ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬಂದ ಚಿರತೆ: ಇಬ್ಬರ ಮೇಲೆ ದಾಳಿ

Last Updated 7 ಫೆಬ್ರುವರಿ 2016, 20:03 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರು ಸಮೀಪದ ವಿಬ್ಗಯೊರ್ ಶಾಲೆ ಆವರಣಕ್ಕೆ ಭಾನುವಾರ ಬೆಳಿಗ್ಗೆ ನುಗ್ಗಿದ ಚಿರತೆ ವನ್ಯಜೀವಿ ತಜ್ಞ ಸೇರಿ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತು. ಸತತ 13 ತಾಸು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ,  ರಾತ್ರಿ ವೇಳೆ ಬಂದೂಕಿನಿಂದ ಅರವಳಿಕೆ ಚುಚ್ಚುಮದ್ದು ಹೊಡೆದು ಚಿರತೆಯನ್ನು ಸೆರೆ ಹಿಡಿಯುವ ಮೂಲಕ  ದಿನವಿಡೀ ಕವಿದಿದ್ದ ಆತಂಕ ದೂರ ಮಾಡಿದರು.

ಗರ್ಜನೆ: ಬೆಳಿಗ್ಗೆ 5.15ಕ್ಕೆ ಶಾಲೆಯ ಭದ್ರತಾ ಸಿಬ್ಬಂದಿ ಬಾಬು ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಆಗ ಪೊದೆಯಲ್ಲಿ ಪ್ರಾಣಿಯ ಗರ್ಜನೆ ಕೇಳಿದ ಅವರು, ಕೂಡಲೇ ತಮ್ಮ ವಿಭಾಗದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾರೆ.

ನಂತರ ಸಿ.ಸಿ ಟಿ.ವಿ ಕ್ಯಾಮೆರಾ ಪರಿ ಶೀಲಿಸಿದಾಗ ಬೆಳಗಿನ ಜಾವ 4.12ಕ್ಕೆ ನೀಲಗಿರಿ ತೋಪಿನಿಂದ ಚಿರತೆಯು ಶಾಲಾ ಆವರಣಕ್ಕೆ ಜಿಗಿದಿರುವುದು ಗೊತ್ತಾಗಿದೆ. ತಕ್ಷಣ ಅವರು ಪೊಲೀಸ್ ನಿಯಂತ್ರಣ ಕೊಠಡಿ,ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ಬಂದ ನೂರಕ್ಕೂ ಹೆಚ್ಚು ಸಿಬ್ಬಂದಿ, ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ದರೂ ಚಿರತೆ ಕಾಣಿಸಿಕೊಳ್ಳಲಿಲ್ಲ. ಆಗ ಶಾಲಾ ಆವರಣದಿಂದ ಚಿರತೆ  ಬೇರೆಡೆ ಓಡಿ ಹೋಗಿರಬಹುದು ಎಂಬ ನಿರ್ಧಾರಕ್ಕೆ ಸಿಬ್ಬಂದಿ ಬಂದಿದ್ದಾರೆ.

ಕಾರ್ಯಾಚರಣೆ ನಿಲ್ಲಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಚಿರತೆ ಮತ್ತೆ ಪೊದೆಯಲ್ಲಿ ಪ್ರತ್ಯಕ್ಷವಾಗಿದೆ. ಆಗ ಕಾರ್ಯಾಚರಣೆಯ ತಂಡವು, ನಾಲ್ಕು  ಬೋನುಗಳು ಹಾಗೂ ಮತ್ತಷ್ಟು ಸಿಬ್ಬಂದಿಯನ್ನು ಕರೆಸಿಕೊಂಡು ಪುನಃ ಅದರ ಹುಡುಕಾಟ ಪ್ರಾರಂಭಿಸಿದ್ದಾರೆ.

ಆತಂಕದ ಅಲೆದಾಟ: ಆಗಾಗ ಪೊದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಮಧ್ಯಾಹ್ನ 3.30ರ ಸುಮಾರಿಗೆ ರಾಜಾ ರೋಷವಾಗಿ ಆವರಣಕ್ಕೆ ನುಗ್ಗಿತು. 8 ಅಡಿ ಎತ್ತರದ ತಡೆಗೋಡೆ ಮೇಲೇರಿ ಭೀತಿಯಿಂದ ಅತ್ತಿಂದಿತ್ತ ಓಡಾಡಿತು. ನಂತರ ಕಟ್ಟಡದ ಒಳಗೆ ನುಗ್ಗಿ ಕೊಠಡಿ ಯಿಂದ ಕೊಠಡಿಗೆ ಅಲೆದಾಡಿತು.

ಜನರ ಕೇಕೆ ಸದ್ದು  ಕೇಳಿ ಗಾಬರಿ ಬಿದ್ದ ಚಿರತೆ, ಸಿಕ್ಕ ಸಿಕ್ಕ ಕಡೆಯೆಲ್ಲ ಓಡಲಾರಂಭಿಸಿತು. ಸಜ್ಜಾದಿಂದ ಸಜ್ಜಾಗೆ ಜಿಗಿಯುತ್ತ ಆವರಣದಿಂದ ಹೊರ ಹೋಗಲು ಹರಸಾಹಸ ಪಟ್ಟಿತು.

ಕೊನೆಗೆ ಶೌಚಾಲಯ ಕೊಠಡಿ ಸೇರುತ್ತಿದ್ದಂತೆಯೇ ಸಿಬ್ಬಂದಿ ಬಾಗಿಲು ಮುಚ್ಚಿದರು. ಅಲ್ಲದೆ, ಆ ಕೊಠಡಿಯ ಎಲ್ಲ ಕಿಂಡಿಗಳಿಗೂ ಬಲೆಗಳನ್ನು ಹಾಕಿ ಖೆಡ್ಡಾಕ್ಕೆ ಕೆಡವಲು ವ್ಯವಸ್ಥಿತ ಸಂಚು ರೂಪಿಸಿಕೊಂಡರು.

ಮತ್ತೆ ಜಿಗಿದು ಬಂತು: ಸ್ವಲ್ಪ ಹೊತ್ತು ಶಾಂತವಾಗಿ ಕೊಠಡಿಯಲ್ಲಿದ್ದ ಚಿರತೆ, 15 ನಿಮಿಷಗಳ ನಂತರ ಮತ್ತೆ ಕಿಂಡಿಯೊಂದರಿಂದ ಹೊರ ಜಿಗಿಯಿತು. ಆಗ ಬಲೆ ಕಳಚಿಕೊಂಡ ಕಾರಣ ಚಿರತೆ ಅದರಲ್ಲಿ ಸಿಕ್ಕಿಕೊಳ್ಳಲಿಲ್ಲ. ಈ ಮೂಲಕ ಅದನ್ನು ಸೆರೆ ಹಿಡಿಯುವ ಸಿಬ್ಬಂದಿಯ ಮೊದಲ ಉಪಾಯ ಕೈಕೊಟ್ಟಿತು.

ಆ ನಂತರ ಕೆರಳಿದ ಚಿರತೆ, ಅರಣ್ಯ ಸಿಬ್ಬಂದಿ ವಿರುದ್ಧ ತಿರುಗಿ ಬಿತ್ತು. ಈಜುಕೊಳದ ಬಳಿ ನಿಂತಿದ್ದ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಮೊದಲು ದಾಳಿಗೆ ಒಳಗಾದರು. ಚಿರತೆ ತನ್ನತ್ತ ಬರು ತ್ತಿರುವುದನ್ನು ಕಂಡು ಅವರು ಕಾಂಪೌಂಡ್ ಹತ್ತಲು ಯತ್ನಿಸಿದರು.

ಆದರೆ, ಬಟ್ಟೆಯನ್ನು ಕಚ್ಚಿ ಅವರನ್ನು ತನ್ನತ್ತ ಎಳೆದುಕೊಂಡ ಚಿರತೆ, ಗುಬ್ಬಿ ಅವರನ್ನು ನೆಲದ ಮೇಲೆ ಉರುಳಿಸಿತು. ಕೆಲ ಕಾಲ ಸೆಣಸಾಡಿ ಚಿರತೆಯಿಂದ ಅವರು ತಪ್ಪಿಸಿಕೊಂಡು ಬಂದರು. ಆ ನಂತರ ಅರಣ್ಯ ಇಲಾಖೆ ಕಾರು ಚಾಲಕ ಬೆನ್ನಿಸ್ ಮೇಲೆರಗಿ, ಬೆನ್ನು ಪರಚಿ ಗಾಯಗೊಳಿಸಿತು. ಈ ಹಂತದಲ್ಲಿ ಸಿಬ್ಬಂದಿ ಚಿರತೆಗೆ ಬಂದೂಕಿನಿಂದ ಅರವಳಿಕೆ ಚುಚ್ಚುಮದ್ದು ಹೊಡೆದರು.

ಚುಚ್ಚುಮದ್ದು ನಾಟುತ್ತಿದ್ದಂತೆಯೇ ಮತ್ತೆ ಕಟ್ಟಡದೊಳಗೆ ಓಡಿದ ಚಿರತೆ, ಅದೇ ಕಿಂಡಿಯಿಂದ ಶೌಚಾಲಯ ದೊಳಗೆ ಜಿಗಿಯಿತು. ಅರವಳಿಕೆಯಿಂದ ಪ್ರಜ್ಞೆ ತಪ್ಪಿದ ಬಳಿಕ, ರಾತ್ರಿ 7.30ಕ್ಕೆ ಚಿರತೆಯನ್ನು ಬೋನಿಗೆ ಹಾಕಿದರು.

ದೊಡ್ಡ ಅನಾಹುತ ತಪ್ಪಿತು:  ‘ವಿಬ್ಗಯೊರ್ ಶಾಲೆಯಲ್ಲಿ 2,500 ಮಕ್ಕಳು ಕಲಿಯುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ತರಗತಿಗಳು ಇರುತ್ತವೆ. ಅದೃಷ್ಟವಷಾತ್ ರಜಾ ದಿನ ಚಿರತೆ ಆವರಣಕ್ಕೆ ನುಗ್ಗಿದೆ. ಒಂದು ವೇಳೆ ತರಗತಿ ಅವಧಿಯಲ್ಲಿ ಬಂದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು’ ಎಂದು ಭದ್ರತಾ ಸಿಬ್ಬಂದಿ ಬಾಬು ಆತಂಕದಿಂದ ನುಡಿದರು.

13 ತಾಸು ಕಾರ್ಯಾಚರಣೆ: ಅರಣ್ಯ ಇಲಾಖೆ ಬೆಳಿಗ್ಗೆ 6.30ಕ್ಕೆ ಪ್ರಾರಂಭಿಸಿದ ‘ಆಪರೇಷನ್ ಚಿರತೆ’ ಕಾರ್ಯಾಚರಣೆ, ಸಂಜೆ 7.30ಕ್ಕೆ ಮುಕ್ತಾಯವಾಯಿತು. ಚಿರತೆ ಇದ್ದ ಬೋನನ್ನು ಹೊರ ತಂದಾಗ ಸ್ಥಳದಲ್ಲಿ ಜಮಾಯಿಸಿದ್ದ ಜನ, ಚಪ್ಪಾಳೆ ತಟ್ಟಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಸಮಯ ಪ್ರಜ್ಞೆ ಮೆಚ್ಚಬೇಕು: ‘ಭದ್ರತಾ ಸಿಬ್ಬಂದಿ ಬಾಬು ಅವರ ಸಮಯ ಪ್ರಜ್ಞೆ ಮೆಚ್ಚುವಂಥದ್ದು. ನಿದ್ರೆಯ ಮಂಪರಿನಲ್ಲಿದ್ದರೂ ಕಾಡು ಪ್ರಾಣಿಯ ಗರ್ಜನೆಯನ್ನು ಸರಿಯಾಗಿ ಗ್ರಹಿಸಿದ್ದಾರೆ. ಅವರು ಸ್ವಲ್ಪ ನಿರ್ಲಕ್ಷಿಸಿದ್ದರೂ ದೊಡ್ಡ ಬೆಲೆ ತೆರಬೇಕಾಗಿತ್ತು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

‘ಚಿರತೆ ಇಡೀ ದಿನ ಹಸಿದುಕೊಂಡೇ ಇದ್ದ ಕಾರಣ, ಅದರ  ರೋಷ ತೀವ್ರ ವಾಗಿತ್ತು. ಶಾಲೆ ಆವರಣದಿಂದ ಹೊರ ಜಿಗಿದು ಅಕ್ಕಪಕ್ಕದ ವಸತಿ ಪ್ರದೇಶಗಳಿಗೆ ನುಗ್ಗಿದ್ದರೆ ಪರಿಸ್ಥಿತಿ ಹದಗೆಡುತ್ತಿತ್ತು. ಹೀಗಾಗಿ ಜನರ ಚೀರಾಟ  ಕೂಡ ಒಂದು ರೀತಿಯಲ್ಲಿ ಕಾರ್ಯಾಚರಣೆಗೆ ಪೂರಕ ವಾಯಿತು’ ಎಂದು ವಿವರಿಸಿದರು.

10 ವರ್ಷದ ಚಿರತೆ
‘ಚಿರತೆಯ ವಯಸ್ಸು ಸುಮಾರು ಹತ್ತು ವರ್ಷ. ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ಅದನ್ನು ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲಿ ಕೆಲ ದಿನ ಅದರ ಮೇಲೆ ನಿಗಾ ವಹಿಸಿ, ವರ್ತನೆಯನ್ನು ಅವಲೋಕಿಸಲಾಗುವುದು. ಆ ನಂತರ ಕಾಡಿಗೆ ಬಿಡುವ ನಿರ್ಧಾರಕ್ಕೆ ಬರಲಾಗುವುದು’ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಅರಣ್ಯಾಧಿಕಾರಿ ನರೇಂದ್ರ ಬಾಬು ತಿಳಿಸಿದರು.

ಗುಂಜೂರಿನಿಂದ ಬಂದಿದೆ?
‘ಕೆಲ ದಿನಗಳ ಹಿಂದೆ ಆನೇಕಲ್ ತಾಲೂಕಿನ ಗುಂಜೂರು ಅರಣ್ಯ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಅವುಗಳಲ್ಲಿ ಒಂದು ಕನ್ನಹಳ್ಳಿ, ಪಣತೂರು ಅರಣ್ಯ ಪ್ರದೇಶದ ಕಡೆಯಿಂದ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣವೂ ರೋಚಕ...

ಬೆಳಿಗ್ಗೆ 4.12:  ಆವರಣಕ್ಕೆ ನುಗ್ಗಿದ ಚಿರತೆ
5.15:  ಚಿರತೆ ಗರ್ಜನೆ ಕೇಳಿದ
ಭದ್ರತಾ ಸಿಬ್ಬಂದಿ
5.45:  ಪೊಲೀಸ್ ನಿಯಂತ್ರಣ
ಕೊಠಡಿಗೆ ಮಾಹಿತಿ
6.15:  ಸ್ಥಳಕ್ಕೆ ಬಂದ
ಅರಣ್ಯ ಇಲಾಖೆ ಸಿಬ್ಬಂದಿ
ಮಧ್ಯಾಹ್ನ 1:  ಚಿರತೆ ಬೇರೆಡೆ
ಓಡಿರುವ ಅನುಮಾನ
1.45: ಪೊದೆಯಲ್ಲಿ ಮತ್ತೆ ಪ್ರತ್ಯಕ್ಷ
3.30:  ಆವರಣಕ್ಕೆ ಓಡಿ ಬಂದ ಚಿರತೆ
ಸಂಜೆ 4.45: ಶಾಲಾ ಕಟ್ಟಡಕ್ಕೆ ತೆರಳಿತು
5.30:  ಸಿಬ್ಬಂದಿ ಮೇಲೆ ದಾಳಿ, ಅರವಳಿಕೆ ಮದ್ದು
ರಾತ್ರಿ 7.30: ಪ್ರಜ್ಞೆ ಕಳೆದುಕೊಂಡ ಚಿರತೆ

******
ಅರಣ್ಯ ಇಲಾಖೆಯ 50 ಸಿಬ್ಬಂದಿ, ಪೊಲೀಸರು, ವನ್ಯಜೀವಿ ತಜ್ಞರು ಸೇರಿದಂತೆ 250 ಮಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.  ಚಿರತೆ ಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಲಾಗಿದೆ
-ಬೋರಲಿಂಗಯ್ಯ, ಡಿಸಿಪಿ, ಆಗ್ನೇಯ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT