ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಕೇಸ್‌, ಹೊಸ ಕಾಂಡೋಮ್‌!

Last Updated 19 ಜೂನ್ 2016, 9:01 IST
ಅಕ್ಷರ ಗಾತ್ರ

ನಾಲ್ಕೈದು ವರ್ಷಗಳ ಹಿಂದಿನ ಮಾತು. ಅಂದು ಸುಮಾರು 18-19 ವರ್ಷ ವಯಸ್ಸಿನ ಯುವಕನೊಬ್ಬ ಬೆಂಗಳೂರಿನ ಸಿವಿಲ್ ಕೋರ್ಟ್ ಮೆಟ್ಟಿಲ ಮೇಲೆ ಅಳುತ್ತಾ ಕುಳಿತಿದ್ದ. ನಾನು ವಿಚಾರಿಸಿದಾಗ ಅವನು ಸರಿಯಾಗಿ ಏನೂ ಹೇಳಲಿಲ್ಲ.

ಸಮೀಪದಲ್ಲಿ ಅವನ ಅಪ್ಪ-ಅಮ್ಮ ಇದ್ದರು. ಅವರ ಬಳಿ ಕಾರಣ ಕೇಳಿದಾಗ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ತಮ್ಮ ಮಗನನ್ನು ಪೊಲೀಸರು ಕೋರ್ಟ್‌ಗೆ ಕರೆ ತಂದಿರುವುದಾಗಿ ಹೇಳಿದರು.

ಏನೂ ತಪ್ಪು ಮಾಡದ ತಮ್ಮ ಮಗನನ್ನು ಪೊಲೀಸರು ಬಂಧಿಸಿರುವುದಾಗಿಯೂ ಅವರು ವಿವರಿಸಿದರು. ಇಂಥ ಸನ್ನಿವೇಶವೇನೂ ಕೋರ್ಟ್‌ಗಳಲ್ಲಿ ಹೊಸತಲ್ಲ. ಆದರೂ ನನಗೆ ಆ ಯುವಕನನ್ನು ನೋಡಿ ಹೊಟ್ಟೆ ಚುರುಕ್ ಎಂದಿತು. ಆದ್ದರಿಂದ ಪೋಷಕರ ಬಳಿ ಮತ್ತಷ್ಟು ಮಾಹಿತಿ ಕೇಳಿದೆ.

‘ನಮ್ಮ ಮಗ ತಪ್ಪು ಮಾಡಿಲ್ಲ. ವಕೀಲರನ್ನು ನೇಮಕ ಮಾಡಿಕೊಳ್ಳುವಷ್ಟು ಶಕ್ತಿ ನಮ್ಮಲ್ಲಿ ಇಲ್ಲ. ನಾಲ್ಕೈದು ವರ್ಷಗಳ ಕಾಲ ಜಾಮೀನಿನ ಮೇಲಿದ್ದ ಮಗನನ್ನು ಪೊಲೀಸರು ದಿಢೀರನೆ ಬಂದು ಈಗ ಬಂಧಿಸಿ ತಂದಿದ್ದಾರೆ. ಅವನನ್ನು ಏನಾದರೂ ಅಪರಾಧಿ ಎಂದು ಕೋರ್ಟ್ ಹೇಳಿಬಿಟ್ಟರೆ ನಾವು ನೇಣು ಹಾಕಿಕೊಂಡು ಸಾಯುತ್ತೇವೆ...’ ಹೀಗೆ ಮುಂದುವರಿಯಿತು ಯುವಕನ ಅಪ್ಪನ ಅಳಲು.

ಈ ಕೇಸಿನ ಬಗ್ಗೆ ನಾನು ಇಷ್ಟೆಲ್ಲಾ ಮುತುವರ್ಜಿ ವಹಿಸಿದ್ದನ್ನು ಗಮನಿಸಿದ ನನ್ನ ವಕೀಲ ಮಿತ್ರರೊಬ್ಬರು ‘ಈ ಯುವಕನ ಪರ ವಕಾಲತ್ತು ವಹಿಸಬಹುದಲ್ಲ’ ಎಂದರು. ಈ ಹಿಂದೆ ಕೂಡ ಕೆಲವು ಅಸಹಾಯಕರಿಗೆ ನಾನು ನೆರವಾಗಿದ್ದರಿಂದ ಅವರು ಈ ಸಲಹೆ ನೀಡಿದ್ದರು. ಸಿವಿಲ್ ಪ್ರಕರಣಗಳನ್ನು ಸಾಕಷ್ಟು ನಡೆಸಿದ್ದ ನಾನು ಇಂಥ ಕ್ರಿಮಿನಲ್ ಪ್ರಕರಣಗಳನ್ನು ಅಲ್ಲಿಯವರೆಗೆ ನಡೆಸಿರಲಿಲ್ಲ. ಆದ್ದರಿಂದ ಏಕಾಏಕಿಯಾಗಿ ಈ ಪ್ರಕರಣವನ್ನು ವಹಿಸಿಕೊಳ್ಳುವುದು ಅಷ್ಟು ಸುಲಭ ಆಗಿರಲಿಲ್ಲ. ಆದರೂ ಒಪ್ಪಿಕೊಂಡೆ.

ಯುವಕನ ಪೋಷಕರಿಗೆ ವಿಷಯ ತಿಳಿಸಿದೆ. ನಾನು ಎಷ್ಟು ಶುಲ್ಕ ಕೇಳುತ್ತೇನೋ ಎನ್ನುವ ಭಯ ಅವರಲ್ಲಿ ಇದ್ದಂತೆ ಕಂಡುಬಂತು. ಅದಕ್ಕೆ ನಾನು ‘ನನಗೆ ಏನೂ ಫೀಸ್ ಕೊಡೋದು ಬೇಡ. ನಿಮ್ಮ ಮಗ ನಿಜವಾಗಿಯೂ ನಿರಪರಾಧಿಯಾಗಿದ್ದರೆ ಅವನನ್ನು ಬಿಡಿಸಿಕೊಡುವ ಜವಾಬ್ದಾರಿ ನನ್ನದು’ ಎಂದೆ. ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯಿತು. ನನ್ನ ವೃತ್ತಿ ಜೀವನದ ಮೊದಲ ಕ್ರಿಮಿನಲ್ ಪ್ರಕರಣ ನಡೆಸಲು ಮಾನಸಿಕವಾಗಿ ಸಿದ್ಧನಾದೆ. ಅವರಲ್ಲಿ ಘಟನೆಯ ಸಂಪೂರ್ಣ ವಿವರ ನೀಡುವಂತೆ ಕೇಳಿದೆ. ಅದಕ್ಕೆ ಅವರು ಹೇಳಿದ್ದುದರ ಸಾರಾಂಶ ಇಷ್ಟು.

ಕಾಲೇಜು ಕಲಿಯುತ್ತಿದ್ದ ಈ ಯುವಕನ ಹೆಸರು ಗಣೇಶ್. ಸ್ನೇಹಿತರಂತೆ ಇವನಿಗೂ ಹೇರ್‌ ಸ್ಟೈಲ್‌ ಮಾಡಿಸಿಕೊಳ್ಳುವ ಆಸೆ. ಕಡಿಮೆ ಖರ್ಚಿನಲ್ಲಿ ಅಂದದ ಕೇಶವಿನ್ಯಾಸ ಮಾಡುವ ಸಲೂನ್ ಎಲ್ಲಿದೆ ಎಂದು ಹುಡುಕುತ್ತಾ ಬನಶಂಕರಿ ಬಳಿ ಬಂದ. ಅಲ್ಲಿ ಪೊಲೀಸರನ್ನು ಕಂಡು ‘ಹೇರ್‌ ಕಟಿಂಗ್‌ ಸಲೂನ್ ಎಲ್ಲಿದೆ?’ ಎಂದು ಪ್ರಶ್ನಿಸಿದ. ಅಲ್ಲಿಯೇ ಸಮೀಪ ಮಹಡಿಯ ಮೇಲಿದ್ದ ‘ಸಲೂನ್’ ಅನ್ನು ಪೊಲೀಸರು ಅವನಿಗೆ ತೋರಿಸಿದರು.

ಸರಿ. ಗಣೇಶ್ ಅಲ್ಲಿಗೆ ಹೋದ. ಒಳಗೆ ಇದ್ದ ವ್ಯಕ್ತಿಯೊಬ್ಬ ಹೊರಕ್ಕೆ ಬಂದು ‘ಸ್ವಲ್ಪ ಹೊತ್ತು ಹೊರಗಡೆಯೇ ವೇಟ್ ಮಾಡು. ನಿನ್ನ ಪಾಳಿ ಬಂದಾಗ ಕರೆಯುತ್ತೇನೆ’ ಎಂದ. ಗಣೇಶ್ ತನ್ನ ಹೊಸ ಹೇರ್‌ ಸ್ಟೈಲ್‌ ನೆನೆಯುತ್ತ ಹೊರಗಡೆ ಕನಸು ಕಾಣುತ್ತ ಕುಳಿತ. ಈತನ ‘ಸರದಿ’ ಬರುವ ಮೊದಲೇ ಪೊಲೀಸರು ಅಲ್ಲಿ ದೌಡಾಯಿಸಿ ಬಂದು ಗಣೇಶ್ ಸೇರಿದಂತೆ ಅಲ್ಲಿದ್ದವರನ್ನೆಲ್ಲಾ ಬಂಧಿಸಿಬಿಟ್ಟರು.

ಗಣೇಶ್ ಕಕ್ಕಾಬಿಕ್ಕಿ! ಏನಾಯಿತೆಂದು ಅವನಿಗೆ ತಿಳಿದುಕೊಳ್ಳುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು,  ‘ನನ್ನನ್ನು ಏಕೆ ಬಂಧಿಸುತ್ತಿದ್ದೀರಿ’ ಎಂದು ಪೊಲೀಸರನ್ನು ವಿಚಾರಿಸಿದಾಗ ಅವರು, ‘ವೇಶ್ಯಾವಾಟಿಕೆ ಮಾಡುತ್ತಿದ್ದೀಯಾ? ಈಗ ಏನೂ ಗೊತ್ತಿಲ್ಲದವರ ಹಾಗೆ ನಟಿಸುತ್ತೀಯಾ?’ ಎಂದು ಠಾಣೆಗೆ ಎಳೆದೊಯ್ದರು, ಜೈಲಿಗೆ ಅಟ್ಟಿದರು. ಆಗಲೇ ಅವನಿಗೆ ತಿಳಿದದ್ದು ತಾನು ಹೋಗಿದ್ದು ಹೇರ್‌ ಸ್ಟೈಲ್‌ ಮಾಡುವ ಸಲೂನ್‌ಗೆ ಅಲ್ಲ, ಬದಲಿಗೆ ವೇಶ್ಯಾಗೃಹಕ್ಕೆ ಎಂದು!

ಗಣೇಶನ ಚಿಕ್ಕಪ್ಪ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದರು. 2009ರಲ್ಲಿ ನಡೆದಿದ್ದ ಈ ಪ್ರಕರಣ, 2014ರವರೆಗೆ ತಣ್ಣಗೆ ಕುಳಿತಿತ್ತು. ಗಣೇಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ವೇಶ್ಯಾಗೃಹಕ್ಕೆ ಹೋಗಿದ್ದ ಎನ್ನುವ ಆರೋಪ ಎಂದರೆ ಸುಮ್ಮನೆಯೇ? ಸಂಬಂಧಿಕರು, ಸ್ನೇಹಿತರು ಈತನನ್ನು ಅನುಮಾನದಿಂದ ನೋಡಲು ಶುರು ಮಾಡಿದರು.

ಮಾಧ್ಯಮಗಳು ಬಿಟ್ಟಾವೆಯೇ? ಖುದ್ದು ‘ತೀರ್ಪು’ ನೀಡಿದ ಕೆಲ ಚಾನೆಲ್‌ಗಳು ಈತನನ್ನು ಬಹುತೇಕ ಅಪರಾಧಿ ಪಟ್ಟಕ್ಕೆ ತಂದು ನಿಲ್ಲಿಸಿದ್ದವು! ಈತನನ್ನು ಬಂಧಿಸಿದ್ದ ಪೊಲೀಸರು ಮಾಧ್ಯಮಗಳಲ್ಲಿ ‘ಹೀರೊ’ಗಳಾಗಿದ್ದರು. ಮಗನ ಭವಿಷ್ಯ ಹಾಳಾಗಿದ್ದು ಮಾತ್ರವಲ್ಲದೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯದ ಚಿಂತೆಯಲ್ಲಿ ಪೋಷಕರು ಇದ್ದರು. ಇದೇ ಚಿಂತೆಯಲ್ಲಿ ಮೂರ್ನಾಲ್ಕು ವರ್ಷ ಕಳೆಯಿತು.

ಆ ನಂತರ ಜಾಮೀನಿನ ಅವಧಿ ಮುಗಿದ ಕಾರಣ, ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ಕರೆದೊಯ್ದಿದ್ದರು. ಅದೇ ದಿನ ಆತ ಅಕಸ್ಮಾತ್ ನನ್ನ ಕಣ್ಣಿಗೆ ಬಿದ್ದಿದ್ದ. ಸರಿ, ಈ ಪ್ರಕರಣವನ್ನು ನಡೆಸಲು ನಾನೇನೋ ಒಪ್ಪಿಕೊಂಡುಬಿಟ್ಟಿದ್ದೆ. ಆದರೆ ಯಾವ ದಾಖಲೆಗಳೂ ನನ್ನ ಬಳಿ ಇರಲಿಲ್ಲ. ಪೊಲೀಸ್ ಠಾಣೆಯಿಂದಲೂ ದಾಖಲೆ ಸಿಗುವುದು ನನಗೆ ಕಷ್ಟವಾಯಿತು. ಏಕೆಂದರೆ ಅವರು ಅದನ್ನು ಕೋರ್ಟ್‌ಗೆ ಒಪ್ಪಿಸಿಬಿಟ್ಟಿದ್ದರು.

ಗಣೇಶನ ಪರವಾಗಿ ವಕಾಲತ್ತು ವಹಿಸಿ ಕೋರ್ಟ್ ಅನುಮತಿ ಪಡೆದು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದೆ. ಪೊಲೀಸರು  ಈತನನ್ನು ಸಿಕ್ಕಿಸಿಹಾಕುವ ಯತ್ನವನ್ನು ಚೆನ್ನಾಗಿಯೇ ಮಾಡಿದ್ದರು. ದಾಖಲೆಗಳನ್ನು ಮತ್ತೆ ಮತ್ತೆ ತಿರುವಿ ಹಾಕಿದೆ. ‘ಅಬ್ಬಾ!’ ಎಂದು ನಿಟ್ಟುಸಿರು ಬಿಟ್ಟೆ. ಏಕೆಂದರೆ ಒಂದು ದೊಡ್ಡ ಸುಳಿವು ಅಲ್ಲಿ ಸಿಕ್ಕಿಬಿಟ್ಟಿತು. ಅದೇನೆಂದರೆ ಕಾಂಡೋಮ್!

ಕಾಂಡೋಮ್ ಗುಟ್ಟನ್ನು ಬಿಟ್ಟುಕೊಡುವ ಮುನ್ನ ಪೊಲೀಸರ ಬಾಯಿಯಿಂದಲೇ ಕೆಲವೊಂದು ಸತ್ಯಗಳನ್ನು ನ್ಯಾಯಾಧೀಶರ ಎದುರು ಬಿಡಿಸುವುದು ಸೂಕ್ತ ಎನ್ನಿಸಿತು. ಅದಕ್ಕಾಗಿ ಮೊದಲು ಇನ್‌ಸ್ಪೆಕ್ಟರ್‌ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದೆ. ‘ಘಟನೆ ನಡೆದ ದಿನ ಗಣೇಶನದ್ದು ಎನ್ನಲಾದ ಮೊಬೈಲ್ ಸೀಜ್ ಮಾಡಿರುವಿರಲ್ಲ.

ಅದು ಗಣೇಶನದ್ದೇ ಎನ್ನಲು ಪುರಾವೆಗಳಿವೆಯೇ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ‘ಇದು ಅವನ ಬಳಿಯಿಂದಲೇ ಸೀಜ್‌ ಮಾಡಿದ್ದು’ ಎಂದರು. ‘ಹಾಗಿದ್ದರೆ ಆ ಮೊಬೈಲ್‌ನ ಸಿಮ್ ಕಾರ್ಡ್‌ನಿಂದ ಒಳಬಂದ, ಹೊರಹೋಗಿರುವ ಕರೆಗಳನ್ನು ಪರಿಶೀಲನೆ ಮಾಡಿದ್ದೀರಾ? ಈತನೇ ವೇಶ್ಯಾವಾಟಿಕೆ ಮಾಡುತ್ತಿದ್ದುದೇ ಹೌದಾಗಿದ್ದರೆ ಅಲ್ಲಿರುವ ಕಾಲ್ ರೆಕಾರ್ಡ್‌ಗಳಿಂದ ಗೊತ್ತಾಗಬೇಕಿತ್ತಲ್ಲವೇ’ ಎಂದೆ.

ಅದಕ್ಕೆ ಇನ್‌ಸ್ಪೆಕ್ಟರ್‌ ಹಾರಿಕೆ ಉತ್ತರ ಕೊಟ್ಟರು. ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಎಸಿಪಿ ಅವರಿಂದ ಆದೇಶ ಬಂದಿದ್ದಕ್ಕೆ ರೇಡ್ ಮಾಡಿದ್ದಾಗಿ ಇನ್‌ಸ್ಪೆಕ್ಟರ್‌ ನನ್ನ ಪ್ರಶ್ನೆಯೊಂದಕ್ಕೆ ಸಮಜಾಯಿಷಿ ನೀಡಿದರು. ಆಶ್ಚರ್ಯ ಎಂದರೆ ಎಸಿಪಿಯವರು ಕೊನೆಗೂ ಸಾಕ್ಷಿ ಹೇಳಲು ಕೋರ್ಟ್‌ಗೆ ಬರಲೇ ಇಲ್ಲ! ಆದರೆ ಈ ಇನ್‌ಸ್ಪೆಕ್ಟರ್‌ ಮಾತ್ರ ಜಾಣ್ಮೆಯಿಂದ ಉತ್ತರಿಸುತ್ತಾ ನುಣುಚಿಕೊಳ್ಳುತ್ತಿದ್ದರು.

ನನ್ನ ಪ್ರಶ್ನೆ ಯಾವಾಗ ಹೆಚ್ಚುತ್ತಾ ಬಂತೋ ಆಗ ಗಣೇಶನ ವಿರುದ್ಧವಾಗಿ ಸಿಕ್ಕಸಿಕ್ಕ ಜನರನ್ನು ಸಾಕ್ಷಿದಾರರನ್ನಾಗಿ ಕರೆದುಕೊಂಡು ಬರತೊಡಗಿದರು ಅವರು. ಅವರಲ್ಲಿಯೇ ಒಬ್ಬರನ್ನು ಪಾಟಿಸವಾಲಿಗೆ ಒಳಪಡಿಸಿ ನಾನು ‘ಗಣೇಶ್ ವೇಶ್ಯಾಗೃಹದ ಒಳಗೆ ಹೋಗಿದ್ದನ್ನು ನೋಡಿದ್ದೀರಾ’ ಎಂದು ಕೇಳಿದೆ. ಅದಕ್ಕೆ ಅವರು, ‘ಒಳಗೆ ಹೋಗಿದ್ದನ್ನು ನೋಡಿಲ್ಲ. ಆದರೆ ಮೆಟ್ಟಿಲು ಹತ್ತುತ್ತಿದ್ದುದಷ್ಟನ್ನೇ ನೋಡಿದೆ’ ಎಂದರು.

ಪೊಲೀಸರು ಸೀಜ್ ಮಾಡಿದ ವಸ್ತುಗಳಿಗೆ ಸಹಿ ಹಾಕಿದ್ದ ವ್ಯಕ್ತಿಯನ್ನು ಸಾಕ್ಷಿಯನ್ನಾಗಿ ಕರೆಸಿ, ಅವನನ್ನೂ ವಿಚಾರಣೆಗೆ ಒಳಪಡಿಸಿದೆ. ಮೊದಲು ಆ ವ್ಯಕ್ತಿ ಜಾಣ್ಮೆಯಿಂದ ಉತ್ತರ ಕೊಡತೊಡಗಿದ. ಆಮೇಲೆ ನಾನು ‘ಇವೆಲ್ಲಾ ವಸ್ತುಗಳು ಘಟನೆ ನಡೆದ ಸ್ಥಳದಲ್ಲಿಯೇ ಸೀಜ್ ಮಾಡಿದ್ದು ಎಂದು ಅಷ್ಟು ಕರೆಕ್ಟಾಗಿ ಹೇಗೆ ಹೇಳುತ್ತೀರಿ’ ಎಂದಾಗ ಕಕ್ಕಾಬಿಕ್ಕಿಯಾದ ಆತ, ‘ಅದು ನನಗೆ ಸರಿಯಾಗಿ ಗೊತ್ತಿಲ್ಲ. ಪೊಲೀಸರು ಏನೇನೋ ಬರೆದುಕೊಂಡು ಬಂದು, ಇವೆಲ್ಲಾ ಸೀಜ್ ಮಾಡಿದ್ದೇವೆ, ಸಹಿ ಹಾಕಿ ಅಂದರು. ನಾನು ಹಾಕಿದೆ’ ಎಂದ. ಅಲ್ಲಿಗೆ ಗಣೇಶನ ಬಿಡುಗಡೆ ಬಹುತೇಕ ಖಚಿತವಾಗಿತ್ತು.

ಆದರೂ ಇಂಥ ‘ಮೋಸ’ ಮಾಡಿದ್ದ ಪೊಲೀಸರ ಬಂಡವಾಳ ಕೋರ್ಟ್‌ಗೆ ತೋರಿಸಬೇಕಿತ್ತಲ್ಲ, ಅದಕ್ಕಾಗಿ ನನ್ನ ಕೊನೆಯ ಬತ್ತಳಿಕೆ ‘ಕಾಂಡೋಮ್’ ವಿಷಯಕ್ಕೆ ಬಂದೆ. ಇನ್‌ಸ್ಪೆಕ್ಟರ್‌ ಅವರನ್ನು ಮರುದಿನ ಪಾಟಿ ಸವಾಲಿಗೆ ಒಳಪಡಿಸಿದೆ. ಗಣೇಶನ ಬಳಿಯಿಂದ ಸೀಜ್ ಮಾಡಲಾಗಿದೆ ಎನ್ನಲಾದ ಕಾಂಡೋಮ್ ಪ್ಯಾಕೆಟ್ ಅನ್ನು ತೋರಿಸಿದೆ. ನನ್ನ ಹಾಗೂ ಅವರ ನಡುವೆ ನಡೆದ ಸಂಭಾಷಣೆ ಹೀಗಿತ್ತು

ನಾನು: ‘ಇದು ನಿಮಗೆ ಎಲ್ಲಿ ಸಿಕ್ಕಿತು?
ಇನ್‌ಸ್ಪೆಕ್ಟರ್‌: ಗಣೇಶ್, ವೇಶ್ಯಾಗೃಹದಲ್ಲಿ ಕುಳಿತಿದ್ದ ಟೇಬಲ್ ಬಳಿಯಿಂದ ಸೀಜ್ ಮಾಡಲಾಗಿದೆ.
ನಾನು: ಹಾಗಿದ್ದರೆ ಇದು ಗಣೇಶ್ ಜೇಬಿನಿಂದ ಸಿಕ್ಕಿಲ್ಲ.

ಇನ್‌ಸ್ಪೆಕ್ಟರ್‌: ಇಲ್ಲ
ನಾನು: ಹಾಗಿದ್ದರೆ ಇದನ್ನು ಅವನೇ ಕೊಂಡೊಯ್ದಿದ್ದ ಎಂದು ಹೇಗೆ ಹೇಳುತ್ತೀರಿ?
ಇನ್‌ಸ್ಪೆಕ್ಟರ್‌: ಅಂದು ಹೊರಗೆ ಬೇರೆ ಯಾರೂ ಇರಲಿಲ್ಲ. ಗಣೇಶ್ ಒಬ್ಬನೇ ಇದ್ದ. ಅವನ ಬಳಿಯಲ್ಲಿಯೇ ಇದು ಇತ್ತು.

ನಾನು: ಹಾಗಿದ್ದರೆ ಇದನ್ನು ನೀವು ಘಟನೆ ನಡೆದ ದಿನವೇ ಸೀಜ್ ಮಾಡಿದ್ದು ಎಂದಾಯಿತು. ಇದು ನಿಜವೇ?
ಇನ್‌ಸ್ಪೆಕ್ಟರ್‌: ಖಂಡಿತವಾಗಿಯೂ ನಿಜ. ಇದನ್ನು ವೇಶ್ಯೆಯರ ಬಳಿ ಹೋಗುವಾಗ ಗಣೇಶನೇ ಕೊಂಡೊಯ್ದದ್ದು ಎನ್ನುವುದು 100% ನಿಜ.
ನಾನು: ನಿಜವಾಗಿಯೂ ಇದೇ ಕಾಂಡೋಮ್ ಸೀಜ್ ಮಾಡಿದ್ದಾ ಅಥವಾ ಬೇರೆಯದ್ದಾ?

ಇನ್‌ಸ್ಪೆಕ್ಟರ್‌: ಬೇರೆಯದ್ದಾದರೆ ನಾವ್ಯಾಕೆ ಅದನ್ನು ಕೋರ್ಟ್‌ಗೆ ಹಾಜರು ಪಡಿಸುತ್ತೇವೆ.
ನಾನು: ಸರಿ. ಹಾಗಿದ್ದರೆ ಈ ಕಾಂಡೋಮ್ ಪ್ಯಾಕೆಟ್ ಮೇಲಿದ್ದ ತಯಾರಿಕಾ ದಿನಾಂಕವನ್ನು ಒಮ್ಮೆ ನ್ಯಾಯಾಧೀಶರ ಎದುರು ಓದಿಬಿಡಿ.

ಅದನ್ನು ನೋಡಿದ ಇನ್‌ಸ್ಪೆಕ್ಟರ್‌ ಹೌಹಾರಿದ್ದರು! ಏಕೆಂದರೆ ಅವರು ಹಾಜರುಪಡಿಸಿದ್ದ ಕಾಂಡೋಮ್ ತಯಾರಿಸಿದ್ದು ಆ ಘಟನೆ ನಡೆದ ದಿನದ ಎಷ್ಟೋ ತಿಂಗಳ ಬಳಿಕವಾಗಿತ್ತು! ಸಾಲದು ಎಂಬುದಕ್ಕೆ ಆ ಇನ್‌ಸ್ಪೆಕ್ಟರ್‌ ಅವರಿಗೆ ಅದೇನು ಗಡಿಬಿಡಿ ಇತ್ತೋ ಗೊತ್ತಿಲ್ಲ. ಹರಿದುಹೋದ ಕಾಂಡೋಮ್‌ಗಳನ್ನೂ ಕೋರ್ಟ್ ದಾಖಲೆಗೆ ನೀಡಿ ಅದನ್ನು ಗಣೇಶನಿಂದಲೇ ವಶಪಡಿಸಿಕೊಂಡದ್ದು ಎಂದಿದ್ದರು! ಈ ‘ಕಾಂಡೋಮ್ ರಹಸ್ಯ’ ಬಯಲಾಗುತ್ತಲೇ ಕೋರ್ಟ್ ಗಣೇಶನನ್ನು ಆರೋಪಮುಕ್ತಗೊಳಿಸಿತು.

ಕೋರ್ಟ್ ಪ್ರಕರಣ ಮುಗಿದ ಮೇಲೆ ನಿರಾಳನಾದ ಗಣೇಶ ಕಾಲೇಜು ಮುಂದುವರಿಸಿದ. ಆತನ ಅಕ್ಕನ ಮದುವೆಯೂ ಆಯಿತು. ಆ ಸಂಭ್ರಮದಲ್ಲಿ ನಾನೂ ಭಾಗಿಯಾದೆ. ಒಂದು ಕುಟುಂಬದ ಪ್ರಾಣ-ಮಾನ ಎಲ್ಲ ಕಾಪಾಡಿದ ಸಂತೋಷ, ಹೆಮ್ಮೆ ನನಗಿದೆ.

ಈ ಘಟನೆ ಓದಿದ ಮೇಲೆ ಅಮಾಯಕ ಗಣೇಶನ ಮೇಲೆ ಪೊಲೀಸರ ಕಣ್ಣೇಕೆ ಬಿದ್ದಿತ್ತು? ಪೊಲೀಸರೇ ಆತನಿಗೆ ಸಲೂನ್ ಎಂದು ವೇಶ್ಯಾಗೃಹ ತೋರಿಸಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ ಅಲ್ಲವೇ?

ಪೊಲೀಸರು ಹೀಗೆ ಅಮಾಯಕರನ್ನು ಹಿಡಿದು ಹಾಕುತ್ತಿರುವುದು ದಾಖಲೆಗಾಗಿ! ಇಂಥ ಪ್ರಕರಣಗಳನ್ನು ಹೆಚ್ಚೆಚ್ಚು ತೋರಿಸಿದರೆ ಅವರಿಗೆ ಬಡ್ತಿ, ಪ್ರಶಸ್ತಿ ಬರುತ್ತದೆ. ತಿಂಗಳಿಗೆ ಇಷ್ಟು ಕೇಸನ್ನು  ಹಿಡಿಯಲೇಬೇಕೆಂಬ ‘ಟಾರ್ಗೆಟ್ ರೀಚ್’ ಕೂಡ ಇರುತ್ತದಲ್ಲ! ಇಲ್ಲಿ ಆದದ್ದೂ ಅಷ್ಟೆ.

ಇಂತಿಷ್ಟು ಆರೋಪಿಗಳನ್ನು ಹಿಡಿದಿದ್ದೇವೆ ಎಂದು ದಾಖಲೆಯಲ್ಲಿ ಸೇರಿಸಿ ಅದರ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಈ ಯುವಕನ ಮೇಲೆ ಸುಳ್ಳು ಕೇಸು ಹಾಕಿದ್ದರು. ಮನೆಯಲ್ಲಿ ಬಡತನ, ವಕೀಲರನ್ನು ನೇಮಕ ಮಾಡಿಕೊಳ್ಳಲು ಆಗದ ಅಸಹಾಯಕತೆ, ಕಾನೂನಿನ ಅರಿವು ಇಲ್ಲದೇ ಇರುವುದು... ಇಂಥವರು ಈ ಪೊಲೀಸರ ಟಾರ್ಗೆಟ್ ಆಗುತ್ತಿದ್ದಾರೆ.

ಇವುಗಳಿಂದಾಗಿ ನಿರಪರಾಧಿಗಳು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಅಪರಾಧಿಗಳಾಗುತ್ತಿದ್ದಾರೆ (ಜೈಲಿನಿಂದ ಬಿಡುಗಡೆಗೊಂಡ ಮೇಲೆ ನಿಜವಾಗಿಯೂ ಅಪರಾಧಿಗಳಾಗುತ್ತಾರೆ!) ಆದರೆ ಈ ಪ್ರಕರಣದಲ್ಲಿ ದಾಖಲೆ ಹೆಚ್ಚಿಸಲು ಹೋಗಿದ್ದ ಪೊಲೀಸರಿಗೆ ಈ ಹೊಸ ಕಾಂಡೋಮ್ ಮುಳುವಾಯಿತು.

ಆದರೆ ದುರದೃಷ್ಟ ನೋಡಿ. ಪೊಲೀಸ್ ಇನ್‌ಸ್ಪೆಕ್ಟರ್‌ ಇಂಥ ತಪ್ಪು ಮಾಡಿದ್ದಾರೆ ಎಂದು ಗೊತ್ತಾದರೂ ಅವರ ಮೇಲೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಇಂಥವರಿಗೆ ಹೆದರಿಕೆಯೇ ಇರುವುದಿಲ್ಲ.  ಒಬ್ಬನಲ್ಲದಿದ್ದರೆ ಇನ್ನೊಬ್ಬ ‘ಗಣೇಶ’ ಸಿಗುತ್ತಾನಲ್ಲ...!
(ಯುವಕನ ಹೆಸರನ್ನು ಬದಲಾಯಿಸಲಾಗಿದೆ)
ಲೇಖಕ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT