ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ–ಕೊಟ್ಟೂರು ರೈಲು ಓಡುವುದೇ?

ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿಯಾದರೂ ಈಡೇರುವುದೇ ದಶಕಗಳ ಬೇಡಿಕೆ?
Last Updated 25 ಫೆಬ್ರುವರಿ 2016, 8:39 IST
ಅಕ್ಷರ ಗಾತ್ರ

ಹೊಸಪೇಟೆ: ಇಂದು (ಫೆ. 25) ರೈಲ್ವೆ ಬಜೆಟ್‌ ಮಂಡನೆಯಾಗಲಿದ್ದು, ಈ ಸಲವಾದರೂ ಹೊಸಪೇಟೆ–ಕೊಟ್ಟೂರು ನಡುವೆ ರೈಲು ಓಡುವುದೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಹೊಸಪೇಟೆ–ಕೊಟ್ಟೂರು ಮಧ್ಯೆ ಪ್ರಯಾಣಿಕರ ರೈಲು ಓಡಿಸಬೇಕು ಎಂಬುದು ಇಲ್ಲಿನವರ ಬಹುವರ್ಷಗಳ ಬೇಡಿಕೆಯಾಗಿದೆ. ಆದರೆ ರೈಲ್ವೆ ಇಲಾಖೆಯು ಒಂದಿಲ್ಲೊಂದು ಸಬೂಬು ನೀಡುತ್ತ ಇದನ್ನು ತಳ್ಳಿ ಹಾಕುತ್ತಲೇ ಬಂದಿದೆ.

ಈ ಸಂಬಂಧ ಸ್ಥಳೀಯ ಸಂಘಟನೆಗಳು, ರೈಲ್ವೆ ಸಲಹಾ ಸಮಿತಿಯ ಸದಸ್ಯರು ಅನೇಕ ಸಲ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಾರ್ಗದಲ್ಲಿ ರೈಲು ಓಡಿಸುವುದರಿಂದ ಆರ್ಥಿಕ ಹೊರೆ ಬೀಳುತ್ತದೆ ಎಂದು ಆರಂಭದಲ್ಲಿ ರೈಲ್ವೆ ಇಲಾಖೆ ಸಮಜಾಯಿಷಿ ನೀಡಿತ್ತು. ಬಳಿಕ ಕೊಟ್ಟೂರು–ಹರಿಹರ ಮಧ್ಯೆ ರೈಲು ಸಂಚಾರ ಆರಂಭವಾದ ನಂತರ ಇದನ್ನು ಹೊಸಪೇಟೆ ವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿತ್ತು. ಕೊಟ್ಟೂರು–ಹರಿಹರ ಮಧ್ಯೆ ರೈಲು ಸಂಚರಿಸುತ್ತ ಸುಮಾರು ಮೂರು ವರ್ಷಗಳಾಗುತ್ತ ಬಂದಿದೆ. ಆದರೆ ರೈಲು ವಿಸ್ತರಣೆಗೆ ಸಂಬಂಧಿಸಿ ದಂತೆ ಯಾವುದೇ ಪ್ರಗತಿಯಾಗಿಲ್ಲ.

‘ಹೊಸಪೇಟೆ–ಕೊಟ್ಟೂರು–ಹರಿಹರ ನಡುವೆ ರೈಲು ಓಡಿಸಿದರೆ ಹೈದರಾಬಾದ ಕರ್ನಾಟಕ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಇದರಿಂದ ರಸಗೊಬ್ಬರ, ಭತ್ತ, ಅದಿರು ಸಾಗಣೆಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌. ‘ಹೊಸಪೇಟೆ–ಕೊಟ್ಟೂರು ಮಧ್ಯೆ ರೈಲು ಓಡಿಸುವುದರಿಂದ ಹಗರಿ ಬೊಮ್ಮನಹಳ್ಳಿ, ಹೂವಿನಹಡಗಲಿ ಸುತ್ತ ಮುತ್ತಲಿನ ಜನರಿಗೂ ಲಾಭ ಆಗುತ್ತದೆ. ಹಾಗಾಗಿ ಈ ಬಜೆಟ್‌ನಲ್ಲಿ ಘೋಷಣೆ ಮಾಡಿ, ಈ ಭಾಗದವರ ಬಹುದಿನಗಳ ಬೇಡಿಕೆಗೆ ರೈಲ್ವೆ ಸಚಿವರು ಸ್ಪಂದಿಸಬೇಕು’ ಎಂದು ಹೇಳಿದರು.

‘ರೈಲು ಓಡಿಸಿ ಎಂದು ಪ್ರತಿ ಬಾರಿ ಮನವಿ ಸಲ್ಲಿಸಿದಾಗ ತಾಂತ್ರಿಕ ಕಾರಣ ಗಳು ಅಡ್ಡಿಯಾಗಿವೆ ಎನ್ನುತ್ತಿದ್ದಾರೆ. ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ ಆಗಿ ಮಾರ್ಗ ಬದಲಾಗಿದೆ. ರೈಲು ಓಡಿಸು ವುದೊಂದೇ ಉಳಿದಿರುವ ಕೆಲಸ. ಆದರೆ ಇಲಾಖೆ ವಿನಾಕಾರಣ ವಿಳಂಬ ಮಾಡು ತ್ತಿದೆ’ ಎಂದು ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ. ಮಹೇಶ್‌ ಆರೋಪ ಮಾಡುತ್ತಾರೆ.

ಹಿನ್ನೆಲೆ: ಹೊಸಪೇಟೆ–ಕೊಟ್ಟೂರು ರೈಲು ಮಾರ್ಗಕ್ಕೆ ಶತಮಾನಗಳ ಇತಿಹಾಸ ಇದೆ. ಕಬ್ಬಿಣದ ಅದಿರು ಹಾಗೂ ಹತ್ತಿ ಸಾಗಿಸಲು 1905ರಲ್ಲೇ ಬ್ರಿಟಿಷರು ಈ ಮಾರ್ಗದಲ್ಲಿ ಮೀಟರ್‌ ಗೇಜ್‌ ಹಾಕಿದ್ದರು. ಸ್ವಾತಂತ್ರ್ಯ ನಂತರ ಭಾರತೀಯ ರೈಲ್ವೆಯು ಪ್ರಯಾಣಿಕರ ರೈಲು ಬಿಟ್ಟಿತ್ತು. ಅದು ಅನೇಕ ವರ್ಷಗಳವರೆಗೆ ಸಂಚಾರ ಮುಂದುವರೆ ಸಿತು. ಆದರೆ, 1989–90ರಲ್ಲಿ ಮೀಟರ್‌ ಗೇಜ್‌ ಅನ್ನು ಬ್ರಾಡ್‌ ಗೇಜ್‌ ಆಗಿ ಪರಿ ವರ್ತಿಸಲು ರೈಲ್ವೆ ಇಲಾಖೆ ತೀರ್ಮಾನಿಸಿತು.

ಆರಂಭದ ಮೂರು ವರ್ಷಗಳ ವರೆಗೆ ಯಾವುದೇ ಕೆಲಸ ನಡೆಯಲಿಲ್ಲ. ಸ್ಥಳೀಯರ ಒತ್ತಡದಿಂದಾಗಿ 1993ರಲ್ಲಿ ಕಾಮಗಾರಿ ಕೈಗೆತ್ತಿಕೊಂಡು 1997–98ರಲ್ಲಿ ಪೂರ್ಣಗೊಳಿಸಲಾಯಿತು. ಕಾಮಗಾರಿ ಮುಗಿದು ಇಲ್ಲಿಯವರೆಗೆ 18 ವರ್ಷಗಳಾದರೂ ಈ ಮಾರ್ಗದಲ್ಲಿ ರೈಲು ಓಡುತ್ತಿಲ್ಲ. ಹೊಸಪೇಟೆ ಹಾಗೂ ಕೊಟ್ಟೂರು ನಡುವೆ 60 ಕಿ.ಮೀ ಅಂತರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT