ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆಯ ಘನತೆ ತಗ್ಗಿಸಿದ ಮೋದಿ

ಬಿಹಾರ ಚುನಾವಣಾ ರ‍್ಯಾಲಿಯಲ್ಲಿ ಸೋನಿಯಾ ವಾಗ್ದಾಳಿ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಗಯಾ (ಪಿಟಿಐ): ವಿದೇಶಿ ನೆಲದಲ್ಲಿ ತಮ್ಮ ರಾಜಕೀಯ ವೈರಿಗಳನ್ನು ಟೀಕಿಸುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಬಿಹಾರದ ವಾಜಿರ್‌ಗಂಜ್‌ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರ ಈ ನಡೆ ಅವರ ಸಂಕುಚಿತ ಮನೋಭಾವ ಹಾಗೂ ಕೆಳಮಟ್ಟದ ರಾಜಕೀಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ದೇಶದ ಮತ್ತು ಬಿಹಾರದ ಘನತೆಯ ಬಗ್ಗೆ ಚಿಂತಿಸದ  ಪ್ರಧಾನಿ ನಿಮ್ಮ ಘನತೆಯ ಕುರಿತೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮತದಾರರಿಗೆ ಹೇಳಿದರು.

‘ಜನ ಧನ ಯೋಜನೆ’  ಸೇರಿದಂತೆ ಸರ್ಕಾರದ ಯಾವ ಯೋಜನೆಯೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಮೋದಿ ಸರ್ಕಾರ ಈಡೇರಿಸಿಲ್ಲ ಎಂದು ಟೀಕಿಸಿದರು.

ಬೇಳೆಕಾಳುಗಳ ಉತ್ಪಾದನೆಗೆ ಹೆಸರಾದ ಮಗಧ್‌ ಭಾಗದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ಬೇಳೆಕಾಳುಗಳ ಬೆಲೆ ಗಗನಕ್ಕೆ ಏರಿದೆ. ಆದರೆ, ಬೆಲೆ ಏರಿಕೆಯ ಲಾಭ ನಿಮಗೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು.

ಆಮದಾದ ಬೇಳೆಕಾಳಿಗೆ ಕೇಂದ್ರ  ಸರ್ಕಾರ ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿದೆ. ಗೋಧಿಯನ್ನು ಸಹ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಅದರ ಲಾಭ ಸಿಗುತ್ತಿದೆಯೇ, ಅದರ ಲಾಭವೆಲ್ಲ ಮಧ್ಯವರ್ತಿಗಳಿಗೆ ಹಾಗೂ ಅವರದ್ದೇ ಜನರಿಗೆ ಹೋಗುತ್ತಿದೆ ಎಂದು ಆರೋಪಿಸಿದರು.

ಜನ ಧನ ಯೋಜನೆಯಲ್ಲಿ ಎಲ್ಲರ ಖಾತೆಯಲ್ಲಿ ₹ 5000 ಜಮಾ ಮಾಡುವುದಾಗಿ ಹೇಳಲಾಗಿತ್ತು. ನಿಮಗೆ ಹಣ ಸಿಕ್ಕಿತೆ, ಎಷ್ಟು ಜನರಿಗೆ ಸಿಕ್ಕಿತು ಎಂದು ಸೋನಿಯಾ ಪ್ರಶ್ನಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ  ತೈಲ ಬೆಲೆ ಇಳಿಕೆಯ ಲಾಭವನ್ನು ಕೇಂದ್ರ ಸರ್ಕಾರ ಜನರಿಗೆ ವರ್ಗಾಯಿಸುತ್ತಿಲ್ಲ ಎಂದೂ ಅವರು ಆರೋಪಿಸಿದರು.

ಗಯಾ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿರುವ ನೇಕಾರ ವರ್ಗವನ್ನು ಉದ್ದೇಶಿಸಿ, ‘ನೇಕಾರ ಸಹೋದರರ ಸಂಕಷ್ಟದ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಭವಿಷ್ಯ ನಿರ್ಧರಿಸಲಿರುವ ಫಲಿತಾಂಶ
ಭಾಗಲ್ಪುರ (ಪಿಟಿಐ):
ಬಿಹಾರ ಚುನಾವಣೆಯ ಫಲಿತಾಂಶ ಬಿಹಾರ ಹಾಗೂ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಸೋನಿಯಾ ಹೇಳಿದರು.

ಬಿಹಾರ ಈಗ ಕವಲು ದಾರಿಯ ಮಧ್ಯದಲ್ಲಿದೆ. ಇಲ್ಲಿಂದ ಬಿಹಾರ ಹಾಗೂ ದೇಶದ ಭವಿಷ್ಯ ನಿರ್ಧಾರವಾಗಲಿದೆ. ದೇಶ ಸೌಹಾರ್ದ ಅಪ್ಪಿಕೊಳ್ಳುತ್ತದೆಯೋ ಅಥವಾ ಒಡಕಿನತ್ತ ನಡೆಯುತ್ತದೆಯೋ ಎಂಬುದನ್ನು ನೀವು ನಿರ್ಧರಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು.

ಕೇಂದ್ರ ಸರ್ಕಾರ ಬಿಹಾರಕ್ಕೆ ಘೋಷಿಸಿರುವ ಪ್ಯಾಕೇಜ್‌ ಕುರಿತು ಮಾತನಾಡಿದ ಸೋನಿಯಾ, ಪ್ಯಾಕೇಜಿಂಗ್‌, ಮರು ಪ್ಯಾಕೇಜಿಂಗ್‌ ಮಾಡುವಲ್ಲಿ ಮೋದಿ ಅವರು ಪರಿಣತರು ಎಂದು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT