ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸದ ಅಚ್ಚಿನಲ್ಲಿ ಜ್ಞಾನದ ಎರಕ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ವಿಜ್ಞಾನ ಹೆಚ್ಚಿನವರಿಗೆ ಕಬ್ಬಿಣದ ಕಡಲೆ. ಸರಾಗವಾಗಿ ತಲೆಗಿಳಿಯದ ಆ ವಿಷಯವನ್ನು ಎಳವೆಯಿಂದಲೇ ಅನೇಕ ಮಕ್ಕಳು ದೂರ ಇಟ್ಟುಬಿಡುತ್ತಾರೆ. ‘ನನಗೆ ಗಣಿತ ಹಿಡಿಸದು, ಸಮಾಜ ಅರ್ಥವಾಗದು’ ಎನ್ನುತ್ತ ವಿಷಯಗಳಿಂದ ದೂರವುಳಿದ ಅನೇಕ ಮಕ್ಕಳಿಗೆ ವೃತ್ತಿ ಬದುಕಿನಲ್ಲಿ ಗೆಲುವು ಸಾಧಿಸುವುದು ಸವಾಲು.

ಹೀಗೆ ಮಕ್ಕಳಿಗೆ ಕಠಿಣವಾಗಿ ತೋರುವ ವಿಜ್ಞಾನವನ್ನು ಆಟ, ತಮಾಷೆಗಳ ಮೂಲಕ ಕಲಿಸಿ, ಕಲಿಕೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ‘ಹಾಬಿ ಮಾಸ್ಟರ್‌’ ಸಂಸ್ಥೆ.

ಮೈಸೂರು ಮೂಲದ ರಾಜೀವ್‌ ಕೋಯಲ್‌ (ಹಾಬಿ ಮಾಸ್ಟರ್‌ ಸಿಇಒ) ಹಾಗೂ ಚಿತ್ರದುರ್ಗ ಮೂಲದ ಗುರುಪ್ರಸಾದ್‌ ಅಥಣಿ (ಹಾಬಿ ಮಾಸ್ಟರ್‌ ಸಿಎಲ್‌ಒ) ಈ ಹಾಬಿ ಮಾಸ್ಟರ್‌ ಪರಿಕಲ್ಪನೆಯನ್ನು ಹೆಣೆದು ಸಾಕಾರಗೊಳಿಸಿರುವ ರೂವಾರಿಗಳು. ಹ್ಯೂಮನ್‌ ರಿಸೋರ್ಸ್‌ ವಿಭಾಗದಲ್ಲಿದ್ದ ರಾಜೀವ್‌ ಅನೇಕ ಕಂಪೆನಿಗಳ ಪರವಾಗಿ ಕಾಲೇಜುಗಳಿಗೆ ಕ್ಯಾಂಪಸ್‌ ಸಂದರ್ಶನ ಪಡೆಯಲು ಹೋಗುತ್ತಿದ್ದರು.

ಆದರೆ ಅಂಕದ ವಿಷಯದಲ್ಲಿ ಸೈ ಎನಿಸಿಕೊಳ್ಳುತ್ತಿದ್ದ ಅನೇಕರು ಎಂಪ್ಲಾಯ್‌ಮೆಂಟ್‌ ಸ್ಕಿಲ್ಸ್‌ ವಿಷಯದಲ್ಲಿ ಸೋಲುತ್ತಿದ್ದರು. ಇವುಗಳನ್ನು ನೋಡಿ ಅಸಮಾಧಾನಗೊಂಡ ರಾಜೀವ್‌ ಈ ಸಮಸ್ಯೆ ನಿವಾರಣೆಗೆ ಏನನ್ನಾದರೂ ಮಾಡಬೇಕು. ತಿದ್ದುವ ಕೆಲಸ ಎಳವೆಯಿಂದಲೇ ನಡೆಯಬೇಕು ಎಂದು ಕಾರ್ಯಪ್ರವೃತ್ತರಾದರು.

ಮೂಲತಃ ಏರೊಸ್ಪೇಸ್‌ ವಿಷಯದ ಬಗ್ಗೆ ಸಾಕಷ್ಟು ಒಲವಿದ್ದ ರಾಜೀವ್‌ ಕನಸಿಗೆ ರೆಕ್ಕೆ ಹಚ್ಚಲು ಕೈಜೋಡಿಸಿದವರು ಐಟಿ ಉದ್ಯೋಗಿಯಾಗಿದ್ದ ಗುರುಪ್ರಸಾದ್‌. ಬಿಇಎಲ್‌, ಇನ್ಫೊಸಿಸ್‌ಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಅವರಿಗೆ ಮೊದಲಿನಿಂದಲೂ ಪಾಠ ಮಾಡುವುದರಲ್ಲಿ ಅದಮ್ಯ ಉತ್ಸಾಹ.

ಉದ್ಯೋಗ ಮಾಡುತ್ತಿದ್ದ ಹೆಚ್ಚಿನ ಸಂದರ್ಭಗಳಲ್ಲಿ ವಿದೇಶಕ್ಕಾಗಿಯೇ ಕೆಲಸ ಮಾಡಬೇಕಾದ ಸಂದರ್ಭವಿತ್ತು. ನಂತರದಲ್ಲಿ ವಿದೇಶಕ್ಕೆ ತೆರಳುವ ಅವಕಾಶವೂ ಅವರಿಗಿತ್ತು. ವೃತ್ತಿ ಬದುಕಿನುದ್ದಕ್ಕೂ ಬೇರೆ ದೇಶಕ್ಕಾಗಿ ದುಡಿಯುವುದೇ ಆಯ್ತು. ತನ್ನ ದೇಶಕ್ಕಾಗಿ, ಮಕ್ಕಳ ಬೆಳವಣಿಗೆಗಾಗಿ ಏನಾದರೂ ಮಾಡಬೇಕು ಎಂದು ಹಂಬಲಿಸುತ್ತಿದ್ದ ಗುರುಪ್ರಸಾದ್‌ ಕೆಲಸ ಬಿಟ್ಟು ರಾಜೀವ್‌ ಅವರಿಗೆ ಸಾಥ್‌ ನೀಡಿದರು.

ಹೀಗೆ ಒಂದೇ ಗುರಿಯೊಂದಿಗೆ ಹೆಜ್ಜೆ ಇಟ್ಟ ಈ ಇಬ್ಬರು 2010ರಲ್ಲಿ ಹಾಬಿ ಮಾಸ್ಟರ್‌ ಅನ್ನು ಹುಟ್ಟುಹಾಕಿದರು. ಮುಂದಿನ ಎರಡು ವರ್ಷ ಕಾರ್ಯಾಗಾರಗಳು, ಪರಿಕಲ್ಪನೆ ಹೆಣೆಯುವಿಕೆ, ಅವುಗಳನ್ನು ಸಾಕಾರಗೊಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿದರು. ಬೇಸಿಗೆ ಶಿಬಿರಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಾಗಾರ ನಡೆಸುವುದು, ಶಾಲೆಗಳಿಗೆ ಹೋಗಿ ಮಕ್ಕಳಿಗೆ ಆಟದ ಮೂಲಕ ವಿಜ್ಞಾನ ಕಲಿಸುವುದು ಮಾಡಿದರು.

ವಯಸ್ಸು, ಮಕ್ಕಳ ಮಾನಸಿಕ ಬೆಳವಣಿಗೆ, ಅವರ ಹಿನ್ನೆಲೆ ಆಧರಿಸಿ ಕಲ್ಪನೆ ಹೆಣೆಯುವುದಕ್ಕೆ ಪ್ರಾರಂಭದಲ್ಲಿ ತುಂಬ ಕಷ್ಟಪಟ್ಟಿದೆ ಹಾಬಿ ಮಾಸ್ಟರ್‌ ತಂಡ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳನ್ನೂ ಮಾಡಿರುವ ತಂಡ  ಸದ್ಯ ತನ್ನದೇ ಆದ ರಿಸರ್ಚ್‌ ಅಂಡ್‌ ಡಿಸೈನಿಂಗ್‌ ಕೇಂದ್ರ, ಮ್ಯಾನುಫ್ಯಾಕ್ಚರಿಂಗ್‌ ಯುನಿಟ್‌ ಅನ್ನು ಕೂಡ ಹೊಂದಿದೆ. ಹಾಬಿ ಮಾಸ್ಟರ್‌ ತಂಡದಲ್ಲಿ ಪೂರ್ಣಕಾಲಿಕ ನೌಕರರಾಗಿ 32 ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಇಲ್ಲಿಯ ವಿಶೇಷ.

ಹಾಬಿ ಮೂಲಕ ವಿಜ್ಞಾನ ಕಲಿಕೆ
ಮಕ್ಕಳನ್ನು 21ನೇ ಶತಮಾನದ ಮಕ್ಕಳನ್ನಾಗಿ ರೂಪಿಸಬೇಕು ಹಾಗೂ ಪಿಯುಸಿ ಮುಗಿಯುತ್ತಿದ್ದಂತೆ ಅವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ಕೌಶಲ ಕರಗತವಾಗಬೇಕು ಎನ್ನುವ ನಿಟ್ಟಿನಲ್ಲಿ ಹಾಬಿ ಮಾಸ್ಟರ್‌ ಕೆಲಸ ಮಾಡುತ್ತಿದೆ.

ಹಾಬಿ ಎಂದರೆ ಹವ್ಯಾಸ. ಮೋಜು ಮಸ್ತಿಯ ಕೆಲಸವದು. ಯಾರಿಗೇ ಆದರೂ ಖುಷಿ ನೀಡುವಂಥದ್ದು. ‘ನಾವು ವಿಜ್ಞಾನ ಹೇಳಿಕೊಡುತ್ತೇವೆ ಎಂದರೆ ಯಾವ ಮಕ್ಕಳೂ ಆಸಕ್ತಿ ತೋರಿಸುವುದಿಲ್ಲ. ಯಾಕೆಂದರೆ ಅದೊಂದು ಕ್ಲಿಷ್ಟ ವಿಷಯ ಎಂಬುದು ಎಲ್ಲರ ಮನಸ್ಸಿನಲ್ಲಿ ಗಟ್ಟಿಯಾಗಿಬಿಟ್ಟಿದೆ. ಹೀಗಾಗಿ ಹಾಬಿ ಹೇಳಿಕೊಡುತ್ತೇವೆ ಎನ್ನುತ್ತೇವೆ. ಮಕ್ಕಳಿಗೆ ಆಟದ ಮೂಲಕ ಪಾಠ ಪ್ರಾರಂಭಿಸಿ ಅವರಿಗೆ ಆಯಾ ವಿಷಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತೇವೆ.

ನಂತರ ನಿಧಾನವಾಗಿ ಅವುಗಳ ಪರಿಕಲ್ಪನೆಯನ್ನು ಹೇಳಿಕೊಡುತ್ತೇವೆ. ಇವೆಲ್ಲವೂ ಪ್ರಾಯೋಗಿಕ ರೀತಿಯಲ್ಲಿ ಕಲಿಯುವ ವಿಧಾನ ಆದ್ದರಿಂದ ಮಕ್ಕಳು ಬಹು ಸಂತೋಷದಿಂದ ಆಡುತ್ತಲೇ ವಿಜ್ಞಾನವನ್ನು ಅರ್ಥೈಸಿಕೊಂಡು ಬಿಡುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ಗುರುಪ್ರಸಾದ್‌.

ಬೆಂಗಳೂರಿನ ಎಚ್‌.ಎಸ್‌.ಆರ್‌. ಬಡಾವಣೆಯಲ್ಲಿ ಮುಖ್ಯ ಕಚೇರಿಯಿದ್ದು ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿದಂತೆ ಸುಮಾರು 50 ಖಾಸಗಿ ಶಾಲೆಗಳಲ್ಲಿ ಈಗಾಗಲೇ ಹಾಬಿ ಮಾಸ್ಟರ್‌ ತರಬೇತಿ ನೀಡಲಾಗುತ್ತಿದೆ. ಆಯಾ ಶಾಲೆಗಳಲ್ಲಿ ಉಚಿತವಾಗಿ ಸೈನ್ಸ್‌ ಅಂಡ್‌ ಟೆಕ್ನಾಲಜಿ ಇನೊವೇಶನ್‌ ಲ್ಯಾಬ್‌ ಅನ್ನು ಅಳವಡಿಸಲಾಗಿದೆ.

ವಾರಕ್ಕೊಂದು ತರಗತಿ ಮಾತ್ರ ನಡೆಸಲಾಗುತ್ತಿದ್ದು, 1–9ನೇ ತರಗತಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ವರ್ಷಕ್ಕೆ ಟ್ಯೂಷನ್‌ ಶುಲ್ಕ ₹3000 ಪಡೆಯಲಾಗುವುದು.

ಸರ್ಕಾರಿ ಶಾಲಾ ಮಕ್ಕಳಿಗೂ ಹಾಬಿ ಮಾಸ್ಟರ್‌ ವತಿಯಿಂದ ವಿಜ್ಞಾನ ಪಾಠ ಹೇಳುವ ಆಸಕ್ತಿ ಅವರಲ್ಲಿದ್ದು, ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ ಎಜುಕೇಶನ್‌ ರಿಸರ್ಚ್‌ ಅಂಡ್‌ ಟೆಕ್ನಾಲಜಿ ಜೊತೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಒಪ್ಪಿದರೆ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನದ ತೇರು ಎಳೆಯುವ ಅಭಿಲಾಷೆ ಅವರದ್ದು.

‘ಶಾಲಾ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಪಾಠ ಸಿಕ್ಕರೆ ಅವರಲ್ಲಿ ಔದ್ಯೋಗಿಕ ಕೌಶಲ ಬೆಳೆಯುತ್ತದೆ. ಈ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ನಮ್ಮ ಬಹುದೊಡ್ಡ ಕನಸು. ಇದೇ ಪ್ರಯತ್ನದಲ್ಲಿ ಹೆಜ್ಜೆ ಇಟ್ಟ ನಾವುಗಳು ಮೊದಮೊದಲು ಮಕ್ಕಳಿಗೆ ಹೇಳಿಕೊಡಲು ಅವಶ್ಯವಾದ ಉತ್ಪನ್ನಗಳನ್ನು ಖರೀದಿಸಿದೆವು. ಕೆಲವಷ್ಟು ಲಭ್ಯವೇ ಇರಲಿಲ್ಲ.

ಇನ್ನು ಕೆಲವಷ್ಟನ್ನು ವಿದೇಶದಿಂದ ತರಿಸಿಕೊಂಡೆವು. ಆದರೂ ಎಲ್ಲವೂ ರೆಡಿಮೇಡ್‌ ಸಿಗುತ್ತಿದ್ದವೇ ಹೊರತು ಬಿಡಿಬಿಡಿಯಾದ, ಮಕ್ಕಳೇ ಜೋಡಿಸಿ ತಿಳಿದುಕೊಳ್ಳುವಂಥ ಮಾಡೆಲ್‌ಗಳು ಲಭ್ಯವಿರಲಿಲ್ಲ. ಏರೊ ಮಾಡೆಲ್‌, ರೋಬೊಟಿಕ್ಸ್‌ ಹಿಟ್ಸ್‌ಗಳು ಸಿಗುವುದು ಕಷ್ಟವಾಗಿತ್ತು. ಹೀಗಾಗಿ ನಮ್ಮದೇ ಸಂಶೋಧನಾ ಕೇಂದ್ರವನ್ನೂ ಪ್ರಾರಂಭಿಸಿ ಅವಶ್ಯವಿರುವ ವಸ್ತುಗಳನ್ನು ನಾವೇ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮಲ್ಲಿ ಕಲಿಯುವ ಮಕ್ಕಳಿಗಾಗಿ ವರ್ಷಕ್ಕೊಮ್ಮೆ ಹಾಬಿ ಫೆಸ್ಟ್‌ ಸ್ಪರ್ಧೆಯನ್ನೂ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ ರಾಜೀವ್‌.

ಇದುವರೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಬಿ ಮಾಸ್ಟರ್‌ ಉಪಯೋಗ ಪಡೆದುಕೊಂಡಿದ್ದು, ಸದ್ಯ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. 1–4ನೇ ತರಗತಿಯ ಮಕ್ಕಳಿಗೆ ಭಾಷಾಭಿವೃದ್ಧಿ, ನಂಬರ್‌ ಹ್ಯಾಂಡೆಲಿಂಗ್‌, ಮ್ಯಾಜಿಕ್‌, ಮೂಲ ವಿಜ್ಞಾನದ ಪಾಠ ಹೇಳಿಕೊಡಲಾಗುತ್ತದೆ. 5–9ನೇ ತರಗತಿಯ ಮಕ್ಕಳಿಗೆ ವಿಜ್ಞಾನ, ಗಣಿತ, ಪರಿಸರ ವಿಜ್ಞಾನ, ಮೆಥಡಾಲಜಿಗಳನ್ನು ಕಲಿಸಲಾಗುತ್ತದೆ.

ಈ ಎಲ್ಲಾ ಹಂತಗಳಲ್ಲಿ ಕಲಿಯುವ ಮಕ್ಕಳು ಮೆಕ್ಯಾನಿಕಲ್‌ ಕೌಶಲ, ಎಲೆಕ್ಟ್ರಿಕ್ಸ್‌, ಸ್ಪೇಸ್‌ ಸೈನ್ಸ್‌, ವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಕೌಶಲಗಳನ್ನು ಸಂಪೂರ್ಣವಾಗಿ ಕರಗತ ಮಾಡಿಕೊಳ್ಳುತ್ತಾರೆ. ಹಾಬಿ ಮಾಸ್ಟರ್‌ನಲ್ಲಿ ಪ್ರತಿಯೊಂದು ವಿಷಯವನ್ನು ಮೂರು ವಿಧದಲ್ಲಿ ಹೇಳಿಕೊಡಲಾಗುವುದು. ಅದಕ್ಕೆ ಗೋಲ್ಡನ್‌ ಟ್ರಯಾಂಗಲ್‌ ಎಂದು ಹೆಸರಿಸಲಾಗಿದೆ. ಕಾನ್ಸೆಪ್ಟ್‌, ಅಪ್ಲಿಕೇಶನ್‌, ಸ್ಕಿಲ್ಸ್‌ ಈ ರೀತಿಯಲ್ಲಿಯೇ ವಿಜ್ಞಾನದ ಥಿಯರಿಗಳನ್ನು ಹೇಳಿಕೊಟ್ಟಾಗ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ.

ಏರ್‌ಪ್ಲೇನ್ಸ್‌, ರೋಬೊಟಿಕ್ಸ್‌, ಕಾರ್‌, ಕ್ರೇನ್‌, ರಾಕೆಟ್‌, ವಿನ್‌ ಟರ್ಬೈನ್ಸ್‌, ಮೂನ್‌ ರೋವರ್‌ ಮುಂತಾದ ಉತ್ಪನ್ನಗಳನ್ನು ಬಳಸಿಯೇ ಹಾಬಿ ಮಾಸ್ಟರ್‌ ಮಕ್ಕಳಿಗೆ ಪಾಠದ ರುಚಿ ಹತ್ತಿಸುತ್ತದೆ. ಭವಿಷ್ಯಕ್ಕೆ ಯಾವುದೇ ರೀತಿಯಲ್ಲೂ ಉಪಯೋಗಕ್ಕೆ ಬಾರದ ಇಂದಿನ ಶಿಕ್ಷಣ ಕ್ರಮದಿಂದ ಹೊರಬಂದು ಪ್ರಾಯೋಗಿಕವಾಗಿ, ಆಧುನಿಕತೆಗೆ ಹೊಂದಿಕೊಂಡು ಮಕ್ಕಳಿಗೆ ವಿಷಯಗಳನ್ನು ಅರ್ಥ ಮಾಡಿಸುವ ಆ ಮೂಲಕ ಔದ್ಯೋಗಿಕ ಕೌಶಲ ಬೆಳೆಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ ಹಾಬಿ ಮಾಸ್ಟರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT