ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪ್ತ ಸಂವಾದ ಆಗಬೇಕು’

Last Updated 25 ಜನವರಿ 2016, 19:30 IST
ಅಕ್ಷರ ಗಾತ್ರ

ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತಿರುವ ಚಿತ್ರೋತ್ಸವಕ್ಕೆ ಜಾಗತಿಕ ಸಿನಿಮಾ ನಿರ್ಮಾರ್ತೃಗಳು ಸಹ ಸಾಕ್ಷಿಯಾಗುತ್ತಿದ್ದಾರೆ. ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಸಂಘಟಿಸುತ್ತಿರುವ ಉತ್ಸವಕ್ಕೆ ಅನೇಕರಲ್ಲಿ ಸಲಹೆ ಸೂಚನೆಗಳು ಇದ್ದೇ ಇರುತ್ತವೆ. ಅವುಗಳನ್ನು ಕೇಳಿಸುವುದು ‘ಮೆಟ್ರೊ’ ಉದ್ದೇಶ. ಚಿತ್ರೋತ್ಸವದ ಕುರಿತು ನಿರ್ದೇಶಕ ಮಂಸೋರೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಮಗಿಲ್ಲಿ ತೆಲುಗು, ತಮಿಳು, ಹಿಂದಿ, ಕನ್ನಡ ಚಿತ್ರಗಳನ್ನು ನೋಡಿ ಅವುಗಳ ಶೈಲಿ, ಭಾಷೆ ಗೊತ್ತು. ಆದರೆ ಸಿನಿಮಾಕ್ಕೆ ನಿರ್ದಿಷ್ಟ ನೀತಿ ಇಲ್ಲ ಎನ್ನುವುದು ಗೊತ್ತಾಗಿದ್ದೇ ಚಿತ್ರೋತ್ಸವದಿಂದ. ನಾನು ಚಿತ್ರೋತ್ಸವಕ್ಕೆ ಹೋಗುತ್ತಿದ್ದುದೇ ಸಿನಿಮಾ ಭಾಷೆ ದೇಶದಿಂದ ದೇಶಕ್ಕೆ ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ಗ್ರಹಿಸಲು. ಅದು ಸಿನಿಮಾಕ್ಕೆ ಆಯ್ದುಕೊಂಡ ವಸ್ತುವಾಗಬಹುದು, ನಿರೂಪಣೆಯ ವಿಧಾನದಲ್ಲಾಗಬಹುದು. ಹೇಳುವ ವಿಚಾರ ಸರಿಯಾಗಿದ್ದರೆ ಬಜೆಟ್ ಚಿಕ್ಕದಾದರೂ ಒಳ್ಳೆಯ ಸಿನಿಮಾ ಮಾಡಬಹುದೆಂದು ಕಲಿತಿದ್ದೂ ಚಿತ್ರೋತ್ಸವದಿಂದಲೇ. 

ನಾನು ನಿರ್ದೇಶಕನಾಗಲು, ‘ಹರಿವು’ ಸಾಧ್ಯವಾಗಲು ಬೆನ್ನೆಲುಬಾಗಿದ್ದೇ ಸಿನಿಮೋತ್ಸವ. ಹಾಗಾಗಿ ನನಗಂತೂ ಸಿನಿಮೋತ್ಸವ ತುಂಬಾ ಒಳ್ಳೆಯ ಅನುಭವವನ್ನು ಕೊಟ್ಟಿದೆ. ಆದರೆ ಈ ಉತ್ಸವಗಳು ಹೊಸಬರ ಪಾಲಿಗೂ ಒಳ್ಳೆಯ ಅನುಭವ ಕೊಡುವಂತೆ ರೂಪುಗೊಳ್ಳಬೇಕು. ಸಿನಿಮಾ ಮಾಡುವವರು ಸಬ್ಸಿಡಿಗಾಗಿ ಎರಡು ವರ್ಷ ಕಾಯಬೇಕಾಗುತ್ತದೆ. ಆದರೆ ಸಿನಿಮಾವೊಂದಕ್ಕೆ ಪ್ರಶಸ್ತಿ ಬಂದರೆ ಒಂದೇ ತಿಂಗಳಲ್ಲಿ ಸಬ್ಸಿಡಿ ಹಣ ಕೈ ಸೇರುತ್ತದೆ. ಸರ್ಕಾರದ ಇಂಥ ಅನೇಕ ಯೋಜನೆಗಳು ನಮ್ಮಂಥ ಹೊಸಬರ ಗಮನಕ್ಕೆ ಬರುವುದೇ ಇಲ್ಲ. ನನಗೂ ಹಲವು ವಿಚಾರಗಳು ಗೊತ್ತಾಗಿದ್ದು ‘ಹರಿವು’ ಪ್ರಶಸ್ತಿ ಗಳಿಸಿದ ಮೇಲೆಯೇ.

ಹಾಗಾಗಿ ಸಿನಿಮೋತ್ಸವ ನಡೆಯುವ ಜಾಗದಲ್ಲಿ ವಾರ್ತಾ ಇಲಾಖೆ ವತಿಯಿಂದ ಒಂದು ಮಾಹಿತಿ ಕೇಂದ್ರ ತೆರೆದು ಸಿನಿಮೋದ್ಯಮಕ್ಕೆ ಸರ್ಕಾರದಿಂದ ಏನೆಲ್ಲ ಸವಲತ್ತುಗಳಿವೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುವ ಕೆಲಸವಾಗಬೇಕು. ಇದರಿಂದ ಹೊಸಬರಿಗೆ ಅನೇಕ ದಾರಿಗಳು, ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ನಮ್ಮ ಚಿತ್ರೋತ್ಸವದಲ್ಲಿ ಆಗಬೇಕಿರುವ ಇನ್ನೊಂದು ಕೆಲಸವೆಂದರೆ ಗೋವಾದಲ್ಲಿ ಮಾಡುವಂತೆ ನಮ್ಮಲ್ಲೂ ‘ಫಿಲ್ಮ್ ಬಜಾರ್’ ಮಾಡಬೇಕು. ಅಲ್ಲಿ ಅಂತರರಾಷ್ಟ್ರೀಯ ಸಿನಿಮಾ ನಿರ್ಮಾಣ ಸಂಸ್ಥೆಗಳೆಲ್ಲ ಬಂದು ಆಯ್ದ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಮತ್ತು ಹಂಚಿಕೆ ಜವಾಬ್ದಾರಿ ಹೊತ್ತು ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಪ್ರಯತ್ನಿಸುತ್ತವೆ.

ಸಣ್ಣ ಸಣ್ಣ ಆಫ್‌ಬೀಟ್ ಚಿತ್ರಗಳನ್ನು ಮಾಡುವ ಪ್ರತಿ ನಿರ್ಮಾಪಕನಿಗೂ ತಾವು ತೊಡಗಿಸಿದ ಹಣ ಹಿಂಪಡೆಯುವುದು ಹೇಗೆ ಎಂಬ ಪ್ರಶ್ನೆಗಳಿರುತ್ತವೆ. ಇಂಥ ಅನೇಕ ಸಂಗತಿಗಳು ‘ಫಿಲ್ಮ್‌ ಬಜಾರ್’ನಿಂದಾಗಿ ನಮಗೆ ಸಿಕ್ಕುತ್ತವೆ. ಹಾಗಾಗಿ ಅಂಥ ಪ್ರಯತ್ನ ನಮ್ಮಲ್ಲೂ ಆಗಬೇಕೆಂದು ನನ್ನ ನಿರೀಕ್ಷೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಒಂದೊಂದು ಸಂವಾದದಲ್ಲಿ ಭಾಗವಹಿಸುತ್ತಾರೆ.

ಆದರೆ ಪರಸ್ಪರ ಆತ್ಮೀಯ ಮಾತುಕತೆಯಲ್ಲಿ ನಡೆಯುವಂಥ ಚರ್ಚೆಗಳು ಈ ರೀತಿಯ ಔಪಚಾರಿಕ ಸಂವಾದದಲ್ಲಿ ಸಾಧ್ಯವೇ ಇಲ್ಲ. ನಮ್ಮಂಥವರು ಅವರಿಂದ ಕಲಿಯುವುದು ಬೇಕಾದಷ್ಟಿರುತ್ತದೆ. ಹಾಗಾಗಿ ಆಪ್ತವಾಗಿ ಮಾತನಾಡಲು ಸಾಧ್ಯವಾಗುವಂಥ ವಾತಾವರಣ ನಿರ್ಮಿಸಬೇಕು. ಇದರಿಂದಾಗಿ ಹೊಸಬರು ಚಿತ್ರೋದ್ಯಮದತ್ತ ಆಕರ್ಷಿತರಾಗುವಂತೆ ಆಗಬೇಕು. ಅಂಥ ಬೆಳವಣಿಗೆಗಳಾಗದಿದ್ದರೆ ಈ ಸಂವಾದಗಳಿಂದ ಪ್ರಯೋಜನವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT