ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್ ಬಂಗಾರದ ಸಮಯ

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ಣಾ ಚಿಣ್ಣಪ್ಪಗೆ ಚಿನ್ನದ ಪದಕ... ಹೋದ ತಿಂಗಳು ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಆಟಗಾರ್ತಿಯರು ಅನನ್ಯ ಸಾಧನೆ ತೋರಿದಾಗ ಮಾಧ್ಯಮಗಳಲ್ಲಿ ಹೀಗೆ ವರದಿಯಾಗಿತ್ತು. ನಂತರ ಸ್ಕ್ವಾಷ್ ಕ್ರೀಡೆ ಕುರಿತು ಯೋಚಿಸಿದವರೇ ಹೆಚ್ಚು. ಅಷ್ಟೇನೂ ಜನಪ್ರಿಯವಲ್ಲದ ಈ ಕ್ರೀಡೆಯಲ್ಲಿ ಜೋಷ್ಣಾ ಮತ್ತು ದೀಪಿಕಾ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕಾಮನ್‌ವೆಲ್ತ್‌ ಕೂಟದ ಸ್ಕ್ವಾಷ್ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ಬಂದಿತ್ತು. ಆದ್ದರಿಂದ ಇವರ ಸಾಧನೆಗೆ ಸಾಕಷ್ಟು ಪ್ರಚಾರ ಲಭಿಸಿತ್ತು.

ಇವರ ಸಾಧನೆ ಭಾರತದಲ್ಲೀಗ ಹೊಸ ಸಂಚಲನ ಉಂಟು ಮಾಡಿದೆ. ಯುವ ಆಟಗಾರರು ರ್‍್ಯಾಕೆಟ್‌ ಹಿಡಿಯಲು ಮುಂದೆ ಬರುತ್ತಿದ್ದಾರೆ. ಈ ಕ್ರೀಡೆಯಲ್ಲಿ ಕೆನಡಾ, ಈಜಿಪ್ಟ್‌, ಫ್ರಾನ್ಸ್‌, ಹಾಂಕಾಂಗ್‌, ನೇಪಾಳ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಜೆಕ್‌ ಗಣರಾಜ್ಯ ರಾಷ್ಟ್ರಗಳು ಮುಂಚೂಣಿಯಲ್ಲಿವೆ. 184 ವರ್ಷಗಳಷ್ಟು ಇತಿಹಾಸ ಹೊಂದಿರುವ ಸ್ಕ್ವಾಷ್ ಭಾರತಕ್ಕೆ ಕಾಲಿಟ್ಟಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲಿ. ಮೊದಲು ಇದು ಆರಂಭವಾದದ್ದು ಬ್ರಿಟನ್‌ನಲ್ಲಿ. ಈಗಲೂ ವಿದೇಶಗಳಲ್ಲಿ ಶಾಲಾ ಮತ್ತು ಕಾಲೇಜುಗಳಲ್ಲಿಯೇ ಹೆಚ್ಚು ಖ್ಯಾತಿ ಹೊಂದಿದೆ. ಸ್ಕ್ವಾಷ್ ಆಡುವುದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿದೆ. ನಮ್ಮ ದೇಶದಲ್ಲಿ ಐದಾರು ವರ್ಷಗಳಿಂದ ಹೆಚ್ಚೆಚ್ಚು ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಲಾಗುತ್ತಿದೆ. ಅದಕ್ಕಾಗಿಯೇ ಭಾರತದಲ್ಲಿ ಪ್ರತ್ಯೇಕವಾಗಿ ‘ಸ್ಕ್ವಾಷ್ ರ್‍್ಯಾಕೆಟ್ ಫೆಡರೇಷನ್‌ ಆಫ್‌ ಇಂಡಿಯಾ’ ಎನ್ನುವ ಸಂಸ್ಥೆಯಿದೆ.

ರಾಷ್ಟ್ರೀಯ ಟೂರ್ನಿಗಳನ್ನು  ಆಯೋಜಿಸುವುದು, ಎಲ್ಲಾ ರಾಜ್ಯಗಳಲ್ಲಿ ಕ್ರೀಡೆಯನ್ನು ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಕೆಲಸ. ಕೋಚಿಂಗ್ ಕ್ಯಾಂಪ್‌, ಭಾರತ ಸ್ಕ್ವಾಷ್ ಅಕಾಡೆಮಿಯಲ್ಲಿ ತರಬೇತಿ ನೀಡುವುದು, ಸೌಲಭ್ಯಗಳನ್ನು ಒದಗಿಸುವುದು, ರೆಫರಿ ಕ್ಲಿನಿಕ್‌ ಆಯೋಜಿಸುವುದು, ಒಂದು, ಎರಡು ಮತ್ತು ಮೂರನೇ  ಹಂತದ ತರಬೇತಿ ಶಿಬಿರಗಳನ್ನು ನಡೆಸುವುದು. ಪಂದ್ಯಗಳಿಗೆ ರೆಫರಿಯಾಗಿ ಕೆಲಸ ಮಾಡಲು ಪರೀಕ್ಷೆಗಳನ್ನು ಆಯೋಜಿಸುವುದು ಸಂಸ್ಥೆಯ ಕೆಲಸವಾಗಿದೆ.

ಸ್ಕ್ವಾಷ್ ಭಾರತದಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳು ಅಷ್ಟೇನೂ ಗಮನಾರ್ಹವೆನಿಸುವುದಿಲ್ಲ. ಏಷ್ಯನ್‌ ಜೂನಿಯರ್ ಸ್ಕ್ವಾಷ್ ಫೆಡರೇಷನ್‌ಗೆ ಕೋಚ್‌ ಆಗಿದ್ದ ಚೆನ್ನೈನ ಸೈರಸ್‌ ಪೂಂಚಾ ಮಾತ್ರ ಈ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಬಗ್ಗೆ ಮಾಹಿತಿ ಲಭಿಸುತ್ತದೆ. ಸ್ಕ್ವಾಷ್ನಲ್ಲಿನ ಸಾಧನೆಗಾಗಿ ಅವರಿಗೆ 2005ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಸಂದಿತು. ಆದರೆ, 10–15 ವರ್ಷಗಳಿಂದ ಭಾರತದಲ್ಲಿ ಸಾಕಷ್ಟು ಟೂರ್ನಿಗಳು ನಡೆದಿವೆ. 2007ರಲ್ಲಿ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ ನಡೆದಿತ್ತು. ಇದೇ ವರ್ಷದ ಎರಡು ತಿಂಗಳ ಅವಧಿಯಲ್ಲಿ ಎರಡು ಪ್ರಮುಖ ಟೂರ್ನಿಗಳು ಜರುಗಿದವು.

ಹೋದ ತಿಂಗಳು ಚೆನ್ನೈನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 503 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಳೆದ ಬಾರಿ ಟೂರ್ನಿಯಲ್ಲಿ 320 ಸ್ಪರ್ಧಿಗಳಷ್ಟೇ ಇದ್ದರು. ವರ್ಷದಿಂದ ವರ್ಷಕ್ಕೆ ಈ ಕ್ರೀಡೆಯತ್ತ ಆಸಕ್ತಿ ತೋರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಚೆನ್ನೈನಲ್ಲಿ ವಿಶ್ವವಿದ್ಯಾಲಯ ಮಟ್ಟದ  ಅಂತರರಾಷ್ಟ್ರೀಯ ಟೂರ್ನಿ ನಡೆದಿತ್ತು. ಅಲ್ಲಿ ಸ್ಕ್ವಾಷ್ನಲ್ಲಿ ಪ್ರಬಲವೆನಿಸಿಕೊಂಡ ರಾಷ್ಟ್ರಗಳು ಪಾಲ್ಗೊಂಡಿದ್ದವು. ಚೆನ್ನೈ ‘ಭಾರತದ ಸ್ಕ್ವಾಷ್ ರಾಜಧಾನಿ’ ಎನಿಸಿಕೊಳ್ಳುತ್ತಿದೆ. ಮುಖ್ಯವಾಗಿ ಆಡಳಿತ ಕಚೇರಿ ತಮಿಳು ನಾಡಿನಲ್ಲಿದೆ. ಸಾಕಷ್ಟು ಕ್ಲಬ್‌ ಮತ್ತು ಅಕಾಡೆಮಿಗಳಿವೆ. ಆದ್ದರಿಂದ ಚೆನ್ನೈನಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸೈರಸ್‌ ಪೂಂಚಾ, ರಿತ್ವಿಕ್‌ ಭಟ್ಟಾಚಾರ್ಯ, ಸೌರವ್‌ ಘೋಷಾಲ್‌, ಜೋಷ್ಣಾ ಚಿಣ್ಣಪ್ಪ, ದೀಪಿಕಾ ಪಳ್ಳಿಕಲ್‌, ಸಿದ್ದಾರ್ಥ್‌ ಸಚ್‌ದೇ, ಹರೀಂದರ್ ಪಾಲ್‌ ಸಂಧು, ಅನಕಾ ಅಲಂಕಮೋನಿ, ಬಿ.ಎಸ್‌. ಅನುರೂಪ್‌, ಕುಶ್‌ ಕುಮಾರ್, ಭುವನೇಶ್ವರಿ ಕುಮಾರಿ ಮತ್ತು ಮಹೇಶ್‌ ಮಂಗೋನ್‌ಕರ್‌ ಹೀಗೆ ಸಾಕಷ್ಟು ತಾರೆಗಳು ಈ ಕ್ರೀಡೆಯಲ್ಲಿ ಮಿಂಚಿದ್ದಾರೆ. ಟೆನಿಸ್‌ ಆಡಲು ಬಳಸುವ ರ್‍್ಯಾಕೆಟ್‌ನಂತೆಯೇ ಈ ಕ್ರೀಡೆಯ ರ್‍್ಯಾಕೆಟ್‌ ಇರುತ್ತದೆ. ಸಿಂಗಲ್ಸ್‌ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ಪಂದ್ಯಗಳು ನಡೆಯುತ್ತವೆ.

ಈ ಕ್ರೀಡೆಯನ್ನು ಒಳಾಂಗಣ, ಹೊರಾಂಗಣ ಎರಡೂ ಕಡೆ ಆಡಬಹುದು. ಆದರೆ, ಗಾಜಿನ ಬಾಕ್ಸ್‌ ಇರುವುದು ಅವಶ್ಯಕ. ಸ್ಪರ್ಧಿ ರ್‍್ಯಾಕೆಟ್‌ ಮೂಲಕ ಚೆಂಡನ್ನು ಗೋಡೆಗೆ ನಿರಂತರವಾಗಿ ಹೊಡೆಯುತ್ತಲೇ ಇರಬೇಕು. ಒಂದು ವೇಳೆ ಚೆಂಡು ಹೊಡೆಯುವುದನ್ನು ಬ್ರೇಕ್‌ ಮಾಡಿದರೆ ಎದುರಾಳಿ ಸ್ಪರ್ಧಿಗೆ ಪಾಯಿಂಟ್‌ ಲಭಿಸುತ್ತದೆ. ಇದಕ್ಕೆ ಬಳಸುವ ಚೆಂಡು ತುಂಬಾ ಮೆತ್ತಗೆ ಇರುತ್ತದೆ. ಆದ್ದರಿಂದ ಹೆಚ್ಚು ಗಾಳಿ ಬರದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಕಾರಣಕ್ಕೇ ಈ ಕ್ರೀಡೆಗೆ ಗಾಜಿನ ಗೋಡೆಗಳಿರುವ ಕೋರ್ಟ್‌್ ನಿರ್ಮಿಸಲಾಗಿರುತ್ತದೆ.

ಅಂತರ್ಜಾಲದಲ್ಲಿ ವ್ಯಾಪಕ ಪ್ರಚಾರ
ವಿಶ್ವವ್ಯಾಪಿ ಈ ಕ್ರೀಡೆಯನ್ನು ಬೆಳೆಸಬೇಕು ಎನ್ನುವ ಕಾರಣಕ್ಕಾಗಿ ಕ್ರೀಡಾಪಟುಗಳು, ಕ್ಲಬ್‌ಗಳು ಮತ್ತು ಕೆಲವು ಸಂಘ ಸಂಸ್ಥೆಗಳು ಅಂತರ್ಜಾಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. www.squashchampions.com ಎನ್ನುವ ವೆಬ್‌ಸೈಟ್‌ನಲ್ಲಿ ವಿಶ್ವದಲ್ಲಿ ಸ್ಕ್ವಾಷ್  ಆಡುವ ಎಲ್ಲಾ ರಾಷ್ಟ್ರಗಳ ಆಟಗಾರರು ಮತ್ತು ಕೋಚ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆಟಗಾರರ ಸಾಧನೆಯ ಹೂರಣವೂ ಇಲ್ಲಿ ಸಿಗುತ್ತದೆ. ‘ದ ಗ್ರೇಟ್‌ ಇಂಡಿಯನ್‌ ಸ್ಕ್ವಾಷ್ ಲೀಗ್‌’ ಎನ್ನುವ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲೂ ಖಾತೆಯಿದೆ. ಸ್ಕ್ವಾಷ್ ಕ್ರೀಡೆಯ ಪ್ರಾಮುಖ್ಯ, ಆಟದ ವಿಡಿಯೊ ತುಣುಕುಗಳು, ಆಡುವ ವಿಧಾನ, ಬೇರೆ ಬೇರೆ ಆಟಗಾರರ ಸಾಧನೆಗಳು, ಎಲ್ಲೆಲ್ಲಿ ಟೂರ್ನಿ ಆಯೋಜಿಸಲಾಗಿದೆ ಹೀಗೆ ಹತ್ತು ಹಲವು ಮಾಹಿತಿಯನ್ನು ಇದರಲ್ಲಿ ಒದಗಿಸಲಾಗಿದೆ.

ಶುರುವಾಗಿದೆ ಹೊಸ ಕ್ರೇಜ್‌
ಭಾರತದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಚೆನ್ನೈನಲ್ಲಿ ಈ ಕ್ರೀಡೆ ಹೆಚ್ಚು ಕ್ರಿಯಾಶೀಲವಾಗಿದೆ. ಉಳಿದಂತೆ ಕೋಲ್ಕತ್ತ, ಕರ್ನಾಟಕ, ಮುಂಬೈ, ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಹೊಸ ಕ್ರೇಜ್‌ ಶುರುವಾಗಿದೆ. ಯುವಕರು ಮತ್ತು 35ರಿಂದ 40ರ ವಯೋಮಾನದವರು ಸ್ಕ್ವಾಷ್ ಕೋರ್ಟ್‌ನತ್ತ ಆಸಕ್ತಿ ತೋರುತ್ತಿದ್ದಾರೆ. ಕೆಲವರಿಗೆ ವೃತ್ತಿಪರ ಆಟಗಾರರಾಗಿ ಬೆಳಯಬೇಕು ಎನ್ನುವ ಆಸೆ ಇದ್ದರೆ, ಇನ್ನು ಕೆಲವರು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆಡುತ್ತಾರೆ. ಹಿರಿಯರಿಗೆ ಮಾಸ್ಟರ್ಸ್‌್ ಟೂರ್ನಿಗಳಲ್ಲಿ ಆಡಲು ಅವಕಾಶವಿದೆ. ಸಾಕಷ್ಟು ದೈಹಿಕ ಸಾಮರ್ಥ್ಯ ಬೇಡುವ ಈ ಕ್ರೀಡೆಗೆ ವರ್ಷಗಳು ಉರುಳಿದಂತೆಲ್ಲಾ ಬೇಡಿಕೆಯೂ ಹೆಚ್ಚಾಗುತ್ತಿದೆ. ಭಾರತದಲ್ಲಿ ಕ್ರೀಡೆ ಬೆಳವಣಿಗೆಯ ದೃಷ್ಟಿಯಿಂದ ಇದು ಅತ್ಯುತ್ತಮ ಹೆಜ್ಜೆ. ಇದಕ್ಕೆ ಕ್ಲಬ್‌ ಮತ್ತು ಅಕಾಡೆಮಿಗಳ ಪ್ರೋತ್ಸಾಹ ಬೇಕು. ಪ್ರಾಯೋಜಕರು ಬೆಂಬಲವಾಗಿ ನಿಲ್ಲಬೇಕು.

ಕರ್ನಾಟಕದಲ್ಲಿಯೂ ಭರವಸೆಯ ಹೆಜ್ಜೆ...
ಆರು ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಸ್ಕ್ವಾಷ್ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೇಳಿಕೊಳ್ಳುವಂಥ ಎತ್ತರಕ್ಕೇನೂ ಏರದ ಸಂದರ್ಭದಲ್ಲಿಯೇ ಉದ್ಯಾನನಗರಿಯಲ್ಲಿ ಹಲವು ಕ್ಲಬ್‌ಗಳಲ್ಲಿ ಸ್ಕ್ವಾಷ್ ಚೆಂಡಿನ ಸದ್ದು ಕೇಳಿ ಬಂದಿತ್ತು. ಹವ್ಯಾಸಕ್ಕಾಗಿಯಷ್ಟೇ ಆಡುತ್ತಿದ್ದ ಅನೇಕರು ಈಗ ಈ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರೆಲ್ಲರೂ ವೃತ್ತಿಪರ ಆಟಗಾರರಾಗಿ ಬದಲಾಗುತ್ತಿದ್ದಾರೆ.ಬೆಂಗಳೂರಿನ ಪ್ರಮುಖ ಸ್ಕ್ವಾಷ್ ಆಟಗಾರರನ್ನು ಒಳಗೊಂಡ ‘ಸ್ಕ್ವಾಷ್ ಚಾಂಪಿಯನ್ಸ್ ಬೆಂಗಳೂರು’ ಎನ್ನುವ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆಯಿದೆ. ಸ್ಕ್ವಾಷ್ ಜಗತ್ತಿನ ಆಗುಹೋಗುಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯ. ಪ್ರತಿವರ್ಷ ಅಕ್ಟೋಬರ್ 18ರಂದು ಸ್ಕ್ವಾಷ್ ದಿನ ಎಂದು ಆಚರಿಸಲಾಗುತ್ತದೆ. ಬೆಂಗಳೂರು ಸ್ಕ್ವಾಷ್ ಕ್ಲಬ್‌, ದೊಮ್ಮಲೂರು ಕ್ಲಬ್‌, ದಯಾನಂದ ಸಾಗರ ಕಾಲೇಜು, ಕೆಸಿಎ, ಸದಾಶಿವನಗರ ಕ್ಲಬ್‌, ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಈ ಕ್ರೀಡೆಯ ಕ್ಲಬ್‌ಗಳಿವೆ. ಆರ್ಮಿ ಕೇಂದ್ರಗಳಲ್ಲಿಯೂ ಈಚಿನ ವರ್ಷಗಳಲ್ಲಿ ಚಾಲ್ತಿಗೆ ಬರುತ್ತಿದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸ್ಕ್ವಾಷ್ ಕೋರ್ಟ್‌ ನಿಧಾನವಾಗಿ ತನ್ನ ಜಾಗ ಆಕ್ರಮಿಸಿಕೊಳ್ಳುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಇದನ್ನು ಒಂದು ಕ್ರೀಡೆಯನ್ನಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ನಗರದ ದೊಡ್ಡ ಬಂಗಲೆಗಳಲ್ಲಿ ಸ್ಕ್ವಾಷ್ಗೆ ಪ್ರತ್ಯೇಕ ಜಾಗ ಮೀಸಲಿಡುವ ಕಾರ್ಯವೂ ನಡೆಯುತ್ತಿದೆ.
ರಾಜಧಾನಿ ಕೇಂದ್ರವನ್ನು ಹೊರತು ಪಡಿಸಿದರೆ ಕರ್ನಾಟಕದಲ್ಲಿ ಮತ್ತೊಂದು ಕಡೆ ಈ ಕ್ರೀಡೆ ಸದ್ದು ಮಾಡಿದ್ದು ಬಳ್ಳಾರಿಯಲ್ಲಿ. ಜಿಂದಾಲ್‌ ಗ್ರೂಪ್‌  ಬಳ್ಳಾರಿಯಲ್ಲಿ ಸ್ಕ್ವಾಷ್ ಅಕಾಡೆಮಿ ಸ್ಥಾಪಿಸಿ ಪ್ರತ್ಯೇಕ ಕೋಚ್‌ ನೇಮಿಸಿದೆ. ಕರ್ನಾಟಕದಲ್ಲಿ ಸ್ಕ್ವಾಷ್ಗೆ ಉತ್ತಮ ಸ್ಥಾನಮಾನ ಲಭಿಸಬೇಕೆನ್ನುವ ಅದಮ್ಯ ಆಸೆ ಹೊಂದಿರುವ ನವೀನ್ ಶೆಣೈ ಪ್ರತಿವರ್ಷ ಕ್ಲಬ್‌ಗಳ ನಡುವೆ ಚಾಂಪಿಯನ್‌ಷಿಪ್‌ ಆಯೋಜಿಸುವ ಕೆಲಸ ಮಾಡುತ್ತಿದ್ದಾರೆ.

‘ಆರು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಸ್ಕ್ವಾಷ್ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಿತ್ತು. ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತಕ್ಕೆ ಪದಕ ಬಂದ ಮೇಲಂತೂ ಇದರ ಬಗೆಗಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ. ನಮ್ಮವರೇ ಆದ ಜೋಷ್ಣಾ ಚಿಣ್ಣಪ್ಪ ಕಾಮನ್‌ವೆಲ್ತ್‌ನಲ್ಲಿ ರಾಷ್ಟ್ರಕ್ಕೆ ಮೊದಲ ಬಂಗಾರದ ಪದಕ ತಂದುಕೊಟ್ಟಿದ್ದು ಹೆಮ್ಮೆಯ ವಿಷಯ. ಇದರಿಂದ ಪ್ರೇರಣೆಗೊಂಡು ಸಾಕಷ್ಟು ಯುವ ಸ್ಪರ್ಧಿಗಳು ರ್‍್ಯಾಕೆಟ್‌ ಹಿಡಿಯಲು ಮುಂದೆ ಬರುತ್ತಿದ್ದಾರೆ’ ಎನ್ನುತ್ತಾರೆ ನವೀನ್‌.

‘ಕ್ರಿಕೆಟ್‌, ಫುಟ್‌ಬಾಲ್‌, ಟೆನಿಸ್‌ ಕ್ರೀಡೆಗಳಿಗೆ ಪ್ರಾಯೋಜಕತ್ವ ವಹಿಸಲು ತುಂಬಾ ಜನ ಮುಂದೆ ಬರುತ್ತಿದ್ದಾರೆ.  ಆದರೆ, ಸ್ಕ್ವಾಷ್ ಬಗ್ಗೆಯೂ ಇದೇ ರೀತಿಯ ಪ್ರೀತಿ ಬೆಳೆಯಬೇಕು. ಕಳೆದ ಬಾರಿ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ ಆಯೋಜಿಸಿದ್ದಾಗ 20 ರಿಂದ 30 ಸ್ಪರ್ಧಿಗಳಷ್ಟೇ ಪಾಲ್ಗೊಂಡಿದ್ದರು. ಈ ಸಲ ಸ್ಪರ್ಧಿಗಳ ಸಂಖ್ಯೆ

120–130ಕ್ಕೆ ಏರಿತ್ತು. ಬೆಂಗಳೂರಿನಲ್ಲೂ  ಕ್ರೀಡೆ ನಿಧಾನವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಅಂಕಿ ಅಂಶಗಳೇ ಸಾಕ್ಷಿ’ ಎಂದೂ ನವೀನ್‌ ವಿವರಿಸುತ್ತಾರೆ.
ಐಪಿಎಲ್‌ನಂಥ ಹೊಸ ಮಾದರಿಯ ಚುಟುಕು ಕ್ರಿಕೆಟ್‌ ಉದಯವಾದ ವರ್ಷದಲ್ಲೇ ರಾಜ್ಯದಲ್ಲಿ ಸ್ಕ್ವಾಷ್ ಆರಂಭವಾಗಿತ್ತು ಎನ್ನುವ ವಿಷಯ ಹೇಳಿದರೆ ನಿಮಗೆ ಕೊಂಚ ಅಚ್ಚರಿಯಾಗಬಹುದು. ಆರು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ‘ಬೆಂಗಳೂರು ಸ್ಕ್ವಾಷ್ ಲೀಗ್‌‘ ಟೂರ್ನಿ ನಡೆದಿತ್ತು. 16 ದಿನ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ (ಕೆಬಿಎ) ನಡೆದ ಲೀಗ್‌ನಲ್ಲಿ ಹಲವು ಕ್ಲಬ್‌ಗಳು ಪಾಲ್ಗೊಂಡಿದ್ದವು. ಈಗಲೂ ಇಂಥ ಲೀಗ್‌ಗಳನ್ನು ಆಯೋಜಿಸಲು ನವೀನ್‌ ಯೋಚಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT