ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲು ಮೂಡಲು ತಡವಾದಾಗ...

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

‘ಡಾಕ್ಟ್ರೆ, ನಮ್ಮ ಪಾಪುಗೆ ಒಂದು ವರ್ಷ ಆಗಿದೆ. ಇನ್ನೂ ಯಾವ ಹಲ್ಲೂ ಬಂದಿಲ್ಲ. ದಿನಾ ಬಾಯಿ ಆಂ ಅನ್ನಿಸಿ ನೋಡೋದೇ ಕೆಲಸ ಆಗಿದೆ. ಪಕ್ಕದ್ಮನೆ  ಪುಟ್ಟಿಗೆ ಏಳು ತಿಂಗಳಿಗೇ ಹಲ್ಲು ಬಂದಿದೆ.

ನಮ್ಮ ಪಾಪುಗೆ ಮಾತ್ರ ಯಾಕೆ ಹೀಗೆ? ಏನಾದ್ರೂ ತೊಂದರೆ ಇದ್ಯಾ?’ ಆಗ್ಗಾಗ್ಗೆ ದಂತವೈದ್ಯರಲ್ಲಿ ಪೋಷಕರು ಕೇಳುವ ಪ್ರಶ್ನೆಯಿದು.

ನಿಜವೇ, ತಮ್ಮ ಮುದ್ದು ಕಂದನ ಬೊಚ್ಚು ಬಾಯಿ ಹಾಗೇ ಇದ್ದರೆ ಎನ್ನುವ ವಿಷಯಗಳು ಆತಂಕ ಮೂಡಿಸುವಂಥದ್ದೇ. ತಡವಾಗಿ ಹಲ್ಲು ಮೂಡಲು  ಕಾರಣ ಹಾಗೂ ಪರಿಹಾರ ಹೀಗಿವೆ:

ಸಾಧಾರಣವಾಗಿ ನವಜಾತ  ಶಿಶುವಿನ ಬಾಯಿಯಲ್ಲಿ  ಯಾವುದೇ  ಹಲ್ಲು  ಇರುವುದಿಲ್ಲ. ಆದರೆ ಹಲ್ಲಿನ ರಚನೆಯ ಅಡಿಪಾಯ ಭ್ರೂಣವಾಗಿದ್ದಾಗಲೇ  ಆರಂಭವಾಗಿರುತ್ತದೆ.

ಸಾಮಾನ್ಯವಾಗಿ ಹುಟ್ಟಿದ  ಆರು  ತಿಂಗಳಿನಿಂದ  ಮಗುವಿನ  ಬಾಯಲ್ಲಿ  ಹಾಲುಹಲ್ಲುಗಳು  ಮೂಡಲಾರಂಭಿಸುತ್ತವೆ.  ಮೊದಲು  ಕೆಳಗಿನ  ದವಡೆಯ  ಬಾಚಿಹಲ್ಲುಗಳಿಂದ  ಶುರುವಾಗಿ ನಂತರ ಮೇಲಿನ ದವಡೆಯ ಬಾಚಿಹಲ್ಲು,

ಕೋರೆಹಲ್ಲು  ಮತ್ತು  ಕಡೆಯಲ್ಲಿ ದವಡೆಹಲ್ಲುಗಳು ಬಾಯಿಯಲ್ಲಿ ಕಾಣಿಸುತ್ತವೆ. ಈ ಪ್ರಕ್ರಿಯೆ ಮಗುವಿಗೆ ಮೂರು ವರ್ಷವಾಗುವಷ್ಟರಲ್ಲಿ ಪೂರ್ಣಗೊಂಡು ಒಟ್ಟು ಇಪ್ಪತ್ತು ಹಾಲುಹಲ್ಲುಗಳನ್ನು ಕಾಣಬಹುದು.

ಒಸಡಿನ ಒಳಗಿರುವ ಹಲ್ಲುಗಳು ಮೃದುವಾದ ಚರ್ಮ ಭೇದಿಸಿ ಹೊರಬರುವುದು ಮಗುವಿನ ಬೆಳವಣಿಗೆಯ ಮುಖ್ಯ ಹಂತ. ಹೀಗಾಗಿ ಸರಿಯಾದ ಸಮಯದಲ್ಲಿ ಅದಾಗದೇ ಇದ್ದಾಗ ಸಹಜವಾಗಿಯೇ   ಪೋಷಕರು ಗಾಬರಿಗೊಳಗಾಗುತ್ತಾರೆ.

ಮಗುವಿನಿಂದ ಮಗುವಿಗೆ ಬೆಳವಣಿಗೆಯಲ್ಲಿರುವಂತೆ ಹಲ್ಲು ಮೂಡುವ ಸಮಯದಲ್ಲೂ ವ್ಯತ್ಯಾಸಗಳಿರುತ್ತದೆ.  ಪ್ರತಿ   ಹಲ್ಲಿಗೂ  ನಿರ್ದಿಷ್ಟ  ಕಾಲ  ನಿಗದಿಪಡಿಸಿದ್ದರೂ  ಅದಕ್ಕಿಂತ  ಆರರಿಂದ  ಎಂಟು  ತಿಂಗಳು  ತಡವಾಗಿ  ಬಂದರೂ ಅದನ್ನು ಸಹಜವೆಂದೇ  ಪರಿಗಣಿಸಲಾಗುತ್ತದೆ. ಕೆಲವೊಮ್ಮೆ  ಮಗುವಿಗೆ ಹದಿನೆಂಟು  ತಿಂಗಳು  ಅಂದರೆ  ಒಂದೂವರೆ ವರ್ಷವಾದಾಗ ಮೊದಲ ಹಲ್ಲು  ಮೂಡಬಹುದು. 

ತಡವಾಗಿ  ಹಲ್ಲು  ಮೂಡುವಿಕೆ ಮಕ್ಕಳಲ್ಲಿ ಸರ್ವೇಸಾಮಾನ್ಯವಾದರೂ ಕೆಲವು ಸಂದರ್ಭಗಳಲ್ಲಿ   ದೇಹದ  ಇನ್ನಿತರ   ಸಮಸ್ಯೆಯ  ಲಕ್ಷಣವಾಗಿರಬಹುದು.  ವಿರಳವಾಗಿ  ಯಾವುದೇ  ಹಲ್ಲು  ಬಾಯಲ್ಲಿ  ಇರದ  ‘ಅನೋಡಾಂಶಿಯಾ’ ಎಂಬ  ಕಾರಣವೂ ಇರಬಹುದು. ಹಾಗಾಗಿ ಮಗುವಿಗೆ ಒಂದು ವರ್ಷವಾದರೂ ಯಾವುದೇ ಹಲ್ಲು ಮೂಡದಿದ್ದಲ್ಲಿ ದಂತವೈದ್ಯರನ್ನು ಕಾಣಬೇಕು.

ಕಾರಣಗಳು
* ಆನುವಂಶೀಯತೆ

* ತಂದೆ- ತಾಯಿ, ಅಜ್ಜ-ಅಜ್ಜಿ, ಸಹೋದರ/ರಿ  – ಹೀಗೆ  ಕುಟುಂಬದಲ್ಲಿ  ಯಾರಿಗಾದರೂ  ಹಲ್ಲು  ತಡವಾಗಿ  ಬಂದಿದ್ದಲ್ಲಿ  ಮಕ್ಕಳಿಗೂ  ಹಾಗಾಗುವ  ಸಾಧ್ಯತೆ   ಹೆಚ್ಚಿರುತ್ತದೆ. ಆದ್ದರಿಂದ  ಕುಟುಂಬದವರ   ಬಾಲ್ಯದ   ವಿವರ  ಮುಖ್ಯವಾಗುತ್ತದೆ.

* ಲಿಂಗಬೇಧ

* ಹೆಣ್ಣುಮಕ್ಕಳಲ್ಲಿ ಹಲ್ಲು, ಸಾಧಾರಣವಾಗಿ ಗಂಡುಮಕ್ಕಳಿಗಿಂತ ಬೇಗ ಮೂಡುತ್ತದೆ.

* ಹುಟ್ಟಿನ ಸಮಯದ ಸಮಸ್ಯೆಗಳು

* ಅವಧಿಗೆ ಮುನ್ನ ಜನಿಸಿದ, ಹುಟ್ಟುವಾಗ ಕಡಿಮೆ ತೂಕವಿದ್ದ ಮಕ್ಕಳು ಹಾಗೂ ಸೆರೆಬ್ರಲ್ ಪಾಲ್ಸಿ-ಡೌನ್ ಸಿಂಡ್ರೋಮ್  ಇರುವ ಮಕ್ಕಳಲ್ಲಿ ಹಲ್ಲು ಮೂಡುವಿಕೆ ತಡವಾಗುವ ಸಾಧ್ಯತೆ ಇದೆ.

ಅಪೌಷ್ಟಿಕತೆ

* ಬೆಳೆಯುವ  ಮಕ್ಕಳಿಗೆ  ಸೂಕ್ತ  ಪ್ರಮಾಣದಲ್ಲಿ  ವಿಟಮಿನ್  ಮತ್ತು  ಖನಿಜಾಂಶಗಳು  ಇರುವ  ಪೌಷ್ಟಿಕ  ಆಹಾರದ  ಅಗತ್ಯವಿದೆ.  ಮೂಳೆ ಮತ್ತು ಹಲ್ಲುಗಳು ಸದೃಢವಾಗಲು ವಿಶೇಷವಾಗಿ ವಿಟಮಿನ್ ಡಿ ಮತ್ತು  ಕಾಲ್ಸಿಯಂ ತಕ್ಕ  ಪ್ರಮಾಣದಲ್ಲಿ ಇರಬೇಕು.

ತಾಯಿಯ  ಹಾಲು  ಅಥವಾ  ಹೊರಗಿನ  ಆಹಾರದಲ್ಲಿ ಇವು ಸಿಗದೇ ಇದ್ದಾಗ ಅಪೌಷ್ಟಿಕತೆ ಉಂಟಾಗುತ್ತದೆ. ಅಂಥ ಮಗುವಿನಲ್ಲಿ ದುರ್ಬಲತೆ, ಕಡಿಮೆ  ಬೆಳವಣಿಗೆ  ಜೊತೆ ತಡವಾಗಿ ಹಲ್ಲು ಮೂಡಬಹುದು.

ಹಾರ್ಮೋನ್  ತೊಂದರೆ
* ದೇಹದ  ಬೆಳವಣಿಗೆಗೆ ಅಗತ್ಯವಾದ  ಹಾರ್ಮೋನ್ ಥೈರಾಯ್ಡ್  ಗ್ರಂಥಿಯಿಂದ ಉತ್ಪಾದನೆಯಾಗುತ್ತದೆ. ಯಾವುದೇ ಕಾರಣದಿಂದ ಹಾರ್ಮೋನ್ ಕಡಿಮೆಯಾದಾಗ ಅತಿತೂಕದೊಂದಿಗೆ ಮಾತು, ನಡಿಗೆ  ಮತ್ತು ಹಲ್ಲು ಮೂಡುವಿಕೆ ತಡವಾಗಬಹುದು.

* ಒಸಡು—ಮೂಳೆಯ ಸಮಸ್ಯೆ

* ಕೆಲವೊಮ್ಮೆ  ಒಸಡಿನ  ಒಳಗೆ  ಹಲ್ಲಿನ  ಸುತ್ತ  ಅಥವಾ  ಸಮೀಪದಲ್ಲಿ ಗಡ್ಡೆ, ನೀರ್ಗುಳ್ಳೆ ಇದ್ದಾಗ ಹಲ್ಲು ಹೊರಬರಲಾಗದೇ ತಡವಾಗುತ್ತದೆ. ಕೆಲವು ಬಾರಿ ಹಲ್ಲಿನ ಬೇರು ದವಡೆಮೂಳೆಗೆ ಗಟ್ಟಿಯಾಗಿ  ಅಂಟಿಕೊಂಡಿದ್ದರೂ ಹೀಗಾಗಬಹುದು.

ಚಿಕಿತ್ಸೆ
ದಂತವೈದ್ಯರು ಮೊದಲಿಗೆ ಮಗುವಿನ ಜನನ ಸಮಯದ ಎಲ್ಲ ವಿವರ ಮತ್ತು  ಕುಟುಂಬದವರ  ದಂತಾರೋಗ್ಯದ ಮಾಹಿತಿ ಪಡೆಯುತ್ತಾರೆ. ಅನಂತರ ಮಗುವಿನ ಇತರ ದೈಹಿಕ ಮೈಲಿಗಲ್ಲುಗಳ ಪರಿಶೀಲನೆ ನಡೆಸುತ್ತಾರೆ.

ಎಲ್ಲವೂ ಸರಿಯಿದ್ದಲ್ಲಿ ಕೆಲ ಕಾಲ ಕಾದು ನೋಡುವ ಸಲಹೆ ನೀಡಬಹುದು. ಕೆಲವು ಬಾರಿ ಒಸಡಿನ ಒಳಗೆ ಹಲ್ಲಿದೆಯೇ, ಹಲ್ಲಿದ್ದರೂ ಹೊರಬರಲು  ಏನಾದರೂ ಅಡ್ಡಿ ಇದೆಯೇ  ಎಂದು  ನೋಡಲು  ಎಕ್ಸ್–ರೇ  ತೆಗೆಯಬೇಕಾಗಬಹುದು.

ಹಾಗೇನಾದರೂ ತೊಂದರೆ ಕಂಡುಬಂದಲ್ಲಿ ಅದನ್ನು ಸರಿಪಡಿಸಿ ಹಲ್ಲು ಮೂಡಲು ಅನುವು  ಮಾಡಿಕೊಡಲಾಗುತ್ತದೆ. ಅಪೌಷ್ಟಿಕತೆ, ಹಾರ್ಮೋನ್ ತೊಂದರೆ ಇದ್ದರೆ ಅದಕ್ಕೆ  ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ಹಾಲುಹಲ್ಲುಗಳು  ಮುಖದ  ಸೌಂದರ್ಯ, ಸ್ಪಷ್ಟ ಮಾತು, ಆಹಾರ  ಅಗಿಯುವಿಕೆ, ದವಡೆಗಳ ಬೆಳವಣಿಗೆ – ಈ ಎಲ್ಲ  ಕಾರ್ಯಗಳನ್ನು ನಿರ್ವಹಿಸುತ್ತವೆ ಹಾಗೂ  ಶಾಶ್ವತ ಹಲ್ಲುಗಳಿಗೆ ಮಾರ್ಗದರ್ಶಿಯಾಗಿವೆ. ಆದ್ದರಿಂದ ಹಲ್ಲು ಮೂಡುವುದು ತಡವಾದಲ್ಲಿ ಅನಗತ್ಯ ಭಯ ಬೇಡವಾದರೂ ನಿರ್ಲಕ್ಷ್ಯ ಮಾಡದೆ ದಂತವೈದ್ಯರನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT