ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಭೆಯಲ್ಲಿ ಕೇದಾರ

Last Updated 8 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಭಾರತೀಯ ಆಸ್ತಿಕ ಪ್ರವಾಸಿಗಳ ಪಾಲಿನ ಚುಂಬಕಗಳಲ್ಲಿ ಕೇದಾರವೂ ಒಂದು. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗೂ ಬದರಿನಾಥಗಳು ‘ಚಾರ್‌ಧಾಮ’ ಯಾತ್ರೆಗಳೆಂದೇ ಪ್ರಸಿದ್ಧಿ ಪಡೆದಿವೆ. ಆಸ್ತಿಕರ ಜೊತೆಗೆ ಸೌಂದರ್ಯ ಉಪಾಸಕರನ್ನೂ ಸೆಳೆಯುವ ಈ ಪ್ರವಾಸಿ ತಾಣಗಳಿಗೆ ಹೋಗಿಬರುವುದು ಸುಲಭದ ಸಂಗತಿಯೇನೂ ಅಲ್ಲ. ಮೈಮನಗಳ ಸಂಯಮವನ್ನು ಪರೀಕ್ಷಿಸುವ ಯಾತ್ರೆಗಳಿವು. ಅದರಲ್ಲೂ ಕೇದಾರನಾಥ ಎಂದೊಡನೆ ಎರಡು ವರ್ಷಗಳ ಹಿಂದೆ ನಡೆದ ಜಲಪ್ರಳಯದ (2013ರ ಜೂನ್‌ 16, 17) ದುರಂತವೇ ನೆನಪಿಗೆ ಬರುತ್ತದೆ. ಆದರೆ, ಕೇದಾರಕ್ಕೆ ಹೋಗಿನಿಂತರೆ ದುಃಸ್ವಪ್ನಗಳೆಲ್ಲ ಮರೆಯಾಗಿ ದಿವ್ಯ ಅನುಭೂತಿಯೊಂದು ಮನಸ್ಸು ತುಂಬುತ್ತದೆ.

‘ಕೇದಾರನಾಥ’ ಸಮುದ್ರಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಪರ್ವತ ಪ್ರದೇಶ. ಹಿಮಾಲಯ ಪರಿಸರದಲ್ಲಿರುವ ಇದು ಕೂಡ ಹಿಮದಿಂದ ಆವೃತವಾದ ಪರ್ವತ ಪ್ರದೇಶ. ಇಲ್ಲಿನ ದೇವಾಲಯದ ಇಕ್ಕೆಲಗಳಲ್ಲಿ ಬಲಕ್ಕೆ ಮಂದಾಕಿನಿ ಹಾಗೂ ಎಡಕ್ಕೆ ಸರಸ್ವತಿ ನದಿಗಳು ಪರ್ವತ ಪ್ರದೇಶದ ಮೇಲಿನಿಂದ ಹರಿದುಬರುತ್ತವೆ. ದೇವಾಲಯದ ಹಿಂದೆ ಪರ್ವತಗಳ ಮಧ್ಯದಲ್ಲಿ ‘ಚೋರಬಾರಿ’ ಅಥವಾ ‘ಗಾಂಧಿ ಸರೋವರ’ ಎಂಬ ಸುಂದರವಾದ ಸರೋವರವಿತ್ತು. ಅದು ವರ್ತುಲಾಕಾರದಲ್ಲಿತ್ತು. ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಹಿಮಪಾತದಲ್ಲಿ ಈ ಸರೋವರದ ಅಂಚಿನ ಕಟ್ಟೆ ಒಡೆದುಹೋಯ್ತು.

ಮಂದಾಕಿನಿ, ಸರಸ್ವತಿ ನದಿಯಿಂದ ದೊಡ್ಡಮಟ್ಟದ ಜಲ ಪ್ರವಾಹ ಉಂಟಾಯಿತು. ಇದರಿಂದ ಕೇದಾರನಾಥ ದೇವಾಲಯವನ್ನು ಬಿಟ್ಟು ಸುತ್ತಲೂ ಇದ್ದ ಪ್ರದೇಶ ನೀರಿನಿಂದ ಆವೃತವಾಯಿತು. ಸೋನ್‌ ಪ್ರಯಾಗ್‌, ಗುಪ್ತಕಾಶಿ, ರುದ್ರಪ್ರಯಾಗ್‌, ದೇವಪ್ರಯಾಗ್‌ ಇತರೆ ಹಳ್ಳಿಗಳು ಸಂಪೂರ್ಣವಾಗಿ ನಾಶವಾದವು. ಇಂದಿಗೂ ಅಳಿದುಳಿದ ಮನೆಗಳ ಅವಶೇಷಗಳನ್ನು ಮತ್ತು ಪರ್ವತ ಜರುಗಿರುವ ಸ್ಥಳಗಳನ್ನು ಕಾಣಬಹುದು.

ರೂಪಾಂತರ
ಈಗ ಎರಡು ವರ್ಷಗಳ ಬಳಿಕ ನಾವು ನೋಡಿದ ಕೇದಾರನಾಥ ಕ್ಷೇತ್ರ ಬೆರಗು ಹುಟ್ಟಿಸುವಷ್ಟರಮಟ್ಟಿಗೆ ಬದಲಾಗಿದೆ. ಭಾರತೀಯ ಸೇನಾಪಡೆಯ ಕರ್ನಲ್‌ ಅಜಯ್‌ ಕೋಟೆಯಾರ್‌ ಮತ್ತು ಭಾರತೀಯ ಸೇನಾಪಡೆಯ ಒಂದು ಭಾಗವಾದ ‘ನೆಹರೂ ಪರ್ವತಾರೋಹಣ ಸಂಸ್ಥೆ’ಯ (ಎನ್‌ಐಎಂ– nimindia.net) 800 ಮಂದಿಯ ತಂಡದ ಶ್ರಮದಿಂದಾಗಿ ಕೇದಾರ ಈಗ ಪ್ರವಾಸಿಗಸ್ನೇಹಿ ತಾಣವಾಗಿ ಬದಲಾಗಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ‘ಎನ್‌ಐಎಂ’ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಅಜಯ್‌ ಅವರ ಸೇನೆಯಲ್ಲಿನ ಸೇವೆಗಾಗಿ ಕೀರ್ತಿ ಚಕ್ರ, ಶೌರ್ಯ ಚಕ್ರ, ವಿಶಿಷ್ಠ ಸೇವಾ ಮೆಡಲ್‌ ಪುರಸ್ಕಾರಗಳು ದೊರೆತಿವೆ. ಪ್ರಸ್ತುತ ಕೇದಾರನಾಥ ದೇವಾಲಯಕ್ಕೆ ಯಾತ್ರಾರ್ಥಿಗಳು ಸರಾಗವಾಗಿ ಬಂದುಹೋಗಲು ಅಜಯ್ ಹಾಗೂ ಅವರ ಬಳಗದ ಎಂಟುನೂರು ಯುವಕರ ಸತತ ಪರಿಶ್ರಮ ಪ್ರಮುಖ ಕಾರಣವಾಗಿದೆ.

ಅಂದಹಾಗೆ, ಅಕ್ಟೋಬರ್‌ ಕೊನೆಯ ವಾರದಿಂದ ಏಪ್ರಿಲ್‌ವರೆಗೆ ಕೇದಾರದಲ್ಲಿ ತಾಪಮಾನ –15 ಡಿಗ್ರಿ ಸೆಲ್ಷಿಯಷ್‌ನಷ್ಟು ಇರುತ್ತದೆ. ಇಲ್ಲಿ ಹೆಚ್ಚಿನ ಹಿಮ ಬೀಳುವುದರಿಂದ ಆಮ್ಲಜನಕದ ಕೊರತೆ ಹೆಚ್ಚು.  ಇಂಥ ಪ್ರತಿಕೂಲ ವಾತಾವರಣದಲ್ಲಿ ‘ಎನ್‌ಐಎಂ’ ಕೇದಾರಕ್ಕೆ 17.5 ಕಿ.ಮೀ. ಉದ್ದದ ಹೊಸ ಮಾರ್ಗ ರೂಪಿಸಿದೆ. ಕೇದಾರನಾಥ ದೇವಾಲಯದ ತನಕ ಇರುವ ಈ ರಸ್ತೆಗೆ ತಡೆಗೋಡೆ ಮತ್ತು ಬೇಲಿಯ ರಕ್ಷಣೆಯಿದೆ. ಮಾರ್ಗಮಧ್ಯದಲ್ಲಿ ತಂಗುದಾಣಗಳು, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯಿದೆ. ಹಿಮವನ್ನು ಕಡಿದು ಬಂಡೆಗಳಿಂದ ನಿರ್ಮಿಸಿರುವ ರಸ್ತೆ ಅಸಾಧಾರಣ ಸಾಹಸವೊಂದರ ಸಾಕಾರರೂಪದಂತಿದೆ.

ಸುರಕ್ಷತೆಗೆ ಒತ್ತು
‘ಎನ್‌ಐಎಂ’ ಬಳಗ ಕೇದಾರನಾಥದಲ್ಲಿ ಹೆಲಿಪ್ಯಾಡ್‌ ಕೂಡ ನಿರ್ಮಿಸಿದೆ. ಹೆಲಿಪ್ಯಾಡ್‌ ಪಕ್ಕದಲ್ಲಿ 7 ದಿನದಲ್ಲಿ ಉಪಹಾರಗೃಹ ಕಟ್ಟಿದ್ದಾರೆ. ಯಾತ್ರಿಗಳು ಬಂದು ಉಳಿದುಕೊಳ್ಳಲು ಸುರಕ್ಷಿತವಾದ 80 ಟೆಂಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ರಾತ್ರಿವೇಳೆ ಯಾತ್ರಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಡಾಕ್ಟರ್‌ಗಳಾಗಿ ‘ಎನ್‌ಐಎಂ’ ಸದಸ್ಯರು ಸದಾ ಅಲ್ಲೇ ಇರುತ್ತಾರೆ. ಇದರ ಜೊತೆ ಸುವ್ಯವಸ್ಥಿತವಾದ ಗೆಸ್ಟ್‌ ಹೌಸ್‌ ಕೂಡಾ ಇಲ್ಲಿದೆ. ಈ ತಾಪಮಾನದ ವೈಪರೀತ್ಯದ ನಡುವೆ ಕೆಲಸ ಮಾಡುವ ಇಲ್ಲಿನ ತರುಣರ ಸಮರ್ಪಣಾ ಮನೋಭಾವ ಅಚ್ಚರಿ ಹುಟ್ಟಿಸುವಂತಿದೆ. ಇವರ ಜೊತೆಗೆ ಇಟಲಿಯ ಫ್ರಾಂಕೋ ಎನ್ನುವ ಹಿರಿಯ ನಾಗರಿಕರೊಬ್ಬರು ಕೆಲಸ ಮಾಡುತ್ತಿರುವುದು ವಿಶೇಷ.

ಪ್ರಸ್ತುತ ದೇವಾಲಯದ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಮಂದಾಕಿನಿ – ಸರಸ್ವತಿ ನದಿಗಳ ಪೂರದಿಂದ ದೇವಾಲಯಕ್ಕೆ ಹಾನಿಯಾಗದಂತೆ ಭಾರಿಗಾತ್ರದ ತಡೆಗೋಡೆಯ ನಿರ್ಮಾಣವೂ ನಡೆದಿದೆ. ಅಂದಹಾಗೆ, ಕೇದಾರನಾಥ ದೇವಾಲಯವನ್ನು ಜಲದುರಂತದ ಸಮಯದಲ್ಲಿ ರಕ್ಷಿಸಿದ್ದು ಮಂದಿರದ ಹಿಂಭಾಗದಲ್ಲಿ ಇದ್ದ ಒಂದು ಭೀಮಗಾತ್ರದ ಬಂಡೆ. ಅದನ್ನು ‘ಭೀಮಕಲ್ಲು’ ಎನ್ನುವ ಹೆಸರಿನಲ್ಲಿ ಈಗ ಪೂಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT