ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂದ’ನಾಗುವ ಕಷ್ಟ

ಸಂಕುಚಿತ ಮನಸ್ಸುಗಳಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ
Last Updated 17 ಮೇ 2015, 19:30 IST
ಅಕ್ಷರ ಗಾತ್ರ

ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮದು ಅಹಿಂದ ಸರ್ಕಾರ ಎಂದು ಯಾವ ಹಿಂಜರಿಕೆಯೂ ಇಲ್ಲದೆ ಹೇಳಿದ್ದಾರೆ. ದೇವರಾಜ ಅರಸು ನಂತರ ನಿರ್ಲಕ್ಷಿತ ಸಮುದಾಯಗಳ ಬೆನ್ನಿಗೆ ತತ್ವಬದ್ಧವಾಗಿ ನಿಂತು  ಅವರು ಆಡಿದ ದಿಟ್ಟ ಮಾತು ಪ್ರಶಂಸೆಗೆ ಅರ್ಹ.

ಇದೊಂದು ತತ್ವರಹಿತ ರಾಜಕಾರಣದ ಭಾಷಾ ಪ್ರಯೋಗ ಹೇಗೋ, ಹಾಗೆಯೇ ಪ್ರಖರವಾದ ಸಾಮಾಜಿಕ ಸತ್ಯವನ್ನು ಒಳಗೊಂಡ ನುಡಿಗಟ್ಟೂ ಆಗಿದೆ. ಮೂಲತಃ ‘ಅಹಿಂದ’ ಎನ್ನುವುದು 300ಕ್ಕೂ ಅಧಿಕವಿರುವ ಎಲ್ಲ ಬಗೆಯ ಅಲಕ್ಷ್ಯಕ್ಕೆ ಒಳಗಾದ ಅಸಂಘಟಿತ ಜಾತಿಗಳ ಸಮೂಹ.

ಇದರಲ್ಲಿ ಸಮಾಜ ಸದಾ ಸಂಶಯದ ದೃಷ್ಟಿಯಲ್ಲಿ ನೋಡುತ್ತಿರುವ ಮುಸ್ಲಿಮರು, ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿರುವ ದಲಿತರು ಹಾಗೂ ತಳಸಮುದಾಯದ ನೂರಾರು  ಜಾತಿಗಳು ಸೇರಿವೆ. ಇನ್ನು ಕೇವಲ ತಮ್ಮ ವಾಸದ ಪ್ರಮಾಣ ಪತ್ರ ಪಡೆಯಲು ಈಗಲೂ ಹೋರಾಟ ಮಾಡುತ್ತಿರುವ ಹೆಸರು, ಕುಲ ಗೊತ್ತಿಲ್ಲದ ನೂರಾರು ಅಲೆಮಾರಿ ಸಮುದಾಯಗಳು ಯಾರ ಲೆಕ್ಕಕ್ಕೂ ಇಲ್ಲದಂತಾಗಿವೆ. ಇಂತಹ ತಬ್ಬಲಿಗಳ ಪರವಾಗಿ ಮುಖ್ಯಮಂತ್ರಿ ಮಾತನಾಡಿರುವುದೇ ತಪ್ಪು ಎಂದು ಕೆಲವು ರಾಜಕೀಯ ನಾಯಕರು  ಬಿಂಬಿಸುತ್ತಿದ್ದಾರೆ. 

ಕೆಲವರು ಬಹಿರಂಗವಾಗಿ ಕುಹಕದಿಂದ, ‘ಭಾಗ್ಯ ಹೆಸರಿನ ಮೇಲೆ ಸರ್ಕಾರಕ್ಕೆ ಇಷ್ಟೊಂದು ಪ್ರೀತಿ ಏಕೆ? ‘ಭಾಗ್ಯ’ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಳೇ ಲವ್ವರ್ ಏನಾದರೂ ಆಗಿರಬಹುದೇ’ (ಪ್ರ.ವಾ., ಮೇ 17), ‘ಸರ್ಕಾರ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ’ ಎಂದು ಸೂಕ್ಷ್ಮತೆ ಮತ್ತು ಸುಸಂಸ್ಕೃತಿ ಇಲ್ಲದ ಮಾತನ್ನಾಡುವ ಮೂಲಕ ಫಲಾನುಭವಿ ಸಮುದಾಯಗಳನ್ನು ಅಪಮಾನಿಸುವುದೂ ನಡೆಯುತ್ತಿದೆ.

ನಿಜ ಅರ್ಥದಲ್ಲಿ ಈ ಸಮಾಜದ ನಿರ್ಮಾತೃಗಳೆಂದರೆ ಈ ಶ್ರಮಜೀವಿಗಳೇ. ರಸ್ತೆ ನಿರ್ಮಿಸುವವರು,  ಡ್ರೈನೇಜ್‌ ಗಳಿಗೆ ಇಳಿದು ಉಸಿರುಕಟ್ಟಿ ಸಾಯುವವರು, ಹೊಲ-ಗದ್ದೆ ಗಳಲ್ಲಿ ಮೂಗಿಗೆ ಕವಡೆಕಟ್ಟಿಕೊಂಡು ದುಡಿಯುವವರು,  ಬೀದಿ ಕಸವನ್ನು ಬರಿಗೈಲಿ ತಗೆಯುವವರು, ಶೌಚಾಲಯ ಶುಚಿಗೊಳಿಸುವವರು... ಹೀಗೆ ಈ ಪಟ್ಟಿಯನ್ನು ಬೆಳೆಸಬಹುದು. ಈಗಲೂ ಇವರು ಮಾಡುವ ಕೆಲಸದ ಮೌಲ್ಯ ಕ್ಕನುಗುಣವಾಗಿ ಎಷ್ಟು ಹಣ ಸಂದಾಯವಾಗಬೇಕು ಎಂಬುದರ ಬಗ್ಗೆ ಮೌಲ್ಯ ನಿರ್ಧಾರವಾಗಿಲ್ಲ.

‘ಅನ್ನಭಾಗ್ಯ’ ಯೋಜನೆಯ  ನಿಜವಾದ ಫಲಾನುಭವಿಗಳೆಂದರೆ ಇವರೇ. ಇವರಾರೂ ತಮ್ಮನ್ನು ಅಪಮಾನಿಸುತ್ತಿರುವವರ ಬಗ್ಗೆ ಟಿ.ವಿ.ಗಳಲ್ಲಿ ಉತ್ತರ ನೀಡುವವರಲ್ಲ, ಪತ್ರಿಕೆಗಳಿಗೆ ಬರೆದು ತಮ್ಮ ಶ್ರಮಕ್ಕೆ ಅನುಗುಣವಾಗಿ ಹಣ ಸಿಗುತ್ತಿಲ್ಲ ಎಂದು ನೋವು ಹೇಳಿಕೊಂಡವರಲ್ಲ. ಇಂತಹ ವರ ಬಗ್ಗೆಯೇ ಮುಖ್ಯಮಂತ್ರಿ ತಮ್ಮ ಸರ್ಕಾರ ಅಹಿಂದ ಸರ್ಕಾರ ಎಂದು ಹೇಳಿರುವುದು.

ಎಲ್ಲವನ್ನೂ ಸಹಿಸಿ ಕೊಂಡು ಸಾಮರಸ್ಯ ಮತ್ತು ಸಹಬಾಳ್ವೆಯಲ್ಲಿ  ನಂಬಿಕೆ ಯಿಟ್ಟಿರುವ ಇಲ್ಲಿನ ಅಹಿಂದ ಸಮುದಾಯ ಮೂಗೆತ್ತಿನಂತೆ   ದುಡಿದು ಬದುಕುತ್ತಿದೆ. ಅವರನ್ನು ಅಪಮಾನಿಸುವುದು ಯಾವುದೇ ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಅಭಿವೃದ್ಧಿಯ ಪರಿಧಿಗೆ ಬಾರದ ಅವಕಾಶವಂಚಿತರು ಒಗ್ಗೂಡಿ ಒಂದು ಸಮೂಹವಾಗುವುದೆಂದರೆ, ವಿಶಾಲಾರ್ಥದಲ್ಲಿ ಎದುರಾಳಿಗಳನ್ನು ಸೃಷ್ಟಿಸಿಕೊಳ್ಳುವುದಲ್ಲ.

ಹಾಗೆಯೇ ಬಲಿಷ್ಠ ಸಮುದಾಯಗಳನ್ನು ದ್ವೇಷಿಸುವುದೂ, ದಮನ ಮಾಡುವುದೂ, ಅವರ ಹಕ್ಕುಗಳನ್ನು ಕಸಿದುಕೊಳ್ಳುವುದೂ ಅಲ್ಲ. ಸಾಮರಸ್ಯ ಮತ್ತು ಸಮಾನತೆಯಿಂದ ಬದುಕುವುದಕ್ಕಷ್ಟೇ ನಡೆಸುವ ಹಕ್ಕೊತ್ತಾಯ ಮಾತ್ರ.  ಇಷ್ಟಕ್ಕೂ ಪ್ರಜಾತಂತ್ರದಲ್ಲಿ ಸರ್ಕಾರದ ಮೊದಲ ಕರ್ತವ್ಯವೆಂದರೆ, ವಂಚಿತ ಸಮುದಾಯಗಳಿಗೆ ಅನ್ನ, ಶಿಕ್ಷಣ  ನೀಡುವುದೇ ಆಗಿರುತ್ತದೆ. ಈ ಆದರ್ಶ ಇದೀಗ ವಾಸ್ತವವಾಗಿಬಿಟ್ಟಿದೆ.

‘ಆದರ್ಶವೇ ವಾಸ್ತವವಾದಾಗ ಬುದ್ಧಿಯು ವಿಮರ್ಶಾತ್ಮಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ’ ಎಂದು ರಾಮಮನೋಹರ ಲೋಹಿಯಾ ಹಿಂದೆಯೇ ಎಚ್ಚರಿಸಿದ್ದರು. ಆದ್ದರಿಂದಲೇ ಅಸಹನೆ, ವ್ಯಂಗ್ಯ ಇವೆ ಲ್ಲವೂ ಒಂದಲ್ಲ ಒಂದು ರೂಪದಲ್ಲಿ ಹೊರಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಪ್ರಬಲ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರು ಮಾತಿನಲ್ಲಿ ಸತ್ಯದ ಶೋಧಕ್ಕಿಂತ, ಸಿದ್ದರಾಮಯ್ಯನವರ ಬಗ್ಗೆ ಅಸಹನೆ ಬೆರತಿರು ವುದು ಆಳದಲ್ಲಿ ಕಾಣುತ್ತದೆ.

ಅಹಿಂದ ಸಮುದಾಯ ದವರಿಗೆ ಸರ್ಕಾರ ನೀಡಿರುವ ಗುಡ್ಡದಷ್ಟು ನೆರವನ್ನು ಪರ್ವತದಂತೆ ಬಿಂಬಿಸುವ ಸಂಕುಚಿತ ಮನಸ್ಸುಗಳಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಸನ್ನಿವೇಶ ಇದಾಗಿದೆ. ವಾಸ್ತವವಾಗಿ ಒಂದು ಕುಟಂಬದಲ್ಲಿ ಮೂರು ಜನರಿದ್ದರೆ ಅವರಿಗೆ ತಿಂಗಳಿಗೆ 15 ಕೆ.ಜಿ. ಅಕ್ಕಿ ಸಿಗುತ್ತದೆ. ಅಂದರೆ ತಿಂಗಳಿಗೆ 300 ರೂಪಾಯಿಯ ಸಬ್ಸಿಡಿ, ಅಂದರೆ ವರ್ಷಕ್ಕೆ ಕೇವಲ ₨ 3600 ಸಬ್ಸಿಡಿಗೆ ಅವರು ಅರ್ಹರಾಗಿದ್ದಾರೆ ಎಂದಾಯಿತು.

ಆದರೆ ಇವರು ಮಾಡುವ ಕೆಲಸದ ಮೌಲ್ಯ ಕೋಟ್ಯಂತರ ರೂಪಾಯಿಗಳದು. ಅದೇ ನಗರವಾಸಿಗಳು, ಸರ್ಕಾರಿ ನೌಕರರು ಮತ್ತು ಇತರ ಉದ್ಯಮಿಗಳು ಪಡೆಯುವ ಸರ್ಕಾರದ ಸಬ್ಸಿಡಿಗೆ ಹೋಲಿಸಿದರೆ, ಈ ವರ್ಗ ಪಡೆಯುವುದು ಏನೇನೂ ಅಲ್ಲ! ಆದರೆ ಫ್ಯೂಡಲ್ ಸಂಸ್ಕೃತಿಯ ರಾಜಕಾರಣಿಗಳಿಗೆ ಉಂಟಾಗಿರುವ ಅಸಹನೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಹಜವೆ.

ಅಸಮಾನತೆ ಮತ್ತು ಜಾತಿಪದ್ಧತಿಯಿಂದ ನಲುಗಿರುವ ಈ ಸಮಾಜದ ಬಗೆಗೆ ಗ್ರಹಿಕೆ ಮತ್ತು ಸೂಕ್ಷ್ಮಜ್ಞತೆಗಳು ಇಲ್ಲದಿರುವುದೇ ಅವರ ದೋಷವಾಗಿದೆ. ಅಸಂಘಟಿತ ಸಮೂಹದ ಪರವಾಗಿ ಹಾಗೂ ಸಾಮಾ ಜಿಕ ನ್ಯಾಯದ ಪರವಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯನವರ ಪ್ರಯತ್ನಗಳು ಯಾರನ್ನು ಕೆರಳಿಸಿವೆಯೋ ಅವರನ್ನು ಈ ಕಾರಣಕ್ಕಾಗಿಯೇ ತಪ್ಪಿತಸ್ಥರನ್ನಾಗಿ ಮಾಡಬಾರದು.

ದೇವನೂರ ಮಹಾದೇವ ಹೇಳುವಂತೆ ‘ನಮ್ಮಂ ತೆಯೇ ನೀವೂ ಮನುಷ್ಯರಲ್ಲವೆ!’ ಎಂದು ಕೇಳಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ತಾರತಮ್ಯಕ್ಕೆ ಒಳಗಾಗಿರುವ ಸಮುದಾಯಗಳಿಗೆ ಅಲ್ಲೊಂದು, ಇಲ್ಲೊಂದರಂತಿರುವ ರಾಜಕೀಯ ನಾಯಕತ್ವ ಎಲ್ಲವನ್ನೂ ಒದಗಿಸಲಾರದು. ಅಲ್ಪಸ್ವಲ್ಪ ತಾತ್ಕಾಲಿಕ ನೆರವು ಸಿಗಬಹುದು. ಇದೇ ಎಲ್ಲವೂ ಅಲ್ಲ!  ಹಾಗೆಂದು ಇದನ್ನು ಕಡೆಗಣಿಸಲೂಬಾರದು.

ಈ ಸಮುದಾಯಗಳಿಗೆ ಹೋರಾ ಟದ ನಾಯಕತ್ವ ಸಾಮಾಜಿಕ ಘನತೆಯನ್ನು, ಸಂಘಟನೆಯ ಅನಿವಾರ್ಯವನ್ನು ಹಾಗೂ ಆರ್ಥಿಕ ಸಬಲೀಕರಣದ ತಿಳಿವಳಿಕೆಯನ್ನು ನೀಡುತ್ತದೆ. ಈ ಹಿಂದೆ ಪ್ರೊ. ಬಿ. ಕೃಷ್ಣಪ್ಪ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ತತ್ವಬದ್ಧ ವಾದ ಹೋರಾಟಗಳು ದಲಿತ ಮತ್ತು ರೈತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನೂ ಹಾಗೂ ನಾಯಕತ್ವಕ್ಕೆ ಅರ್ಹ ವಾದ ಗುಣಗಳನ್ನು ಸೃಷ್ಟಿಸಿದ್ದು ಇತಿಹಾಸದ ಭಾಗವಾಗಿದೆ.

ಹಾಗೆಯೇ  ಅರಸು ಮತ್ತು ಬಿ. ಬಸವಲಿಂಗಪ್ಪನವರ ರಾಜಕೀಯ ನಾಯಕತ್ವ ಈ ಸಮುದಾಯಗಳಲ್ಲಿ ಕೀಳರಿ ಮೆಯನ್ನು ಹೋಗಲಾಡಿಸಿ, ಚೈತನ್ಯ ತುಂಬಿದ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ದೊರಕಿಸಿದ ಪ್ರಾತಿನಿಧ್ಯ ಚಾರಿತ್ರಿಕವಾದದ್ದು. ಈ ಎರಡೂ ಶಕ್ತಿಗಳನ್ನು ಇಂದಿನ ಅಹಿಂದ ಸಮುದಾಯಗಳು ಸಂಚಯಿಸಿಕೊಳ್ಳಬೇಕಾಗಿದೆ. ಈ ದಿಕ್ಕಿನಲ್ಲಿ ಸಿದ್ದರಾಮಯ್ಯನವರು ‘ಕುಟಿಲ ಟೀಕೆ ಹಾಗೂ ಒಣ ಚರ್ಚೆಗಳಿಗಿಂತ ತತ್ವಬದ್ಧ ಕ್ರಿಯಾಶೀಲತೆ ಉತ್ತಮ’ ಎಂದಿರುವ ಗಾಂಧಿ ಮಾತಿನಂತೆ ನಡೆದು ಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT