ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯಗಾರಗೆ `ಶೇಣಿ ಪ್ರಶಸ್ತಿ'

Last Updated 26 ಜೂನ್ 2013, 9:02 IST
ಅಕ್ಷರ ಗಾತ್ರ

ಶಿರಸಿ: ಯಕ್ಷಗಾನದ ದಿಗ್ಗಜ ಶೇಣಿ ಗೋಪಾಲಕೃಷ್ಣ ಭಟ್ಟರ ನೆನಪಿನಲ್ಲಿ ನೀಡುವ `ಶೇಣಿ ಪ್ರಶಸ್ತಿ' ಈ ಬಾರಿ ಹಿರಿಯ ಯಕ್ಷ ಕಲಾವಿದ ಹೊನ್ನಾವರ ತಾಲ್ಲೂಕಿನ ಕರ್ಕಿಯ ನಾರಾಯಣ ಹಾಸ್ಯಗಾರ ಅವರಿಗೆ ದೊರೆತಿದೆ.

ಸುರತ್ಕಲ್‌ನ ಶೇಣಿ ಗೋಪಾಲಕೃಷ್ಣ ಭಟ್ಟ ವಿಶ್ವಸ್ತ ಮಂಡಳಿ, ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಜುಲೈ 20 ಹಾಗೂ 21ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 20,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮಂಡಳಿಯ ಸಹ ಕೋಶಾಧಿಕಾರಿ ವಾಸುದೇವ ರಂಗಭಟ್ಟ ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.

`ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿದ ಕರ್ಕಿ ಹಾಸ್ಯಗಾರ ಮನೆತನದ ಪ್ರತಿನಿಧಿಯಾಗಿರುವ ನಾರಾಯಣ ಪರಮಯ್ಯ ಹಾಸ್ಯಗಾರ ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾಸೇವೆ ನೀಡಿದ ಸಾಧಕರು. ಆಂಗಿಕ ಅಭಿನಯ, ನಿಧಾನಗತಿಯ ಹೆಜ್ಜೆಗಾರಿಕೆ, ಎಲ್ಲ ಬಗೆಯ ಪರಿಪಕ್ವ ಕುಣಿತಗಳಲ್ಲಿ ಪ್ರಭುತ್ವ ಹೊಂದಿರುವ ಹಾಸ್ಯಗಾರ 82ರ ಇಳಿವಯಸ್ಸಿನಲ್ಲೂ ಕುಣಿಯುವ ಉತ್ಸಾಹ ಉಳಿಸಿಕೊಂಡಿದ್ದಾರೆ.

ಶೇಣಿ ಒಡನಾಟದಲ್ಲಿದ್ದ ಯಕ್ಷ ಸಾಧಕರನ್ನು ಗುರುತಿಸಿ ಶೇಣಿ ವಿಶ್ವಸ್ತ ಮಂಡಳಿ 12 ವರ್ಷಗಳಿಂದ ಪ್ರಶಸ್ತಿ ನೀಡುತ್ತ ಬಂದಿದ್ದು, ಬಲಿಪ ನಾರಾಯಣ ಭಾಗವತ, ಕಡತೋಕಾ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಬಾಬು ಕುರ್ತಡ್ಕ ಸೇರಿದಂತೆ ಅನೇಕರಿಗೆ ಪ್ರಶಸ್ತಿ ನೀಡಲಾಗಿದೆ. ದಕ್ಷಿಣ ಕೇಂದ್ರಿತವಾಗಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಇತ್ತೀಚಿನ ವರ್ಷಗಳಲ್ಲಿ ಶೇಣಿ ಅಭಿಮಾನಿಗಳಿರುವ ಊರಿನಲ್ಲಿ ಆಯೋಜಿಸಲಾಗುತ್ತಿದೆ. ಶಿರಸಿಯಲ್ಲಿ ಯಕ್ಷ ಸಂಭ್ರಮ ಹಾಗೂ ಇತರ ಸಂಘ-ಸಂಸ್ಥೆ ಸಹಕಾರ ದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿದೆ' ಎಂದರು.  

ಉದ್ಘಾಟನೆ: ಜುಲೈ 20ರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಯಲ್ಲಾಪುರ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಉದ್ಘಾಟಿಸುವರು. ನಂತರ `ಪಾದುಕಾ ಪ್ರದಾನ', `ವಿಭೀಷಣ ಪ್ರಪತ್ತಿ' ತಾಳಮದ್ದಲೆ ನಡೆಯಲಿದೆ. ಮುಮ್ಮೇಳದಲ್ಲಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ.ಪ್ರಭಾಕರ ಜೋಶಿ, ಕೆ.ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಹಿರಣ್ಯ ವೆಂಕಟೇಶ್ವರ ಭಟ್ಟ, ಎಂ.ವಿ.ಹೆಗಡೆ ಅಮಚಿಮನೆ, ಬೆಳ್ಳಾರೆ ರಾಮ ಜೋಯಿಸ, ಸೀತಾರಾಮ ಚಂದು, ಸಂಕದಗುಂಡಿ ಗಣಪತಿ ಭಟ್ಟ, ಪಶುಪತಿ ಶಾಸ್ತ್ರಿ, ಪಿ.ವಿ.ರಾವ್, ಹಿಮ್ಮೇಳದಲ್ಲಿ ನೆಬ್ಬೂರು ನಾರಾಯಣ ಭಾಗವತ, ಸತೀಶ ಶೆಟ್ಟಿ ಪಟ್ಲ, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಮನಾಭ ಉಪಾಧ್ಯಾಯ, ಇಡಗುಂಜಿ ಕೃಷ್ಣಯಾಜಿ, ಎ.ಪಿ.ಪಾಠಕ ಭಾಗವಹಿಸುವರು.

ಜುಲೈ 21ರ ಬೆಳಿಗ್ಗೆ 10ಗಂಟೆಗೆ ನಡೆಯುವ `ಶೇಣಿ' ವಿಚಾರಗೋಷ್ಠಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತ, ಪ್ರೊ. ಎಂ.ಎ.ಹೆಗಡೆ, ಪ್ರೊ. ವಿಜಯನಳಿನಿ ರಮೇಶ, ಜಿ.ಎಲ್.ಹೆಗಡೆ ಕುಮಟಾ ಪಾಲ್ಗೊಳ್ಳುವರು.

ಅಂದು ಮಧ್ಯಾಹ್ನ 1 ಗಂಟೆಗೆ `ಶ್ರೀ ಕೃಷ್ಣ ಪರಂಧಾಮ' ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್ಟ, ವಿದ್ವಾನ್ ಗಣಪತಿ ಭಟ್ಟ, ಪದ್ಯಾಣ ಶಂಕರನಾರಾಯಣ ಭಟ್ಟ, ಪದ್ಮನಾಭ ಉಪಾಧ್ಯಾಯ, ಇಡಗುಂಜಿ ಕೃಷ್ಣಯಾಜಿ, ಎ.ಪಿ.ಪಾಠಕ, ಮುಮ್ಮೇಳದಲ್ಲಿ ಬರೆ ಕೇಶವ ಭಟ್ಟ, ಸರ್ಪಂಗಳ ಈಶ್ವರ ಭಟ್ಟ, ವಿಟ್ಲ ಶಂಭು ಶರ್ಮ, ಉಮಾಕಾಂತ ಭಟ್ಟ, ಎಂ.ಎಲ್.ಸಾಮಗ ಹರಿನಾರಾಯಣ ಅಸ್ರಣ್ಣ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಉಜಿರೆ ಅಶೋಕ ಭಟ್ಟ, ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ರಮಣ ಆಚಾರ್, ವಾಸುದೇವ ರಂಗಭಟ್ಟ, ವಾದಿರಾಜ ಕಲ್ಲೂರಾಯ ಭಾಗವಹಿಸುವರು.

ಪ್ರಶಸ್ತಿ ಪ್ರದಾನ: ಸಂಜೆ 5ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ, ಗಡಿಗೆಹೊಳೆ ಸುಬ್ರಾಯ ಭಟ್ಟ, ರಾಮಚಂದ್ರ ಶ್ಯಾನುಭೋಗ, ಹರಿಕೃಷ್ಣ ಪುನರೂರು, ಪಂಜ ಭಾಸ್ಕರ ಭಟ್ಟ ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT