ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಭಾಷೆಗೆ ತಂತ್ರಜ್ಞಾನದ ಶಕ್ತಿ ತುಂಬಿ’

ಸೊರಬ: 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಣ್ಣರಾಮ ಕರೆ
Last Updated 10 ಜುಲೈ 2014, 6:53 IST
ಅಕ್ಷರ ಗಾತ್ರ

ಸೊರಬ: ‘ಚರಿತ್ರೆಯ ಬಲವಿರುವ ಕನ್ನಡ ಭಾಷೆಗೆ  ಯಜಮಾನಿಕೆ ಭಾಷೆ ಎನಿಸಿಕೊಂಡಿರುವ ಸಂಸ್ಕೃತದ  ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದ್ದರೂ ಅದನ್ನು ಜೀರ್ಣಿಸಿಕೊಂಡಿದೆ. ಹೀಗಿರುವಾಗ ಕೇವಲ ಉದ್ಯೋಗದ ಅನಿವಾರ್ಯತೆಗೆ ಹುಟ್ಟಿಕೊಂಡಿರುವ ಇಂಗ್ಲಿಷ್ ಭಾಷೆಯನ್ನು ಜೀರ್ಣಿಸಿ ಕೊಳ್ಳುವ ಶಕ್ತಿ ಖಂಡಿತ ಇದೆ  ಎಂದು 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಣ್ಣರಾಮ ಅಭಿಪ್ರಾಯಪಟ್ಟರು.

ಬುಧವಾರ ನಡೆದ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಮಾತ ನಾಡಿದ ಅವರು, ವಿದ್ವಾಂಸರು, ಸಾಹಿತಿ ಗಳು ಕನ್ನಡ ಭಾಷೆಗೆ ತಂತ್ರಜ್ಞಾನದ ಶಕ್ತಿ ತುಂಬಬೇಕು. ಕನ್ನಡದ ಮೂಲಕವೇ ಉದ್ಯೋಗ ದೊರೆಯುವಂತಾಗಬೇಕು ಎಂದು ಅವರು ಒತ್ತಾಯಿಸಿದರು.
ಬಂಗಾಳಿ, ತಮಿಳು ಭಾಷೆಗೆ ತಾಂತ್ರಿಕ ಶಕ್ತಿ ಇದೆ ಎನ್ನುವುದಾದರೆ ಕನ್ನಡಕ್ಕೆ ಏಕೆ ದೊರೆತಿಲ್ಲ ಎನ್ನುವುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.

ಪಂಪನಾದಿಯಾಗಿ  ಜೀವಪರ ನಿಲುವನ್ನು ಹೊಂದಿರುವ ಕನ್ನಡ ಸಾಹಿತ್ಯ ಎಂದಿಗೂ ಪ್ರಭುತ್ವದೊಂದಿಗೆ ಅನುಸಂಧಾನ ಮಾಡಿಕೊಂಡಿಲ್ಲ. ಬದಲಾಗಿ ತನ್ನ ವಿಶಿಷ್ಟ ಸ್ವಂತಿಕೆ ಉಳಿಸಿಕೊಂಡು ಪ್ರಭುತ್ವಕ್ಕೆ ಸೆಡ್ಡು ಹೊಡೆದು ಸಮಾನತೆಯ ಕನಸು ಕಂಡು ಸಾಕ್ಷಿ ಪ್ರಜ್ಞೆಯಾಗಿ ಪ್ರಭುತ್ವವನ್ನು ಎಚ್ಚರಿಸಿದೆ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಸಾಹಿತಿಗಳು  ಪ್ರಭುತ್ವವನ್ನು ಧಿಕ್ಕರಿಸದೆ ಆದರ್ಶ–ತತ್ವಗಳ ಮುಖವಾಡ ಧರಿಸಿ ಪ್ರಭುತ್ವ ಓಲೈಕೆಗೆ ತೊಡಗಿರುವುದು ದುರಂತವೇ ಸರಿ ಎಂದರು.

ಜಾಗತೀಕರಣದ ಇಂದಿನ ದಿನಗಳಲ್ಲಿ ಯುವ ಜನರು ಬದುಕನ್ನು ಹುಡುಕುತ್ತಾ ಅಲೆಯುತ್ತಿದ್ದಾರೆ. ಕನ್ನಡದ ಪ್ರತಿಭೆಗಳು ಪಲಾಯನ ವಾಗುತ್ತಿವೆ. ಆದ್ದರಿಂದ, ಭಾಷೆಗೆ ವೃತ್ತಿಯನ್ನು ಕಟ್ಟಿಕೊಡುವ ಶಕ್ತಿಯನ್ನು ತುಂಬಬೇಕಿದೆ. ಹಿಂದಿ ಭಾಷೆಯನ್ನು ಪ್ರಧಾನ ಸಂಪರ್ಕ ಭಾಷೆಯಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಲ್ಲಿ ಈ ಸುತ್ತೋಲೆಯನ್ನು ಕುರಿತಂತೆ ಚರ್ಚೆಗಳು ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಸಂಘಟಿತ ಹೋರಾಟ ನಡೆಸದಿದ್ದರೆ ಕರ್ನಾಟಕ ಹಿಂದಿ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಕೂಡಲೇ ಕನ್ನಡ ಶಕ್ತಿ ಕೇಂದ್ರಗಳು, ಸಂಘ ಸಂಸ್ಥೆಗಳು, ರಾಜಕೀಯ ಧುರೀಣರು ಎಚ್ಚೆತ್ತು ಪ್ರತಿರೋಧ ತೋರಬೇಕಿದೆ ಎಂದು ಮನವಿ ಮಾಡಿದರು.

ಪ್ರಕೃತಿಯ ವೈಪರೀತ್ಯದಿಂದಾಗಿ ತಾಲ್ಲೂಕಿನ ಬಹುಪಾಲು ಗ್ರಾಮಗಳು ಮತ್ತೆ ಮತ್ತೆ ಬರಗಾಲಕ್ಕೆ ತುತ್ತಾಗುತ್ತಿವೆ. ವರದಾ–ದಂಡಾವತಿ ತಾಲ್ಲೂಕಿನ ಜೀವನದಿಗಳಾದರೂ ಅವುಗಳ ಲಾಭ ದಕ್ಕುತ್ತಿಲ್ಲ. ಆದ್ದರಿಂದ ಏತನೀರಾವರಿ, ಚೆಕ್ ಡ್ಯಾಮ್‌ಗಳ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT