾರತೀಯ ಭಾಷೆಗಳ ಕಲಿಯುವಿಕೆ, ಬಳಕೆಗೆ ಉತ್ತೇಜನ ನೀಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಜರ್ಮನಿಯ ವಿದೇಶಾಂಗ ಇಲಾಖೆ ನಡುವೆ ಒಪ್ಪಂದ ನಡೆಯಲಿದೆ  ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್‌ ಭಾಷೆ ಕಲಿಕೆ ರದ್ದುಪಡಿಸಿ, ಸಂಸ್ಕೃತಕ್ಕೆ ಅವಕಾಶ ಮಾಡಿಕೊಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವರ್ಷದ ಏಪ್ರಿಲ್‌ ನಲ್ಲಿ ಮೋದಿ ಅವರು ಜರ್ಮನಿಗೆ ತೆರಳಿದ್ದ ಸಂದರ್ಭದಲ್ಲಿಯೂ ಮರ್ಕೆಲ್‌ ಈ ವಿಚಾರ ಪ್ರಸ್ತಾಪಿಸಿದ್ದರು.

ಉಭಯ ದೇಶಗಳ ನಡುವೆ ಜನ ಸಂಪರ್ಕಕ್ಕೆ ಮಹತ್ವ ನೀಡಲು, ಪರಸ್ಪರ ವೀಸಾ ಪ್ರಕ್ರಿಯೆ ಸರಳೀಕರಣಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಹೂಡಿಕೆ ದಾರರು, ವೃತ್ತಿಪರರು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳಿಗೆ ವೀಸಾ ನಿಯಮ ಸರಳಗೊಳಿಸಲಾಗುವುದು.

ಭಾರತದಲ್ಲಿ ರೈಲ್ವೆ ಆಧುನೀಕರಣ ಹಾಗೂ ವಿಸ್ತರಣಾ ವಲಯದಲ್ಲಿ ಜರ್ಮನಿಯ ಸಹಕಾರ ಪಡೆಯಲು ನಿರ್ಧರಿಸಲಾಗಿದೆ. ಅತಿ ವೇಗದ ರೈಲ್ವೆ ಮಾರ್ಗ, ನಿಲ್ದಾಣಗಳ ಮರು ಅಭಿವೃದ್ಧಿ,  ಸರಕು ಸಾಗಣೆ ಟರ್ಮಿನಲ್‌ಗಳ ಅಭಿವೃದ್ಧಿಗಳಿಗೆ ಜರ್ಮನಿ ನೆರವು ನೀಡಲಿದ್ದು,  ಬೃಹತ್‌ ವಾಣಿಜ್ಯ ಅವಕಾಶಗಳಿಗೆ ಇದು ದಾರಿ ಮಾಡಿಕೊಡಲಿದೆ.

ವಿಗ್ರಹ ಹಸ್ತಾಂತರ
ಎರಡು ದಶಕಗಳ ಹಿಂದೆ ಕಾಶ್ಮೀರದ ದೇವಾಲಯದಿಂದ ಕಳುವಾಗಿದ್ದ 10ನೇ ಶತಮಾನದ ಮಹಿಷಾಸುರ ಮರ್ದಿನಿಯ ವಿಗ್ರಹವನ್ನು ಜರ್ಮನಿಯು ಭಾರತಕ್ಕೆ ಹಸ್ತಾಂತರಿಸಿದೆ.

ಕಾಶ್ಮೀರದ ಪುಲ್ವಾಮಾದ ದೇವಸ್ಥಾನವೊಂದರಿಂದ 1990ರಲ್ಲಿ ಈ ವಿಗ್ರಹ ಕಳುವಾಗಿತ್ತು. ಈ ಕುರಿತು ಎಫ್ಐಆರ್‌ ದಾಖಲಿಸಲಾಗಿತ್ತು. ಈ ವಿಗ್ರಹ ಜರ್ಮನಿಯ ಸ್ಟಟ್‌ಗರ್ಟ್‌ನ ಮ್ಯೂಸಿಯಂನಲ್ಲಿ ಇದೆ ಎಂಬ ಸುಳಿವು ಪುರಾತತ್ವ ಇಲಾಖೆಗೆ ದೊರಕಿತ್ತು.

ಆನಂತರ ಸರ್ಕಾರ ಈ ಕುರಿತು  ಜರ್ಮನಿಯ ಅಧಿಕಾರಿಗಳ ಜತೆ ಮಾತುಕತೆ ಆರಂಭಿಸಿತ್ತು. ವಿಗ್ರಹ ಕಳವು ಹಾಗೂ ಮಾರಾಟದಲ್ಲಿ ಭಾರತದ ಕುಖ್ಯಾತ ಕಲಾಕೃತಿಗಳ ಡೀಲರ್‌ ಸುಭಾಷ್‌ ಕಪೂರ್‌ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ವಿಗ್ರಹ ಮರಳಿಸಿದ್ದಕ್ಕೆ ಮರ್ಕೆಲ್‌ ಹಾಗೂ ಜರ್ಮನಿಯ ಜನರಿಗೆ ಪ್ರಧಾನಿ ಧನ್ಯವಾದ ಹೇಳಿದ್ದಾರೆ.

ಮಾತುಕತೆಯ ಮುಖ್ಯಾಂಶಗಳು
* ಸುಸಜ್ಜಿತ ನಗರ, ಗಂಗಾ ನದಿ ಶುದ್ಧೀಕರಣ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಸಹಕಾರ ನೀಡುತ್ತಿರುವುದಕ್ಕೆ ಜರ್ಮನಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

*  ಹಲವು ಯೋಜನೆಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡುತ್ತಿರುವುದಕ್ಕೆ ಮೋದಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮರ್ಕೆಲ್‌

ಸಹಿಗೆ ನಿರಾಕರಣೆ
ಭಾರತದ ಕಾನೂನಿನಲ್ಲಿ ಮರಣದಂಡನೆಗೆ ಅವಕಾಶ ಇರುವ ಕಾರಣ ಅಪರಾಧ ವಿಚಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲು ಜರ್ಮನಿ ನಿರಾಕರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT