ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎರಡು ವಾರದಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣ’

ಆರ್ಟಿರಿಯಲ್‌– ಸಬ್‌ ಆರ್ಟಿರಿಯಲ್ ರಸ್ತೆ ಗುಂಡಿ ಮುಚ್ಚಲು ₹10.60 ಕೋಟಿ
Last Updated 28 ನವೆಂಬರ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳ ಗುಂಡಿ ಮುಚ್ಚಲು ಮೊದಲ ಆದ್ಯತೆ ನೀಡಲಾಗುವುದು. ಈ ರಸ್ತೆಗಳಿಗೆ ₹10.60 ಕೋಟಿ ವೆಚ್ಚ ಮಾಡಲಾಗುವುದು. ಎರಡು ವಾರಗಳಲ್ಲಿ ನಗರದ ಗುಂಡಿಗಳನ್ನು ಮುಚ್ಚಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ತಿಳಿಸಿದರು.

ಬಿಬಿಎಂಪಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದೊಂದು ತಿಂಗಳಲ್ಲಿ ಸುರಿದ ನಿರಂತರ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಹೋಗಿವೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಮರೋಪಾದಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

‘2012–13ರಲ್ಲಿ 105.55 ಕಿ.ಮೀ. ಉದ್ದದ ರಸ್ತೆ ಹಾಗೂ 2013–14ರಲ್ಲಿ 270 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಈ ರಸ್ತೆಗಳನ್ನು ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಇವುಗಳ ಗುಂಡಿ ಮುಚ್ಚಲು ಬಿಬಿಎಂಪಿ ವೆಚ್ಚ ಮಾಡುತ್ತಿಲ್ಲ. ₹417 ಕೋಟಿ ವೆಚ್ಚದಲ್ಲಿ 350 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ಈ ರಸ್ತೆಗಳ ಗುಂಡಿ ಮುಚ್ಚಿ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಈ ರಸ್ತೆಗಳ ಗುಂಡಿ  ಮುಚ್ಚಲು ಹಣ ವೆಚ್ಚ ಮಾಡುತ್ತಿಲ್ಲ’ ಎಂದು ಅವರು ತಿಳಿಸಿದರು. ‘ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಇದೆ. ಈ ರಸ್ತೆಗಳ ಗುಂಡಿ ಮುಚ್ಚಲು ಮೊದಲ ಆದ್ಯತೆ ನೀಡಲಾಗುತ್ತಿದೆ.

ಈ ರಸ್ತೆಗಳಲ್ಲಿರುವ ಗುಂಡಿಗಳ ಸಮೀಕ್ಷೆ ನಡೆಸಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಎಂಜಿನಿಯರ್‌ಗಳಿಗೆ ಎರಡು ದಿನಗಳ ತರಬೇತಿ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. ‘ಗುರುವಾರದಿಂದ ಗುಂಡಿ ಮುಚ್ಚುವ  ಕಾಮಗಾರಿ ಆರಂಭವಾಗಿದೆ. ಮೂರು ದಿನಗಳಲ್ಲಿ ಸಾವಿರಾರು ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಬಾರದಿದ್ದರೆ ಈ ಪ್ರಕ್ರಿಯೆ ಮುಂದುವರಿಯಲಿದೆ’ ಎಂದರು.

‘ನಗರದಲ್ಲಿ 55 ಲಕ್ಷ ವಾಹನಗಳಿವೆ. ಇವುಗಳಲ್ಲಿ ದ್ವಿಚಕ್ರ ವಾಹನಗಳು ಶೇ 80ರಷ್ಟು ಇವೆ. ರಸ್ತೆ ಗುಂಡಿಗಳಿಂದ ಹೆಚ್ಚು ಸಮಸ್ಯೆ ಅನುಭವಿಸುವುದು ದ್ವಿಚಕ್ರ ವಾಹನ ಸವಾರರು. ನಗರದ ಸಂಭವಿಸುವ ಅಪಘಾತಗಳಿಗೆ ಗುಂಡಿಗಳೇ ಕಾರಣ ಅಲ್ಲ. ಗುಂಡಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಈ ವರ್ಷ 22 ಕೋಟಿ: ‘ಈ ವರ್ಷ ರಸ್ತೆ ಗುಂಡಿ ಮುಚ್ಚಲು ಹಾಗೂ ಅಭಿವೃದ್ಧಿ ಮಾಡಲು ಬಿಬಿಎಂಪಿ ₹600 ಕೋಟಿ ವೆಚ್ಚ ಮಾಡಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಆರೋಪ ಸುಳ್ಳು. ಈ ವರ್ಷ ರಸ್ತೆ ನಿರ್ವಹಣೆಗೆ ವೆಚ್ಚ ಮಾಡಿದ್ದು ₹22 ಕೋಟಿ ಮಾತ್ರ’ ಎಂದು ಅವರು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT