ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಇಂಡಿಯಾ ಲೀಗ್‌ ಕನ್ನಡಿಗರ ಮಿಂಚು..

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಹಾಕಿ ಇಂಡಿಯಾ ಲೀಗ್‌ ಭಾರತದ  ಹಾಕಿ ಕ್ರೀಡೆಯಲ್ಲಿ ಹೊಸ ಸಂಚಲನ ಉಂಟುಮಾಡಿದೆ. ಪ್ರತಿಭಾನ್ವೇಷಣೆಗೆ ವೇದಿಕೆ ಎನಿಸಿರುವ ಈ ಲೀಗ್‌ನಲ್ಲಿ  ದೇಶ  ವಿದೇಶಗಳ ಆಟಗಾರರು ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿದ್ದಾರೆ. ಈ ಲೀಗ್‌ನಲ್ಲಿ ಭಾಗವಹಿಸಿರುವ ವಿವಿಧ ತಂಡಗಳ ಯಶಸ್ಸಿನಲ್ಲಿ ಕರ್ನಾಟಕದ ಆಟಗಾರರ ಪಾಲೂ ಇದೆ.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ವಿ.ಆರ್‌. ರಘುನಾಥ್‌, ಎಸ್‌. ವಿ. ಸುನಿಲ್‌  ತಮ್ಮ ಸೊಬಗಿನ ಆಟದ ಮೂಲಕ ಈಗಾಗಲೇ ಹಾಕಿ ಪ್ರಿಯರನ್ನು ಮನದಣಿಯೇ ರಂಜಿಸಿದ್ದಾರೆ. ವಿಶ್ವ ಹಾಕಿ ಲೀಗ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟ ಹಾಗೂ ಏಷ್ಯಾಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಪದಕ ಗೆಲ್ಲುವಲ್ಲಿ ರಘುನಾಥ್‌ ಪಾತ್ರ ಬಹುಮುಖ್ಯವಾಗಿತ್ತು.

ಡ್ರ್ಯಾಗ್‌ಫ್ಲಿಕ್‌ ಪರಿಣತ ಎಂದೇ ಗುರುತಿಸಿಕೊಂಡಿರುವ ರಘುನಾಥ್‌ ಈ ಲೀಗ್‌ನಲ್ಲಿ ಉತ್ತರ ಪ್ರದೇಶ ವಿಜರ್ಡ್ಸ್‌ ತಂಡದ ಶಕ್ತಿ ಎನಿಸಿದ್ದಾರೆ. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ತಂಡದ ಆವರಣದೊಳಗೆ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವುದರಲ್ಲಿ ರಘುನಾಥ್‌ಗೆ ಯಾರೂ ಸಾಟಿಯಾಗಲಾರರು.
2013 ಮತ್ತು 2014ನೇ ಆವೃತ್ತಿಗಳಲ್ಲಿ ರಘುನಾಥ್‌ ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದ್ದರು. ಪಂಜಾಬ್‌  ವಾರಿಯರ್ಸ್‌ ಮತ್ತು ಮುಂಬೈ ಮ್ಯಾಜಿಷಿಯನ್ಸ್‌ ತಂಡಗಳ ವಿರುದ್ಧ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಜತೆಗೆ 2013ರ ಲೀಗ್‌ನಲ್ಲಿ ರಘುನಾಥ್‌ ಅತಿಹೆಚ್ಚು ಗೋಲು ಗಳಿಸಿದ ಮೂರನೇ ಆಟಗಾರ ಎಂಬ ಶ್ರೇಯವನ್ನೂ ಹೊಂದಿದ್ದರು.  ವಿಜರ್ಡ್ಸ್‌ ತಂಡ ಕೊಡಗಿನ ಆಟಗಾರನನ್ನು ಈ ಬಾರಿಯೂ ತನ್ನಲ್ಲೇ  ಉಳಿಸಿಕೊಂಡಿರುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

ಸುನಿಲ್‌ ಸಾಧನೆಯೂ ಕಡಿಮೆಯಿಲ್ಲ. ಮುಂಚೂಣಿ ವಿಭಾಗದಲ್ಲಿ ಭಾರತದ ಬಲ ಎನಿಸಿರುವ ಅವರು ಪಂಜಾಬ್‌ ವಾರಿಯರ್ಸ್‌ ಪಾಳಯದ ಆಪದ್ಭಾಂದವ ರಾಗಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಲೆಲ್ಲಾ ಸುನಿಲ್‌ ಗೋಲು ಗಳಿಸಿ ನೆರವಾಗಿ ದ್ದಾರೆ. ಹಿಂದಿನ ಮೂರು ಆವೃತ್ತಿಗಳಲ್ಲಿ ಪಂಜಾಬ್‌ ತಂಡದ ಭಾಗವಾಗಿದ್ದ  ಸುನಿಲ್‌ ನಾಲ್ಕನೇ ಆವೃತ್ತಿಯಲ್ಲೂ ಈ ತಂಡದಲ್ಲಿ ಮುಂದುವರಿದಿದ್ದಾರೆ.  ಈ ತಂಡದ ಪರ ಸೋಮವಾರಪೇಟೆಯ ಈ ಆಟಗಾರ 16 ಪಂದ್ಯಗಳನ್ನಾಡಿದ್ದು ನಾಲ್ಕು ಅಮೂಲ್ಯ ಗೋಲುಗಳನ್ನು ದಾಖಲಿಸಿದ್ದಾರೆ.

ಲೀಗ್‌ನಲ್ಲಿ ಮಿಂಚುತ್ತಿರುವ ರಾಜ್ಯದ ಮತ್ತೊಬ್ಬ ಪ್ರತಿಭೆ ಎಸ್‌.ಕೆ. ಉತ್ತಪ್ಪ . ರಾಷ್ಟ್ರೀಯ  ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳುವ ಹಾದಿಯಲ್ಲಿರುವ ಉತ್ತಪ್ಪ ಈ ಟೂರ್ನಿಯ  ಮೂಲಕ ಆಯ್ಕೆ ಸಮಿತಿಯ ಗಮನ  ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಹಿಂದಿನ ಮೂರು ಆವೃತ್ತಿಗಳಲ್ಲಿ ಉತ್ತರ ಪ್ರದೇಶ ವಿಜರ್ಡ್ಸ್‌ ತಂಡದಲ್ಲಿ ಆಡಿದ್ದ ಉತ್ತಪ್ಪ ಈ ಬಾರಿ ಕಳಿಂಗ ಲ್ಯಾನ್ಸರ್‌ ತಂಡದ ಭಾಗವಾಗಿದ್ದಾರೆ. ಚುರುಕಿನ ಆಟದ ಮೂಲಕ ಈ ಹಿಂದೆ ಹಲವು ಬಾರಿ ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದ್ದಾರೆ. ಎದುರಾಳಿ ಆಟಗಾರರನ್ನು ವಂಚಿಸಿ ಚೆಂಡನ್ನು ಹೆಚ್ಚು ಹೊತ್ತು ತಮ್ಮ ಬಳಿ ಇಟ್ಟುಕೊಂಡು ಸಾಗುವ ಗುಣ ಉತ್ತಪ್ಪ ಅವರಲ್ಲಿದೆ. ಲೀಗ್‌ನ ಪಂದ್ಯಗಳನ್ನು ನೋಡಿದವರಿಗೆ ಅವರ ಸಾಮರ್ಥ್ಯ ಎಂತಹದ್ದು ಎಂಬುದರ ಅರಿವಾಗುತ್ತದೆ.

ಡಿವಿಷನ್‌ ಮಟ್ಟದ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿರುವ ಅಮಿತ್‌ ಗೌಡ, ನಿತಿನ್‌ ತಿಮ್ಮಯ್ಯ, ಎಂ.ಬಿ ಅಯ್ಯಪ್ಪ, ಪಿ.ಆರ್‌. ಅಯ್ಯಪ್ಪ  ಅವರ ಸಾಮರ್ಥ್ಯವೂ ಮೆಚ್ಚುವಂತಹದ್ದು.

ದೆಹಲಿ ವೇವ್‌ ರೈಡರ್ಸ್‌ ತಂಡದಲ್ಲಿ  ಆಡುತ್ತಿರುವ ಅಮಿತ್‌ ಅವರು ರಕ್ಷಣಾ ವಿಭಾಗದಲ್ಲಿ ಈ ತಂಡದ ಶಕ್ತಿಯನ್ನು ಹೆಚ್ಚಿಸಿದ್ದಾರೆ. ನಿತಿನ್‌ ಮತ್ತು ಎಂ.ಬಿ ಅಯ್ಯಪ್ಪ  ಅವರು ಪಂಜಾಬ್‌ ಪರ ಆಡುತ್ತಿದ್ದರೆ , ಪಿ.ಆರ್‌. ಅಯ್ಯಪ್ಪ ಅವರು ಉತ್ತರ ಪ್ರದೇಶ ವಿಜರ್ಡ್ಸ್‌ ತಂಡದ ಆಧಾರ ಸ್ತಂಭ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT