ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಪುಸ್ತಕಗಳಿಗೆ ಮರುಜೀವ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಪುಸ್ತಕಗಳು ಜ್ಞಾನ ವೃದ್ಧಿಯ ಸಾಧನಗಳು. ಅವು ಹಳೆಯದಿರಲಿ, ಹೊಸದೇ ಆಗಿರಲಿ ತನ್ನಲ್ಲಿ ಅಡಗಿರುವ ವಿಷಯ ಸಂಪತ್ತಿನಿಂದ ಸದಾ ಓದುಗರ ಜ್ಞಾನದಾಹವನ್ನು ತಣಿಸುತ್ತವೆ. ಹಳೆಯದಾದಂತೆ ಪುಸ್ತಕಗಳು ಮೂಲೆ ಸೇರುತ್ತವೆ. ಹೀಗೆ ಮೂಲೆ ಸೇರಿದ ಹೊತ್ತಗೆಗಳನ್ನು ಹುಡುಕಿ ತಂದು ಓದುಗರಿಗೆ ಮಾರಾಟ ಮಾಡುವ ಮೂಲಕ ಅವುಗಳಿಗೆ ಮರುಜೀವ ನೀಡುವ ವ್ಯಕ್ತಿಯೊಬ್ಬರು ನಗರದ ಬಳೇಪೇಟೆಯಲ್ಲಿ ಗಮನ ಸೆಳೆಯುತ್ತಾರೆ.

ಅವರೇ ಮೆಹಬೂಬ್ ಪಾಷಾ. ಬಳೇಪೇಟೆಯಿಂದ ಕಿಲಾರಿ ರಸ್ತೆಗೆ ತಿರುಗುವ ಸ್ಥಳದಲ್ಲಿ ಇವರ ಪುಟ್ಟ ಅಂಗಡಿ ಇದೆ. ಅಂಗಡಿ ಚಿಕ್ಕದಾದರೂ ಪಕ್ಕದ ಸಂದಿಗೊಂದಿಗಳಲ್ಲೆಲ್ಲ ಇವರ ಪುಸ್ತಕ ಲೋಕ ತೆರೆದುಕೊಂಡಿದೆ.

ಪುಸ್ತಕ ಪ್ರಪಂಚಕ್ಕೆ ಕಾಲಿಡುವ ಎಲ್ಲರಿಗೂ ಪಾಷಾ ಅವರ ನಗುಮೊಗ ಸ್ವಾಗತ ಕೋರುತ್ತದೆ. ‘ಬನ್ನಿ ಸಾರ್ ಯಾವ ಪುಸ್ತಕ ಬೇಕು? ಇಂಗ್ಲಿಷ್ ಬೇಕಾ, ಕನ್ನಡ ಬೇಕಾ, ರಾಬರ್ಟ್‌ ಲುಡ್ಲುಮ್, ಡ್ಯಾನಿಯೆಲ್ಲಾ ಸ್ಟೀಲ್ ಪುಸ್ತಕಗಳಿವೆ, ವಿಶ್ವಕೋಶ ಬೇಕಾ, ವಿಜ್ಞಾನ ಪುಸ್ತಕಗಳಿವೆ, ಲಂಡನ್‌ನಲ್ಲಿ ಮುದ್ರಣಗೊಂಡಿದ್ದು ಸಾರ್... ಎಂದು ಇಂಗ್ಲಿಷ್‌ ಭಾಷೆಯ ಕಾದಂಬರಿಕಾರರ, ಕೃತಿಗಳ ಹೆಸರುಗಳನ್ನು ಪಟಪಟನೆ ಹೇಳುತ್ತಾ ನಮ್ಮನ್ನು ಮೋಡಿ ಮಾಡುತ್ತಾರೆ.

ಪಾಷಾ ಅವರ ಪುಸ್ತಕದ ಅಂಗಡಿಯಲ್ಲಿ ಇಲ್ಲಿ ವಿಜ್ಞಾನ ಸಂಬಂಧಿ ಕೃತಿಗಳು, ಇಂಗ್ಲಿಷ್‌, ಕನ್ನಡ ಭಾಷೆಯ ಕಾದಂಬರಿಗಳು, ಅಪರೂಪದ ವಿಶ್ವಕೋಶಗಳು, ವೈದ್ಯಕೀಯ ವಿಷಯದ ಪುಸ್ತಕಗಳು, ಛಾಯಾಗ್ರಹಣಕ್ಕೆ ಸಂಬಂಧಿಸಿದ್ದು, ಪಕ್ಷಿ–ಪ್ರಾಣಿಗಳ ಕುರಿತ ಪುಸ್ತಕಗಳು, ಇತಿಹಾಸ, ಜಾಗತಿಕ ವಿದ್ಯಮಾನ ಕುರಿತ ಅಪರೂಪದ ಹಳೆಯ ಕೃತಿಗಳು ಲಭ್ಯ.

ನೀವು ಪುಸ್ತಕ ಓದುವ ಹವ್ಯಾಸದವರಾಗಿದ್ದರೆ ಈ ಅಂಗಡಿಯೊಳಗೆ ಕಾಲಿಟ್ಟಾಗ ಪುಸ್ತಕಗಳ ಮೇಲೆ ಕಣ್ಣು ಹಾಯಿಸದೇ ಮುಂದೆ ಹೋಗಲು ಮನಸ್ಸಾಗದು. ನಲ್ವತ್ತು ವರ್ಷಗಳಿಂದಲೂ ನಗರದಲ್ಲಿ ಹಳೇ ಪುಸ್ತಕಗಳ ವ್ಯಾಪಾರ ನಡೆಸುವ ಪಾಷಾ, ಪುಸ್ತಕ ವ್ಯಾಪಾರದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಈ ವೃತ್ತಿಯಿಂದ ಸಂಸಾರದ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟವಾದರೂ ಇವರು ಇನ್ನೂ ಪರ್ಯಾಯ ವೃತ್ತಿಯತ್ತ ಮುಖ ಮಾಡಿಲ್ಲ. ಇವರಿಗೆ ಪುಸ್ತಕ  ಎನ್ನುವುದು ಕೇವಲ ವ್ಯಾಪಾರದ ಸರಕಷ್ಟೇ ಆಗಿಲ್ಲ. ಪುಸ್ತಕಗಳ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದ್ದಾರೆ.

ಇಂದು ಮೊಬೈಲ್, ವಾಟ್ಸ್ಆ್ಯಪ್, ಫೇಸ್‌ಬುಕ್ ಹಾವಳಿಯಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಪಾಷಾ ಇದೇ ಕಾಯಕದಲ್ಲಿ ಮುಂದುವರಿದಿರುವುದು ಇವರ ಪುಸ್ತಕ ಪ್ರೀತಿಗೆ ಸಾಕ್ಷಿ.

ಪಾಷಾ ಅವರ ಸಂಗ್ರಹದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಇಂತಹ ಪುಸ್ತಕಗಳನ್ನು ಅದರ ಅರ್ಧ ಬೆಲೆಗಿಂತಲೂ ಕಡಿಮೆಗೆ ಮಾರುತ್ತಾರೆ. ಗ್ರಂಥಾಲಯ, ಪುಸ್ತಕ ಮಳಿಗೆ, ಮನೆಮನೆಗಳಿಗೆ ತೆರಳಿ ಮೂಲೆಗೆ ಬಿದ್ದಿರುವ ಹಳೆಯ ಪುಸ್ತಕಗಳನ್ನು ಕೊಳ್ಳುತ್ತಾರೆ.

‘ಹಳೆಯ ಪುಸ್ತಕಗಳನ್ನು ಸಂಗ್ರಹಿಸುವುದು ಶ್ರಮದ ಕೆಲಸ. ಅದೇ ರೀತಿ ಸಂಗ್ರಹಿಸಿದ ಪುಸ್ತಕಗಳನ್ನು ಜೋಪಾನವಾಗಿಡುವುದು ಕೂಡ ತ್ರಾಸದಾಯಕ’ ಎನ್ನುವುದು ಅವರ ಅನುಭವದ ಮಾತು.

‘ಚಿಕ್ಕಂದಿನಿಂದಲೂ ಇದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಬೇರೆ ಪುಸ್ತಕ ಮಳಿಗೆಗಳಲ್ಲಿ ಸಿಗದ ಕೆಲವು ಅಪರೂಪದ  ಹಳೆಯ ಪುಸ್ತಕಗಳು ನನ್ನ ಬಳಿ ಇವೆ. ಇಂತಹ ಪುಸ್ತಕಗಳಿಗಾಗಿ ಜನರು ನನ್ನಲ್ಲಿಗೆ ಹುಡುಕಿ ಬಂದು ಖರೀದಿಸಿದ್ದಾರೆ. ಈ ವೃತ್ತಿಯಲ್ಲಿ ದೊಡ್ಡ ಲಾಭವಿಲ್ಲದಿದ್ದರೂ ಬದುಕಿನ ಬಂಡಿ ಹೇಗೋ ಸಾಗುತ್ತಿದೆ. ಪುಸ್ತಕ ವ್ಯಾಮೋಹದಿಂದ ಇದೇ ಕಾಯಕದಲ್ಲಿ ಮುಂದುವರಿಯುತ್ತಿದ್ದೇನೆ’ ಎನ್ನುತ್ತಾರೆ ಮೆಹಬೂಬ್ ಪಾಷಾ.

‘ಹಿಂದೆ ಹಳೇ ಪುಸ್ತಕಗಳನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.
ಮೆಹಬೂಬ್ ಪಾಷಾ ಅವರ ಮೊಬೈಲ್ ಸಂಖ್ಯೆ:88927 56028.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT