ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದೊಂದು ಟ್ರೆಂಡ್ ನ ಭಾಗವಾಗುತ್ತಾ...

ಅರಿವೆಯ ಹರವು
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಿಸಿಲಿದೆ ಎಂದು ಬರೀ ಬಿಳಿಯ ಬಟ್ಟೆ ಹಾಕಬೇಕೆ? ಹೆಚ್ಚೆಂದರೆ ತಿಳಿ ಬಣ್ಣದ ಛಾಯೆಗಳನ್ನೇ ಹಾಕಬೇಕಲ್ಲ ಎಂದು ಬೇಸರಿಸಿಕೊಳ್ಳಬೇಕಿಲ್ಲ. ಬಿಸಿಲ ದಿನಗಳಿಗೂ ಇದೆ ಹಾಯಾದ ಸಂಜೆ. ಹಿತವಾದ ತಂಗಾಳಿ ಸೂಸುವ ರಾತ್ರಿಗಳು. ಅದ್ಯಾಕೆ ದೂರವಿರಬೇಕು ನಮಗಿಷ್ಟದ ಬಣ್ಣಗಳಿಂದ?

ಚೂಡಿದಾರ್‌ ಟಾಪ್‌ನಲ್ಲಿನ ವಿನ್ಯಾಸ, ಬಣ್ಣಕ್ಕೆ ಹೊಂದುವಂತೆ ಸಲ್ವಾರ್‌ ಅಥವಾ ಬಾಟಂ ಪ್ಲೇನ್‌ ಬಣ್ಣದ್ದು ಜೊತೆಗೆ ಅದೇ ಬಣ್ದದ ದುಪಟ್ಟಾ ಹಾಕುವ ಕಾಲವೊಂದಿತ್ತು. ಡ್ರೆಸ್ಸಿನ ವಿಷಯಕ್ಕೆ ಬಂದರೆ ನಮ್ಮಲ್ಲಿ ಹೆಚ್ಚಿನವರು ಅದೇ ಕಾಲದಲ್ಲೇ ಈಗಲೂ ಇದ್ದಾರೆ.

ಕೆಲವೊಮ್ಮೆ ಬಾಟಂ ಮತ್ತು ದುಪಟ್ಟಾ ಕೂಡ ಪ್ರಿಂಟ್‌ ವಿನ್ಯಾಸ, ಬಹುವರ್ಣದಲ್ಲಿ ಲಭ್ಯವಿದ್ದವು. ಪ್ರಿಂಟೆಡ್ ಕುರ್ತಿಗೆ ಅದರಲ್ಲಿನ ಒಂದು ಬಣ್ಣಕ್ಕೆ ಹೊಂದುವಂತೆಯೊ ಅದರ ವಿರುದ್ಧ ಬಣ್ಣದಲ್ಲಿಯೊ ಪ್ಲೇನ್‌ ಲೆಗ್ಗಿಂಗ್‌ ಹಾಕುವುದು, ಅದರ ಮೇಲೆ ಬೇಕೆಂದರೆ ಒಂದು ಸ್ಟೋಲ್‌ ಅಥವಾ ಪುಟ್ಟ ಸ್ಕಾರ್ಫ್‌ ಹಾಕಿದರೆ ನಡೆದೀತು. ಇದು ಈಗಲೂ ಚಾಲ್ತಿಯಲ್ಲೇ ಇದೆ. ಪ್ರಸಿದ್ಧ ಬ್ರಾಂಡ್‌ನ ಡ್ರೆಸ್‌ಗಳು, ಖ್ಯಾತ ಮಳಿಗೆಗಳಲ್ಲಿ, ಶಾಪಿಂಗ್‌ ಮಾಲ್‌­ಗಳಲ್ಲಿ ಮಿಕ್ಸ್‌ ಅಂಡ್‌ ಮ್ಯಾಚ್‌ ವಿಭಾಗ ಜನಪ್ರಿಯ­ವಾಗ­ತೊಡಗಿದ್ದೇ ಈ ಟ್ರೆಂಡ್‌ನಿಂದ.

ಬಣ್ಣಗಳನ್ನು ಪ್ರೀತಿಸುವ­ವರಿ­ಗಾ­ಗಿ ಬಣ್ಣದ ಹೆಸರಿನಲ್ಲೇ ಮಳಿಗೆ ಶುರುವಾಗುವ­ಷ್ಟರ ಮಟ್ಟಿಗೆ ಟ್ರೆಂಡ್‌ ಬದಲಾಯಿತು. ಒಂದೊಂದು ಬಣ್ಣದಲ್ಲೂ ಹಲವು ಛಾಯೆ­ಗಳಿರುವ ಆಯ್ಕೆ ದೊರೆತಿದೆ. ಕಾಮನಬಿಲ್ಲಿನ ಎಲ್ಲ ಬಣ್ಣಗಳ ಬಹುಛಾಯೆಗಳಲ್ಲಿ ಬೇಕಾದ್ದನ್ನು ಆರಿಸಿಕೊಳ್ಳುವ ಅವಕಾಶ. ಈ ಕಲರ್‌ ಆಗ್ಲೇ ನನ್‌ ಹತ್ರ  ಇದೆಯಲ್ಲ ಅಂತ ತಲೆಕೆಡಿಸಿ­ಕೊಳ್ಳುವ ಹುಡುಗಿ­ಯರಿಗೆ ಇ–ಕಾಮರ್ಸ್‌ ವರದಾನವೇ ಆಯಿತು.
ಮನೆಯಲ್ಲೇ ಕುಳಿತು, ಇಂಟರ್ನೆಟ್‌ನ ಹಲವು ತಾಣಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡಬಹುದು. ಬೇಡವೆಂದರೆ ಪೇಟೆಗೆ ಹೋಗಿ ಕಟ್‌ಪೀಸ್‌ ಸೆಂಟರಿನಲ್ಲಿ ಬೇಕಾದ ಬಣ್ಣಗಳ ಸಂಯೋಜನೆ, ಹೊಂದಿಕೆ ಮಾಡಿ ಬೇಕಾದಂತೆ ಚಾಲ್ತಿಯಲ್ಲಿರುವ ಶೈಲಿಯದೊ, ಜನಪ್ರಿಯ ಶೈಲಿಯದೊ ಡ್ರೆಸ್‌ ಹೊಲಿಸಿ ಹಾಕಿಕೊಳ್ಳಬಹುದು. ತಮ್ಮ ಡ್ರೆಸ್ಸಿನ ಡಿಸೈನರ್‌ ತಾವೇ ಎಂದು ಬೀಗಲೂಬಹುದು.

ಆದರೆ 1960ರಲ್ಲಿ, 80ರಲ್ಲಿ ಇದ್ದ ಫ್ಯಾಷನ್‌ ಮತ್ತೆ ಮರುಕಳಿಸಿದೆ. ತೀರ ಹೊಸದೇನೂ ಅಲ್ಲ, ಎರಡು ಮೂರು ವರ್ಷದಿಂದ ಮತ್ತೆ ಜನಪ್ರಿಯವಾಗಿದೆ. ಅದು ಕಲರ್‌ ಬ್ಲಾಕಿಂಗ್‌. ದೊಡ್ಡ ದೊಡ್ಡ ಕಲರ್‌ನ ಬ್ಲಾಕ್‌್‌ಗಳನ್ನು ಧರಿಸಿದಂತೆಯೇ ಕಾಣುವ ನೂತನ ಶೈಲಿ. ಅತ್ಯಂತ ಸರಳವಾಗಿ ಕಾಣುತ್ತದೆ, ಆದರೆ ತುಸು ಸ್ಟೈಲಿಶ್‌ ಅಷ್ಟೆ. ಚೂಡಿದಾರ್‌ ಬಾಟಂ ಇರಲಿ, ಲೆಗ್ಗಿಂಗ್‌ ಇರಲಿ ಅಥವಾ ಸಲ್ವಾರ್‌ ಇರಲಿ.  ಗಮನ ಸೆಳೆಯುವ ಗಾಢ ಬಣ್ಣದಲ್ಲಿ. ಅದರ ಮೇಲೆ ಹಾಕುವ ಟಾಪ್‌ ಮಾತ್ರ ಬಾಟಂನ ಬಣ್ಣಕ್ಕೆ ಎಲ್ಲೆಲ್ಲೂ ಮ್ಯಾಚ್‌ ಆಗುವುದಿಲ್ಲ. ಅದೊಂದು ತೀರಾ ವಿರುದ್ಧ ಬಣ್ಣದ್ದಾದರೂ ಆಗಿರಬಹುದು, ಇಲ್ಲವೇ ಬಣ್ಣದ ಚಕ್ರದಲ್ಲಿ ಈ ಬಣ್ಣದ ಅಕ್ಕಪಕ್ಕದ ಬಣ್ಣದ್ದೂ ಇರಬಹುದು. ಈಗ ಈ ಬಾಟಂ ಮತ್ತು ಟಾಪ್‌ಗೆ ಏನೂ ಸಂಬಂಧವಿರದ ಬಣ್ಣದ್ದೊಂದು ಪ್ಲೇನ್‌ ದುಪಟ್ಟಾ ಹಾಕಿದರೆ ಸರಿ. ಕಲರ್‌ ಬ್ಲಾಕಿಂಗ್‌ನ ಟ್ರೆಂಡಿನಲ್ಲಿ ನಾವೂ ಪಾಲ್ಗೊಂಡಂತೆ.

ಅಯ್ಯೋ ಹಂಡಬಂಡ ಅನಿಸಿಬಿಡ್ತೇತಿ, ನೋಡಿದವ್ರು ಏನಂತಾರ ಅಂತ ಹಿಂಜರಿಕೆಯಾಗುವವರು, ತಮ್ಮ  ಸೀರೆಯ ಬಣ್ಣವನ್ನೇ ನೋಡಿದರೂ ಸರಿ. ಅಚ್ಚ ಹಸಿರ ಸೀರೆಗೆ ಕೆಂಪು ಅಂಚಿನ ಸಾಮಾನ್ಯವಾಗಿ ಎಲ್ಲರ ಬಳಿಯೂ ಇದ್ದ ನೆನಪಾಗದೆ? ಗಾಢ ಕೆಂಪು ಸೀರೆಗೆ ಮೆಂತ್ಯ ಹಳದಿ ಅಂಚು, ಸೆರಗು ಇರಲಿಲ್ಲವೆ? ಹಾಗೇ ಅದಕ್ಕೆ ಹೊಂದುವಂತೆ ಸೀರೆಯ ಬಣ್ಣಕ್ಕಿಂತ ಅದರ ಅಂಚಿನಲ್ಲಿನ ಬಣ್ಣದ್ದೇ ಬ್ಲೌಸ್‌ ಹೊಲೆಸಿ ತೊಡಲಿಲ್ಲವೆ ಎಲ್ಲರೂ? ಅದಕ್ಕೇ ತಾನೆ, ನಮ್ಮ ಕಣ್ಣುಗಳಾಗಲೇ ಎಲ್ಲ ಬಣ್ಣದ ಹೊಂದಾಣಿಕೆಗೂ ಹೊಂದಿಕೊಂಡುಬಿಟ್ಟಿವೆ?

ಹಾಗೇ ಇಲ್ಲೂ ಸಲ್ವಾರ್‌, ಚೂಡಿಗಳ ವಿಷಯದಲ್ಲೂ, ಪಾಶ್ಚಿಮಾತ್ಯ ಉಡುಗೆಯಾದ ಸ್ಕರ್ಟ್‌, ಪ್ಯಾಂಟ್‌, ಥ್ರೀ–ಫೋರ್ತ್‌ಗಳ ಜಗದಲ್ಲೂ ಬದಲಾವಣೆ ಆಗುತ್ತಿದೆ. ಅದಕ್ಕೆ ಕೆಲವರು ಬಹುಬೇಗ ತೆರೆದುಕೊಂಡಿದ್ದಾರೆ, ಇನ್ನು ಕೆಲವರು ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ ಅಷ್ಟೆ. ಧರಿಸುವ ಧೈರ್ಯ ಮಾಡಿದರೆ ತುಂಬ ಸಿಂಪಲ್‌ ಆಗಿ ಕಾಣುತ್ತದೆ ನಮ್ಮದೇ ಸ್ಟೈಲಿನಲ್ಲಿ.

ಆದರೆ, ಶುರುವಿಗೆ ಎರಡೇ ಬಣ್ಣದಲ್ಲಿ ಈ ಪ್ರಯೋಗ ಮಾಡಬಹುದು. ನ್ಯೂಟ್ರಲ್‌ ಬಣ್ಣದ ಪ್ಯಾಂಟ್‌, ಸ್ಕರ್ಟ್‌, ಅಥವಾ ಲೆಗ್ಗಿಂಗ್‌ ಧರಿಸಿ ಅದರ ಜತೆ ನಮಗಿಷ್ಟವಾಗುವ ಯಾವುದಾದರೂ ಬಣ್ಣದ ಟಾಪ್‌ ಧರಿಸಿ ನೋಡಬಹುದು. ನ್ಯೂಟ್ರಲ್‌ ಎಂದರೆ ಕಪ್ಪು, ಬಿಳಿ, ಬೂದು, ಬಿಸ್ಕತ್ತಿನ ತಿಳಿ ಬಣ್ಣ ಅಥವಾ ಕೆನೆಬಣ್ಣದ ಜತೆ ಸಾಮಾನ್ಯವಾಗಿ ಯಾವ ಬಣ್ಣವಾದರೂ ಹೊಂದುತ್ತದೆ. ಇದು ರೂಢಿಯಾದ ಮೇಲೆ ನಿಧಾನವಾಗಿ ನ್ಯೂಟ್ರಲ್‌ ಬಣ್ಣ ಹೊರತು ಪಡಿಸಿ ಧರಿಸಿದ ಆ ಇನ್ನೊಂದು ಬಣ್ಣದ್ದೇ  ಬೇರೆ ಛಾಯೆಯ ದುಪಟ್ಟಾ ಅಥವಾ ಸ್ಟೋಲ್‌ ಇಲ್ಲವೆ ಸ್ಕಾರ್ಫ್‌ ಬಳಸಬಹುದು. ಇದು ಉಡುಪಿನ ಬಣ್ಣಗಳ ಜತೆ ಸ್ವಲ್ಪ ಸಮನ್ವಯ ಸಾಧಿಸುತ್ತದೆ. ಗಾಢ ನೀಲಿ ಜತೆ ಬೇಬಿ ನೀಲಿ, ಕೇಸರಿ ಜತೆ ಹವಳದ ಬಣ್ಣ. ಹೀಗೆ.

ಸ್ವಲ್ಪ ರೂಢಿಯಾಯಿತೆಂದರೆ ನೋಡುವವರಿಗೂ ಸಹಜ ಎನಿಸ­ತೊಡಗುತ್ತದೆ. ನಂತರ ಅಕ್ಕಪಕ್ಕದ ಬಣ್ಣಗಳನ್ನು ಆರಿಸ­ಬಹುದು. ಇದು ಕಣ್ಣಿಗೆ ಹಿತ. ಹಸಿರು– ನೀಲಿ; ಹಳದಿ– ಕೇಸರಿ; ನೀಲಿ ಮತ್ತು ನೇರಳೆ ಹೀಗೆ. ಇದರ ಜತೆಗೆ ಕಿವಿ­ಯೋಲೆ, ಬ್ಯಾಗ್‌ನ ಬಣ್ಣ ಇನ್ನೂ ಗಾಢವಾಗಿದ್ದರೆ ಚೆನ್ನ.  ದೊಡ್ಡದಿದ್ದರೆ ಸೂಕ್ತ. ಬೇಕಿದ್ದರೆ ಆಕ್ಸೆಸರಿಗಳು ಗಾಢ ಛಾಯೆಗಳಲ್ಲಿದ್ದರೆ ಬಹಳ ಚೆನ್ನಾಗಿ ಕಾಣುತ್ತದೆ. ಅಂದರೆ ಸಮೃದ್ಧ ಆಳವಾದ ಬಣ್ಣಗಳು ಮರೂನ್‌, ಬದನೆಯ ನೇರಳೆ, ದಟ್ಟ ಹಸಿರು ಹೀಗೆ... ಎರಡು ಭಿನ್ನ ಬಣ್ಣಗಳಿಗೆ ನೋಡುವರ ಕಣ್ಣು ಒಗ್ಗಿದಂತೆ ಮೂರನೇ ನಾಲ್ಕನೇ ಬಣ್ಣಕ್ಕೂ ಕೈಚಾಚಬಹುದು.

ಇನ್ನೂ ದಿಟ್ಟರಾದರೆ ಸಂಪೂರ್ಣ ಬೇರೆಯದೇ ಬಣ್ಣ ಆರಿಸಿ ನೋಡಿ. ಬಣ್ಣದ ಚಕ್ರದಲ್ಲಿ ಪೂರ್ತಿ ಎದುರಿನ ಬಣ್ಣಗಳ ಹೊಂದಿಕೆ ಕಣ್ಣಿಗೆ ಹೊಡೆಯುತ್ತದೆ. ಪೂರ್ತಿ ಅನಿರೀಕ್ಷಿತವಾಗಿರಬೇಕು. ಅರೆ ಇದರ ಜತೆ ಈ ಬಣ್ಣದ ಕಾಂಬಿನೇಷನ್ನಾ ಅಂತ ಹುಬ್ಬೇರಬೇಕು! ಹೊಸ ಪ್ರಯೋಗ ಮಾಡಲು ಹಿಂಜರಿಯಬೇಡಿ. ಗುಲಾಬಿ ಜತೆ ಹಳದಿ; ಕೇಸರಿ–ಕೆಂಪು, ಗಾಢ ನೀಲಿ ಜತೆ ಹಳದಿ ಅಥವಾ ಗಾಢ ಹಸಿರು... ಆಯ್ಕೆ ಅನಂತ.

ಜತೆಗೆ ಹಾಕುವ ಆಭರಣ, ಬೆಲ್ಟ್‌, ಬಳೆ, ಕಿವಿಯೋಲೆ ಉಡುಪಿಗೆ ಪೂರಕವಾಗಿರಲಿ. ಈಗಾಗಲೇ ಉಡುಪಿ­ನಲ್ಲಿರುವ ಯಾವ ಬಣ್ಣದ್ದಾದರೂ ಸರಿಯಾಗುತ್ತದೆ. ಅಥವಾ ಉಡುಪಿನಲ್ಲಿಲ್ಲದ ಬೇರೆ ಯಾವ ಬಣ್ಣವಾದರೂ ಉಡುಪಿಗೆ ಹೊಂದು­ವಂತಾದರೆ ಸೈ. ಈಗಾಗಲೇ ಉಡುಪಿನಲ್ಲಿ ಮೂರು ಬಣ್ಣಗಳಿದ್ದರೆ ಆಕ್ಸೆಸರಿ ಇನ್ನು ಒಂದು ಬಣ್ಣದ್ದಾದರೆ ಸಾಕು. ಆಕ್ಸೆಸರಿಗಳೂ ದೊಡ್ಡದಾಗಿ, ದಟ್ಟವಾಗಿ ಕಾಣುವಂತಿರಲಿ. ದೊಡ್ಡ ಕಿವಿಯೋಲೆ, ಅಗಲ ಹೇರ್‌ಬ್ಯಾಂಡ್‌, ಬಳೆ, ಬೆಲ್ಟ್‌ ಇತ್ಯಾದಿ. ಆದರೆ ಅವುಗಳಲ್ಲೂ ವಿನ್ಯಾಸ, ಪ್ರಿಂಟ್‌, ಕಸೂತಿ ಬೇಡ. ಅವು ಕೂಡ ಪ್ಲೇನ್‌ ಇರಬೇಕು. ಕಾರಣ ಇಲ್ಲಿ ಸರಳತೆಯೇ ಮಂತ್ರ, ಸ್ಟೈಲಾದ ಸರಳತೆ ಅಷ್ಟೆ. ಅದೂ ಸ್ಟೈಲ್‌.

ಕಲರ್‌ ಬ್ಲಾಕಿಂಗ್‌ನಲ್ಲಿ ಪ್ರಿಂಟ್‌, ಪ್ಯಾಟರ್ನ್‌ ಇರುವ ಗೆರೆಗಳು, ಚಕ್ಸ್‌ ಹೀಗೆ ಯಾವುದೇ ಡಿಸೈನ್‌ ಇರುವ ಬಟ್ಟೆ ಬಳಕೆ­ಯಾಗುವುದಿಲ್ಲ. ಕಾರಣ ಪ್ಲೇನ್‌ ಬಣ್ಣವಾದರೆ ಮಾತ್ರ ಬ್ಲಾಕಿಂಗ್‌ನ ಪರಿಣಾಮ ಕಾಣುತ್ತದೆ. ಒಮ್ಮೆ ಧರಿಸಿದ ಉಡುಪಿನಲ್ಲೇ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಾಲಿಡ್‌ ಬಣ್ಣಗಳು ನಿಜಕ್ಕೂ ಆಸಕ್ತಿ ಮೂಡಿಸುವಂತಿರುತ್ತದೆ. ಒಂದು ಉಡುಪಿನಲ್ಲಿ ಎರಡು ಮೂರು ಬಣ್ಣ, ಅಬ್ಬಬ್ಬಾ ಎಂದರೆ ನಾಲ್ಕು... ಸಾಕು. ದಿಟ್ಟ ಮತ್ತು ಎದ್ದು ಕಾಣುವ ಛಾಯೆಗಳಲ್ಲೇ ಆಕರ್ಷಕ. ಫ್ಯಾಷನ್‌ ಷೋಗಳ ರ್‍ಯಾಂಪಿನ ಮೇಲಾಗಲೀ ಫಿಲ್ಮ್‌, ಟಿವಿಯಲ್ಲೇ ಬರಲಿ, ಯಾಕೆ ಫ್ಯಾಷನ್ನನ್ನು ದೂರದಿಂದಲೇ ನೋಡಿ ಸುಮ್ಮ­ನಾಗಬೇಕು? ಹೊಸ­ದೊಂದು ಟ್ರೆಂಡಿನ ಭಾಗವಾಗಬಾರದೆ ನಾವೂ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT