ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತನ ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ

Last Updated 5 ಮಾರ್ಚ್ 2015, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸ್ನೇಹಿತನನ್ನು ಚಾಕುವಿ­ನಿಂದ ಇರಿದು ಕೊಲೆ ಮಾಡಿದ್ದ ಚಂದ್ರಶೇಖರ್‌ (40) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನಗರದ ಒಂಬತ್ತನೇ ತ್ವರಿತ ನ್ಯಾಯಾಲಯ, ‘ಅಪರಾಧಿಯು ಜೈಲಿ­ನಲ್ಲಿ ದುಡಿದು ಮೃತರ ಪತ್ನಿ ಹಾಗೂ ತಾಯಿಗೆ ತಲಾ ₨ 25 ಸಾವಿರ ಪರಿಹಾರ ನೀಡಬೇಕು’ ಎಂದು ಆದೇಶ ಹೊರಡಿಸಿದೆ.

ಕಮಲಾನಗರ ಸಮೀಪದ ಶಕ್ತಿ­ಗಣಪತಿ­­ನಗರ ನಿವಾಸಿಯಾದ ಚಂದ್ರ­ಶೇಖರ್, ಸ್ನೇಹಿತ ಜಗನ್‌ ಉರುಫ್‌ ಕುಟ್ಟಿ ಎಂಬು­ವರನ್ನು 2012ರ ಆಗಸ್ಟ್‌ 14ರಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಘಟನೆ ನಡೆದ ಮರುದಿನವೇ ಆರೋಪಿ­ಯನ್ನು ಬಂಧಿಸಿದ್ದ  ಬಸವೇಶ್ವರ­ನಗರ ಪೊಲೀಸರು, ವಿಚಾರಣೆ ನಡೆಸಿ ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪ ಪಟ್ಟಿಯ ವಿಚಾರಣೆ ನಡೆ­ಸಿದ ತ್ವರಿತ ನ್ಯಾಯಾಲಯದ ನ್ಯಾಯಾ­ಧೀಶ­ರಾದ ಜೋಷಿ ವೆಂಕಟೇಶ್, ‘ಕೊಲೆ ಆರೋಪ ಸಾಬೀತಾದ ಕಾರಣ ಚಂದ್ರ­ಶೇಖರ್‌ನಿಗೆ ಜೀವಾವಧಿ ಶಿಕ್ಷೆ ಮತ್ತು ₨ 10 ಸಾವಿರ ದಂಡ ವಿಧಿಸ­ಲಾ­ಗಿದೆ. ದಂಡ ಪಾವತಿಗೆ ತಪ್ಪಿದರೆ ಹೆಚ್ಚು­ವರಿ ಆರು ತಿಂಗಳು ಸಾದಾ ಸಜೆ ಅನುಭವಿ­ಸ­ಬೇಕು. ಕಾರಾಗೃಹದಲ್ಲಿ ದುಡಿದು ಜಗನ್‌ ಅವರ ಪತ್ನಿಗೆ ₨ 25 ಸಾವಿರ ಹಾಗೂ ತಾಯಿಗೆ ₨ 25 ಸಾವಿರ ಪರಿಹಾರ ನೀಡಬೇಕು’ ಎಂದು ಆದೇಶಿಸಿದರು.

ಕೊಲೆಗೆ ಕಾರಣ: ಜಗನ್‌ ಅವರು ಆಗಾಗ್ಗೆ ಚಂದ್ರಶೇಖರ್‌ನ ಮನೆಗೆ ಹೋಗಿ ಬರುತ್ತಿದ್ದರು. ಹೀಗಾಗಿ ಸ್ನೇಹಿತ ತನ್ನ ಪತ್ನಿ ಜತೆ  ಅನೈತಿಕ ಸಂಬಂಧ ಇಟ್ಟು­ಕೊಂಡಿ­ದ್ದಾನೆ ಎಂಬ ಶಂಕೆ ಚಂದ್ರ­ಶೇಖರನಲ್ಲಿ ಮೂಡಿತ್ತು. ಇದೇ ವಿಷಯ­ವಾಗಿ ಪರಸ್ಪರರ ನಡುವೆ ಜಗಳವಾಗಿತ್ತು.
ಸ್ವಾತಂತ್ರ್ಯ ದಿನದ ಅಂಗವಾಗಿ ಆ.14ರ ರಾತ್ರಿ 12 ಗಂಟೆಗೆ ಕಮಲಾ­ನಗರ 4ನೇ ಅಡ್ಡರಸ್ತೆ ನಿವಾಸಿಗಳು ಧ್ವಜಾರೋಹಣಾ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಜಗನ್‌ ಮೇಲೆ ಎರಗಿದ್ದ ಚಂದ್ರಶೇಖರ್, ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪತ್ನಿಯ ಎದುರೇ ಕೊಲೆ ಮಾಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT