ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕ ಬಂದ್‌’ಗೆ ಸ್ತಬ್ಧಗೊಂಡ ರಾಜಧಾನಿ

ಮಹಾದಾಯಿ ನ್ಯಾಯಮಂಡಳಿ ಮಧ್ಯಂತರ ತೀರ್ಪಿಗೆ ಖಂಡನೆ *ಒತ್ತಾಯವಾಗಿ ಅಂಗಡಿ ಮುಚ್ಚಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು
Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಖಂಡಿಸಿ ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ನಿಂದಾಗಿ ವ್ಯಾಪಾರ– ವಹಿವಾಟು ಸ್ಥಗಿತಗೊಂಡು ನಗರವೇ ಸ್ತಬ್ಧಗೊಂಡಿತು.

ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್‌ಗೆ 1,250 ಸಂಘಟನೆಗಳು ಬೆಂಬಲ ನೀಡಿದವು. ಮೆಜೆಸ್ಟಿಕ್‌್, ಯಶವಂತಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳನ್ನು ಮಾಲೀಕರು ಸ್ವಯಂ ಆಸಕ್ತಿಯಿಂದ ಬಂದ್‌ ಮಾಡಿದ್ದರು.

ಇನ್ನು ಕೆಲವೆಡೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಒತ್ತಾಯಪೂರ್ವಕವಾಗಿ  ಅಂಗಡಿಗಳನ್ನು ಮುಚ್ಚಿಸಿದರು. ಹಾಲು, ಆಂಬುಲೆನ್ಸ್‌ ಸೇರಿದಂತೆ ಅಗತ್ಯ ಸೇವೆಗಳು ಹೊರತುಪಡಿಸಿ ಬಿಎಂಟಿಸಿ ಬಸ್, ಮೆಟ್ರೋ ರೈಲು, ಶಾಪಿಂಗ್ ಮಾಲ್‌ಗಳು, ಎಪಿಎಂಸಿ ಕ್ಯಾಬ್, ಆಟೊ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸಂಜೆ 5ರ ನಂತರ ಜನಜೀವನ ಸಹಜ ಸ್ಥಿತಿಗೆ ಬಂತು. ಮೆಟ್ರೊ, ಬಸ್‌, ಆಟೊಗಳ ಸಂಚಾರ ಮತ್ತೆ ಆರಂಭವಾಯಿತು.

ಮೆಜೆಸ್ಟಿಕ್‌್ ಮೆಟ್ರೊ ಹಾಗೂ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ನಿಲ್ದಾಣದ ಬಾಗಿಲು ಮುಚ್ಚಲಾಯಿತು.

ಆಗ ನಿಲ್ದಾಣದೊಳಗೆ ಹೋಗುವ ನಿರ್ಧಾರ ಕೈಬಿಟ್ಟ ಕಾರ್ಯಕರ್ತರು ರಸ್ತೆಯಲ್ಲೇ ನಿಂತು ಪ್ರತಿಭಟನೆ ಮುಂದುವರಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದ ಓಲಾ ಕಂಪೆನಿಯ ಕ್ಯಾಬ್‌ವೊಂದಕ್ಕೆ ಪ್ರತಿಭಟನಾನಿರತರು ಕಲ್ಲು ಹೊಡೆದರು. ಪರಿಣಾಮ ಗಾಜು ಒಡೆಯಿತು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮುತ್ತಿಗೆ ಹಾಕಿದ ಪ್ರತಿಭಟನಾನಿರತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಹಾಗೂ ಪ್ರತಿಭಟನಾನಿರತರ ವಿರುದ್ಧ ಮಾತಿನ ಚಕಮಕಿ ಉಂಟಾಯಿತು.  ಅಸ್ವಸ್ಥಗೊಂಡ ಪ್ರತಿಭಟನಾನಿರತನೊಬ್ಬ ಸ್ಥಳದಲ್ಲೇ ಕುಸಿದು ಬಿದ್ದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಬಳಿಕ ಪೊಲೀಸರು, 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ನಿಲ್ದಾಣದಿಂದ ಹೊರಗೆ ಕರೆದೊಯ್ದರು.

ಸಂಸದರಿಗೆ ಪಿಂಡ: ರಾಜ್ಯದ 28 ಸಂಸದರಿಗೆ ಪಿಂಡ ಬಿಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು  ಪುರಭವನ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿದ್ದ ನಟಿ ಮೈತ್ರಿಯಾಗೌಡ ಹಾಗೂ ಮುಖಂಡರು, ಪಿಂಡಗಳಿಗೆ ಎಳ್ಳು ನೀರು ಬಿಟ್ಟರು.

ರಾಜಭವನ ಮುತ್ತಿಗೆಗೆ ಯತ್ನ: ಬಂಧನ, ಬಿಡುಗಡೆ: ಮೈಸೂರು ಬ್ಯಾಂಕ್‌ ವೃತ್ತದಿಂದ ರಾಜಭವನದವರೆಗೆ ಮೆರವಣಿಗೆ ನಡೆಸಿದ ಕರವೇ ಮಹಿಳಾ ಘಟಕ ಕಾರ್ಯಕರ್ತೆಯರು, ರಾಜಭವನ ಮುತ್ತಿಗೆ ಹಾಕುವ ಯತ್ನಿಸಿದರು.

ಈ ವೇಳೆ ಅವರನ್ನು ಪೊಲೀಸರು ತಡೆದರು. ಆಗ ಪರಸ್ಪರ ಮಾತಿನ ಚಕಮಕಿ ಉಂಟಾಯಿತು. ಬಳಿಕ ಕಾರ್ಯಕರ್ತೆಯರನ್ನು ಬಂಧಿಸಿದ ಪೊಲೀಸರು, ಕೆಲ ನಿಮಿಷ ಬಳಿಕ ಬಿಡುಗಡೆಗೊಳಿಸಿದರು. 
   
ಸಂಸದರ ಪ್ರತಿಕೃತಿಗಳಿಗೆ ನೇಣು: ರಾಜ್ಯದ ಸಂಸದರ ಪ್ರತಿಕೃತಿಗಳಿಗೆ ನೇಣು ಹಾಕುವ ಮೂಲಕ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.  

ಕ್ರಾಂತಿ ಸೇನೆಯ ಕಾರ್ಯಕರ್ತರು ನಗರದ ಪ್ರಮುಖ ಪ್ರದೇಶಗಳಲ್ಲಿ ಬೈಕ್‌ ರ್‌್ಯಾಲಿ ನಡೆಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಅಂತ್ಯಗೊಳಿಸಿದರು.  ಜತೆಗೆ  ಸಂಸದರ ಫೋಟೊಗಳನ್ನು ಹರಾಜು ಹಾಕಲಾಯಿತು. 

‘ಕಬಾಲಿ’ಗೆ ಬಿಳಿ ಬಟ್ಟೆ: ಬಂದ್‌ ಬಿಸಿ ‘ಕಬಾಲಿ’ ಚಿತ್ರಕ್ಕೂ ತಟ್ಟಿತು. ಮುಂಜಾಗ್ರತಾ ಕ್ರಮವಾಗಿ ಶೇಷಾದ್ರಿಪುರದ ನಟರಾಜ್‌್ ಚಿತ್ರಮಂದಿರದಲ್ಲಿದ್ದ ಕಬಾಲಿ ಚಿತ್ರದ ಕಟೌಟ್‌ಗಳನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು.

ದುಪ್ಪಟ್ಟು ಹಣ ವಸೂಲಿ: ಬಸ್‌  ಹಾಗೂ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪ್ರಯಾಸಪಟ್ಟರು.

ಕೆಲ ಪ್ರಯಾಣಿಕರು, ಕೆಲವೇ ಆಟೊ ಹಾಗೂ ಖಾಸಗಿ ವಾಹನಗಳಲ್ಲಿ ತಮ್ಮ ಸ್ಥಳಗಳಿಗೆ ಹೋದರು. ಆಟೊ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರೂ ಕೆಲವೆಡೆ ಆಟೊಗಳ ಸಂಚಾರ ಕಂಡುಬಂತು.  ಚಾಲಕರು, ಪ್ರಯಾಣಿಕರಿಂದ ಮೀಟರ್‌ಗಿಂತ ದುಪ್ಪಟ್ಟು ಹಣ ವಸೂಲಿ ಮಾಡಿದರು.

‘ಬಸ್‌ ಇಲ್ಲದಿದ್ದರೂ ಮೆಟ್ರೊ ಇರಬಹುದು ಎಂದು ಭಾವಿಸಿ ಮೆಜೆಸ್ಟಿಕ್‌ಗೆ ಬಂದೆ. ಮೆಟ್ರೊ ಸೇವೆ ಸ್ಥಗಿತಗೊಂಡಿತ್ತು. ಕೆಲವೇ ಆಟೊಗಳು ಸಂಚಾರ ಮಾಡುತ್ತಿದ್ದವು. ಮೆಜೆಸ್ಟಿಕ್‌ನಿಂದ ಟ್ರಿನಿಟಿ ಸರ್ಕಲ್‌ಗೆ ತೆರಳಲು ₹150 ಪಾವತಿಸಿದೆ’ ಎಂದು ಪ್ರಯಾಣಿಕ ಅರವಿಂದ್‌ ಅಳಲು ತೋಡಿಕೊಂಡರು.

ಬಾಲಕಿಯ ವಿನೂತನ ಪ್ರತಿಭಟನೆ: ಬಸವೇಶ್ವರನಗರದ ಒಂಬತ್ತನೇ ತರಗತಿ ವಿದ್ಯಾರ್ಥಿ ನಂದಿತಾ, ಸ್ಕೇಟಿಂಗ್‌ ಮಾಡುತ್ತಲೇ ಉಪಹಾರ ವಿತರಿಸಿ  ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದಳು.

ಮೆಜೆಸ್ಟಿಕ್ ಬಿಎಂಟಿಎಸ್‌ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ನಂದಿತಾ, ಸ್ಕೇಟಿಂಗ್‌ ಮಾಡುತ್ತಲೇ ಉಪಹಾರ ಹುಡುಕಾಟ ನಡೆಸುತ್ತಿದ್ದವರ ಬಳಿ ಹೋದರು. ತಾಯಿ ಅಂಬಿಕಾ ಮಾಡಿಕೊಟ್ಟಿದ್ದ ಚಿತ್ರಾನ್ನ ಹಾಗೂ ಉಪ್ಪಿಟ್ಟು ನೀಡಿ ಹಸಿವು ನೀಗಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಂದಿತಾ, ‘ಬಂದ್‌ನಿಂದಾಗಿ ಪರ ಊರಿನಿಂದ ಬಂದಿರುವ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಆಹಾರ ಸಿಗುವುದಿಲ್ಲ. ತಂದೆ– ತಾಯಿ ಸಲಹೆಯಂತೆ ಉಪಹಾರ ತಂದುಕೊಟ್ಟಿದ್ದೇನೆ. ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಹೇಳಿದಳು.

ಸಂಜೆಯಿಂದ ಬಸ್‌ ಸಂಚಾರ: ಬಿಎಂಟಿಸಿ ಬಸ್‌ಗಳ ಸೇವೆಯನ್ನೂ ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು. ಸಂಜೆ 5ರ ನಂತರ ಬಸ್‌ ಸೇವೆ ಆರಂಭಗೊಂಡಿತು.

ಸಂಜೆಯಿಂದ ಸುಮಾರು 500 ಬಸ್‌ಗಳು ಸಂಚರಿಸಿದವು. ಬಂದ್‌ನಿಂದಾಗಿ ಬಿಎಂಟಿಸಿಗೆ ₹4.5 ಕೋಟಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಂಜೆಯವರೆಗೆ ಮೆಟ್ರೊ  ಸ್ಥಗಿತ: ಆದಾಯ ಖೋತಾ
ಸಾಮಾನ್ಯವಾಗಿ ಬಂದ್‌ ಸಂದರ್ಭದಲ್ಲಿ ಮೆಟ್ರೊ ರೈಲುಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಶನಿವಾರ ಸಂಜೆಯ ವರೆಗೆ ಮೆಟ್ರೊ ಸೇವೆಯೂ ಸ್ಥಗಿತಗೊಂಡಿತ್ತು.

ಬೆಳಿಗ್ಗೆ ಕನ್ನಡಪರ ಸಂಘಟನೆಗಳ 30 ಕಾರ್ಯಕರ್ತರು ಮೈಸೂರು ರಸ್ತೆಯ ನಿಲ್ದಾಣದಲ್ಲಿ ಟೋಕನ್‌ ಖರೀದಿಸಿ ನಿಲ್ದಾಣ ಪ್ರವೇಶಿಸಿದರು. ಘೋಷಣೆಗಳನ್ನು ಕೂಗಿ ರೈಲು ಸಂಚಾರಕ್ಕೆ ತಡೆಯೊಡ್ಡಿದರು. ಸುರಕ್ಷತೆ ದೃಷ್ಟಿಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಸಂಪಿಗೆ ರಸ್ತೆ ಹಾಗೂ ನಾಗಸಂದ್ರದ ನಡುವೆ ಬೆಳಿಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭಗೊಂಡಿತ್ತು. ಬೆಳಿಗ್ಗೆ 6.15ರ ವರೆಗೆ ಸಂಚಾರ ಯಥಾಸ್ಥಿತಿಯಲ್ಲಿತ್ತು.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಂಪಿಗೆ ರಸ್ತೆಯ ನಿಲ್ದಾಣದ ಪ್ಲಾಟ್‌ಫಾರಂಗೆ ನುಗ್ಗಿ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ಸಂಚಾರ ಸ್ಥಗಿತಗೊಂಡಿತು.

ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಕಡೆಗಳಲ್ಲಿ ಸಂಚಾರ ನಿಲ್ಲಿಸಲಾಯಿತು. ಸಂಜೆ 5ರ ಬಳಿಕ ರೈಲು ಸೇವೆ ಪುನರಾರಂಭಗೊಂಡಿತು. ಮೈಸೂರು ರಸ್ತೆ– ಬೈಯಪ್ಪನಹಳ್ಳಿ ಮಾರ್ಗದಲ್ಲಿ 20 ನಿಮಿಷಕ್ಕೊಂದು ಹಾಗೂ ಸಂಪಿಗೆ ರಸ್ತೆ–ನಾಗಸಂದ್ರ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

‘ನಗರದಲ್ಲಿ ಮೆಟ್ರೊ ಸೇವೆ ಆರಂಭಗೊಂಡಿತ್ತು 2012ರಲ್ಲಿ. ಆ ಬಳಿಕ ಹತ್ತಾರು ಬಂದ್‌ಗಳು ನಡೆದಿವೆ. ಆ ಸಂದರ್ಭಗಳಲ್ಲಿ ಮೆಟ್ರೊ ಕಾರ್ಯನಿರ್ವಹಿಸಿದೆ. ಸೇವೆ ಸ್ಥಗಿತಗೊಳಿಸಿದ್ದು ಇದೇ ಮೊದಲು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮೆಟ್ರೊಗೆ ₹ 30 ಲಕ್ಷ ಕಡಿಮೆ ಆದಾಯ: ಬಂದ್‌ನಿಂದಾಗಿ ಬೆಂಗಳೂರು  ಮೆಟ್ರೊ ರೈಲು ನಿಗಮವು ಎಂದಿಗಿಂತ ₹ 30 ಲಕ್ಷದಷ್ಟು ಕಡಿಮೆ ಆದಾಯ ಗಳಿಸಿದೆ.

‘ನಿಗಮವು ನಿತ್ಯ  ₹ 1.40 ಲಕ್ಷದಿಂದ ₹ 1.50 ಲಕ್ಷ ಆದಾಯ ಗಳಿಸುತ್ತದೆ. ಶನಿವಾರ ಬೆಳಿಗ್ಗೆಯಿಂದ ಸಂಜೆ 5 ಗಂಟೆವರೆಗೆ ರೈಲುಗಳು ಸಂಚಾರ ನಡೆಸಿಲ್ಲ.

ಸಂಜೆಯಿಂದ ರಾತ್ರಿ 9 ಗಂಟೆವರೆಗೆ ಮೈಸೂರು ರಸ್ತೆ– ಬೈಯಪ್ಪನಹಳ್ಳಿ ಮಾರ್ಗದಲ್ಲಿ 11,799 ಮಂದಿ ಹಾಗೂ ಸಂಪಿಗೆ ರಸ್ತೆ– ನಾಗಸಂದ್ರ ಮಾರ್ಗದಲ್ಲಿ 5,445 ಮಂದಿ ಪ್ರಯಾಣಿಸಿದ್ದಾರೆ. ಇಂದು ಕೇವಲ 30 ಲಕ್ಷದಷ್ಟು ಕಡಿಮೆ ಆದಾಯ ಬಂದಿದೆ’ ಎಂದು ನಿಗಮದ ವಕ್ತಾರ ವಸಂತ ರಾವ್ ತಿಳಿಸಿದರು.

ಇಂದಿನಿಂದ ಪಾರ್ಕಿಂಗ್‌ ಶುಲ್ಕ:  ಮೈಸೂರು ರಸ್ತೆ ನಿಲ್ದಾಣದಲ್ಲಿ ಭಾನುವಾರದಿಂದ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸಲಾಗುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

300 ಮಂದಿ ಬಂಧನ, ಬಿಡುಗಡೆ
‘ಬಂದ್‌ ಕಾರಣ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಶುಕ್ರವಾರ ಸಂಜೆಯೇ ವಶಕ್ಕೆ ಪಡೆದಿದ್ದೆವು. ಶನಿವಾರ ಬೆಳಿಗ್ಗೆ ರಾಜಭವನ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಿವಿಧ ಸಂಘಟನೆಗಳ 300ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ, ಸಂಜೆ ವೇಳೆಗೆ ಬಿಟ್ಟು ಕಳುಹಿಸಿದೆವು’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್‌ರೆಡ್ಡಿ ತಿಳಿಸಿದರು.

‘ಸಿವಿಲ್ ಪೊಲೀಸರ ಜತೆಗೆ ಕ್ಷಿಪ್ರ ಕಾರ್ಯ ಪಡೆಯ (ಕ್ಯೂಆರ್‌ಟಿ) ಒಂದು ತುಕಡಿ, ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 66 ತುಕಡಿಗಳು ನಗರದಲ್ಲಿ ಭದ್ರತೆ ಒದಗಿಸಿದವು.

ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದರೆ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ’ ಎಂದು ಹೇಳಿದರು.

ಮಹದಾಯಿ: ಚಿತ್ರೋದ್ಯಮದ ರ‍್ಯಾಲಿ
ಬೆಂಗಳೂರು:
ಮಹದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಖಂಡಿಸಿ ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ ನಿಮಿತ್ತ ಕನ್ನಡ ಚಿತ್ರೋದ್ಯಮದವರು ನಗರದಲ್ಲಿ ಬೃಹತ್‌ ರ‍್ಯಾಲಿ ನಡೆಸಿದರು.

ನಟ ಶಿವರಾಜಕುಮಾರ್ ಹಾಗೂ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯು ಪುರಭವನದಿಂದ ಆರಂಭಗೊಂಡು ಸ್ವಾತಂತ್ರ್ಯ ಉದ್ಯಾನದಲ್ಲಿ ಮುಕ್ತಾಯಗೊಂಡಿತು. 

ರ‍್ಯಾಲಿ ವೇಳೆ ಜಿಟಿ ಜಿಟಿ ಮಳೆ ಆರಂಭವಾಗಿತ್ತು. ಅದರಲ್ಲಿ ಚಿತ್ರೋದ್ಯಮ ಸದಸ್ಯರು, ರ‍್ಯಾಲಿ ಮುಂದುವರಿಸಿದರು.
ರ‍್ಯಾಲಿಯುದ್ದಕ್ಕೂ ‘ಮಹಾದಾಯಿ ಯೋಜನೆ’ ಅನುಷ್ಠಾನಕ್ಕಾಗಿ ಘೋಷಣೆಗಳು ಮೊಳಗಿದವು. ರ‍್ಯಾಲಿ ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಭೆ ನಡೆಸಲಾಯಿತು. 

ರ‍್ಯಾಲಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಟ ಶಿವರಾಂ, ನಟ ರಮೇಶ್‌ ಅರವಿಂದ್‌, ಜಗ್ಗೇಶ್‌, ಯಶ್‌, ರವಿಶಂಕರ್‌, ನಟಿ ಮೇಘನಾರಾಜ್‌ ಸೇರಿದಂತೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಚಿತ್ರ ಪ್ರದರ್ಶಕರು ಚಿತ್ರೋದ್ಯಮದ ಕೆಲಸಗಳನ್ನು ಒಂದು ದಿನ ಸ್ಥಗಿತಗೊಳಿಸಿ ಭಾಗವಹಿಸಿದ್ದರು. ತಮ್ಮ ನೆಚ್ಚಿನ ನಟರು, ನಟಿಯರನ್ನು ನೋಡಲು ಬಂದಿದ್ದ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. 

ಅಮಾಯಕರ ಥಳಿತ: ಅನ್ಯಾಯ: ‘ನವಲಗುಂದದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅಮಾಯಕರನ್ನು ಪೊಲೀಸರು ಮನಬಂದಂತೆ ಥಳಿಸಿರುವುದು ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ’ ಎಂದು ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದೀಪ್‌ ಗೈರು : ತಂದೆ ಸರೋವರ್ ಸಂಜೀವ್ ಅವರ ಅನಾರೋಗ್ಯ ನಿಮಿತ್ತ ನಟ ಸುದೀಪ್‌ ರ‍್ಯಾಲಿಗೆ ಗೈರಾದರು.

ಹೊಸಕೋಟೆ, ನೆಲಮಂಗಲದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಬಂದ್‌ಗೆ ಯಲಹಂಕ, ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.  ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಕರ್ನಾಟಕ ರಕ್ಷಣಾ ಸೇನೆ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಒಕ್ಕೂಟ, ಹೊಯ್ಸಳ ಸೇನೆ, ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ   ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೊಸಕೋಟೆಯಲ್ಲಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಯಲಹಂಕದ ಎನ್‌ಇಎಸ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕರವೇ ಪ್ರವೀಣ್‌ ಕುಮಾರ್‌ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು  ಬಂಧಿಸಿ, ಬಿಡುಗಡೆ ಮಾಡಿದರು.

ಟ್ಯಾಕ್ಸಿಗಳಿಗೂ ತಟ್ಟಿದ ಬಂದ್ ಬಿಸಿ
ಬೆಂಗಳೂರು:
  ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ವಿರೋಧಿಸಿ ಶನಿವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ ಬಿಸಿ ನಗರದ ಟ್ಯಾಕ್ಸಿಗಳ ಓಡಾಟಕ್ಕೂ ತಟ್ಟಿತ್ತು. 

ಓಲಾ, ಉಬರ್ ಹಾಗೂ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಬಳಸುವ ಬಳಕೆದಾರರು, ತೊಂದರೆ ಅನುಭವಿಸಿದರು.
ಓಲಾ  ಹಾಗೂ ಉಬರ್‌ ಟ್ಯಾಕ್ಸಿಗಳು ಬೆಳಿಗ್ಗೆ ಸಂಚರಿಸಿದವು.

ಆದರೆ, ಕೆಲವು ಪ್ರತಿಭಟನಾಕಾರರು ಟ್ಯಾಕ್ಸಿಗಳ ಹಾನಿಗೆ ಯತ್ನಿಸಿದ್ದರಿಂದ ಬಳಿಕ ಅವು ರಸ್ತೆಗೆ ಇಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT