ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಗಾಡಿ ತಪಾಸಣೆಗೆ ದಾರಿ...

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬಳಸಿದ ಕಾರು ಅಥವಾ ಬೈಕ್‌ಗಳನ್ನು ಕೊಳ್ಳುವಾಗ ಖರೀದಿದಾರರಲ್ಲಿ ಸಾಕಷ್ಟು ಗೊಂದಲಗಳಿರುತ್ತವೆ. ಆ ವಾಹನ ಸುಸ್ಥಿತಿಯಲ್ಲಿ ಇದೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿರುತ್ತವೆ. ಸಾಮಾನ್ಯವಾಗಿ ಅನೇಕರು ಸೆಕೆಂಡ್‌ಹ್ಯಾಂಡ್‌ ಕಾರು ಅಥವಾ ಬೈಕ್‌ ಖರೀದಿ ಮಾಡುವಾಗ ತಮಗೆ ಪರಿಚಯವಿರುವ ಒಬ್ಬ ಮೆಕ್ಯಾನಿಕ್‌ನನ್ನು ಕರೆದೊಯ್ಯುತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಆತ ಎಷ್ಟು ವೃತ್ತಿಪರ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆತ ವೃತ್ತಿಪರನಾಗಿದ್ದರೆ ಖಂಡಿತವಾಗಿಯೂ ಕೊಳ್ಳುವವರಿಗೆ ಒಳ್ಳೆ ಗಾಡಿ ಸಿಗುತ್ತದೆ. ಒಂದು ವೇಳೆ ಕಸುಬುದಾರ ಅಲ್ಲಿದಿದ್ದರೆ ವಾಹನ ಕೊಂಡು ಕಿರಿಕಿರಿ ಅನುಭವಿಸುವುದು ಗ್ಯಾರಂಟಿ.  ಬಳಸಿದ ವಾಹನಗಳನ್ನು ಕೊಳ್ಳುವಾಗ ಗ್ರಾಹಕರು ಎದುರಿಸುವ ಇಂತಹ ನೂರೆಂಟು ತಾಪತ್ರಯಗಳನ್ನು ನಿವಾರಿಸಿ, ವಾಹನದ ಸ್ಥಿತಿಗತಿಯ ಬಗ್ಗೆ ಪಾರದರ್ಶಕ ವರದಿ ನೀಡುವ ಕೆಲಸ ಮಾಡುತ್ತಿದೆ ಚೆಕ್‌ಗಾಡಿ.ಕಾಂ. ಇದು ಬೆಂಗಳೂರು ಮೂಲದ ಸೇವಾ ಸಂಸ್ಥೆಯಾಗಿದ್ದು, ಕಾರು ಮತ್ತು ಬೈಕ್ ಖರೀದಿಸುವ ಮತ್ತು ಮಾರುವ ಮುನ್ನ ವೃತ್ತಿಪರ ರೀತಿಯಲ್ಲಿ ತಪಾಸಣೆ ನಡೆಸಿಕೊಡುವ ತಾಣವಾಗಿದೆ.  

ಸೇವೆ ಪಡೆಯುವ ಬಗೆ
ಚೆಕ್‌ಗಾಡಿ.ಕಾಂ ವಾಹನ ತಪಾಸಣಾ ಪ್ರಕ್ರಿಯೆಯನ್ನು ಸಂಪೂರ್ಣ ಸರಳಗೊಳಿಸಿದೆ ಹಾಗೂ ಹೆಚ್ಚು ಪಾರದರ್ಶಕಗೊಳಿಸಿದೆ. ಈ ವೆಬ್‌ಸೈಟ್‌ ಸಂಪರ್ಕಿಸುವ ಮೂಲಕ ಬಳಸಿದ ವಾಹನ ಖರೀದಿ ಮಾಡಬಯಸುವ ಗ್ರಾಹಕರು ಇದರ ಸೇವೆ ಪಡೆದುಕೊಳ್ಳಬಹುದು.
ಮೊದಲನೆಯದಾಗಿ, ತಾವು ಖರೀದಿಸಲು ಬಯಸಿರುವ ಕಾರು ಅಥವಾ ಬೈಕಿನ ವಿವರ ಹಾಗೂ ಸ್ವ–ವಿವರ ಕೇಳುವ ಫಾರಂ ಭರ್ತಿ ಮಾಡಿ ಸಬ್‌ಮಿಟ್‌ ಮಾಡಬೇಕು.

ಈ ವೇಳೆ ಖರೀದಿದಾರರು ತಮಗೆ ಅನುಕೂಲ ಎನಿಸುವ ಸಮಯ ಆಯ್ದುಕೊಂಡು ವಾಹನ ತಪಾಸಣೆ ಕೆಲಸವನ್ನು ನಿಗದಿ ಮಾಡಿಕೊಳ್ಳಬಹುದು. ಖರೀದಿದಾರರು ಆಯ್ದುಕೊಂಡ ದಿನ, ಸಮಯ ಹಾಗೂ ಸ್ಥಳಕ್ಕೆ ಬೆಕ್‌ಗಾಡಿ.ಕಾಂನ ಮೆಕ್ಯಾನಿಕ್‌ ಹಾಜರಾಗುತ್ತಾನೆ. ಈ ಸಂಸ್ಥೆಯು ತಜ್ಞ ಮೆಕ್ಯಾನಿಕ್‌ಗಳನ್ನೇ ನೇಮಿಸಿಕೊಂಡಿರುವುದರಿಂದ ಆತನ ವೃತ್ತಿಪರತೆಯ ಬಗ್ಗೆ ಅನುಮಾನ ಪಡಬೇಕಿಲ್ಲ. ಬಂದ ನಂತರ ಆತ ವಾಹನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಾನೆ.

ತಪಾಸಣೆ ವೇಳೆ ಗ್ರಾಹಕರು ಖರೀದಿಸುವ ವಾಹನ ಕುರಿತಂತೆ ಆತ ಯಾವುದೇ ಬಗೆಯ ಅತಿರೇಕದ ಮಾತುಗಳನ್ನಾಡುವುದಿಲ್ಲ. ವಸ್ತುಸ್ಥಿತಿ ಏನಿದೆಯೋ ಅದನ್ನಷ್ಟೇ ತಿಳಿಸುತ್ತಾನೆ. ಈ ಪ್ರಕ್ರಿಯೆ ಮುಗಿದ ಎರಡು ಮೂರು ಗಂಟೆಗಳಲ್ಲಿ ನಿಮಗೆ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಪ್ಯಾಕೇಜ್‌ಗಳ ಆಯ್ಕೆ
ಬಳಸಿದ ಕಾರು ಅಥವಾ ಬೈಕ್‌ಗಳನ್ನು ಕೊಳ್ಳುವ ಗ್ರಾಹಕರಿಗೆ ಚೆಕ್‌ಗಾಡಿ.ಕಾಂ, ಸ್ಟ್ಯಾಂಡರ್ಡ್‌ ಹಾಗೂ ಪ್ರೀಮಿಯಂ ಎಂಬ ಎರಡು ಬಗೆಯ ಪ್ಯಾಕೇಜ್‌ಗಳ ಆಯ್ಕೆ ಒದಗಿಸಿದೆ. ಇದು ಕಾರು ಮತ್ತು ಬೈಕ್‌ ಎರಡಕ್ಕೂ ಅನ್ವಯಿಸುತ್ತದೆ. ಸ್ಟ್ಯಾಂಡರ್ಡ್‌ ಕಾರ್‌ ಪ್ಲಾನ್‌ (₹ 599) ಆಯ್ದುಕೊಂಡರೆ ಇದರಲ್ಲಿ ಕಾರಿನ 53 ಅಂಶಗಳನ್ನು ತಪಾಸಣೆ ಮಾಡಿಕೊಡುತ್ತಾರೆ. ಪ್ರೀಮಿಯಂ ಕಾರ್‌ ಪ್ಲಾನ್‌ನಲ್ಲಿ (₹ 799) 103 ಅಂಶಗಳ ಬಗ್ಗೆ ತಪಾಸಣೆ ನಡೆಸಿಕೊಡುತ್ತಾರೆ. ಅದೇರೀತಿ, ಸ್ಟ್ಯಾಂಡರ್ಡ್‌ ಬೈಕ್‌ ಪ್ಲಾನ್‌ನಲ್ಲಿ (₹ 499) 25, ಪ್ರೀಮಿಯಂ ಬೈಕ್‌ ಪ್ಲಾನ್‌ನಲ್ಲಿ  (₹ 649)51 ಅಂಶಗಳನ್ನು ತಪಾಸಣೆ ಮಾಡಿಕೊಡುತ್ತಾರೆ.

ಉದಾಹರಣೆಗೆ, ಸೆಕೆಂಡ್‌ಹ್ಯಾಂಡ್‌ ಕಾರು ಕೊಳ್ಳುವ ಒಬ್ಬ ಗ್ರಾಹಕ ಪ್ರೀಮಿಯಂ ಕಾರ್‌ ಪ್ಲಾನ್‌ ಆಯ್ದುಕೊಂಡರೆ, ಮೆಕ್ಯಾನಿಕ್‌ ಆ ವಾಹನದ ಎಂಜಿನ್‌, ಬ್ಯಾಟರಿ, ಸಸ್ಪೆನ್ಶನ್‌, ಟೈರ್, ಎಲೆಕ್ಟ್ರಿಕಲ್‌, ಟ್ರಾನ್ಸ್‌ಮಿಷನ್‌, ವಾಹನದ ಒಳಾಂಗಣ, ಹೊರಭಾಗ, ಬಿಡಿಭಾಗಗಳು, ಬ್ರೇಕ್‌, ಸ್ಟೇರಿಂಗ್‌ ಹೀಗೆ ಇಡೀ ವಾಹನವನ್ನು ಸಂಪೂರ್ಣ ತಪಾಸಣೆ ನಡೆಸಿ ವರದಿ ಕೊಡುತ್ತಾನೆ. 

ಕೊಳ್ಳುವವರು, ಮಾರುವವರಿಗೂ ಅನುಕೂಲ
ಬಳಸಿದ ವಾಹನಗಳನ್ನು ಮಾರುವ ಮತ್ತು ಕೊಳ್ಳುವ ವೇಳೆ ಹೆಚ್ಚು ಪಾರದರ್ಶಕತೆಯನ್ನು ತರುವ ಗುರಿ ಹೊಂದಿರುವ ಚೆಕ್‌ಗಾಡಿ.ಕಾಂ ಬಳಸಿದ ಕಾರು ಹಾಗೂ ಬೈಕ್‌ಗಳ ಖರೀದಿದಾರರು ಹಾಗೂ ಮಾರಾಟಗಾರರಿಬ್ಬರನ್ನೂ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಸೇವೆ ಪಡೆದುಕೊಳ್ಳುವ ಖರೀದಿದಾರರು ಪಾರದರ್ಶಕ ಹಾಗೂ ಸಮಗ್ರವಾದ, ಅರ್ಥಪೂರ್ಣ ಸರಳ ತಾಂತ್ರಿಕ ಸಲಹೆ ಪಡೆಯುತ್ತಾರೆ.

ಅದೇ ರೀತಿ- ಮಾರಾಟಗಾರರು ಮಾರುಕಟ್ಟೆಯಲ್ಲಿ ತಮ್ಮ ವಾಹನ ಇತರೆ ವಾಹನಗಳಿಗಿಂತ ಭಿನ್ನ ಎಂದು ಪ್ರತ್ಯೇಕಿಸಲು ಈ ತಪಾಸಣಾ ವರದಿಯನ್ನು ಬಳಸಬಹುದು. ವಾಹನದ ಗುಣಮಟ್ಟ ಕುರಿತಂತೆ ಸ್ಪಷ್ಟ ವರದಿಯನ್ನು ಕೊಳ್ಳುವವರಿಗೆ ಒದಗಿಸುವ ಮೂಲಕ ತಮ್ಮ ವಾಹನಕ್ಕೆ ಉತ್ತಮ ಮೌಲ್ಯ ಪಡೆಯಬಹುದು ಹಾಗೂ ವೇಗವಾಗಿ ಮಾರಾಟ ಮಾಡಬಹುದಾಗಿದೆ. ಅಂದಹಾಗೆ, ಚೆಕ್‌ಗಾಡಿ.ಕಾಂ ಎಲ್ಲ ಬ್ರಾಂಡ್‌ಗಳ ಕಾರು ಹಾಗೂ ದ್ವಿಚಕ್ರ ವಾಹನಗಳ ತಪಾಸಣೆ ನಡೆಸುತ್ತದೆ.

‘ವಾಹನ ತಪಾಸಣೆ ಹಾಗೂ ಪರೀಕ್ಷೆಯು ಖರೀದಿ ಪ್ರಕ್ರಿಯೆಯ ಒಂದು ಭಾಗ. ವಾಹನದ ಗುಣಮಟ್ಟದ ಬಗ್ಗೆ ವೃತ್ತಿಪರವಾದ ಅಭಿಪ್ರಾಯ ಪಡೆಯಬೇಕೆಂದರೆ, ಸಮೀಪದ ಗ್ಯಾರೇಜ್‌ಗೆ ಹೋಗಿ ಒಬ್ಬ ಮೆಕ್ಯಾನಿಕ್‌ನನ್ನು ಕರೆದೊಯ್ಯುತ್ತಾರೆ. ಆದರೆ, ಆತನ ನೈಪುಣ್ಯದ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ. ಕೆಲವೊಮ್ಮೆ ಆತ ಕೆಲಸದ ಒತ್ತಡದಿಂದ ನಿಗದಿತ ಸಮಯಕ್ಕೆ ಬರದಿರಬಹುದು.

ಬಂದರೂ ಆತ ವಾಹನದ ಸ್ಥಿತಿಯ ಬಗೆಗೆ ಬಾಯಿಮಾತಿನ ಅಭಿಪ್ರಾಯವನ್ನಷ್ಟೆ ಒದಗಿಸುತ್ತಾನೆ. ಅದು ಅಷ್ಟೇ ಬೇಗನೆ ಮರೆತುಹೋಗುತ್ತದೆ. ಆತ ಗಮನಿಸಿದ ವಿಷಯಗಳ ಬಗ್ಗೆ ಯಾವುದೇ ಲಿಖಿತ ಉಲ್ಲೇಖವಾಗಲೀ, ವಿವರಗಳಾಗಲೀ ಇರುವುದಿಲ್ಲ. ಹಾಗೆಯೇ, ಕೆಲವೊಮ್ಮೆ ಮೆಕ್ಯಾನಿಕ್ ಬೇಡಿಕೆ ಇಡುವ ಹಣಕ್ಕೆ ಗೊತ್ತುಗುರಿ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಚೆಕ್‌ಗಾಡಿ.ಕಾಂ ಪರಿಹಾರ ನೀಡುತ್ತದೆ. ಖರೀದಿದಾರರಿಗೆ ಕಿರಿಕಿರಿ ಇಲ್ಲದೆ ಕೊಳ್ಳುವ ಅನುಭವವನ್ನು ಪೂರೈಸುತ್ತಿದೆ’ ಎನ್ನುತ್ತಾರೆ ಚೆಕ್‌ಗಾಡಿ.ಕಾಂನ ಆಪರೇಷನ್ಸ್‌ ಹೆಡ್‌ ಸುರೇಶ್‌ ಕುಮಾರ್.
ಮಾಹಿತಿಗೆ: checkgaadi.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT