ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಭವಿಷ್ಯ ಉಜ್ವಲ

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೂರು ವಾರಗಳ ಅವಧಿಯಲ್ಲಿ ಎರಡು ಚಿನ್ನದ ಪದಕ. ಭಾರತದ ಹಾಕಿ ಪ್ರಿಯರು ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಿರಲಿಕ್ಕಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಾಕಿ ಕ್ರೀಡೆಯಲ್ಲಿ ದೇಶಕ್ಕೆ ಯಶಸ್ಸು ಲಭಿಸಿದ್ದು ತೀರಾ ಕಡಿಮೆ. ಇದೀಗ ಮೇಲಿಂದ ಮೇಲೆ ಪ್ರಶಸ್ತಿ ದೊರೆತಿವೆ. ಸುಲ್ತಾನ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಭಾರತದ ಯುವ ಆಟಗಾರರು ನೀಡಿದ ಪ್ರದರ್ಶನ ಅಮೋಘವಾದುದು.

ಹಾಕಿ ಆಟದ ಮೇಲಿನ ಆಸಕ್ತಿ ಕಳೆದುಕೊಂಡಿದ್ದವರು ಮತ್ತೆ ಈ ಕ್ರೀಡೆಯನ್ನು ಕುತೂಹಲದಿಂದ ಗಮನಿಸತೊಡಗಿದ್ದಾರೆ. ಅಂತರರಾಷ್ಟ್ರೀಯ ಕೂಟದಲ್ಲಿ ಭಾರತ ಮೂರು ವಾರಗಳ ಅವಧಿಯಲ್ಲಿ ಎರಡು ಚಿನ್ನದ ಪದಕ ಗೆದ್ದಿರುವುದು ಈ ಬದಲಾವಣೆಗೆ ಕಾರಣ. ರಾಷ್ಟ್ರೀಯ ಕ್ರೀಡೆಯಲ್ಲಿ ಹೊಸ ಗಾಳಿ ಬೀಸತೊಡಗಿದೆ. ಉಜ್ವಲ ಭವಿಷ್ಯದ ಸೂಚನೆ ದೊರೆತಿದೆ.

ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಸ್ವರ್ಣ ಸಾಧನೆ ಮಾಡಿತ್ತು. ಈ ಯಶಸ್ಸಿನ ಸಂಭ್ರಮದಲ್ಲಿದ್ದಾಗಲೇ ಭಾರತದ ಜೂನಿಯರ್‌ ಆಟಗಾರರು ಮತ್ತೊಂದು ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಮಲೇಷ್ಯಾದಲ್ಲಿ ನಡೆದ ಸುಲ್ತಾನ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಭಾರತದ 21 ವರ್ಷ ವಯಸ್ಸಿನೊಳಗಿನವರ ತಂಡ ಅದ್ಭುತ ಪ್ರದರ್ಶನ ತೋರಿ ಚಿನ್ನ ಜಯಿಸಿದೆ. ದೇಶದಲ್ಲಿ ಹಾಕಿ ಕ್ರೀಡೆ ಯಶಸ್ಸಿನ ಹಾದಿಯಲ್ಲಿ ಮುಂದಡಿ ಇಡುತ್ತಿದೆ ಎಂಬುದನ್ನು  ಯುವ ಆಟಗಾರರ ಈ ಸಾಧನೆ ತೋರಿಸಿಕೊಟ್ಟಿದೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಪಾಕಿಸ್ತಾನ ಮತ್ತು ಕೊರಿಯ  ತಂಡಗಳನ್ನು ಹೊರತುಪಡಿಸಿದರೆ ಪ್ರಬಲ ಎದುರಾಳಿಗಳು ಇರಲಿಲ್ಲ. ಆದರೆ ಜೂನಿಯರ್‌ ಆಟಗಾರರು ಬಲಿಷ್ಠ ತಂಡಗಳನ್ನು ಮಣಿಸಿ ಚಾಂಪಿಯನ್‌ ಆಗಿದ್ದಾರೆ. ಈ ಕಾರಣ ಕಿರಿಯ ಆಟಗಾರರ ಸಾಧನೆಯ ಮಹತ್ವ ಹೆಚ್ಚಿದೆ. ದೇಶದಲ್ಲಿ ಯುವ ಪ್ರತಿಭೆಗಳು ಬೆಳೆದುಬರುತ್ತಿದ್ದಾರೆ ಎಂಬುದನ್ನು ಈ ಗೆಲುವಿನಿಂದ ತಿಳಿಯಬಹುದು.

ಸೀನಿಯರ್‌ ತಂಡದವರಿಗೆ ಆಸ್ಟ್ರೇಲಿಯ ಎಂದರೆ ಕಬ್ಬಿಣದ ಕಡಲೆ. ಕಾಂಗರೂ ನಾಡಿನ ತಂಡದ ವಿರುದ್ಧ ಗೆಲುವು ಪಡೆಯದೆ ತುಂಬಾ ದಿನಗಳು ಕಳೆದು ಹೋಗಿವೆ. ಆದರೆ ಜೂನಿಯರ್‌ ತಂಡದವರು ಆಸ್ಟ್ರೇಲಿಯವನ್ನು 6–2 ಗೋಲುಗಳಿಂದ ಬಗ್ಗುಬಡಿದಿದ್ದರು.
ಇನ್ನೊಂದು ಬಲಿಷ್ಠ ತಂಡ ಎನಿಸಿದ್ದ ಬ್ರಿಟನ್‌ಅನ್ನು ಫೈನಲ್‌ನಲ್ಲಿ 2–1 ರಲ್ಲಿ ಸೋಲಿಸಿತ್ತು. ಇದೇ ತಂಡದ ವಿರುದ್ಧ ಭಾರತಕ್ಕೆ ಲೀಗ್‌ ಹಂತದಲ್ಲಿ ನಿರಾಸೆ ಎದುರಾಗಿತ್ತು. ಆದರೆ ಫೈನಲ್‌ನಲ್ಲಿ ಗೆದ್ದು ಮುಯ್ಯಿ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಸಂಘಟಿತ ಹೋರಾಟದ ಜತೆಗೆ ಕೆಲವು ಆಟಗಾರರು ತೋರಿದ ವೈಯಕ್ತಿಕ ಪ್ರದರ್ಶನವೂ  ಭಾರತದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ನಾಯಕ ಹರ್‌ಜೀತ್‌ ಸಿಂಗ್‌ ‘ಟೂರ್ನಿಯ ಅತ್ಯಂತ ಭರವಸೆಯ ಆಟಗಾರ’ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ಗೆ ಎರಡು ಗೌರವಗಳು ಒಲಿದಿದ್ದವು. ‘ಟೂರ್ನಿಯಲ್ಲಿ ಗರಿಷ್ಠ ಗೋಲು ಗಳಿಸಿದ ಆಟಗಾರ’ ಮತ್ತು ‘ಟೂರ್ನಿಯ ಶ್ರೇಷ್ಠ ಆಟಗಾರ’ ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಈ ಇಬ್ಬರು ಯುವ ಆಟಗಾರರು ಸದ್ಯದಲ್ಲೇ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.

ಇಂದು ಹಾಕಿ ಆಟದಲ್ಲಿ ಯಶಸ್ಸು ಸಾಧಿಸಲು ಬೇಕಾಗಿರುವುದು ವೇಗ, ಚಾಕಚಕ್ಯತೆ ಮತ್ತು ತಾಂತ್ರಿಕ ನೈಪುಣ್ಯತೆ. ಭಾರತದ ಕಿರಿಯ ಆಟಗಾರರು ಇವೆಲ್ಲವನ್ನೂ ಮೈಗೂಡಿಸಿಕೊಂಡು ಆಡಿದ್ದರಿಂದ ಯಶಸ್ಸು ಲಭಿಸಿದೆ. ಪೂರ್ಣ 70 ನಿಮಿಷಗಳ ಕಾಲ ಒಂದೇ ವೇಗವನ್ನು ಕಾಯ್ದುಕೊಳ್ಳಲು ಆಟಗಾರರಿಗೆ ಸಾಧ್ಯವಾಗಿತ್ತು. ಡ್ರಿಬ್ಲಿಂಗ್‌ನಲ್ಲೂ ಎಲ್ಲರೂ ಪಳಗಿದ್ದರು. ಚೆಂಡನ್ನು ತುಂಬಾ ಹೊತ್ತು ತಮ್ಮ ಬಳಿ ಇಟ್ಟುಕೊಳ್ಳದೆ ನಿಖರ ಪಾಸ್‌ಗಳನ್ನು ನೀಡುವ ತಂತ್ರವನ್ನು ಅನುಸರಿಸಿದ್ದರು. ಇದರಿಂದ ಆಟದ ವೇಗ ತಗ್ಗಲಿಲ್ಲ.

ಫೈನಲ್‌ನಲ್ಲಿ ಬ್ರಿಟನ್‌ ವಿರುದ್ಧ ಹರ್ಮನ್‌ಪ್ರೀತ್‌ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಎರಡು ಸೊಗಸಾದ ಗೋಲುಗಳನ್ನು ಗಳಿಸಿದ್ದರು. ಈ ಯುವ ಆಟಗಾರನ ಸಾಮರ್ಥ್ಯ ಏನೆಂಬುದಕ್ಕೆ ಆ ಎರಡು ಗೋಲುಗಳು ಉತ್ತಮ ಉದಾಹರಣೆ. ಫೈನಲ್‌ ಪಂದ್ಯದ ಕೊನೆಯ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಅವರು ಗೋಲಾಗಿ ಪರಿವರ್ತಿಸಿದ್ದರು. ಹರ್ಮನ್‌ಪ್ರೀತ್‌ ಟೂರ್ನಿಯಲ್ಲಿ ಒಟ್ಟು 9 ಗೋಲುಗಳನ್ನು ಗಳಿಸಿದ್ದರು. ಮಲೇಷ್ಯಾ ಮತ್ತು ಆಸ್ಟ್ರೇಲಿಯ ವಿರುದ್ಧ ಹ್ಯಾಟ್ರಿಕ್‌ ಸಾಧನೆ ತೋರಿದ್ದರು.

ಕೋಚ್‌ ಹರೇಂದ್ರ ಸಿಂಗ್‌ ಅವರ ಕೊಡುಗೆಯೂ ತಂಡದ ಯಶಸ್ಸಿನ ಹಿಂದೆ ಅಡಗಿದೆ. ಅಲ್ಪ ಅವಧಿಯಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಅವರಿಗೆ ಸಾಧ್ಯವಾಗಿದೆ. ‘ಹರೇಂದ್ರ ಸಿಂಗ್‌ ಮತ್ತು ಸಹಾಯಕ ಸಿಬ್ಬಂದಿ ಈ ತಂಡವನ್ನು ಕಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ನೆರವಿನಿಂದ ನಮಗೆ ಗೆಲುವು ಲಭಿಸಿದೆ’ ಎಂದು ಹರ್ಮನ್‌ಪ್ರೀತ್‌ ಪ್ರತಿಕ್ರಿಯಿಸಿದ್ದಾರೆ.

ಈ ಸಂಭ್ರಮದ ನಡುವೆ ಭಾರತದ ಹಾಕಿ ವಲಯಕ್ಕೆ ಒಂದು ಆಘಾತವೂ ಕಾದಿತ್ತು. ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ಟೆರ್ರಿ ವಾಲ್ಶ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಾಗ ಎಲ್ಲರಿಗೂ ಅಚ್ಚರಿ ಉಂಟಾಗಿತ್ತು. ಆದರೆ ಮರುದಿನವೇ ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಾಗ ಎಲ್ಲರೂ ನಿಟ್ಟುಸಿರುಬಿಟ್ಟಿದ್ದರು.

ಏನೇ ಆಗಲಿ, ಇಂಚೆನ್‌ ಮತ್ತು ಜೋಹರ್‌ ಬಾಹ್ರುವಿನಲ್ಲಿ ಲಭಿಸಿದ ಯಶಸ್ಸು ಭಾರತದ ಹಾಕಿ ಕ್ರೀಡೆಯ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ. ಇಲ್ಲಿ ಪ್ರತಿಭೆಗಳು ಇದ್ದಾರೆ. ಆದರೆ ಅವರನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ನಡೆಯಬೇಕು.

2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ಗೆ ಅತ್ಯುತ್ತಮ ತಂಡವನ್ನು ಕಟ್ಟಬೇಕಿರುವುದು ಭಾರತದ ಮುಂದಿನ ಗುರಿ. ಭಾರತ ಹಾಕಿ ತಂಡ ನವೆಂಬರ್‌ನಲ್ಲಿ ಆಸ್ಟ್ರೇಲಿಯಕ್ಕೆ ತೆರಳಿ ಕೆಲವು ಪಂದ್ಯಗಳನ್ನು ಆಡಲಿದೆ. ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ನಡೆಯಲಿವೆ.

ಈ ಟೂರ್ನಿಗಳನ್ನು ಒಲಿಂಪಿಕ್ಸ್‌ಗೆ ಸಿದ್ಧತೆಯಾಗಿ ಪರಿಗಣಿಸಬೇಕು. ಮಾತ್ರವಲ್ಲ, ಜೂನಿಯರ್‌ ತಂಡದ ಕೆಲವು ಆಟಗಾರರಿಗೆ ಈ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಿದರೆ ಒಳ್ಳೆಯದು. ಯುವ ಆಟಗಾರರು ಒಲಿಂಪಿಕ್ಸ್‌ಗೂ ಮುನ್ನ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿ ಅನುಭವ ಹೆಚ್ಚಿಸಿಕೊಳ್ಳುವುದು ಅಗತ್ಯ.  ಹಾಗಾದಲ್ಲಿ ಭಾರತ ತಂಡ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಯೂರೋಪಿನ ಪ್ರಬಲ ತಂಡಗಳು ಒಡ್ಡುವ ಸವಾಲನ್ನು ಮೆಟ್ಟಿನಿಲ್ಲುವುದನ್ನು ನಮಗೆ ನೋಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT