ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹೈದನ ಐಐಟಿ ಸಾಧನೆ

Last Updated 2 ಜುಲೈ 2016, 11:25 IST
ಅಕ್ಷರ ಗಾತ್ರ

ಭಾಲ್ಕಿ (ಬೀದರ್‌ ಜಿಲ್ಲೆ): ‘ನಮ್ಮದು ಕೂಲಿ ಕಾರ್ಮಿಕರ ಕುಟುಂಬ. ನಿತ್ಯ ಪಾಲಕರು ದುಡಿಯದ ಹೊರತು ಮನೆಯಲ್ಲಿ ಯಾರದೂ ಹೊಟ್ಟೆ ತುಂಬುವುದಿಲ್ಲ. ಆದರೂ ಮಕ್ಕಳು ಚೆನ್ನಾಗಿ ಅಭ್ಯಸಿಸಿ, ದೊಡ್ಡ ವ್ಯಕ್ತಿಗಳಾಗಬೇಕು ಎಂಬ ಆಸೆ. ಅವರ ಈ ಆಸೆಯೇ ನನ್ನನ್ನು ಚೆನ್ನಾಗಿ ಓದುವಂತೆ ಪ್ರೇರೇಪಿಸಿತು’.

ಈಗ ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ಆಯ್ಕೆಯಾಗಿರುವ ಬಸವಕಲ್ಯಾಣ ತಾಲ್ಲೂಕಿನ ಗೊಗ್ಗಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸಂದೀಪ ಅವರ ಮಾತುಗಳಿವು.

ನಾಲ್ಕು ಮಕ್ಕಳಲ್ಲಿ ಸಂದೀಪ ಹಿರಿಯ ಮಗ. 1ರಿಂದ 5ನೇ ತರಗತಿವರೆಗೆ ಸ್ವಗ್ರಾಮದ ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ. ನಂತರ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ನಡೆಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಪಾಸಾಗಿ ಹುಮನಾಬಾದ್‌ ಶಕುಂತಲಾ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿವರೆಗೆ ಅಭ್ಯಾಸ ಮಾಡಿದ್ದಾರೆ. ಇಲ್ಲಿ 8.8 ಸಿಜಿಪಿಎ ಫಲಿತಾಂಶ ಪಡೆದಿದ್ದಾರೆ.

‘ಉತ್ತಮ ಕಾಲೇಜಿನಲ್ಲಿ ಪಿಯುಸಿ ಪೂರೈಸಲು ಬಡತನ ಅಡ್ಡಿಯಾಗಿತ್ತು. ಅಂದಿನ ಜಿಲ್ಲಾಧಿಕಾರಿ ಪಿ.ಸಿ. ಜಾಫರ್‌ ಪ್ರಾರಂಭಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಉಚಿತ ಪ್ರವೇಶ ಎಂಬ ಯೋಜನೆ ನನ್ನ ಕೈ ಹಿಡಿಯಿತು. ಪ್ರವೇಶ ಪರೀಕ್ಷೆಗಾಗಿ ನಡೆದ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಪಾಸಾಗಿ ಕರಡ್ಯಾಳದ ಚನ್ನಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಂಡೆ’ ಎನ್ನುತ್ತಾರೆ ಸಂದೀಪ ಅವರು.

‘ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಗುರಿ ಮುಟ್ಟಬೇಕು ಎನ್ನುವ ಛಲದಿಂದ ಓದಿ ದ್ವಿತೀಯ ಪಿಯುಸಿಯಲ್ಲಿ ಶೇ 86ರಷ್ಟು ಅಂಕ ಗಳಿಸಿದೆ. ದೇಶದ ವಿವಿಧ ನಗರಗಳಲ್ಲಿ ಏಪ್ರಿಲ್‌ 4ರಂದು ನಡೆದ ರಾಷ್ಟ್ರಮಟ್ಟದ ಜೆಇಇ ಮುಖ್ಯ ಪರೀಕ್ಷೆಗೆ ವಿವಿಧ ರಾಜ್ಯಗಳ ಒಟ್ಟು 15 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ ಪಾಸಾದವರು ಕೇವಲ 1.5 ಲಕ್ಷ  ಮಂದಿ. ಅವರಲ್ಲಿ ನಾನೂ ಒಬ್ಬ.

ಮೇ 22ರಂದು ನಡೆದ ಜೆಇಇ ಅಡ್ವಾನ್ಸ್‌ ಪರೀಕ್ಷೆ ಬರೆದ ನನಗೆ ಎಸ್‌.ಟಿ ಕೋಟಾದಡಿಯಲ್ಲಿ ರಾಷ್ಟ್ರಮಟ್ಟದಲ್ಲಿ 699ನೇ ರ್‌್ಯಾಂಕ್‌ ಲಭಿಸಿದೆ. ಈಗ ದೇಶದ ಅತ್ಯುತ್ತಮ ತಂತ್ರಜ್ಞಾನ ಸಂಸ್ಥೆಗಳಲ್ಲೊಂದಾದ ಮದ್ರಾಸ್‌ ಐಐಟಿಯಲ್ಲಿ ಪ್ರವೇಶ ದೊರಕಿದೆ. ಆದರೆ, ಪಾಲಕರಿಗೆ ನನ್ನ ಉನ್ನತ ಶಿಕ್ಷಣಕ್ಕೆ ಹಣ ಪೂರೈಸುವ ಶಕ್ತಿಯಿಲ್ಲ’ ಎನ್ನುತ್ತಾರೆ ಸಂದೀಪ. ಅವರ ಸಂಪರ್ಕಕ್ಕೆ ಮೊ. 7353042853.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT