ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮಿಂಗ್‌ವೇಯ ಸ್ಯಾಂಟಿಯಾಗೋ ಹಾಗೂ ಮೈಸೂರಿನ ಆನಂದ್‌ಕುಮಾರರೂ

ಕಥೆ
Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಏರ್‌ಪೋರ್ಟಿನಿಂದ ಹೊರಟು, ಕೆಂಗೇರಿ ಬ್ರಿಡ್ಜ್ ದಾಟುತ್ತಿದ್ದಂತೆಯೇ ಕಾರಿನ ಪ್ಯಾಸೆಂಜರ್‌ ಸೀಟ್‌ನಲ್ಲಿ ಕೂತು ಬೆರಗುಗಣ್ಣಿನಿಂದ ಎಡಗಡೆ, ಬಲಗಡೆ ನೋಡುತ್ತಿದ್ದ ಆನಂದ್‌ರವರ ಮೊಮ್ಮಗ ‘ಗ್ರಾಂಪ, ಗ್ರಾಂಪ, ಲುಕ್‌, ನೋಡಿ, ನಮ್ಮ ಮುಂದೆ ಇರೋದು ನಮ್ಮ ತರಹನೇ ಎಸ್ಟೀಮ್‌ ಕಾರು, ಅದೂ ವೈಟೂ’ ಅಂದ.

‘ಹೂ ಕಣೋ, ಸ್ವಲ್ಪ ವರ್ಷಗಳ ಹಿಂದೆ ಈ ಮಾಡಲ್ಸು ತುಂಬಾ ಪಾಪ್ಯುಲರ್‌ ಆಗಿತ್ತು’ ಅಂದರು ಆನಂದೂ.
‘ಗ್ರಾಂಪಾ, ಮುಂಚೆ ಸೀಟ್‌ಬೆಲ್ಟ್ ಹಾಕ್ಕೋ, ಅಮೇರಿಕಾದಲ್ಲಿ ಸೀಟ್‌ಬೆಲ್ಟ್ ಹಾಕೊಳ್ದಿದ್ರೆ ಫೈನು ಗೊತ್ತಾ’ ಅಂದ ಅಪ್ಪಿ.
‘ಗೊತ್ತು, ಸುಮ್ನಿರೋ, ಹಾಕೋತೀನಿ’ ಅಂದರು ಆನಂದ್‌.

ಇದು ಶುರುವಾಗಿದ್ದು ಹೀಗೆ. ಇದ್ದಕ್ಕಿದ್ದ ಹಾಗೇ ಆನಂದ್‌ ಮಗ ಅಮೇರಿಕಾದಿಂದ ಫೋನ್‌ ಮಾಡಿ– ‘‘ಅಪ್ಪ, ಅಪ್ಪೀನ ಮೈಸೂರಿಗೆ ಒಂದು ತಿಂಗಳು ವೆಕೇಶನ್‌ಗೇ ಅಂತ ಕಳುಹಿಸ್ತಾ ಇದೀವಿ. ಅದೇನೋ ಸ್ಕೂಲ್‌ ಪ್ರಾಜೆಕ್ಟ್ ಅಂತೆ. ಇವನು ‘ಮೈ ಗ್ರಾಂಡ್‌ ಪಾ, ಮೈ ಹೀರೋ’ ಅಂತ ಬರೀತಾನಂತೆ. ಅದಕ್ಕೇ ಬರ್ತಿದಾನೆ. ನಾವಿಬ್ಬರೂ ಬರಕ್ಕಾಗುತ್ತಿಲ್ಲ. ಇವಳಿಗೆ ಕಸ್ಟಮರ್‌ ಮೀಟ್ಸ್ ಇದೆ; ನನಗಂತೂ ಪುರುಸೊತ್ತಿಲ್ಲ’’ ಅಂದ. ‘ಲೋ ಕುಮ್ಮೀ, ಮಗೂನಾ ಒಂದೇ ಕಳುಹಿಸ್ತಿದೀಯಾ’ ಅಂದರು ಆನಂದೂ, ‘ಅಯ್ಯೋ, ಅದೆಲ್ಲ ಇಲ್ಲಿ ಮೋಸ್ಟ್ ಕಾಮನ್ನೂ ಪಾ, ಏನೂ ಚಿಂತೆ ಮಾಡ್ಬೇಡ. ನಿನ್ನ ಮೊಮ್ಮಗ ಸೇಫ್‌ ಆಗಿ ಬೆಂಗಳೂರಿನಲ್ಲೇ ಲ್ಯಾಂಡ್‌ ಆಗ್ತಾನೆ. ಏರ್‌ಲೈನ್ಸ್‌ನವರಿಗೆ ‘ಇನ್‌ಫೆಂಟ್‌ ಸೀಟು’ ಅಂತೆಲ್ಲ ಹೇಳಿ ಆಗಿದೆ. ಮಗೂಂತ ಅವರೇನೂ ಕಮ್ಮಿ ಛಾರ್ಜ್ ಮಾಡ್ತಾ ಇಲ್ಲ. ಫುಲ್‌ ಸೀಟ್‌ ಚಾರ್ಜೇನೇ ಅವನಿಗೂ’ ಅಂದ. ‘ಸೇಫ್‌ ಆಗಿದ್ರೆ ಸರಿ’ ಅಂದು ಆನಂದೂ, ‘ನಾನು ಈಗಲೇ ಟ್ಯಾಕ್ಸಿಗೆ ಹೇಳಿ ಬಿಡ್ತೀನಿ, ಫ್ಲೈಟ್‌ ಡೀಟೈಲ್ಸ್ ಕೊಡು’ ಅಂದರು.

‘ಅಪ್ಪ, ಅಪ್ಪ, ಅಪ್ಪ... ನಿನ್ನ ಮೊಮ್ಮಗ ಒಂದು ಕಂಡೀಷನ್‌ ಹಾಕಿದಾನೆ. ಕೇಳಿಸ್ಕೋ. ಟ್ಯಾಕ್ಸೀಲಿ ಬರಬಾರದಂತೆ. ನೀನು ಚಿಕ್ಕವನಾಗಿದ್ದಾಗ ನಮ್ಮ ಗ್ಯಾರೇಜ್‌ನಲ್ಲಿ ರೇಸಿಂಗ್‌ ಕಾರುಗಳು ರೆಡಿ ಆಗ್ತಾ ಇದ್ದಿದ್ದೂ, ಕಾರುಗಳು ಎಲ್ಲ ರೇಸು, ರ್‍ಯಾಲಿಗಳಲ್ಲಿ ಪ್ರೈಸ್‌ ಗೆಲ್ತಾ ಇದ್ದಿದ್ದೂ ಅವನಿಗೆ ಗೊತ್ತು. ನೀವು ಅಂದರೆ ಮೊದಲೇ ಹುಚ್ಚು ಅವನಿಗೆ. ನಾನು ಅವನಿಗೆ ಆಗಿನ ವರ್ಷದಲ್ಲಿ ನಿಮ್ಮ ಗ್ಯಾರೇಜ್‌ನಲ್ಲಿ ರೆಡಿ ಆಗಿ ತುಂಬ ಪ್ರೈಸ್‌ ಗೆದ್ದಿದ್ದ ‘ಎಸ್ಟೀಮ್‌’ ಈಗಲೂ ಇದೆ. ಫಸ್ಟ್ ಕ್ಲಾಸ್‌ ಆಗಿ ಓಡುತ್ತೆ ಈಗಲೂ ಅಂತ ಹೇಳಿಬಿಟ್ಟಿದ್ದೆ. ಈಗ ನೀವು ಅದೇ ಕಾರಲ್ಲಿ ಏರ್‌ಪೋರ್ಟ್‌ಗೆ ಹೋಗಬೇಕಂತೆ. ಬೆಂಗಳೂರಿನಿಂದ ಬಜ್ಜಣ್ಣ ಲೈನ್‌ನಲ್ಲಿರೋ ನಮ್ಮ ಮನೆ ತಲುಪೋವರ್ಗೂ ಮಾಡೋ ಜರ್ನೀ ಬಗ್ಗೇನೇ ಇವನ ಪ್ರಾಜೆಕ್ಟ್’ ಅಂದ. ‘ಅಯ್ಯಯ್ಯೋ, ಹಾಗಾದರೆ ಒಂದು ಸಲ ಚೆಕ್‌ ಮಾಡಿಬಿಡ್ತೀನಿ ತಾಳು’ ಅಂದರು ಆನಂದೂ.

‘ನಿಮ್ಮ ಈ ಹಾರಾಟಕ್ಕೆ ನಿಮ್ಮ ಮೊಮ್ಮಗ ಒಂದು ಬಾಕಿ ಇತ್ತು’ ಅಂದರು ಅಕ್ಕ.
ಎಸ್ಟೀಮ್‌ ಕಾರೋ ಕವರಿನ ಒಳಗೆ ಮಿರಮಿರ ಅಂತ ಹೊಳೆಯುತ್ತ ಇದ್ದು, ಕೀ ಅನ್ನು ಸುಮ್ಮನೆ ತಿರುಗಿಸಿದರೆ ಸಾಕು. ‘ವ್ರೂಂ’ ಅಂದ ಬರುತ್ತಿದ್ದ ಸದ್ದು ಅಕ್ಕಪಕ್ಕ ಯಾರಾದರೂ ನಿಂತಿದ್ದರೆ ಹಾರಿ ಬೀಳೋ ತರಾನೇ ಇತ್ತು. ಆಲ್‌ ಇಂಡಿಯಾ ಮಟ್ಟದಲ್ಲಿ ಹಲವಾರು ಟ್ರೋಫಿಗಳನ್ನು ಗೆದ್ದಿದ್ದ ಕಾರು ಅದು. ಅಪ್ಪಿಗೋ ಅಮೆರಿಕಾದಲ್ಲಿ ಬೆಳೆದ ಮಕ್ಕಳ ತರಹಾ ಕಾರು ಹುಚ್ಚು. ಯಾವ ಮಾಡಲ್ಲು, ಯಾವ ಕಂಪೆನಿ, ಎಷ್ಟು ಎಚ್‌.ಪಿ. ಟಾರ್ಕು, ಇದೇ ಆತನ ಅಬ್‌ಸೆಷನ್ನು.

‘ಗ್ರಾಂಪಾ, ಗ್ರಾಂಪಾ, ರೇಸಿಂಗ್‌ ಕಾರ್‌ ಇದೆಯಲ್ಲ, ಫಾರ್ಮುಲ ಒನ್ನು, ಅದರಲ್ಲಿ ಗೇರು ಹೆಂಗೆ ಬದಲಾಯಿಸೋದು ಹೇಳು’ ಅಂದ ಅಪ್ಪಿ, ಏರ್‌ಫೋರ್ಟಿನಲ್ಲಿ ಲಗ್ಗೇಜ್‌ ಕ್ಲೈಮ್‌ ಮಾಡಿ ಟ್ರಾಲೀಲಿ ಹಾಕ್ಕೊಂಡು ಬಂದು ಕಾರಲ್ಲಿ ಕೂತುಕೊಂಡ.
‘ಹೇಳ್ತೀನಿ, ಆದರೆ ಗ್ರಾಂಡ್‌ಫಾದರ್‌ನ ಕನ್ನಡದಲ್ಲಿ ಏನಂತಾರೆ ಎಂದು ಹೇಳಿದರೆ ಹೇಳ್ತೀನಿ’ ಅಂದರು ಆನಂದೂ.
‘ಫಾದರ್‌ ಅಂದರೆ ಡ್ಯಾಡ್‌, ಅಂದರೆ ಅಪ್ಪ. ಅಪ್ಪನಿಗೆ ಅಪ್ಪ, ಗ್ರಾಂಡ್‌ ಡ್ಯಾಡ್‌, ಅಪ್ಪಪ್ಪನಾ’ ಅಂದ.
ಆನಂದ ‘ಲೇ, ತಾತ ಕಣೋ, ತಾತ. ಹೇಳು ನೋಡೋಣ’ ಎಂದು ಎಸ್ಟೀಮ್‌ ಸ್ಟಾರ್ಟ್‌ ಮಾಡಿ ನಡೆಸಿದರು.

‘ತಾತ, ತಾತೂ, ನಾವು ನೋಡಿದ ಎಸ್ಟೀಮೂ, ಏರ್‌ಫೋರ್ಟ್‌ನಿಂದಲೇ ನಮ್ಮ ಜೊತೆ ಬರ್ತಿದೆ, ನೋಡೂ ಅದರಲ್ಲೂ ಇಬ್ಬರೇ. ಗ್ರಾಂಡ್‌ಪಾ, ಗ್ರಾಂಡ್‌ಸನ್‌, ನಮ್ಮ ತರಾನೇ’ ಅಂದ ಅಪ್ಪು. ‘ಹೌದಲ್ಲ’ ಅಂದುಕೊಂಡರು ಆನಂದೂ. ಈಗಿನ ಕಾಲದ ಮಕ್ಕಳು ತುಂಬ ಶಾರ್ಪ್ ಆಗಿದ್ದಾರೆ ಅಂತ ತಮಗೆ ತಾವೇ ಹೇಳಿಕೊಳ್ಳುತ್ತ ಕಾರು ನಡೆಸಿದರು. ಕಾರು ಕೆಂಗೇರಿ ದಾಟಿತು. ಬಿಡದಿ ಓವರ್‌ಬ್ರಿಡ್ಜ್ ಹತ್ತುತ್ತಿದ್ದಂತೆ ಅಪ್ಪಿ– ‘ತಾತ, ಆ ಕಾರ್‌ನಂಬರೂ ನಮ್ಮ ತರಹಾನೇ ಇದೆ. ಒನ್‌ ಏಯ್ಟ್‌... ಓಹ್‌’ ಅಂದ. ಆನಂದ್‌ ಮುಂದೆ ಇದ್ದ ಎಸ್ಸೀಮ್‌ ಕಾರು ನೋಡಿದರು. ಅರ್ರೇ, ಅದೂ ವೈಟ್‌ ಎಸ್ಟೀಮೂ, ಅದರಲ್ಲೂ ತಾತ, ಮೊಮ್ಮಗನೇ ಅಂತ ಕಾಣುತ್ತೆ, ತಮ್ಮ ತರಹಾ ಅವರೂ ಏರ್‌ಪೋರ್ಟ್‌ನಿಂದಲೇ ಬರ್ತಿದಾರೆ. ಸಾಲದ್ದಕ್ಕೆ ಅವರ ಕಾರ್‌ ನಂಬರ್‌ 180 ಅಪ್ಪಿ. ಅಮೇರಿಕಾ ಮಗು ಆದ್ದರಿಂದ ಒನ್‌, ಏಯಿಟ್‌, ಓಹ್‌ ಅಂದ ಅಷ್ಟೇ.... ‘ಅದು ಪಾಪುಲರ್‌ ನಂಬರ್‌ ಕಣೋ ಅಪ್ಪೀ. ಟೋಟಲ್‌ ಮಾಡೂ ಆ ನಂಬರ್‌ನ. ಎಷ್ಟು ಬರತ್ತೆ ಹೇಳು’ ಅಂದರು ಆನಂದೂ. ‘ಒನ್‌ ಏಯಿಟ್‌, ಓಹ್‌, ಟೋಟಲ್‌ ನೈನ್‌’ ಅಂದ ಅಪ್ಪಿ. ‘ನೈನ್‌, ಒಂಬತ್ತು– ಪಾಪ್ಯುಲರ್‌ ನಂಬರ್‌. ಆದರೆ ನಮ್ಮದು ಎಂ. 180. ಆ ಕಾರಿನದು ಎನ್‌ 180 ಅಷ್ಟೇ’ ಎಂದು ಕಾರು ನಡೆಸಿದರು.

ರಾಮನಗರ ದಾಟಿ ನೇರ ರಸ್ತೆಯಲ್ಲಿ ಆನಂದ್‌ ಕಾರ್‌ನ ವೇಗ ಸ್ವಲ್ಪ ಜಾಸ್ತಿ ಮಾಡುತ್ತಿದ್ದ ಹಾಗೆಯೇ ಮೂರು ಕಾರುಗಳು, ಒಂದು ಸ್ಯಾಂಟ್ರೋ, ಒಂದು ಮಾರುತಿ ವ್ಯಾನು, ಒಂದು ಆಕ್ಸೆಂಟ್‌ ಭರ್ರೋ ಭರ್ರೋ ಭರ್ರೋ ಅಂತ ಅವಸರವಸರದಿಂದ ಇವರ ಕಾರ್‌ನ ಹಿಂದೆ ಹಾಕಿ ಛಕ್‌ಛಕಾಂತ ಮುಂದಿನ ಎಸ್ಟೀಮ್‌ ಕಾರಿನ ಹಿಂದೆ ಮುಂದೆ ನಡೆದವು. ಅದ್ಯಾಕೆ ಹೀಗೆ ಓವರ್‌ಟೇಕ್‌ ಮಾಡಿದರೋ ಅಂತ ಆನಂದ್‌ ಯೋಚನೆ ಮಾಡ್ತಾ ಇದ್ದ ಹಾಗೇ, ಕಾರು ಚನ್ನಪಟ್ಟಣ ದಾಟಿ, ಮದ್ದೂರು ಹತ್ತಿರ ಬರುತ್ತಿದ್ದ ಹಾಗೆ, ‘ಕದಂಬದಲ್ಲಿ ತಿಂಡಿ ತಿನ್ನೊಣ ಬಾರೋ’ ಅಂದರು ಆನಂದೂ. ಇವರ ಕಾರು ತಿರುಗುತ್ತಿದ್ದ ಹಾಗೇ ಅವರ ಮುಂದಿನ ಎಸ್ಟೀಮ್‌ ಕೂಡ ಹಾಗೇ ತಿರುಗಿ ಅಲ್ಲೇ ನಿಂತಿತು.
ಮೊಮ್ಮಗನಿಗೆ ಮಸಾಲೆದೋಸೆ ಕೊಡಿಸಿ, ಆನಂದ್‌ ತಾವೂ ತಿನ್ನುತ್ತಾ ಇದ್ದಾಗಲೇ ಇನ್ನೊಂದು ಎಸ್ಟೀಮ್‌ನವರೂ ಪರಿಚಯ ಆಗಿದ್ದು! ಅವರೂ ಮೊಮ್ಮಗನನ್ನ ಕರಕೊಂಡು ಮೈಸೂರಿಗೆ ಹೊರಟಿದ್ದರು. ಮೊಮ್ಮಗನೂ ಅಮೆರಿಕಾದಿಂದ ಬರ್ತಿದ್ದ. ಅಲ್ಲಿಯ ತರಹವೇ! ಆದರೆ ಅವರು ಒಂದರ್ಧ ಗಂಟೆ ಮಂಡ್ಯದಲ್ಲಿರೋ ಅವರ ತಂಗೀನ ನೋಡ್ಕೊಂಡು ಬರ್ತೀನಿ ಎಂದು ಹೊರಟರು.

ಹೊರಟ ನಂತರದ ಹತ್ತು ನಿಮಿಷದಲ್ಲೇ ಮತ್ತೆ ಆ ಮೂರು ಕಾರುಗಳು– ಸ್ಯಾಂಟೋ, ವ್ಯಾನು ಮತ್ತು ಆಕ್ಸೆಂಟ್‌ ಕಾರುಗಳು, ಅವುಗಳಲ್ಲಿ ಭರ್ತಿ ಜನ. ಅಪ್ಪಿ ‘ಗ್ರಾಂಪಾ, ಗ್ರಾಂಪಾ, ಆ ವ್ಯಾನಿನಲ್ಲಿರೋರಲ್ಲಿ ಒಬ್ಬನ ಕೈಲಿ ಲಾಂಗ್‌ ನೈಪ್‌ ಕಾಣಿಸಿತು. ಬುಚರ್ಸ್ ನೈಫ್‌ ತರಹ’ ಅಂದ. ‘ಏ ಸುಮ್ನಿರೋ, ಅವರ್‍್ಯಾಕೆ ಲಾಂಗ್‌ ನೈಫ್‌ ತರ್‍್ತಾರೆ’ ಅಂದರು ಆನಂದೂ. ‘ಇಲ್ಲಾ ಗ್ರಾಂಪಾ, ಐ ಆಮ್‌ ಶ್ಯೂರ್‌’ ಅಂದ ಅಪ್ಪಿ.
ಮದ್ದೂರು ನಂತರ ಟ್ರಾಫಿಕ್‌ ಇದ್ದಕ್ಕಿದ್ದ ಹಾಗೆ ಜಾಸ್ತಿಯಾಗುತ್ತಲೇ ಹೋಯಿತು. ಇವೆರಡೂ ಎಸ್ಟೀಮ್‌ ಕಾರುಗಳ ಮಧ್ಯೆ ಆಗ್ಗಾಗ್ಗೆ ಬೇರೆ ಕಾರುಗಳು ಬಂದರೂ ಬಹುತೇಕ ಎರಡೂ ಒಂದರ ಹಿಂದೆ ಮತ್ತೊಂದು. ಮದ್ದೂರು ದಾಟಿದ ನಂತರ ಮಂಡ್ಯ ಟೌನು ಸಿಗುವ ಮೊದಲೇ ಮುಂದಿನ ಎಸ್ಟೀಮ್‌ನಲ್ಲಿದ್ದವರು ಕೈಬೀಸಿ ಬೈ ಹೇಳಿ ಸರಕ್ಕಂತ ತಿರುಗಿದ್ದು ಕಾಣಿಸಿತು.

ಆ ಮೂರು ಕಾರುಗಳಲ್ಲಿದ್ದುದು ಬಳೆಶೀನನ ಗ್ಯಾಂಗು. ಬೆಂಗಳೂರಿನಿಂದಲೇ ಅವರನ್ನು ಶೀನ ಕಳುಹಿಸಿ, ‘ಯಾವುದೋ ತುಂಬ ಸಾಹುಕಾರರ ಮೊಮ್ಮಗ ಅಮೆರಿಕಾದಿಂದ ಬತ್ತವನೆ. ಹಿಡಿದಿಟ್ಟುಕೊಂಡರೆ ಐವತ್ತು ಲಕ್ಷಕ್ಕೆ ಕಮ್ಮಿ ಇಲ್ಲ’ ಎನ್ನುವುದನ್ನು ಖಚಿತಪಡಿಸಿಕೊಂಡೇ ಮೂರು ಕಾರು ಕಳುಹಿಸಿದ್ದು. ಮೈಸೂರು ತಲುಪುವ ಮೊದಲೇ ಎಸ್ಟೀಮ್‌ನ ಬ್ಲಾಕ್‌ ಮಾಡಿ ಯಾವುದಾದರೂ ಕಾರಿಗೆ ಹಾಕಿ ಆ ಹುಡುಗನನ್ನು ಕಿಡ್‌ನ್ಯಾಪ್‌ ಮಾಡಬೇಕು ಅನ್ನೋದವರ ಸ್ಕೆಚ್‌. ‘ಅಣ್ಣ, ಆ ಮುದುಕ?’ ಅಂದ ಕಿಟ್ಟಿ, ‘ಏ, ನೋಡ್ರೋ ಸುಮ್ನೆ ಕಬ್ಬನಗದ್ದೆಗೆ ನೂಕಿ’ ಅಂದಿದ್ದ ಶೀನ.

ಮುಂದಿದ್ದ ಕಾರು ಇದ್ದಕ್ಕಿದ್ದ ಹಾಗೆ ಚಿಕ್ಕರಸ್ತೆಯಲ್ಲಿ ಚಿಕ್ಕಮಂಡ್ಯದತ್ತ ತಿರುಗಿದ್ದರಿಂದ ಶೀನನ ಗ್ಯಾಂಗಿಗೆ ತಾವು ಸ್ಕೆಚ್‌ ಹಾಕಿದ್ದ ಕಾರು ತಪ್ಪಿಸಿಕೊಂಡಿರೋ ವಿಷಯ ತಿಳಿಯಲೇ ಇಲ್ಲ. ಬದಲಾಗಿ ಆನಂದ್‌, ಅಪ್ಪಿ ಇದ್ದ ಕಾರನ್ನೆ ತಾವು ಬ್ಲಾಕ್‌ ಮಾಡಬೇಕೂ ಅಂತ ಭಾವಿಸುತ್ತಲೇ ನಡೆದರು. ಆದರೂ ಏನಕ್ಕೂ ಇರಲೀ ಅಂತ ಶೀನನಿಗೆ ಫೋನ್‌ ಮಾಡಿದ ಕಿಟ್ಟಿ– ‘ಅಣ್ಣ, ಆ ಎಸ್ಟೀಮ್‌ ನಂಬರ್‌ ಏನು?’ ಅಂದು ಬೈಸಿಕೊಂಡ. ‘ನೂರ ಎಂಬತ್ತು, ಒನ್‌ ಏಯಿಟ್‌ ಜೀರೋ ಕಣೋ ಗೂಬೆ, ಬಡ್ಡೆತ್ತದೆ’ ಅಂದ ಶೀನ. ವೈಟ್‌ ಎಸ್ಟೀಮು ಅಂದ ಬೇರೆ. ‘ಹೂ ಅಣ್ಣ, ಮುಂದೇನೇ ಐತೆ’ ಅಂದ ಕಿಟ್ಟಿ.

‘ಒಳಗಡೆ ಇಬ್ಬರವರಾ? ಮುದುಕ, ಹುಡುಗ?’ ಅಂದ ಶಿವ.
‘ಹೂ ಅಣ್ಣಾ, ಹೂಂ.’
‘ಹಂಗಾರೆ ಏನು ನೋಡ್ತಿದೀರಿ? ಬ್ಲಾಕ್‌ ಮಾಡಿ ಹುಡುಗನ್ನ ಎತ್ತಿ ಹಾಕಿಕೊಂಡು ಬನ್ನಿ’ ಅಂದ ಶೀನ.
‘ಅಣ್ಣ ಇನ್ನೊಂದು ಹತ್ತು ಹದಿನೈದು ನಿಮ್ಸ ಅಷ್ಟೇ’ ಅಂದ ಕಿಟ್ಟಿ. ‘ರೆಡಿ ಕಣೋ, ಬಡ್ಡೆತ್ತವಾ’ ಅಂದು ಸೂಚನೆ ಕೊಟ್ಟ.
ಅಪ್ಪಿಗೆ ರೇಸ್‌ ಕಾರೂ ಅಂದರೆ ಹೇಗಿರುತ್ತೆ, ಎಂಜಿನ್‌ನ ಹೇಗೆ ಬದಲಾಯಿಸೋದು, ಹೈ ಆಕ್ಟೇನ್‌ ಪೆಟ್ರೋಲು, ಶ್ರೀಕಾಂತ್‌ ಫೈನ್‌ಟ್ಯೂನಿಂಗ್‌ನ ಹೇಗೆ ಮಾಡ್ತಾ ಇದ್ದರೂ ಅಂತೆಲ್ಲ ಹೇಳ್ತಾ ಇದ್ದರೂ ಆನಂದ್‌ರ ಗಮನ ಮುಂದೆ ಇದ್ದ ಸ್ಯಾಂಟ್ರೋ, ಹಿಂದೆ ಇದ್ದ ವ್ಯಾನೂ, ಅದರ ಹಿಂದೆ ಇದ್ದ ಆಕ್ಸೆಂಟೂ, ಅದರಲ್ಲಿದ್ದ ರೌಡಿಗಳ ತರಹ ಕಾಣ್ತಿದ್ದ ಜನರ ಮೇಲೆ ಇದ್ದು ‘ಇದ್ಯಾಕೋ ಸರಿ ಇಲ್ಲ’ ಅನಿಸಹತ್ತಿತು. ಯಾರಿಗಾದರೂ ಫೋನ್‌ ಮಾಡೋಣ ಅಂದರೆ ಅಲ್ಲೆಲ್ಲೂ ಸಿಗ್ನಲ್ಲೇ ಇರಲಿಲ್ಲ. ಇರಲಿ ಅಂತ ಕಾರು ನಡೆಸಿದರು. ತೂಬಿನ ಕೆರೆ ರೋಡ್‌ ಹಂಪ್‌ ದಾಟಿದ ನಂತರ ಆರೇಳು ಕಿಲೋಮೀಟರ್‌ ನೇರ ರಸ್ತೆ. ‘ಅಪ್ಪಿ, ಈ ಪ್ರಯಾಣದ ಬಗ್ಗೆ ತಾನೇ ನೀನು ಪ್ರಾಜೆಕ್ಟ್ ಬರೀ ಬೇಕೂಂತಿರೋದು. ನೋಡು, ಸಕತ್‌ ಆಗಿರುತ್ತೆ’ ಅನ್ನುತ್ತಿದ್ದಂತೆ ಮುಂದಿದ್ದ ಸ್ಯಾಂಟ್ರೋ ಬೇಕಂತಲೇ ನಿಧಾನ ಮಾಡಿತು.

ಆನಂದ್‌ಗೆ ಈಗ ಯಾಕೋ ಸರಿ ಇಲ್ಲ ಅನ್ನಿಸಿತು. ಆಗ ಅವರಿಗೆ ನೆನಪಾಗಿದ್ದು ಇನ್ನೊಂದು ಎಸ್ಟೀಮ್‌ನಲ್ಲಿದ್ದ ಸಾಹುಕಾರರ ತರಹ ಕಾಣುತ್ತಿದ್ದಾತ ಮತ್ತೆ ಅವರ ಮೊಮ್ಮಗ. ಈ ಮೂರೂ ಕಾರಿನವರು ಒಂದೇ ಗ್ಯಾಂಗ್‌ನವರು, ಈ ಜನ ಏನೋ ದರಿದ್ರ ಕೆಲಸಕ್ಕೆ ರೆಡಿ ಆಗ್ತಿದಾರೆ ಅನಿಸಹತ್ತಿತು. ಇಲ್ಲಿಂದ ಮೈಸೂರು ನಲವತ್ತು ಕಿಲೋಮೀಟರು. ಅಷ್ಟರವರೆಗೆ ಇವರನ್ನು ಹೇಗಾದರೂ ಮಾಡಿ ಅವಾಯ್ಡ್‌  ಮಾಡೋದು ಅಥವಾ ಸೈಡ್‌ ಟ್ರಾಕ್‌ ಮಾಡಿ ಮುಂದೆ ನುಗ್ಗಿ ಬಿಡೋದು ಅಂತ ಅಂದುಕೊಂಡರು. ತಮ್ಮ ಮೊದಲನೇ ಪ್ರಿಯಾರಿಟಿ ಅಂದರೆ ಅಪ್ಪೀನ ಹುಷಾರಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ತಲುಪುವುದು.

ಅಲ್ಲಿಯವರೆಗೂ ಅರವತ್ತರಲ್ಲೇ ಓಡಿಸುತ್ತಿದ್ದ ಆನಂದ್‌ ಸ್ವಲ್ಪ ಆಕ್ಸಿಲೇಟರ್‌ನ ಒತ್ತಿ ನೋಡಿದರು. ಎಂಜಿನ್ನು ಒತ್ತಿದ್ದೇ ತಡ ‘ಬ್ರೂಂ’ ಅಂದು ತಾನು ರೆಡಿ ಆಗಿದ್ದೀನಿ ಅಂತ ತೋರಿಸಿತು.
‘ಅಪ್ಪಿ ರೇಸ್‌ನಲ್ಲಿ ಡ್ರೈವ್‌ ಮಾಡಬೇಕಾದರೆ ಮೊದಲ ಪಾಠ ಏನು ಗೊತ್ತಾ? ಸೇಫ್‌ ಆಗಿ ಡ್ರೈವ್‌ ಮಾಡೋದು’ ಅಂದರು. ‘ಹೂ ಗೊತ್ತು’ ಅಂದ ಅಪ್ಪಿ.
‘ಅಷ್ಟು ಸಿಂಪಲ್‌ ಅಲ್ಲ ಕಣೋ ಅಪ್ಪಿ, ಸೇಫ್‌ ಅಂದರೆ ನಾವು ಸೇಫ್‌ ಆಗಿ ಡ್ರೈವ್‌ ಮಾಡ್ತಾನೇ ಬೇರೆಯವರು ತಪ್ಪು ಮಾಡೋ ಹಾಗೆ ಮಾಡಬೇಕು’.
‘ಅದನ್ನು ಹೇಗೆ ಮಾಡೋದು? ಅವರಿಗೆ ಗೊತ್ತಾದ್ರೆ ಫೌಲ್‌ ಆಗಿ ಡಿಸ್‌ಕ್ವಾಲಿಫೈ ಆಗಿ ಬಿಡ್ತೀವಲ್ಲ?’ ಅಂದ ಅಪ್ಪಿ.
‘ಎಷ್ಟು ಜಾಗರೂಕತೆಯಿಂದ ಮಾಡಬೇಕು ಅಂದರೆ, ಗೊತ್ತೇ ಆಗಬಾರದು ನಮ್ಮಿಂದ ಮಿಸ್ಟೇಕ್‌ ಆಗಿಬಿಟ್ಟಿದ್ದು ಅಂತ’ ಅಂದರು ಆನಂದ್.
ಇಷ್ಟೊತ್ತಿಗೆ ಮುಂದೆ ಸ್ಯಾಂಟ್ರೋ, ಹಿಂದೆಯಿದ್ದ ವ್ಯಾನು ಈಗ ಪಕ್ಕಪಕ್ಕದಲ್ಲೇ ಬರಲು ಪ್ರಾರಂಭ ಆಗಿತ್ತು.
‘ನೋಡೀಗ’ ಅಂತ ಆನಂದೂ ಸರಕ್ಕನೆ ಥರ್ಡ್‌ ಗೇರಿಗೆ ಬದಲಾಯಿಸಿ, ಥ್ರಾಟಲ್‌ ಒತ್ತಿ ವರ್ರೋ ಅಂತ ಸ್ಯಾಂಟ್ರೋ ಎಡಗಡೆ ಪಕ್ಕದಿಂದ ನುಗ್ಗಿ ಬಿಟ್ಟರು. ಈಗ ಸ್ಯಾಂಟ್ರೋ ಮತ್ತು ವ್ಯಾನು ಒಂದರ ಹಿಂದೊಂದು!

‘ಲೇ, ನುಗ್ಗಿಬಿಟ್ಟನಲ್ಲೋ’ ಅಂದ ಕಿಟ್ಟಿ, ಡ್ರೈವ್‌ ಮಾಡುತ್ತಿದ್ದುದು ಸುಂದ್ರ.
‘ಏ ಇಲ್ಲಿ ಹಿಡೀತೀನಿ ನೋಡ್ತಿರು ಈಗ’ ಅಂತ ಸ್ಯಾಂಟ್ರೋನೂ ಭರ್ರೋ ಅಂತ ನುಗ್ಗಿಸಿದ.
ಆನಂದ್‌ಗೆ ಈ ರಸ್ತೆ ಅಂಗೈಗಿಂತಲೂ ಹೆಚ್ಚು ಪರಿಚಯ. ಎಲ್ಲಿ ಹಂಪ್‌ಗಳಿವೆ, ಎಲ್ಲಿ ಅಕ್ಕಪಕ್ಕದ ಹಳ್ಳಿಗ್ಹೋಗೋ ಸಣ್ಣ ಮಣ್ಣಿನ ದಾರಿಗಳು, ಎಲ್ಲಿ ಸ್ಕಿಡ್‌ ಮಾಡಿ ಬಿಡೋ ರೀತಿಯ ಮರಳು, ಎಲ್ಲಿ ವಿಚಿತ್ರವಾಗಿ ಕಂಟ್ರೋಲಿಗೇ ಸಿಗದಂತೆ ಮಾಡೋ ಜಾಗಗಳು– ಎಲ್ಲ ತಿಳಿದಿದ್ದರಿಂದ ಇದು ತಮಾಷೆಯಾಗೇ ಕಂಡಿತ್ತು ಅವರಿಗೆ. ಒಂದ್ನಿಮಿಷ ಕಾರು ನಿಲ್ಲಿಸಿ, ಅವರನ್ನೂ ನಿಲ್ಲಿಸಿ ಮಾತಾಡೋಣ ಅನ್ನಿಸಿದರೂ ಆ ಜನಗಳನ್ನು ನೋಡಿದರೆ ಡೀಸೆಂಟ್‌ ಆಗಿ ಮಾತನಾಡೋ ತರಹಾ ಅಂತೂ ಕಾಣುತ್ತಿರಲಿಲ್ಲ.

‘ಅಪ್ಪಿ, ರೇಸ್‌ ಮಾಡೋವಾಗ ಮೊದಲು ಎರಡು ಕಲಿತಿರಲೇ ಬೇಕು. ಮೊದಲನೆಯದು ಸ್ಕಿಡ್ಡಿಂಗು, ಎರಡನೆಯದು ಸ್ಲೈಡಿಂಗು. ಅಂದರೆ ಇವೆರಡನ್ನೂ ಕಂಟ್ರೋಲಾಗಿ, ಗೊತ್ತಾಗದ ಹಾಗೇ ಮಾಡಬೇಕು. ಕಾರ್‌ನ ಪೂರ್ತಿ ಕಂಟ್ರೋಲ್‌ನಲ್ಲಿ ಇಟ್ಟುಕೊಂಡೇ ಮಾಡಬೇಕು. ಇಲ್ಲದಿದ್ದರೆ ನಮಗೇ ಅಪಾಯ’ ಅಂದರು.

ಇಷ್ಟು ಹೊತ್ತಿಗೆ ಎಡಗಡೆಯಿಂದ ಸ್ಯಾಂಟ್ರೋ ಅತಿ ರಭಸದಿಂದ ನುಗ್ಗುತ್ತಿದ್ದುದು ಕಾಣಿಸಿತು. ಬಲಗಡೆ ವ್ಯಾನು, ಎರಡೂ ಕಡೆಯಿಂದ ಸಿಕ್ಕಿಸಿ ಬ್ಲಾಕ್‌ ಮಾಡಬೇಕೂಂತ ಪ್ಲಾನು ಅವರದೂ ಅಂತ ಆನಂದ್‌ಗೆ ಕ್ಷಣದಲ್ಲಿ ತಿಳಿದುಹೋಯಿತು. ನೇರ ರಸ್ತೆ. ಎಡಗಡೆ ಬಲಗಡೆ ಅರಣ್ಯ ಇಲಾಖೆಯವರು ಸಾಮಾಜಿಕ ಅರಣ್ಯದ ಹೆಸರಲ್ಲಿ ನೆಟ್ಟು ಬೆಳೆಸಿದ್ದ ಮರಗಳ ಸಾಲು. ರಸ್ತೆ ಸೀದಾ ಡೌನು ಬೇರೆ. ಸ್ಯಾಂಟ್ರೋ ಇನ್ನೇನು ನುಗ್ಗಿ ಇವರ ಕಾರಿನ ಬದಿಯಲ್ಲೇ ಬರಬೇಕು ಅನ್ನೋ ಅಷ್ಟರಲ್ಲಿ, ಆನಂದ್‌ ಸರಕ್ಕನೆ ಮೂರನೇ ಗೇರಿಗೆ ಬದಲಿಸಿ ಥ್ರಾಟಲ್ ಕೊಟ್ಟು ಜೊತೆಗೇ ಕೊಂಚ ಬ್ರೇಕ್‌ ಒತ್ತಿದರು. ಆಕ್ಸಲೇಟರ್‌ ಒತ್ತಿದರೂ ಬ್ರೇಕ್‌ನ ಕೂಡ ಒತ್ತಿದ್ದರಿಂದ ಎಸ್ಟೀಮು ‘ಉಯ್ಯೋ’ ಅಂತ ಸ್ಲೈಡ್‌ ಆಗಿ ಎಡಗಡೆಗೆ ಓರ್ರ್ ಅಂತ ಜರುಗಿತು. ಇದ್ದಕ್ಕಿದ್ದ ಹಾಗೆ ಈ ರೀತಿ ತಮ್ಮ ಮುಂದೇನೇ ಬಂದ ಕಾರನ್ನು ನೋಡಿ ಕಿಟ್ಟಿಯ ಡ್ರೈವರ್ರು ‘ಅರ್ರೇ, ಅರ್ರರ್ರೇ’ ಅಂತ ಎಡಗಡೆಗೆ ಸ್ಟೀರಿಂಗ್‌ ತಿರುಗಿಸಿದ್ದರಿಂದ ಅದು ಕಂಟ್ರೋಲ್‌ ತಪ್ಪಿ, ರಸ್ತೆ ಬಿಟ್ಟು ಮಣ್ಣಿನ ಮೇಲೇ ಧಾವಿಸಿ, ಇನ್ನೂ ಕಂಟ್ರೋಲ್‌ ತಪ್ಪಿ ಅರಣ್ಯ ಇಲಾಖೆಯವರ ಯೋಜನೆಯ ಮರಗಳ ಒಳಗಡೆ ಸಾಗಿಬಿಟ್ಟಿದ್ದು ಆನಂದ್‌ರವರಿಗೆ ರೇರ್‌ವ್ಯೂ ಕನ್ನಡಿಯಲ್ಲಿ ಕಂಡಿತು.
‘ಅಪ್ಪೀ, ಇದಕ್ಕೇ ಸ್ಲೈಡಿಂಗ್‌ ಅನ್ನೋದು’ ಅಂದರು ಆನಂದ್‌. ಅಪ್ಪಿಗೆ ‘ಹೆದರಬೇಡ, ಇವರ್‍್ಯಾರೋ ಕೆಟ್ಟ ಜನಗಳ ತರಹ ಕಾಣ್ತಾರೆ. ಆದರೆ ನಮ್ಮನ್ನು  ಹಿಡಿಯಕ್ಕೆ ಅವರಿಗಂತೂ ಆಗಲ್ಲ ಬಿಡು’ ಎಂದರು.

‘ಲೇ, ಸೂ... ಮಗನೆ, ಹಂಗೇನೋ ಕಾರು ಬಿಡೋದೂ? ಆ ಮುದುಕನ್ನ ಹಿಡಿಯೋದು ಬಿಟ್ಟು ಕಾಡಿಗೆ ತಂದು ಹಾಕಿದ್ಯಲ್ಲೋ ಲೋಫರ್‌’ ಅಂದ ಕಿಟ್ಟಿ. ಡ್ರೈವ್‌ ಮಾಡುತ್ತಿದ್ದ ಸುಂದ್ರು– ‘ಅವನು ಆಲ್ಡಿನರಿ ಡ್ರೈವರ್ ಅಲ್ಲ ಕಣಣ್ಣ. ನಮ್ಮನ್ನ ನೂಕಿಬಿಟ್ಟಿದ್ದು ಅವನೇ’ ಅಂದ. ಇವರ ಕಾರು ಕಾಡಿನೊಳಗೆ ನುಗ್ಗಿ ಅಲ್ಲಿದ್ದ ಹಳ್ಳದೊಳಗೆ ಹೋಗಿ ಸಿಕ್ಕಿಕೊಂಡು ಮುಂದೆ ನುಗ್ಗಲಾರದೆ, ಹಿಂದೆ ಬರಲಾರದೆ ನಿಂತಿತ್ತು.
‘ಗೂಬೆ, ಆ ಮುದುಕ ಏನು ಮಾಡ್ಯಾನು? ನೀನೇ ಗೂಬೆ ತರಹ ಓಡಿಸಿದಿ’ ಅಂದು ಕಿಟ್ಟಿ ಇನ್ನೆರಡು ಕಾರಿನವರಿಗೆ ಮುಂದೆ ಏನು ಮಾಡಬೇಕು ಅಂತ ಹೇಳಿದ. ‘ಕೊಪ್ಪಲಿಗೆ ಮುಂಚೆ ಹಿಡೀರಿ ಅವನ್ನ’ ಅಂತ ಕೋಪದಿಂದ ಮೊಬೈಲ್‌ನಲ್ಲಿ ಕಿರುಚಿ ಹೇಳಿದ. ಆನಂದ್‌ ರೇರ್‌ವ್ಯೂ ಮಿರರ್‌ನಲ್ಲಿ ನೋಡ್ತಾನೇ ಇದ್ದರು. ಈಗ ಎರಡು ಕಾರುಗಳು – ಒಂದು ವ್ಯಾನು, ಅದರ ಹಿಂದೆ ಧಾವಿಸಿ ಬರುತ್ತಿದ್ದ ಆಕ್ಸೆಂಟು!

ಅಪ್ಪಿಗೆ ಇದ್ಯಾವುದೋ ವಿಡಿಯೋಗೇಮ್‌ ಅನ್ನಿಸಹತ್ತಿತು. ಅವನಿಗೆ ‘ಇದು ಗೇಮ್‌ ಅಲ್ಲ. ತಮ್ಮನ್ನು ಯಾರೋ ಬೇರೆ ಅಂದುಕೊಂಡು ಇನ್ನೇನೋ ಪ್ಲಾನ್‌ ಮಾಡಿರೋ ವಿಲನ್‌ಗಳು ಮೂರು ಕಾರಿನಲ್ಲಿ ಅಟ್ಯಾಕ್‌ ಮಾಡಕ್ಕೆ ಪ್ರಯತ್ನ ಪಡ್ತಿದಾರೆ’ ಅಂತ ಹೇಳಲೇ ಅಂದುಕೊಂಡರೂ, ಯಾಕೆ ಇವನಿಗೆ ಗಾಬರಿ ಮಾಡೋದು ಅಂತ ಆನಂದ್‌ ಸುಮ್ಮನೆ ಕಾರು ಓಡಿಸಿದರು. ನೋಡೋದಕ್ಕೆ ಅದು ಹಳೇ ಎಸ್ಟೀಮ್‌ ಕಾರ್‌ ಆದರೂ ಹಿಂದೆ ರೇಸಿನಲ್ಲಿ ಹಲವಾರು ಪ್ರೈಜ್‌ಗಳನ್ನು ಗೆದ್ದಿತ್ತು. ಆನಂದ್‌ ಹೇಳಿದ ಹಾಗೆ ಮಾತು ಕೇಳುತ್ತಿದ್ದು, ಹಳೇ ಸ್ನೇಹಿತನ ತರಹ ಆನಂದ್‌ ಅದರೊಡನೆ ಸಂಭಾಷಿಸುತ್ತಿತ್ತು ಕೂಡ. ಈಗಲೂ ಆಗೇ ಆಯಿತು. ‘ಇನ್ನೆರಡು ಇವೆ. ಅವನ್ನ ಅಟಕಾಯಿಸಿ ಬಿಡಾಣ’ ಅಂದರು  ಅಪ್ಪಿ ‘ಯಾರಿಗೆ ಹೇಳ್ತೀರಿ ಗ್ರಾಂಪಾ?’ ಅಂದ. ಆನಂದ್‌ ‘ಹೀಗೇ’ ಅಂದರು. ‘ನೋಡು, ನಾವು ಆವಾಗ ಮಾಡಿದ್ದು ಸ್ಲೈಡಿಂಗ್‌, ಪಕ್ಕದಲ್ಲಿರೋ ರೇಸ್‌ ಕಾರ್‌ ಡ್ರೈವರ್‌ಗೆ ಹೀಗೆ ನಮ್ಮ ಕಾರು  ಸ್ಲೈಡ್‌ ಮಾಡಿಸಿ ಅವನ ತಲೆ ಕೆಟ್ಟು ಹೋಗಿ ತಪ್ಪು ಮಾಡೋ ಹಾಗೆ ಮಾಡಿಬಿಡೋದು. ಇದೇ ಲೆಸನ್‌ ನಂಬರ್ ಒನ್‌’ ಅಂದರು.

‘ಲೆಸನ್‌ ಟೂ ಯಾವುದು?’ ಅಂದ ಅಪ್ಪಿ.
‘ಅದಾ? ಡೆಲಿಬರೇಟ್‌ ಸ್ಕಿಡ್ಡಿಂಗ್‌. ಅದಕ್ಕೆ ನಿನ್ನ ಹೆಲ್ಪ್ ಬೇಕು. ಈ ವಿಲನ್ಸ್‌ಗೆ ಪಾಠ ಕಲಿಸಕ್ಕೆ’ ಅಂದರು. ಅವರಾಗಲೇ ತಮ್ಮ ಹಿಂದೆ ಧಾವಿಸಿ ಬರುತ್ತಿದ್ದ ಕಾರನ್ನ ಹೇಗೆ ಆಟ ಆಡಿಸಬೇಕೂಂತ ನಿರ್ಧರಿಸಿ ಬಿಟ್ಟಿದ್ದರು. ರಸ್ತೆ ಸೀದಾ ಬಂದು ಬಾಬುರಾಯನ ಕೊಪ್ಪಲಿಗೆ ಬಲಗಡೆ ತಿರುಗುತ್ತೆ. ಎಡಗಡೆ ರಸ್ತೆ ಕರಿಘಟ್ಟದ ಬೆಟ್ಟಕ್ಕೆ. ದಾರಿ ಮೂಲೆಯಲ್ಲೊಂದು ಆಲೆಮನೆ. ಆನಂದ್‌ ಬೇಕೂಂತ ಸ್ವಲ್ಪ ಸ್ಲೋ ಮಾಡಿದರು.
ಮಾರುತಿ ವ್ಯಾನು ಜೋರಾಗಿಯೇ ನುಗ್ಗಿ ಎಡಗಡೆ ರಸ್ತೆ ಖಾಲಿ ಕಂಡಿದ್ದರಿಂದ ಅದರ ಡ್ರೈವರ್‌ ನುಗ್ಗಿಸಿದ. ಎಡಗಡೆಯಿಂದ ನುಗ್ಗಿ ಅಡ್ಡ ಹಾಕೋದು ಅಂತ ಅಂದುಕೊಂಡಿದ್ದ ಅಂತ ಕಾಣುತ್ತೆ. ಎರಡೂ ಕಾರುಗಳು ಬಲಗಡೆ ಬಾಬೂರಾಯನ ಕೊಪ್ಪಲಿನ ಸೇತುವೆ ಕಡೆ ತಿರುಗುತ್ತಿದ್ದ  ಹಾಗೆ ಆನಂದು– ‘ಅಪ್ಪಿ ನಾನು ಹೂಂ ಅಂದಾಗ, ನೋಡು ಈ ಹ್ಯಾಂಡ್‌ ಬ್ರೇಕ್‌ನ ಮೆಲ್ಲನೆ ಮೇಲಕ್ಕೆ ಎತ್ತಬೇಕು. ಯಾಕೇಂತ ಆಮೇಲೆ ಹೇಳ್ತೀನಿ’ ಅಂದರು. ‘ಹೂಂ, ಈಗ, ಹೂಂ, ಈಗ, ಹೂಂ’ ಅಂದರು. ಕಾರು ಬಲಗಡೆ ತಿರುವಿನಲ್ಲಿ ಧಾವಿಸುತ್ತಿತ್ತು.

ಆನಂದ್‌ ಮೆಲ್ಲಗೆ ಬ್ರೇಕ್‌ ಒತ್ತಿ ಹಿಡಿದ ಹಾಗೆ, ಅಪ್ಪಿ ಹ್ಯಾಂಡ್‌ ಬ್ರೇಕ್‌ ಒತ್ತಿದ ಹಾಗೆ, ಎಸ್ಟೀಮು ಸ್ಕಿಡ್‌ ಆಗಿ ಅದರ ಹಿಂದಿನ ಭಾಗ ಜರ್ರಂತ ತೇಲಿ ತೇಲಿ ಇನ್ನೇನು ಪಕ್ಕದಲ್ಲಿದ್ದ ವ್ಯಾನ್‌ಗೆ ಹೊಡೀಬೇಕೂ ಅನ್ನೋ ಅಷ್ಟು ಹತ್ತಿರ ಹೋಯಿತು. ಪಾಪ, ಆತ ಅದನ್ನು ನಿರೀಕ್ಷಿಸಿಯೇ ಇರಲಿಲ್ಲ. ಮುದುಕ ಮೆಲ್ಲಗೆ ಓಡಿಸ್ತಿದಾನೆ. ಇನ್ನೊಂದೈದು ನಿಮಿಷದಲ್ಲಿ ಬ್ಲಾಕ್‌ ಮಾಡಿಬಿಟ್ಟು ಇವರಿಬ್ಬರನ್ನು ಕಿಡ್ನಾಪ್‌ ಮಾಡಿ ಬಳೇಶೀನನ ಹತ್ತಿರ ಶಭಾಸ್‌ಗಿರಿ ಪಡೀಬಹುದೂಂತ ಆತ ಯೋಚನೆ ಮಾಡ್ತಿದ್ದ. ಈಗಾದ ಗಾಬರಿಯಲ್ಲಿ ಗಕ್‌ ಅಂತ ಬ್ರೇಕ್‌ ಹೊಡೆದ. ಎಸ್ಟೀಮ್‌ನ ಹಿಂಭಾಗ ಮೆಲ್ಲಗೆ ಮಾರುತಿ ವ್ಯಾನ್‌ನ ಮುಂದಕ್ಕೆ ತಗುಲಿ, ಅದು ಕಂಟ್ರೋಲ್‌ಗೆ ಸಿಗದೆ ಬುಗುರಿಯ ತರಹ ತಿರುತಿರುಗಿತು. ಆ ಸ್ಪೀಡಿಗೆ ಎಡಗಡೆ ಕಬ್ಬಿನ ಗದ್ದೆಗೆ ನುಗ್ಗಿತು. ನೀರು ಕಟ್ಟಿದ್ದ ಗದ್ದೆಯ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡು ಎಂಜಿನ್ನಿನಿಂದ ಹೊಗೆ, ದೂಳು ಎಲ್ಲ ಎದ್ದು, ವ್ಯಾನಿನಲ್ಲಿದ್ದ ಯಾರಿಗೂ ಏನಾಯಿತು – ಏನಾಗ್ತಿದೆ ಅನ್ನೋದರ ಅರಿವು ಮೂಡುವುದರೊಳಗೇ ಆನಂದ್‌ರ ಎಸ್ಟೀಮು ಜುಯ್ಯೋ ಅಂತ ನುಗ್ಗಿ ಕೊಪ್ಪಲು ದಾಟಿ ಕಾವೇರಿ ಸೇತುವೆಯನ್ನು ಸೇರಿಯಾಗಿತ್ತು.

ಇದರ ಹಿಂದೆಯೇ ಇದ್ದ ಹುಂಡೈ ಆಕ್ಸೆಂಟ್‌ನಲ್ಲಿದ್ದ ಬಸವಾರೆಡ್ಡಿ ತಕ್ಷಣ ಶೀನನಿಗೆ ಫೋನ್‌ ಮಾಡಿದ. ‘ಅಣ್ಣ, ವ್ಯಾನೂ ಆಕ್ಸಿಡೆಂಟ್‌ ಆಗಿ ಕಬ್ಬಿನ ಗದ್ದೆಗೆ ನುಗ್ಗಿ ನಿಲ್ತು. ನಾನು ಫಾಲೋ ಮಾಡ್ತಾ ಇದೀನಿ. ಈ ಮುದುಕ ಯಾರೋ ಗಟ್ಟಿಗ ಕಣಣ್ಣ’ ಅಂದ.
‘ಈ ಸಿಂಪಲ್‌ ಕೆಲಸ ಮಾಡಕ್ಕಾಗಲಿಲ್ಲ ಅಂದರೆ ಅಂದರೆ ಇನ್ನೇನು ಮಾಡ್ತೀರಾ ನೀವು? ಬೇಗಲೇ ಹಿಡಕೊಂಡು ಬಾ ಆ ಮುದುಕ, ಮೊಮ್ಮಗನ್ನ, ಸುವ್ವರ್‌ಗಳಾ’ ಅಂದ ಶೀನ. ಆಕ್ಸೆಂಟ್‌ ಭರ್ರ್ ಅಂತ ನುಗ್ಗಿ ಪಶ್ಚಿಮವಾಹಿನಿ ಹತ್ತಿರ ಎಸ್ಟೀಮ್‌ ಹತ್ತಿರಕ್ಕೇ ಬಂತು.
‘ಅಪ್ಪಿ ನಾವು ಈಗ ಮಾಡಿದೆವಲ್ಲ, ಆ ಕರ್ವ್‌ನಲ್ಲಿ, ಅದೇ ಡೆಲಿಬರೇಟ್‌ ಸ್ಕಿಡ್ಡಿಂಗ್‌. ನೀನು ಹ್ಯಾಂಡ್‌ ಬ್ರೇಕ್‌ ಕರೆಕ್ಟಾಗಿ ಹಾಕಿದಿ, ವೆರಿಗುಡ್‌’ ಅಂದರು ಆನಂದ್‌. ‘ಇನ್ನೊಂದಿದೆ ಆಕ್ಸೆಂಟ್‌, ನಮ್ಮ ಹಿಂದೆ’ ಅಂದರು ಆನಂದೂ. ಅವರಾಗಲೇ ಪ್ಲಾನ್‌ ಮಾಡಿದ್ದರು. ಆಗಲೇ ಕತ್ತಲು ಕತ್ತಲಾಗಿತ್ತು. ಆಕ್ಸೆಂಟ್‌ನ್ನು ಹೀಗೇ ಎಳಕೊಂಡು ರಿಂಗ್‌ರೋಡಿಗೆ ಬರೋದು. ಅಲ್ಲಿ ಆಟ ಆಡಿಸೋದು ಅಂದುಕೊಂಡರು.  ಎರಡು ದಿನದ ಹಿಂದೆ ತಾನೇ ರಿಂಗ್‌ರೋಡಿನ ಪಕ್ಕದಲ್ಲಿ ಸರ್ವಿಸ್‌ ರೋಡಿಗೆ ಸೇರಿದ ಹಾಗೇ ಉದ್ದಕ್ಕೆ ಜೆಸಿಬಿನಲ್ಲಿ ಹಳ್ಳ ತೋಡಿಸಿದ್ದು ಅವರ ತಲೆಯಲ್ಲಿತ್ತು.

ಆನಂದ್‌ ಬೇಕೂಂತ ಕಾರು ಸ್ಲೋ ಮಾಡಿ ಆಕ್ಸೆಂಟೂ ಹತ್ತಿರ ಬರೋ ಹಾಗೆ ಬೇಕೂಂತ ಮಾಡಿ, ಹತ್ತಿರ ಬಂದ ಹಾಗೆ ನುಗ್ಗಿ ಮುಂದೆ ಹೋಗೋದು, ಮತ್ತೆ ಸ್ಲೋ ಮಾಡಿ ಹತ್ತಿರ ಬರೋದು– ಹೀಗೇ ಅವರೂ, ಮೊಮ್ಮಗ ಆಟ ಆಡಿ ಆಡಿಸಿದರು.
‘ಗ್ರಾಂಪಾ, ವಾಶ್‌ರೂಂಗೆ ಹೋಗಬೇಕೂ’ ಅಂದ ಅಪ್ಪಿ.
‘ಇಲ್ಯಾವ ವಾಶ್‌ ರೂಂ! ನೀನೇ ನೋಡಿದ್ಯೋ ಇಲ್ಲವೋ? ಕಾರ್‌ನ ಸೈಡಿಗೆ ನಿಲ್ಲಿಸಿ ಕಬ್ಬಿನ ಗದ್ದೇನೇ ವಾಶ್‌ರೂಂ ತರಹ ಉಪಯೋಗಿಸಿ ಬಿಡ್ತಾರೆ ಎಲ್ಲರೂ ಗೊತ್ತಾ?’

‘ಹೌ ಡಿಸ್‌ಗಸ್ಟಿಂಗ್‌, ಯುಎಸ್‌ನಲ್ಲಿ ಹಾಗೆಲ್ಲ ಮಾಡಿದರೆ ಟ್ರಾಫಿಕ್‌ ಪೊಲೀಸ್‌ ಅರೆಸ್ಟ್ ಮಾಡಿಬಿಡ್ತಾರೆ’ ಅಂದ ಅಪ್ಪಿ.
ಕಾರು ಸಿದ್ಧಲಿಂಗಪುರ ದಾಟಿ, ನೀರು ಮೇಲೆ ಹೋಗೋ ಅಕ್ವಾಡಕ್ಟ್ ಕೆಳಗಡೆ ಹಾದು ಬಂದಾಗ ಆನಂದ್‌ ಬೇಕೂಂತ ನಿಧಾನ ಮಾಡಿದರು.
‘ಯಾಕೆ ತಾತಾ?’ ಅಂದ ಅಪ್ಪಿ.

‘ಟ್ರಾಫಿಕ್‌ ಲೈಟ್‌ ರೆಡ್‌ ಆಗಿದೆ ಅಪ್ಪಿ, ನಾವು ನಿಲ್ಲಿಸೋಕೆ ಆಗಲ್ಲ. ಹಿಂದೆ ಆಕ್ಸೆಂಟ್‌ ಇದೆ. ಅವನ ತಲೆ ಕೆಡಿಸೋಣ. ಈಗ ನೋಡ್ತಿರು’ ಅನ್ನುತ್ತಿದ್ದ ಹಾಗೇ ದೂರದಲ್ಲಿ ಟ್ರಾಫಿಕ್‌ ಲೈಟ್‌ ಹಸಿರಾಗಿದ್ದು ಕಂಡು ಆಕ್ಸಲೇಟರ್‌ ಒತ್ತಿದರು.
ಕಾರು ವರ್ರೋ ಅಂತ ನುಗ್ಗಿ ಕ್ಷಣದಲ್ಲೇ ಟ್ರಾಫಿಕ್‌ ಲೈಟ್‌ ದಾಟಿ ಬಲಗಡೆ ತಿರುಗಿತು. ಇದ್ದಕ್ಕಿದ್ದ ಹಾಗೆ ರೇಸು ಕುದುರೆ ತರಹ ನುಗ್ಗುತ್ತಾರೆ ಅಂತ ಆಕ್ಸೆಂಟ್‌ನಲ್ಲಿದ್ದ ಬಸವರಾಜನೂ ಎಕ್ಸ್‌ಪೆಕ್ಟ್‌ ಮಾಡ್ತಿದ್ದ ಅಂತ ಕಾಣುತ್ತೆ. ಅವನೂ ವರ್ರೋ ಅಂತ ನುಗ್ಗಿಸಿ ಕಾರ್‌ನ ಬಲಗಡೆ ತಿರುಗಿಸಿದ.

ಎಡಗಡೆ ‘ಸನ್ಮತಿ ನಗರ’ ಅಂತ ಹೊಸ ಲೇಔಟ್‌ನ ಬೋರ್ಡ್ ಕಾರಿನ ಹೆಡ್‌ಲೈಟಿಗೆ ಬಿದ್ದು ಫಳ ಫಳ ಅಂತ ಮಿಂಚಿತು. ಅದರ ಹತ್ತಿರವೇ ಈ ರಸ್ತೆ ಅಗೆದಿದ್ದು, ಆನಂದ್‌ ಸ್ವಲ್ಪ ಸ್ಲೋ ಮಾಡಿದರು.
ಆಕ್ಸೆಂಟ್‌ ಎಡಗಡೆಯಿಂದ ನುಗ್ಗಿತು.
ಈಗ ವರ್ರೋ ಅಂತ ಎರಡೂ ಕಾರು ಅಕ್ಕಪಕ್ಕ! ಇನ್ನೆರಡು ನಿಮಿಷಕ್ಕೆ ಎಡಗಡೆ ಆ ರಸ್ತೆಯಲ್ಲಿ ಅಗಿದಿಟ್ಟ ಉದ್ದನೆಯ ಹೊಂಡ.
‘ನೋಡ್ತಿರು ಈಗ’ ಅಂದರು ಆನಂದ್‌.

ಅದೇ ಸ್ಪೀಡಿನಲ್ಲಿ ಹೋಗ್ತಾ ಇದ್ದಕ್ಕಿದ್ದ ಹಾಗೆ ಎಡಗಡೆಗೆ ಸರಕ್ಕಂತ ಸ್ಟೀರಿಂಗ್‌ ತಿರುಗಿಸಿಬಿಟ್ಟರು ಆನಂದ್.
ಇದನ್ನ ಎಕ್ಸ್‌ಪೆಕ್ಟೇ ಮಾಡದಿದ್ದ ಬಸವರಾಜ ಗಾಬರಿಯಿಂದ ತಾನೂ ಎಡಗಡೆಗೆ ಸ್ಟೀರಿಂಗ್‌ ತಿರುಗಿಸಿದ. ಆದರೆ ಗಾಬರಿಗೆ ಸ್ವಲ್ಪ ಜಾಸ್ತಿಯೇ ತಿರುಗಿಸಿದ್ದರಿಂದ ಆಕ್ಸೆಂಟು ಕಂಟ್ರೋಲ್‌ ತಪ್ಪಿ ಅಗೆದಿದ್ದ ಹೊಂಡದ ಪಕ್ಕದಲ್ಲಿದ್ದ ದಪ್ಪ–ಸಣ್ಣ ಕಲ್ಲುಗಳ ಮೇಲೆ ಅದೇ ವೇಗದಲ್ಲಿ ಸಾಗಿದ್ದರಿಂದ, ಹಿಡಿತಕ್ಕೇ ಸಿಗದೆ ಯಾವುದೋ ದಪ್ಪನೆಯ ಕಲ್ಲಿನ ಮೇಲೆ ಹತ್ತಿ, ಟೈರು ಜಾರಿ ಕಾರನ್ನ ಎಡಗಡೆ ಹಳ್ಳಕ್ಕೆ ಎಳೆದುಬಿಟ್ಟಿತು. ಮುಂದಿನ ಟೈರು ವರ್ರಂತ ಹಳ್ಳಕ್ಕಿಳಿದು, ಬಸವರಾಜ ಸ್ಟೀಯರಿಂಗ್‌ನ  ಬಲಗಡೆ ತಿರುಗಿಸಲು ಹರಸಾಹಸ ಪಟ್ಟರೂ ಗಡರ ಗಡರ ಅನ್ನುತ್ತ ಹಿಂದಿನ ಚಕ್ರವೂ ಹಳ್ಳಕ್ಕಿಳಿಯಿತು. ಕಾರು ಪೆಟ್ಟುತಿಂದ ಜಿರಳೆಯ ತರಹ ವಾಲಿ ಸೊಟ್ಟ ಸೊಟ್ಟಗೆ ಸಿಕ್ಕಿಕೊಂಡು ಅನಾಥಪ್ರಜ್ಞೆಯಿಂದ ಬಲಗಡೆ ಚಕ್ರಗಳು ತಿರುಗುತ್ತಲೇ ಇದ್ದುದನ್ನು ಆನಂದ್‌ ಕನ್ನಡಿಯಲ್ಲಿ ನೋಡಿದರು.
‘ಅಪ್ಪೀ ಇದೇ ತಾನೇ ನಿನ್ನ ಪ್ರಾಜೆಕ್ಟೂ?’ ಅಂದರು.
‘ಆ ಆಸಮ್‌! ತಾತೀ, ಕೂಲ್‌, ಕೂಲ್‌?’ ಅಂದ ಅವರ ಅಮೆರಿಕಾದ ಮೊಮ್ಮಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT