ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೆರಿಕದಲ್ಲಿ ಕನ್ನಡ ಕೈಂಕರ್ಯ ಆಶಾದಾಯಕ’

Last Updated 25 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೆರಿಕದಲ್ಲಿ ಇತ್ತೀಚಿನ ಕೆಲ ದಶಕಗಳಲ್ಲಿ ಕನ್ನಡದ ಸಾಂಸ್ಕೃತಿಕ ವಾತಾವರಣ ಆಶಾದಾಯಕವಾಗಿ ರೂಪುಗೊಳ್ಳುತ್ತಿದೆ’ ಎಂದು ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ ಸಂಘಟನೆಯ ಉಪಾಧ್ಯಕ್ಷೆ ನಳಿನಿ ಮಯ್ಯ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಅಮೆರಿಕದಲ್ಲಿ ಕನ್ನಡದ ಕಂಪು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

‘ನಾನು 1969ರ ಸುಮಾರಿಗೆ ಅಮೆರಿಕಕ್ಕೆ ಹೋದಾಗ ಅಲ್ಲಿ ಕನ್ನಡಿಗರು  ತುಂಬಾ ವಿರಳವಾಗಿದ್ದರು. ಇವತ್ತು ಆ ಚಿತ್ರಣ ಸಂಪೂರ್ಣ ಬದಲಾಗಿದೆ. ಕನ್ನಡದ ಶಾಲೆಗಳು ತಲೆಎತ್ತುತ್ತಿವೆ. ಅನೇಕ ಕ್ಷೇತ್ರಗಳಲ್ಲಿ ಕನ್ನಡಿಗರು ಛಾಪು ಮೂಡಿಸಿದ್ದಾರೆ. ಆ ದೇಶದಾದ್ಯಂತ ಕೂಟಗಳನ್ನು ಕಟ್ಟಿಕೊಂಡು ಕನ್ನಡದ ಕಂಪು ಹರಡುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಅಮೆರಿಕ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಒಂದೇ ಸೂರಿನಡಿ ಸಾವಿರಾರು ಕನ್ನಡ ಕೂಟಗಳನ್ನು ಸೇರಿಸುವ ಮಹತ್ಕಾರ್ಯ ಮಾಡುತ್ತಿದೆ. ಅಕ್ಕ ಸಮ್ಮೇಳನದಲ್ಲಿ ಕನ್ನಡ ಶ್ರೇಷ್ಠ ಕವಿ, ಸಾಹಿತಿ, ವಿಮರ್ಶಕರನ್ನು ಆಹ್ವಾನಿಸಿ ಸಾಹಿತ್ಯ ಸಂವಾದಗಳನ್ನು ಏರ್ಪಡಿಸುವ ಮೂಲಕ ಸಾಂಸ್ಕೃತಿಕ ಅನುಬಂಧವನ್ನು ತುಂಬಾ ಚೆನ್ನಾಗಿ ಗಟ್ಟಿಗೊಳಿಸಲಾಗುತ್ತಿದೆ’ ಎಂದರು.

‘ಇದೇ ರೀತಿ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆ ಕೂಡ ಉತ್ತಮ ರೀತಿಯಲ್ಲಿ ಸಮ್ಮೇಳನ ಆಯೋಜಿಸುತ್ತ ಬರುತ್ತಿದೆ. ಅಮೆರಿಕದ ಕನ್ನಡಿಗರ ಸಾಹಿತ್ಯಾಸಕ್ತಿಗೆ ನೀರೆರೆಯುವ ಕೆಲಸ ಮಾಡುತ್ತಿರುವ ‘ಕನ್ನಡ ಸಾಹಿತ್ಯ ರಂಗ’ ತನ್ನ ಸಾಹಿತ್ಯ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿದೆ’ ಎಂದು ಹೇಳಿದರು.

‘ಈ ಸಂಘಟನೆ ನಡೆಸುವ ಸಾಹಿತ್ಯೋತ್ಸವಗಳು ಗಂಭೀರ ಸಾಹಿತ್ಯ ಚರ್ಚೆಗೆ ಹಾಗೂ ಅಮೆರಿಕದಲ್ಲಿನ ಬರಹಗಾರರ ಸಮ್ಮಿಲನಕ್ಕೆ ವೇದಿಕೆಗಳಾಗಿವೆ. ಪುಸ್ತಕ ಪ್ರಕಟಣೆಯಲ್ಲಿಯೂ ಸಕ್ರಿಯವಾಗಿರುವ ಈ ಬಳಗ ‘ಕುವೆಂಪು ಸಾಹಿತ್ಯ ಸಮೀಕ್ಷೆ’, ‘ಆಚೀಚೆಯ ಕಥೆಗಳು’, ‘ನಗೆಗನ್ನಡಂ ಗೆಲ್ಗೆ’, ‘ಕನ್ನಡ ಕಾದಂಬರಿ ಲೋಕದಲ್ಲಿ’ ಸೇರಿದಂತೆ ಏಳು ಕೃತಿಗಳನ್ನು ಪ್ರಕಟಿಸಿದೆ’ ಎಂದು ತಿಳಿಸಿದರು.

‘ಒಂದು ಕಾಲದಲ್ಲಿ ಅಮೆರಿಕನ್ನರಿಗೆ ಭಾರತೀಯರ ಕುರಿತು ಅಸಮಾಧಾನವಿತ್ತು. ಆದರೆ ಆ ಭಾವನೆ ಇಂದು ಬದಲಾಗಿದೆ. ನಮ್ಮ ಅನೇಕ ಸಮ್ಮೇಳನಗಳಿಗೆ ಅಮೆರಿಕದವರು ತುಂಬು ಹೃದಯದಿಂದ ಸಹಕಾರ ನೀಡುತ್ತಿದ್ದಾರೆ’ ಎಂದರು.

‘ಮಹಿಳೆಯರ ಬಗ್ಗೆ ತಾರತಮ್ಯ ಪ್ರತಿಯೊಂದು ದೇಶದಲ್ಲಿದೆ. ಅದಕ್ಕೆ ಅಮೆರಿಕ ಕೂಡ ಹೊರತಲ್ಲ. ಭಾರತಕ್ಕೆ ಹೋಲಿಸಿದರೆ ಮನೆಗೆಲಸ ಸೇರಿದಂತೆ ಕೆಲ ವಿಚಾರಗಳಲ್ಲಿ ಅಲ್ಲಿ ಹೊಣೆಗಾರಿಕೆಗಳು ಕೊಂಚ ಕಡಿಮೆ ಇರಬಹುದು. ವೇತನ ಅಸಮಾನತೆಯಂತೂ ಇದೆ. ರಾಜಕೀಯವಾಗಿ ಮಹಿಳೆಗೆ ಅನೇಕ ಅಡೆತಡೆಗಳಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT