ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪಗ್ರಹದಿಂದ ಕಾವೇರಿ ವಿವಾದ ಪರಿಹಾರ?’

Last Updated 12 ಅಕ್ಟೋಬರ್ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಗ್ರಹಗಳಿಂದ ಸಿಗುವ ಮಾಹಿತಿ­ ಬಳಸಿ­ಕೊಂಡು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವೇ?’

– ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಾಮಾಜಿಕ ಪ್ರಯೋಜನಕ್ಕೆ ಬಾಹ್ಯಾಕಾಶ ತಂತ್ರಜ್ಞಾನ’ ವಿಶೇಷ ಉಪನ್ಯಾಸದಲ್ಲಿ ಕೇಳಿಬಂದ ಪ್ರಶ್ನೆ ಇದು.

‘ಎರಡೂ ರಾಜ್ಯಗಳ ಜಲಾನಯನ ಪ್ರದೇಶ, ನೀರಿನ ಸಂಗ್ರಹ, ಬೆಳೆದು ನಿಂತ ಬೆಳೆಗಳ ನಿಖರ ಮಾಹಿತಿ ಉಪಗ್ರಹದಿಂದ ಸಿಗಲಿದೆ. ಎರಡೂ ರಾಜ್ಯಗಳಲ್ಲಿ ಜಲಾ­ನ­ಯನ ಪ್ರದೇಶ ಹೇಗೆ ಬೆಳೆದುಬಂದಿದೆ ಎನ್ನುವುದು ಸಹ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಮಾಹಿತಿ­ಯನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ಇಸ್ರೊ ಹಿರಿಯ ವಿಜ್ಞಾನಿ ಪ್ರೊ.ಆರ್.ಆರ್. ನವಲಗುಂದ ಉತ್ತರಿಸಿದರು.

‘ಬೆಂಗಳೂರಿನ ಕೆರೆ–ರಾಜಕಾಲುವೆ ಅತಿಕ್ರಮಣವನ್ನು ನಿಖರವಾಗಿ ಪತ್ತೆ ಹಚ್ಚುವುದು ಸಾಧ್ಯವೇ’ ಎನ್ನುವುದು ಮತ್ತೊಂದು ಪ್ರಶ್ನೆ. ‘ನಮ್ಮ ಉಪಗ್ರಹಗಳು ಭೂಮಿಯ ಚಿತ್ರವನ್ನು ಸೆರೆ ಹಿಡಿಯಲು ಆರಂಭಿಸಿದ ದಿನದಿಂದ ಇಲ್ಲಿವರೆಗೆ ಬೆಂಗಳೂರಿನ ಚಿತ್ರಣ ಹೇಗೆ ಬದಲಾಗುತ್ತಾ ಬಂದಿದೆ ಎಂಬ ಸ್ಪಷ್ಟ ಮಾಹಿತಿ ನಮ್ಮಲ್ಲಿ ಲಭ್ಯವಿದೆ. ಅದರಲ್ಲಿ ಅತಿಕ್ರಮಣದ ವಿವರಗಳು ಸ್ಪಷ್ಟವಾಗಿ ಗೋಚರಿಸಲಿವೆ. ಅತಿಕ್ರಮಣ ಮಾಡಿದ್ದು ಯಾರು ಎನ್ನುವುದು ಮಾತ್ರ ಸರ್ಕಾರದ ತನಿಖೆಗೆ ಬಿಟ್ಟ ವಿಚಾರ’ ಎಂದು ಪ್ರೊ. ನವಲಗುಂದ ವಿವರಿಸಿದರು.

‘ಉತ್ತರ ಭಾರತದ ಬಹುಭಾಗ ಸಮತಟ್ಟಾಗಿದೆ. ಆದರೆ, ದೇಶದ ದಕ್ಷಿಣ ಭಾಗ ಬಲು ಸಂಕೀರ್ಣವಾಗಿದೆ. ನದಿಗಳ ಜೋಡಣೆ ಅಷ್ಟು ಸುಲಭ ಸಾಧ್ಯವಿಲ್ಲ. ಇದು ಕೇವಲ ಕಾಲುವೆ ತೋಡುವ ಪ್ರಶ್ನೆ ಅಲ್ಲ. ನಿಯಮಿತ ಅಂತರದಲ್ಲಿ ಭೂಮಿಯ ಮೇಲ್ಮೈ ಲಕ್ಷಣ ಬದಲಾಗುತ್ತಾ ಹೋಗುವುದರಿಂದ ಒಂದು ನದಿಯ ನೀರನ್ನು ಮತ್ತೊಂದು ನದಿಗೆ ಹರಿಸುವುದು ಸುಲಭವಿಲ್ಲ’ ಎಂದು ಹೇಳಿದರು.

‘ನೀರು ಬೆಳಕಿನ ಪ್ರತಿಫಲನ ಮಾಡದ ಕಾರಣ ಉಪ­ಗ್ರಹದ ಕ್ಯಾಮೆರಾಗಳಿಗೆ ಸಾಗರದ ತಳಭಾಗದಲ್ಲೇನಿದೆ ಎಂಬುದನ್ನು ಪತ್ತೆ ಮಾಡಲು ಆಗದು. ಹೀಗಾಗಿ ಕಣ್ಮರೆ­ಯಾದ ಮಲೇಷ್ಯಾ ವಿಮಾನ ಎಲ್ಲಿ ಬಿತ್ತು ಎಂಬುದನ್ನು ಗುರುತಿಸಲು ಆಗಿಲ್ಲ’ ಎಂದು ವಿವರಿಸಿದರು.
‘ಕೇರಳದ ತೆಂಗಿನ ಮರಗಳಿಗೆ 1972ರಲ್ಲಿ ರೋಗ ಕಾಣಿಸಿಕೊಂಡಾಗ ಅದು ಹರಡದಂತೆ ನೋಡಿಕೊಳ್ಳಲು ಹೆಲಿಕಾಪ್ಟರ್‌ಗಳ ಸಹಾಯದಿಂದ ತೆಂಗಿನ ತೋಟಗಳ ಚಿತ್ರೀಕರಣ ಮಾಡಿ ರೋಗದ ಮರಗಳನ್ನು ಗುರುತಿಸ­ಲಾಗಿತ್ತು. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಅಲ್ಲಿಂದಲೇ ಆರಂಭವಾಯಿತು’ ಎಂದು ತಿಳಿಸಿದರು.

‘ಉಪಗ್ರಹ ಆಧಾರಿತ ತಂತ್ರಜ್ಞಾನದಿಂದ ದೇಶದ ಕೃಷಿಕ್ಷೇತ್ರ ಅಗಾಧ ಪ್ರಮಾಣದಲ್ಲಿ ಬೆಳೆದಿದೆ. ದೇಶದ ಆಹಾರ ಉತ್ಪಾದನೆ 216 ಕೋಟಿ ಟನ್‌ಗಳಿಗೆ ಹೆಚ್ಚಿಸುವಲ್ಲಿ ಅದರ ಪಾತ್ರ ಗಣನೀಯವಾಗಿದೆ’ ಎಂದು ಹೇಳಿದರು. ‘ಚಂಡಮಾರುತದ ಪರಿಣಾಮವನ್ನು ಮುಂಚಿತ­­ವಾಗಿ ಗುರುತಿಸುವುದು, ಮೀನುಗಾರರಿಗೆ ಮುನ್ಸೂಚನೆ ನೀಡುವುದು ಸೇರಿದಂತೆ ಹಲವು ಸಾಮಾಜಿಕ ಜವಾಬ್ದಾರಿಗಳನ್ನು ಉಪಗ್ರಹಗಳು ನಿಭಾಯಿಸುತ್ತಿವೆ’ ಎಂದು ಹೆಮ್ಮೆಯಿಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT