ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮ್ ಆದ್ಮಿ’ಯಿಂದ ಆಶಾವಾದದ ಅಲೆ

Last Updated 7 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಇಡೀ ದೇಶದಲ್ಲಿ ಆಶಾವಾದದ ಅಲೆಯೊಂದು ಬೀಸುತ್ತಿದೆ. ರಕ್ತ­ರಹಿತ ಕ್ರಾಂತಿಯೊಂದು ಜಾರಿ­ಯಲ್ಲಿದೆ. ಕಳೆದ ಹತ್ತಾರು ವರ್ಷಗಳ ಅನೈತಿಕ ರಾಜಕಾರಣ, ಭ್ರಷ್ಟಾಚಾರ, ದುರಾಡ­ಳಿ­ತ­ಗಳಿಂದ ರೋಸಿ­ಹೋಗಿರುವ ಜನಸಾಮಾನ್ಯನಿಗೆ ‘ಭ್ರಷ್ಟಾ­ಚಾರದ ವಿರುದ್ಧ ಭಾರತ’ ಆಂದೋಲನ ತನ್ನ ಅತೃಪ್ತಿ ಮತ್ತು ರಾಜಕೀಯ ಸಕ್ರಿಯತೆಯನ್ನು ದಾಖಲಿಸಲು ಅವಕಾಶ ಮಾಡಿ­ಕೊಟ್ಟಿತು. ಅದರ ಮುಂದುವರಿದ ಭಾಗವಾಗಿ ದೆಹಲಿಯ ಜನ ಎರಡು ತಿಂಗಳ ಹಿಂದೆ ಅಭೂತಪೂರ್ವ ತೀರ್ಪು ನೀಡಿ  ಪರಂಪರಾಗತ ರಾಜಕಾರಣಕ್ಕೆ  ಕೊಡಲಿ ಪೆಟ್ಟು ಕೊಟ್ಟರು.

ಈಗ ಆ ಸದಾಶಯ ಮತ್ತು ಆಶಾವಾದದ ಗಾಳಿ ಕರ್ನಾ­ಟ­ಕ­ದಲ್ಲೂ ಇದೆ. ಎಎಪಿಯ ದೆಹಲಿ ಯಶಸ್ಸಿ­ನಲ್ಲಿ ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಪಾಲು ಬಹಳಷ್ಟಿದೆ. ಇಲ್ಲಿಂದ ನೂರಾರು ಕಾರ್ಯ­ಕರ್ತರು ದೆಹಲಿಗೆ ಹೋಗಿ ತಮ್ಮ ತನು–ಮನ–ಧನ ಅರ್ಪಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿ­ಕೊಂಡಿ­ದ್ದರು. ಇಲ್ಲಿಯ ಸಾವಿರಾರು ಜನ, ಪಕ್ಷಕ್ಕೆ ದೇಣಿಗೆ ನೀಡಿ ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣ ಬೆಂಬಲಿಸಿದರು. ದೆಹಲಿಯ ನಂತರ ಈ ಹೋರಾಟಕ್ಕೆ ಅತಿಹೆಚ್ಚು ದೇಣಿಗೆ ಹರಿದಿದ್ದು ಬೆಂಗಳೂರಿನ ನಿವಾಸಿ­ಗಳಿಂದ. ಈಗ ಎಎಪಿ ಕರ್ನಾಟಕದಲ್ಲೂ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಮೂಲಕ ದೆಹಲಿಯಲ್ಲಾದ ಬದಲಾವಣೆಯನ್ನು ಇಲ್ಲೂ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಎಎಪಿ ಮಾಡು­ತ್ತಿರುವ ರಾಜಕೀಯ ಹೋರಾಟದ ರೀತಿ ಅಪರಿಚಿತ­ವಲ್ಲ. ಐವತ್ತು-, ಅರವತ್ತರ ದಶಕದಲ್ಲಿಯೇ ಸಾಮಾನ್ಯ ರೈತಾಪಿ ಮನೆಯ ಶಾಂತವೇರಿ ಗೋಪಾಲ­ಗೌಡರನ್ನು ಸಾಗರ,- ಶಿವಮೊಗ್ಗದ ಜನ ತಾವೇ ದೇಣಿಗೆ ಕೊಟ್ಟು, ಪ್ರಚಾರ ಮಾಡಿ ಶಾಸನಸಭೆಗೆ ಆರಿಸಿ ಕಳುಹಿಸಿದ್ದರು. ಶಾಂತವೇರಿ ­ಅವರು ಅನಾ­ರೋಗ್ಯದ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗದೇ ಹೋದಾಗ ಕೋಣಂದೂರು ಲಿಂಗಪ್ಪನವರನ್ನು ಬೆಂಬಲಿಸಿ ಯಾವೊಂದೂ ಆಮಿಷಕ್ಕೆ ಒಳ­ಗಾಗದೆ ಅವರನ್ನು ಶಾಸನಸಭೆಗೆ ಕಳುಹಿಸಿದ್ದರು. 

ಕರ್ನಾಟಕದಲ್ಲಿನ ದಲಿತ-, ರೈತ, -ಬಂಡಾಯ ಚಳ­ವಳಿ­ಗಳು ಎಲ್ಲಾ ವರ್ಗಗಳ ಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಮೇಲ್ಮುಖ ಚಲನೆಗೆ ಕಾರಣೀಭೂತ­ವಾಗಿತ್ತು. ಆದರೆ, ಕಳೆದ ಎರಡು ದಶಕಗಳಿಂದೀಚೆಗೆ ರಾಜ್ಯದ ರಾಜಕೀಯ ರಂಗದಲ್ಲಿ ಆದ ಮೌಲ್ಯಗಳ ಅಧಃಪತನ ಕಾಂಗ್ರೆಸ್–-ಜೆಡಿಎಸ್, ಜೆಡಿಎಸ್-–ಬಿಜೆಪಿ ಮತ್ತು ಬಿಜೆಪಿ ಸರ್ಕಾರಗಳ ಸಮಯದಲ್ಲಿ ಪ್ರಪಾತಕ್ಕೆ ಬಿದ್ದು ಇಡೀ ದೇಶದಲ್ಲಿ ಅತಿ ಕೆಟ್ಟ ಮತ್ತು ಭ್ರಷ್ಟ ಸರ್ಕಾರವಿರುವ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿ ಪಡೆಯಿತು.

ಈ ಎಲ್ಲಾ ಕುಖ್ಯಾತಿಯನ್ನು ಹೋಗಲಾಡಿಸಿ­ಕೊಳ್ಳುವುದಕ್ಕೆ ಮತ್ತು ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಪುನರುತ್ಥಾನಕ್ಕೆ 2013ರ ವಿಧಾನಸಭಾ ಚುನಾವಣೆ ರಾಜ್ಯದ ಜನರಿಗೆ ಒಂದು ಅವಕಾಶ ಒದಗಿ­ಸಿತ್ತು. ಆದರೆ, ಇಲ್ಲಿ ಸಶಕ್ತವಾದ ರಾಜಕೀಯ ಚಳ­ವಳಿಯನ್ನಾಗಲಿ, ಪರ್ಯಾಯವನ್ನಾಗಲಿ ರಾಜ್ಯದ ಮುಂಚೂಣಿ ಚಿಂತಕರು, ಸಾಮಾಜಿಕ, ರಾಜಕೀಯ ಹೋರಾಟಗಾರರು ಕಟ್ಟಲಾಗದೇ ಹೋದರು.

ಇರುವ ರಾಜಕೀಯ ಪಕ್ಷಗಳಲ್ಲೇ ಒಂದನ್ನು ಆರಿಸಿಕೊಳ್ಳುವ ಸ್ಥಿತಿ ಜನರದಾಯಿತು. ಭ್ರಷ್ಟ ಬಿಜೆಪಿಯನ್ನು ತೊಲಗಿಸುವ ನಿರ್ಧಾರ ಮಾಡಿದ್ದ ಜನ ಏಳು ವರ್ಷಗಳಿಂದ ಅಧಿಕಾರದಿಂದ ಹೊರಗಿದ್ದ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಅಧಿಕಾರಕ್ಕೆ ತಂದರು. ಈಗ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆ, ಸರ್ಕಾರಿ ಕಚೇರಿಗಳಲ್ಲಿ ಕಮ್ಮಿಯಾಗದ ಲಂಚಗುಳಿತನ, ಭ್ರಷ್ಟಾಚಾರದ ವಿರುದ್ಧ ಸರ್ಕಾರಕ್ಕಿಲ್ಲದ ಚಿತ್ತಶುದ್ಧಿ, ಕಳಂಕಿತರು ಸಚಿವರಾಗಿರುವುದು ಇತ್ಯಾದಿಗಳಿಂದಾಗಿ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ.

ರಾಜ್ಯದಲ್ಲಿ ಎಎಪಿಗೆ ಈಗಾಗಲೇ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಜನ ತಾವಾ­ಗಿಯೇ ಎಸ್‍ಎಮ್‌ಎಸ್ ಕಳುಹಿಸಿ ಸದಸ್ಯರಾಗು­ತ್ತಿ­ದ್ದಾರೆ. ಒಳ್ಳೆಯದರ ಪರ ನಿಲ್ಲಬೇಕು ಎನ್ನುವ ಅನೇಕ ನಾಗರಿಕರು,-- ಗಣ್ಯರು ಪಕ್ಷದ ಸದಸ್ಯರಾಗಿದ್ದಾರೆ. ಇತ್ತೀಚಿನ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಅಂದಾಜು ಮೂರು ಲಕ್ಷ ಜನ ಎಎಪಿ ಸದಸ್ಯ­ರಾಗಿ­ದ್ದಾರೆ ಮತ್ತು ಅರ್ಧಕ್ಕೂ ಹೆಚ್ಚು ಜನ ಬೆಂಗಳೂರಿ­ನಲ್ಲಿಯೇ ಇದ್ದಾರೆ.  ಈ ದೇಶವನ್ನು ಪ್ರೀತಿಸುವ ಯುವಕರು ತಮ್ಮ ನೌಕರಿಗಳಿಂದ ರಜೆ ಪಡೆದು, ಇಲ್ಲವೇ ನೌಕರಿ ತ್ಯಜಿಸಿ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಂದರ  ಕನಸುಗಳನ್ನು ಹೊತ್ತ­ವರು ಇವರು. ತಮ್ಮ ಇಡೀ ಜೀವಮಾನದಲ್ಲಿ ಯಾವೊಂದೂ ಚಳವಳಿಯಲ್ಲಿ ಪಾಲ್ಗೊಂಡಿರದ ಅಥವಾ ಅಂತಹ ಅವಕಾಶ ಸಿಕ್ಕಿಲ್ಲದ ಯುವಕ ಯುವತಿಯರು ಇದನ್ನು ದೇಶಸೇವೆಯ ಕರೆ ಮತ್ತು ಅದಕ್ಕೆ ಓಗೊಡುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರೈತ ಮತ್ತು ಜನಪರ ಚಳವಳಿಗಳಲ್ಲಿ ಪಾಲ್ಗೊಂಡಿದ್ದ ಅನೇಕ ಮುಖಂಡರು, ಚಳವಳಿಗಳ ಬಗ್ಗೆ ಬದ್ಧತೆ ಹೊಂದಿರುವ ಚಿಂತಕರು ಮತ್ತು ಕಾರ್ಯಕರ್ತರು ರಾಜ್ಯದಲ್ಲಿ ಎಎಪಿಯನ್ನು ತಮ್ಮಂತಹದೇ ಚಳವಳಿ­ಗಳ ಮುಂದುವರಿದ ರೂಪ ಎಂದು ಭಾವಿಸಿ ಬೆಂಬಲಿ­ಸುತ್ತಿದ್ದಾರೆ. ಎಚ್.ಎಸ್.ದೊರೆಸ್ವಾಮಿ, ಎಸ್.ಆರ್.­ಹಿರೇಮಠ, ಕಡಿದಾಳು ಶಾಮಣ್ಣ, ರಾಘವೇಂದ್ರ ಕುಷ್ಟಗಿ, ಅ.ನ. ಯಲ್ಲಪ್ಪ ರೆಡ್ಡಿ ಮತ್ತು ಇನ್ನೂ ಅನೇಕ ಹೋರಾಟಗಾರರು ಪಕ್ಷದ ಸದಸ್ಯರಾಗಿದ್ದಾರೆ, ಇಲ್ಲವೇ ಅದನ್ನು ಬೆಂಬಲಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕೇವಲ ಚುನಾವಣೆಗೆ ಸ್ಪರ್ಧಿ­ಸುವ ಉದ್ದೇಶವನ್ನೇ ಮುಖ್ಯವಾಗಿಸಿಕೊಂಡು ಕೆಲವು ಜನ ಪಕ್ಷ ಸೇರುತ್ತಿದ್ದಾರೆ. ಇನ್ನೊಂದು ರಾಜಕೀಯ ಪಕ್ಷದ ಸದಸ್ಯನಾಗಿರದ ದೇಶದ ಯಾರೇ ನಾಗರಿಕ ಎಎಪಿ ಸದಸ್ಯರಾಗಲು ನಿರ್ಬಂಧ ಇರಬಾರದು. ಆದರೆ ಪಕ್ಷವನ್ನು ಯಾರು,  ಎಲ್ಲಿ ಮುನ್ನಡೆಸಬೇಕು, ಅವರ ಇತಿಮಿತಿಗಳೇನು ಹಾಗೂ ದೀರ್ಘಕಾಲದ ರಾಜಕೀಯ ಸಂಘಟನೆ,  ಹೋರಾಟದಲ್ಲಿ ಯಾರು ಎಲ್ಲಿ ನಿಲ್ಲುತ್ತಾರೆ ಎನ್ನುವ ಸ್ಪಷ್ಟ ಕಲ್ಪನೆ ಪಕ್ಷಕ್ಕಿರ­ಬೇಕು. ಇಲ್ಲದಿದ್ದರೆ ಅವಕಾಶವಾದಿಗಳು ಪಕ್ಷದ ನಿಸ್ವಾರ್ಥಿ ಕಾರ್ಯಕರ್ತರನ್ನು ಬಳಸಿಕೊಂಡು ಈ ಆಂದೋ­ಲನದ ಧ್ಯೇಯೋದ್ದೇಶ, ಪಾವಿತ್ರ್ಯವನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ. ಅಂಥವರು, ಚಾರಿತ್ರಿಕ ಅವಕಾಶವೊಂದನ್ನು ಮಣ್ಣುಗೂಡಿಸಿದ ಆರೋಪ­ವನ್ನೂ ಹೊರಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಹಿರಿಯ ಹೋರಾಟಗಾರರ ಮತ್ತು ಪ್ರಾಮಾ­ಣಿಕ ಮನಸ್ಸುಗಳ ಮಾರ್ಗದರ್ಶನ ಪಕ್ಷಕ್ಕೆ ತೀರಾ ಅಗತ್ಯವಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ನಗರಕೇಂದ್ರಿತ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಉಮೇದುವಾರಿಕೆಯಿಂದಾಗಿ ಖಂಡಿತವಾಗಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಈ ಪಕ್ಷ ದುಡಿ­ಯುತ್ತದೆ ಮತ್ತು ಈ ಪರ್ಯಾಯ ಯಾವುದೇ ಕಾರಣಕ್ಕೂ ಭ್ರಷ್ಟವಾಗುವುದಿಲ್ಲ ಮತ್ತು ಇದರ ಅಭ್ಯರ್ಥಿಗಳು ಚುನಾವಣಾ ಅಕ್ರಮಗಳನ್ನು ಎಸಗುವು­ದಿಲ್ಲ ಎನ್ನುವ ಸಂದೇಶವನ್ನು ರಾಜ್ಯದ ಜನತೆಗೆ ಮುಟ್ಟಿ­ಸು­ವಲ್ಲಿ ಯಶಸ್ವಿಯಾದರೆ, ರಾಷ್ಟ್ರ ರಾಜ­ಧಾನಿ­ಯಲ್ಲಾದ ರಾಜಕೀಯ ಕ್ರಾಂತಿ ರಾಜ್ಯ ರಾಜ­ಧಾನಿಯಲ್ಲೂ ಈ ಬಾರಿಯೇ ಆಗುತ್ತದೆ. ಮತ್ತದು ಕರ್ನಾಟಕದ ಉದ್ದಗಲಕ್ಕೂ ಪಸರಿಸುತ್ತದೆ ಎಂಬುದು ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT