ಬೆಂಗಳೂರು: ‘ಬರೆದದ್ದೆಲ್ಲ ಓದುಗರಿಗೆ ಅರ್ಥಮಾಡಿಸಬೇಕು ಎಂಬ ಕವಿಯ ಅನಿಷ್ಟ ಬಯಕೆಯಿಂದ ಪದ್ಯ ಜಾಳು ಜಾಳಾಗಿ ಹೋಗುತ್ತದೆ. ಹೀಗಾಗಿ, ಹೇಳುವುದನ್ನು ಏನಾದರೂ ಮಾಡಿ ಓದುಗರಿಗೆ ಅರ್ಥ ಮಾಡಿಸಬೇಕು ಎಂಬ ಹಠ ಕವಿಗಳಿಗೆ ಬೇಡ’ ಎಂದು ಡಾ.ನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದಲ್ಲಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ‘ನರಹಳ್ಳಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕವಿಯಾದವರು ಮೊದಲು ನಾನು ಯಾರಿಗೂ ಅರ್ಥವಾಗಬೇಕಿಲ್ಲ ಎನ್ನುವ ಸಂಕಲ್ಪ ಮಾಡಬೇಕು. ಅದರಿಂದ ಅನುಭವ, ಅಂತರಂಗದ ಎಲ್ಲ ಮಿಡಿತಗಳನ್ನು ಕೂಡ ಭಾಷೆಯ ಮೂಲಕ ಹೊಮ್ಮಿಸಲು ಸಾಧ್ಯವಿದೆ. ಆದರೆ, ಆ ಸಂಕಲ್ಪ ಮಾಡಲು ಅನೇಕರಿಗೆ ಧೈರ್ಯವಿಲ್ಲ’ ಎಂದು ಹೇಳಿದರು.

‘ಇವತ್ತಿನ ಸಮಾಜ ಯಾರೂ ಸೂಕ್ಷ್ಮವಾಗಿರಬಾರದು ಎಂದು ಅಪೇಕ್ಷೆ ಪಡುತ್ತದೆ. ಆದರೆ ಚಂದ್ರಿಕಾ ಎಷ್ಟೇ ಗದ್ದಲ, ಆರ್ಭಟವಾದರೂ ಸದ್ದಿಲ್ಲದೆ ಉರಿಯುವ ದೀಪದ ಹಾಗೆ ಕವಿತೆ ಬರೆಯುತ್ತೇನೆ ಎನ್ನುವ ಸಂಕಲ್ಪ ತೊಟ್ಟ ಹಾಗೆ ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್ ಮಾತನಾಡಿ, ‘ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಬಂದ ನಗದು ಪುರಸ್ಕಾರಗಳನ್ನು ಕ್ರೋಡೀಕರಿಸಿ ಪ್ರತಿಷ್ಠಾನ ಹುಟ್ಟುಹಾಕಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ನಾವೆಲ್ಲರೂ ಇಂತಹ ಕೆಲಸಗಳನ್ನು ಮಾಡಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಕವಿಯ ಮನಸ್ಸು ನೇರ, ನಿಷ್ಠುರಕ್ಕಿಂತ ಭಾವಾವೇಶದಿಂದ ತೆರೆದುಕೊಳ್ಳುವುದು ಹೆಚ್ಚು. ಪ್ರತಿಯೊಬ್ಬ ಕವಿಗೂ ತನ್ನದೇ ಆದ ಶೈಲಿ, ಅದಕ್ಕೊಂದು ಬರಹದ ಗತ್ತು ಇರುತ್ತದೆ. ಅಂತೆಯೇ, ಓದಲು ಹಿತವಾದ ಕಾವ್ಯ ಬರೆಯುವ ಶಕ್ತಿ ಚಂದ್ರಿಕಾ ಅವರಲ್ಲಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಕವಯತ್ರಿ ಪಿ.ಚಂದ್ರಿಕಾ ಮಾತನಾಡಿ, ‘ಕವಿತೆ ಎನ್ನುವುದು ಹೊರಗಿನ ಸಂಭ್ರಮಕ್ಕಿಂತ ಒಳಗಿನ ಅವಸ್ಥೆ ಎಂಬುದನ್ನು ನಾನು ಯಾವತ್ತಿಗೂ ನಂಬುತ್ತೇನೆ. ಹೇಳದೆ ಮುಚ್ಚಿಟ್ಟುಕೊಳ್ಳುವ ಎಷ್ಟೊಂದು ಸಂಗತಿಗಳನ್ನು ಹೊರಹಾಕಲು ಕವಿತೆಯೇ ನನಗೆ ಮಾಧ್ಯಮವಾಗಿದೆ’ ಎಂದು ಹೇಳಿದರು.

‘ಕವಿತೆ ನನ್ನೊಳಗೆ ಪ್ರಜ್ಞೆಯಾಗಿ ಮೂಡುತ್ತಿರಬೇಕಾದರೆ ನಾನು ಹೊರಗಿನ ಎಲ್ಲವನ್ನೂ ಮರೆಯುತ್ತಾ, ಅದರೊಳಗೆ ಲೀನವಾಗಿ ಹೋಗುತ್ತೇನೆ. ಆಗ, ಏನೂ ಗೊತ್ತಾಗುವುದಿಲ್ಲ. ಈ ಅವಸ್ಥೆಯನ್ನು 35 ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದೇನೆ’ ಎಂದು ತಿಳಿಸಿದರು. ಲೇಖಕ ಬಿ.ಮಹೇಶ್ ಹರವೆ ಮಾತನಾಡಿ, ‘ಇಂದಿಗೂ ತನ್ನಲ್ಲಿ ಮಗುವಿನ ಮನಸ್ಸನ್ನು ಕಾಪಿಟ್ಟುಕೊಂಡುಬಂದಿರುವ ಚಂದ್ರಿಕಾ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾರೆ. ಅದೇ ಅವರ ಕಾವ್ಯದ ಅಂತಃಸತ್ವ’ ವಿಶ್ಲೇಷಿಸಿದರು.

ನಗದು ಪುರಸ್ಕಾರ ದೇಣಿಗೆ
‘ಪ್ರಶಸ್ತಿಯೊಂದಿಗೆ ಬಂದ ₹ 10 ಸಾವಿರ ನಗದು ಪುರಸ್ಕಾರವನ್ನು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯದಲ್ಲಿರುವ ನೀಲಲೋಚನ ಮಹಾಸ್ವಾಮಿಗಳ ಗ್ರಾಮಾಂತರ ಪ್ರೌಢಶಾಲೆ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡುತ್ತೇನೆ’ ಎಂದು ಚಂದ್ರಿಕಾ ಹೇಳಿದರು.

ಯುವ ಪ್ರತಿಭಾವಂತರ ಬಗ್ಗೆ ನಮ್ಮಲ್ಲಿ ಈವರೆಗೆ ಗಹನವಾದ ಚರ್ಚೆಗಳು ನಡೆದಿಲ್ಲ. ಕೇವಲ ಆಪ್ತ ವಲಯದಲ್ಲಿ ಮಾತ್ರವೇ ಅವರ ಕಾವ್ಯದ ಪಯಣ ನಡೆಯುತ್ತಿರುವುದು ದುರಂತದ ಸಂಗತಿ
– ಎಚ್.ಎಸ್.ವೆಂಕಟೇಶಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.