ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಬುರ್ಗಿಯಂಥ ದೈತ್ಯ ಶಕ್ತಿ ಇನ್ನೊಂದಿಲ್ಲ’

ಸಾಹಿತಿಗಳಿಂದ ನುಡಿನಮನ, ದೆಹಲಿಯ ಜಂತರ್‌ ಮಂತರ್‌ನಲ್ಲಿ ಶ್ರದ್ಧಾಂಜಲಿ ನಾಳೆ
Last Updated 4 ಸೆಪ್ಟೆಂಬರ್ 2015, 7:11 IST
ಅಕ್ಷರ ಗಾತ್ರ

ಧಾರವಾಡ: ‘ಪ್ರೊ.ಎಂ.ಎಂ.ಕಲಬುರ್ಗಿ ಅವರ ವಿಚಾರಗಳು ಅತ್ಯಂತ ಸತ್ಯನಿಷ್ಠೆ­ಯಿಂದ ಕೂಡಿವೆ. ನಿಷ್ಠುರ ಮಾತಿ­ನಿಂದಲೇ ಅನೇಕ ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದರು. ಆದರೆ, ಅವರಂಥ ದೈತ್ಯಶಕ್ತಿ ನಮ್ಮ ನಾಡಿನಲ್ಲಿ ಇಲ್ಲ’ ಎಂದು ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯ­ದಲ್ಲಿ ಗುರುವಾರ ಹಮ್ಮಿ­ಕೊಂಡಿದ್ದ ಪ್ರೊ.­ಎಂ.­ಎಂ.­ಕಲಬುರ್ಗಿ ನುಡಿ ನಮನ ಎಂಬ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಪ್ರೊ.ಕಲಬುರ್ಗಿ ಕೇವಲ ಕನ್ನಡ ಸಂಶೋಧನೆ ಮತ್ತು ವೈಚಾರಿಕತೆಗೆ ಹೆಸ­ರಾಗಿರದೇ ದೇಶಕ್ಕೆ ಮಾದರಿ­ಯಾಗಿದ್ದರು. ಅದಕ್ಕಾಗಿಯೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇದೇ 5 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ಪ್ರತಿಷ್ಠಿತ 25 ಸಂಘಟನೆಗಳು ‘ವಿವೇಕ್ ಕೆ ಹತ್‌ ಮೆ’ ಕಾರ್ಯಕ್ರಮ ಆಯೋಜಿಸಿವೆ. ಕನ್ನಡದಲ್ಲಿ ಎಲ್ಲ ತರಹದ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ಕೀರ್ತಿ ಅವರದ್ದಾಗಿದೆ. ನಾವೆಲ್ಲರೂ ಇಂದು ಅವರ ಉತ್ತರಾಧಿ­ಕಾರಿಗಳಾಗಿ ಮುಂದುವರಿ­ಯಬೇಕಿದೆ. ಅವರು ಒಬ್ಬೊಬ್ಬರಿಗೆ ಒಂದೊಂದು ಕೆಲಸ ವಹಿಸಿದ್ದರು, ಆ ಎಲ್ಲ  ಕೆಲಸಗಳನ್ನು ಮಾಡುವ ಮೂಲಕ ಅವರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಬೇಕಿದೆ’ ಎಂದರು.

ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಮಾತನಾಡಿ, ‘ಕಲಬುರ್ಗಿ ಅವರು ನಮ್ಮ ಕಾಲದ ಯುಗಪುರುಷ. ನಿರಂತರ ಅಧ್ಯಯನ ಮಾಡುವುದನ್ನು ನಾವುಗಳೆಲ್ಲ ಅವರಂದಿಲೇ ಕಲಿಯಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ, ‘ವಿಜಯಪುರ ಜಿಲ್ಲೆ ಬಿಟ್ಟುಬಂದವರು ದೊಡ್ಡ ವ್ಯಕ್ತಿ, ಶಕ್ತಿಗಳಾಗಿದ್ದಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವರು ತಮ್ಮದೇ ಆದ ಕ್ಷೇತ್ರದಲ್ಲಿ ಅತ್ಯುನ್ನತ ಕಾರ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ಇಂತಹ ಅನ್ಯಾಯದ ಸಾವು ಬರಬಾರ­ದಿತ್ತು’ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರೊ.ಕಲಬುರ್ಗಿ ಕುರಿತು ಬೇಂದ್ರೆ ಟ್ರಸ್ಟನ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ಡಾ.ವೀರಣ್ಣ ರಾಜೂರ, ಡಾ.ರಮಾಕಾಂತ ಜೋಶಿ, ಡಾ.ಶಾಂತಾ ಇಮ್ರಾಪುರ, ಡಾ. ಕೆ.ಆರ್.­ದುರ್ಗಾ­ದಾಸ್, ಡಾ.ಬಾಳಣ್ಣ ಶೀಗಿಹಳ್ಳಿ, ಪ್ರಕಾಶ ಗರುಡ, ಎಚ್.ಎಂ. ಬೀಳಗಿ, ಡಾ.ಜಿ.ಎಂ.­ಹೆಗಡೆ, ಡಾ.ಎಂ.ಡಿ.­ವಕ್ಕುಂದ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕಾರ್ಯಾಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಗೌರವ ಕಾರ್ಯದರ್ಶಿ ಅನಿಲ ದೇಸಾಯಿ, ಶಿವಾನಂದ ಭಾವಿಕಟ್ಟಿ ಮಾತನಾಡಿದರು. ಕವಿವ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿ, ವಂದಿಸಿದರು.

ಕಲಬುರ್ಗಿ ಅವರಲ್ಲಿ ದೈತ್ಯ ಶಕ್ತಿ  ಇತ್ತು. ಜ್ಞಾನ ಶಕ್ತಿ, ಕ್ರಿಯಾ ಶಕ್ತಿಯ ಗೋಳಗುಮ್ಮಟ  ಕಲಬುರ್ಗಿ ಆಗಿದ್ದರು
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT