ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗರು ಪೆದ್ದು ಎಂದೇಕೆ ಬೀಳುಗಳೆವಿರಿ...

Last Updated 13 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಅಲಂಕಾರ ಮಾಡಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ?’
ನಲವತ್ತೈದು ನಿಮಿಷ. ಒಂದು ಗಂಟೆ, ಕನಿಷ್ಠ ಒಂದು ಗಂಟೆ– ನಿರೂಪಕಿಯ ಪ್ರಶ್ನೆಗೆ ಎದುರಿಗೆ ನಿಂತ ಹುಡುಗಿಯರ ಉತ್ತರಗಳಿವು. ಟೀವಿ ಕಾರ್ಯಕ್ರಮವೊಂದರಲ್ಲಿನ ಈ ಪ್ರಶ್ನೋತ್ತರವನ್ನು ಕೇಳಿದ ನನಗೆ, ಒಂದು ಕ್ಷಣ ಸಮಸ್ತ ಸ್ತ್ರೀಕುಲದ ಮೇಲೆ ಅಪಾರವಾದ ಮರುಕ ಹುಟ್ಟಿತು. ಈ ಮರುಕಕ್ಕೆ ಮತ್ತೊಂದು ಆಯಾಮವೂ ಇತ್ತು. ಅದು, ಆಗಷ್ಟೇ ಓದಿ ಮುಗಿಸಿದ್ದ ‘ಹುಡುಗರೇಕೆ ಇಷ್ಟೊಂದು ಪೆದ್ದು?’ ಎನ್ನುವ ‘ಕಾಮನಬಿಲ್ಲು’ ಪುರವಣಿಯ ಲೇಖನ. ಆ ಬರಹದಲ್ಲಿನ ಲೇಖಕಿಯರಿಬ್ಬರ ಅದ್ಭುತ ಸಂಶೋಧನೆಯನ್ನು ನೋಡಿ ನಗು ಖಾಲಿ ಮಾಡಿಕೊಂಡಿದ್ದ ನನಗೆ, ಅಲಂಕಾರಕ್ಕಾಗಿ ಗಂಟೆಗಟ್ಟಲೆ ಸಮಯ ಖರ್ಚು ಮಾಡುವ ಹೆಣ್ಣುಮಕ್ಕಳ ಕುರಿತು ಹುಟ್ಟಿದ್ದು ಮರುಕವಷ್ಟೇ.

ಕುತೂಹಲಕ್ಕೆ ಅಲಂಕಾರದ ಸಮಯವನ್ನು ಲೆಕ್ಕಹಾಕಿದೆ. ದಿನಕ್ಕೆ ಒಂದು ಗಂಟೆ ಲೆಕ್ಕಕ್ಕೆ ಹಿಡಿದರೆ (ವಾಸ್ತವದಲ್ಲಿ ಈ ಸಮಯ ಇನ್ನೂ ಹೆಚ್ಚು. ಏಕೆಂದರೆ ಅಲಂಕಾರ ಒಂದು ಹೊತ್ತಿಗೆ ಮುಗಿಯುವ ಬಾಬತ್ತಲ್ಲ. ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯೂಟದ ರೂಢಿಯಂತೆ ಮೇಕಪ್‌ ಕೂಡ ಹಲವು ಸಮಯಗಳಲ್ಲಿ ನಡೆಯುತ್ತದೆ) ತಿಂಗಳಿಗೆ ಮೂವತ್ತು ಗಂಟೆಗಳು. ಅಂದರೆ, ವರ್ಷದಲ್ಲಿ ಕನಿಷ್ಠ ಅರ್ಧ ತಿಂಗಳಷ್ಟು ಸಮಯವನ್ನು ಹೆಣ್ಣುಮಕ್ಕಳು ಮೇಕಪ್‌ಗೆ ಖರ್ಚು ಮಾಡುತ್ತಾರೆ. ವರ್ಷದಲ್ಲಿ ಹದಿನೈದು ದಿನಗಳ ಕಾಲವನ್ನು ಮೇಕಪ್‌ಗೆ ಮೀಸಲಿಡುವುದೆಂದರೆ... ಅದನ್ನು ರಾಷ್ಟ್ರೀಯ ದುರಂತ ಎನ್ನುವುದೋ, ಮಾನವ ಶ್ರಮದ ಅಪವ್ಯಯ ಎನ್ನುವುದೋ ಅಥವಾ ಮೂರ್ಖತನದ ಪರಮಾವಧಿ ಎಂದು ಬಣ್ಣಿಸುವುದೋ...

ಇಂಥ ಲೆಕ್ಕಗಳು ಪರಿಪೂರ್ಣವಲ್ಲ ಎನ್ನುವುದನ್ನು ನಾನು ಬಲ್ಲೆ. ‘ಹುಡುಗರೇಕೆ ಇಷ್ಟೊಂದು ಪೆದ್ದು?’ ಎನ್ನುವ ಸರಳೀಕರಣದಷ್ಟೇ ಮಹಿಳೆಯರ ಅಲಂಕಾರಪ್ರೀತಿ ಕುರಿತ ಮಾತುಗಳೂ ಸೀಮಿತ ಚೌಕಟ್ಟಿನವು. ಕೂದಲನ್ನು ಒಪ್ಪಮಾಡಿಕೊಳ್ಳಲಿಕ್ಕೂ ಪುರುಸೊತ್ತಿಲ್ಲದೆ ದುಡಿಯುವ ಸಾವಿರ ಸಾವಿರ ಮಹಿಳೆಯರು ನಮ್ಮ ಸುತ್ತಮುತ್ತಲೇ ಇದ್ದಾರೆ. ಆಂತರಿಕ ಸೌಂದರ್ಯಪ್ರಭೆಯಿಂದಲೇ ಪುರುಷರನ್ನು ಚಿತ್ತಾಗಿಸುವ ಹೆಣ್ಮಣಿಗಳೂ ಇದ್ದಾರೆ. ಇಂಥ ಅಪವಾದಗಳನ್ನು ನೆನಪಿನಲ್ಲಿ ಇಟ್ಟುಕೊಂಡರೂ ಮಹಿಳೆಯರ ಅಲಂಕಾರಪ್ರಿಯತೆಯನ್ನು ಒಂದು ಸೃಜನಶೀಲ ಪ್ರಕ್ರಿಯೆ ಎಂದು ಒಪ್ಪಿಕೊಳ್ಳುವುದು ಕಷ್ಟ.

ನೇರ ವಿಷಯಕ್ಕೆ ಬರೋಣ. ‘ಹುಡುಗರೇಕೆ ಇಷ್ಟೊಂದು ಪೆದ್ದು?’ ಎನ್ನುವ ಉದ್ಗಾರದ ಹಿಂದೆ ಇರುವುದಾದರೂ ಏನು? ‘ಹೆಣ್ಣೆಂದರೆ ಹೂವು;

ಗಂಡುಗಳು ಹೂವಿನ ಸುತ್ತ ಮಂಕು ಭೃಂಗಗಳು’ ಎನ್ನುವುದು ಈ ಸಂಶೋಧನೆಯ ಸಾರವಷ್ಟೇ. ಈ ಹೋಲಿಕೆಯನ್ನು– ದೀಪ ಹಾಗೂ ಅದರ ಸುತ್ತಣ ಮಿಂಚುಹುಳುಗಳ ರೂಪದಲ್ಲೂ ಕಾಣಬಹುದು. ದೀಪವನ್ನು ಚುಂಬಿಸಲು ಹಂಬಲಿಸುವ ಹುಳುಗಳು ರೆಕ್ಕೆಸುಟ್ಟುಕೊಳ್ಳುತ್ತವೆ. ಹುಡುಗರೂ ಅಷ್ಟೇ: ಹುಡುಗಿಯರನ್ನು ಸೆಳೆಯಲು ಪ್ರಯತ್ನಿಸಿ ಭವಿಷ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಹೀಗೆ, ಅಪಾಯದ ಸುಳಿಯಲ್ಲಿ ನಿಂತ ಪಾಪದ ಹುಡುಗರನ್ನು ‘ಪೆದ್ದುಗಳು’ ಎನ್ನುವುದು ಕ್ರೌರ್ಯವಲ್ಲವೇ?

ಗಂಡುಮಕ್ಕಳ ಸಿಕ್ಸ್‌ಪ್ಯಾಕ್‌ ಮೋಹವನ್ನು ಆಡಿಕೊಳ್ಳುವ ಸಂಶೋಧಕಿಯರು ತರುಣಿಯರ ‘ಸೈಜ್‌ ಜೀರೊ’ ಮೋಹವನ್ನು ಮರೆಮಾಚುತ್ತಾರೆ. ಆಧುನಿಕ ತರುಣಿಯರನ್ನು ಗಮನಿಸಿ ನೋಡಿ: ಅನ್ನವನ್ನು ಅನ್ನಪೂರ್ಣೆ ಎನ್ನುತ್ತದೆ ಸಮಾಜ. ಆದರೆ, ಅನ್ನದ ಬಗ್ಗೆ ಹೆಣ್ಣುಮಕ್ಕಳದು ಉದಾಸೀನ ಭಾವ. ಉಗುರುಗಳ ರಂಗು ಹಾಳಾಗದಂತೆ ಎರಡು ಬೆರಳುಗಳಲ್ಲಿ ಚಪಾತಿ ಮುರಿಯುತ್ತಾರೆ. ತುಟಿರಂಗು ಹಾಳಾಗದಂತೆ ಮುರುಕು ಬಾಯಿಗಿಟ್ಟುಕೊಳ್ಳುತ್ತಾರೆ. ಊಟದ ಬಗೆಗಿನ ಅವರ ಉದಾಸೀನವನ್ನು ನೋಡಿದರೆ ಎಂಥ ಕಲ್ಲೆದೆಯ ಗಂಡು ಕೂಡ ಅಯ್ಯೋ ಪಾಪ ಎನ್ನಬೇಕು.

ಹುಡುಗರದು ಪೆದ್ದುತನ ಎಂದು ಒಪ್ಪಿಕೊಂಡರೂ, ಅದರಲ್ಲಿ ನಮ್ಮ ಮೌಲ್ಯವ್ಯವಸ್ಥೆ ರೂಪಿಸಿದ ಸಂಬಂಧಗಳ ಭಾವುಕತೆಯನ್ನು ಕಾಣಬಹುದಾಗಿದೆ. ಸ್ನೇಹ, ಪ್ರೇಮದ ಮೌಲ್ಯವದು. ಆದರೆ, ಈ ಅನುಬಂಧ ಹುಡುಗಿಯರಿಗೆ ಸಂಬಂಧಿಸಿದಂತೆ ಕೇವಲ ವ್ಯಾವಹಾರಿಕವಾಗಿಬಿಡುತ್ತದೆ. ಆ ಕಾರಣದಿಂದಲೇ ಬಹುತೇಕ ಹುಡುಗಿಯರು ತಮ್ಮ ಬೆನ್ನುಬೀಳುವ ಹುಡುಗರ ಅಂತಸ್ತನ್ನು ಲೆಕ್ಕಹಾಕುವುದು! ಸಿನಿಮಾ ನಟಿಯರು ಹಿರಿಯ ನಿರ್ಮಾಪಕರಿಗೆ ಒಲಿಯುವ ಉದಾಹರಣೆಗಳು ಕೂಡ ಈ ಗಣಿತಕ್ಕೆ ಪೂರಕವಾಗಿವೆ.

ಪೆದ್ದುತನದ ಸಿದ್ಧಾಂತವನ್ನು ಮತ್ತೊಂದು ರೀತಿಯಲ್ಲಿ ಹೇಳಲಿಕ್ಕೂ ಸಾಧ್ಯವಿದೆ. ಮೊದ್ದು–ಮೊಂಡು ಹುಡುಗರನ್ನು ಅಥವಾ ಆ ರೀತಿ ನಟಿಸುವ ತರುಣರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಬೇಕಿದ್ದರೆ ಕಾಲೇಜ್‌ ಕ್ಯಾಂಪಸ್‌ನಲ್ಲಿನ ಕಥೆಗಳನ್ನು ಕೇಳಿಸಿಕೊಳ್ಳಿ: ಅಲ್ಲಿ ಬುದ್ಧಿವಂತ ಹುಡುಗರಿಗೆ ಗೆಳತಿಯರು ಕಡಿಮೆ. ಅವನನ್ನು ‘ಕುಡುಮಿ’ ಎಂದು ಹುಡುಗಿಯರು ದೂರವಿಡುತ್ತಾರೆ. ಈ ಆಕರ್ಷಣೆ ಕೂಡ ಹುಡುಗಿಯರ ‘ಸುರಕ್ಷಾ ವಲಯದ ಪ್ರೇಮಸಿದ್ಧಾಂತ’ಕ್ಕೆ ಪೂರಕವಾಗಿರುತ್ತದೆ.

ನಿಜ, ಹುಡುಗಿಯರನ್ನು ಕಂಡರೆ, ಅದರಲ್ಲೂ ಚೆಲುವೆಯರನ್ನು ನೋಡಿದರೆ ಹುಡುಗರು ಜೊಲ್ಲು ಸುರಿಸುವುದು ಹೆಚ್ಚು. ಹಾಗೆ ನೋಡಿದರೆ, ಹುಡುಗಿಯರು ನಿಗ್ರಹಿಗಳು ಅಥವಾ ಸಂವೇದನಾರಹಿತರು ಎಂದರ್ಥವಲ್ಲ. ಅವರು ತಮ್ಮ ಬಯಕೆಗಳನ್ನು ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ ಹಾಗೂ ಹಲವು ಸಂದರ್ಭಗಳಲ್ಲಿ ತಮ್ಮನ್ನು ತಾವು ವಂಚಿಸಿಕೊಳ್ಳುತ್ತಾರೆ. ಈ ತೆರೆಮರೆಯ ಬಯಕೆ ಅಥವಾ ಆತ್ಮವಂಚನೆಗಿಂತಲೂ ನೇರವಾಗಿ ತಮ್ಮಿಷ್ಟವನ್ನು ವ್ಯಕ್ತಪಡಿಸುವ ಹುಡುಗರು ಹೆಚ್ಚು ಪ್ರಾಮಾಣಿಕರಲ್ಲವೇ? ಈ ಪ್ರಾಮಾಣಿಕತೆಯೇ ಪೆದ್ದುತನವಾಗಿ ಕಾಣಿಸುವುದಾದರೆ ಏನು ಹೇಳುವುದು?

ನಮ್ಮ ಜಡ ಸಂಪ್ರದಾಯದ ಸಾಮಾಜಿಕ ವ್ಯವಸ್ಥೆಯೂ ಹುಡುಗರಿಗೆ ವಿರುದ್ಧವಾಗಿದೆ. ಹೆಣ್ಣನ್ನು ಭೂಮಿತೂಕದವಳು ಎಂದು ಸಮಾಜ ಬಣ್ಣಿಸುತ್ತದೆ. ವಿಪರ್ಯಾಸವೆಂದರೆ, ಈ ಭೂಮಿತೂಕದವಳ ನಿರ್ವಹಣೆಯ ಭಾರದ ಹೊರೆಯನ್ನು ಗಂಡಿನ ಹೆಗಲಿಗೇ ವರ್ಗಾಯಿಸಲಾಗುತ್ತದೆ. ಕಲಿತ ಹೆಣ್ಣಾದರೂ ದುಡಿಯುವ ಹೆಣ್ಣಾದರೂ ಅವಳ ಸಂಪಾದನೆ ತೀರಾ ವೈಯಕ್ತಿಕ ಬಳಕೆಗೆ ಮೀಸಲು; ಗಂಡಿನ ಸಂಪಾದನೆ ಮಾತ್ರ ಕುಟುಂಬಕ್ಕೆ ಮುಡಿಪು.

ಅಂದಹಾಗೆ, ಈ ಪೆದ್ದುತನ–ಬುದ್ಧಿವಂತಿಕೆಯ ಮಾತುಗಳೆಲ್ಲ ತರ್ಕದ ಚೌಕಟ್ಟಿನಲ್ಲಷ್ಟೇ ಚೆನ್ನ. ವಾಸ್ತವದಲ್ಲಿ, ಪ್ರೇಮದ ವರ್ತುಲದಲ್ಲಿ ಸುತ್ತುವ ತರುಣ ತರುಣಿಯರನ್ನು ಬುದ್ಧಿವಂತರು–ಪೆದ್ದರು ಎಂದು ಅಳೆಯುವುದೇ ಸರಿಯಲ್ಲ. ವಿಜಾತಿ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ ಎನ್ನುವ ಸಿದ್ಧಾಂತವಷ್ಟೇ ಇಲ್ಲಿ ಸತ್ಯ. ಹರೆಯದಲ್ಲಂತೂ ಧ್ರುವಗಳ ಆಕರ್ಷಣೆಯ ಶಕ್ತಿ ಇನ್ನಷ್ಟು ಹೆಚ್ಚು. ಈ ಧ್ರುವಗಳು ಹೆಣ್ಣು–ಗಂಡು ಆಗಿರುವುದರ ಜೊತೆಗೆ ಬುದ್ಧಿವಂತಿಕೆ–ದಡ್ಡತನ ಆಗಿರುವ ಸಾಧ್ಯತೆಯೂ ಹೆಚ್ಚಾಗಿದೆ. ಒಲಿದ ಜೋಡಿಯಲ್ಲಿ ಇಬ್ಬರೂ ದಡ್ಡರಾಗಿದ್ದರೆ ಆ ಕುಟುಂಬ ಮೇಲಕ್ಕೆ ಬರುವುದು ಕಷ್ಟ. ಇಬ್ಬರೂ ಬುದ್ಧಿವಂತರಾಗಿದ್ದರೆ ದೀರ್ಘಕಾಲ ಒಟ್ಟಾಗಿ ಬಾಳುವುದೂ ಕಷ್ಟ. ಆ ಕಾರಣದಿಂದಲೇ ಬಹುತೇಕ ಯಶಸ್ವೀ ಜೋಡಿಯಲ್ಲಿ ಒಬ್ಬರು ಏರಿಗೆ, ಮತ್ತೊಬ್ಬರು ನೀರಿಗೆ. ಈ ಜಗ್ಗಾಟವೇ ಸಂಸಾರದ ಬಂಡಿ ಮುಂದಕ್ಕೆ ಸಾಗಲು ಇಂಧನ!

ಒಂದು ಮಾತಂತೂ ನಿಜ. ಆಕರ್ಷಣೆಯ ಕುದಿಗೆ ಹೆಣ್ಣು–ಗಂಡು ಎನ್ನುವ ಭೇದವಿಲ್ಲ. ಕವಿ ಹಾಡಿದಂತೆ– ‘ಹುಚ್ಚುಕೋಡಿ ಮನಸು ಅದು ಹದಿನಾರರ ವಯಸು’. ಕೊನೆಗೆ ನನ್ನನ್ನು ಕಾಡಿದ ಅನುಮಾನವೊಂದನ್ನು ಇಲ್ಲಿ ಹೇಳಿಕೊಳ್ಳಬೇಕು. ಹೆಣ್ಣುಮಕ್ಕಳೆಲ್ಲ ಮಾತೃಸ್ವರೂಪಿಗಳಷ್ಟೇ! ತಾಯಂದಿರು ತಮ್ಮ ಕೂಸುಗಳನ್ನು, ಕೆಲವೊಮ್ಮೆ ಗಂಡಂದಿರನ್ನೂ ಹುಚ್ಚುಮುಂಡೇದು, ಪೆದ್ದುಮುಂಡೇದು ಎಂದು ಮುದ್ದಿನಿಂದ ಕರೆಯುವುದಿದೆ. ಈ ಪ್ರೀತಿಯಿಂದಲೇ ‘ಹುಡುಗರೇಕೆ ಇಷ್ಟೊಂದು ಪೆದ್ದು?’ ಬರಹದ ಲೇಖಕಿಯರು ಕೂಡ ಹುಡುಗರನ್ನು ‘ಪೆದ್ದು’ ಎಂದಿರಬಹುದೇ? ಹೌದಾದರೆ, ‘ನಾವು ಪೆದ್ದು’ ಎಂದು ಒಪ್ಪಿಕೊಳ್ಳೋಣ. ಬೈಯುವುದು ಕೂಡ ಪ್ರೀತಿಯ ಒಂದು ವಿಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT