ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರಂತ ಯಾರ ಸ್ವತ್ತೂ ಅಲ್ಲ, ನಾಟಕದ ಸ್ವತ್ತು’

Last Updated 23 ಅಕ್ಟೋಬರ್ 2013, 10:59 IST
ಅಕ್ಷರ ಗಾತ್ರ

ಮೈಸೂರು: ‘ಲೋಹಿತಾಶ್ವನಲ್ಲಿ ಒಬ್ಬ ಕಲಾವಿದನಿದ್ದಾನೆ’ ಎಂದು ಹೇಳಿದ ಬಿ.ವಿ. ಕಾರಂತರ ಮಾತು ನನಗೆ ದೊರೆತ ದೊಡ್ಡ ಪ್ರಶಸ್ತಿಯಾಗಿದೆ. ನಾಟಕಗಳಲ್ಲಿ ಹಾಡನ್ನೇ ಮೂಲದ್ರವ್ಯವಾಗಿಟ್ಟುಕೊಂಡ ಅವರಿಗೆ ನನ್ನ ಧ್ವನಿ ಇಷ್ಟವಾಗಿತ್ತು ಎಂದು ಚಲನಚಿತ್ರನಟ ಲೋಹಿತಾಶ್ವ ತಿಳಿಸಿದರು.

ನಗರದ ರಂಗಾಯಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕಾಲೇಜು ಯುವ ರಂಗೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರಂತರನ್ನು ನಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದೆ. ಅವರು 82 ಕಲಾವಿದರೊಂದಿಗೆ ಒಮ್ಮೆ ಬಂದರು. ‘ಪ್ರಸಾದಕ್ಕೆ ಮುಂಚೆ ಏನಾದರೂ ಉಂಟೆ?’ ಎಂದು ಕಾರಂತರು ನನ್ನನ್ನು ಪ್ರಶ್ನಿಸಿದರು. ಆಗ ನಾನು ‘ಸಂಜೆ ನಾಟಕ ಪ್ರದರ್ಶನ ಇದೆ’ ಎಂಬ ಅರಿವಿದ್ದರೆ ಉಂಟು ಎಂದಿದ್ದೆ. ನಂತರ, ಎಲ್ಲರಿಗೂ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಒಬ್ಬಟ್ಟು ಮುಂತಾದ ತಿನಿಸುಗಳನ್ನು ತಯಾರಿಸಿ ಬಡಿಸಿದ್ದೆವು. ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡು ತಿಂದು ಮುಗ್ಧ ಮಗುವಿನಂತೆ ಸಂತೃಪ್ತಿಪಟ್ಟಿದ್ದರು. ಕನ್ನಡಿಗರಲ್ಲಿ ಕಲಾವಿದರನ್ನು ಸದಾ ಹುಡುಕುತ್ತಿದ್ದರು. ಕಲಾವಿದರನ್ನು ಗುರುತಿಸುವ ಶಕ್ತಿ ಅವರಲ್ಲಿತ್ತು. ನನ್ನ ‘ಅಕ್ಕಡಿ ಸಾಲು’ ಪುಸ್ತಕದಲ್ಲಿ ‘ಕಾರಂತ ಯಾರ ಸ್ವತ್ತೂ ಅಲ್ಲ, ನಾಟಕದ ಸ್ವತ್ತು’ ಎಂದು ಬರೆದಿದ್ದೇನೆ ಎಂದು ಹೇಳಿದರು.

ನನ್ನ ಧ್ವನಿ ಬಹುತೇಕರಿಗೆ ಇಷ್ಟವಾಗಿದೆ. ಇದಕ್ಕೆ ಕಾರಣ ರಂಗ ನಿರ್ದೇಶಕ ಬಾದಲ್‌ ಸರ್ಕಾರ್‌. ರಂಗ ತರಬೇತಿ ಶಿಬಿರದಲ್ಲಿ ಅವರು ನನಗೆ ಧ್ವನಿ ಸಂಸ್ಕೃತಿ ಹೇಳಿಕೊಟ್ಟರು. ಹೀಗಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಗಂಟೆಗಟ್ಟಲೆ ಸೆಳೆದಿಟ್ಟು­ಕೊಳ್ಳಲು ಸಹಾಯವಾಯಿತು. ಉತ್ತಮ ಕಲಾವಿದ, ಒಳ್ಳೆಯ ಅಧ್ಯಾಪಕ, ಅದಕ್ಕಿಂತ ಹೆಚ್ಚಿನ­ದಾಗಿ ಒಳ್ಳೆಯ ಮನುಷ್ಯನನ್ನಾಗಿ ನನ್ನನ್ನು ರೂಪಿಸಿ ರುವುದು ನಾಟಕ ಎಂದು ಮನದುಂಬಿ ನುಡಿದರು.

ಇಂದಿನ ದಿನಗಳಲ್ಲಿ ಮಾತುಗಳು ಜಾಸ್ತಿಯಾಗಿವೆ. ಕೇಳುವವರು ಕಡಿಮೆಯಾ­ಗಿದ್ದಾರೆ. ಹಾಗಾಗಿ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ನಾಟಕ, ಸಿನಿಮಾ ಎಲ್ಲದರಿಂದ ನಾನು ದೂರವಾಗಿ ವ್ಯವಸಾಯದಲ್ಲಿ ತೊಡಗಿ ಕೊಂಡಿದ್ದೇನೆ. ಏಕೆಂದರೆ ಅಲ್ಲಿ ನನ್ನ ಜಾತಿ, ಧರ್ಮವನ್ನು ಯಾರೂ ಕೇಳುವುದಿಲ್ಲ ಎಂದು ತಮ್ಮ ಮನದಾಳದ ನೋವನ್ನು ಸೂಚ್ಯವಾಗಿ ತೋಡಿಕೊಂಡರು.

ಚಿತ್ರನಟ ಶರತ್‌ ಲೋಹಿತಾಶ್ವ ಮಾತನಾಡಿ, ಒಬ್ಬ ಕಲಾವಿದನನ್ನಾಗಿ ನನ್ನನ್ನು ಜನ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ನನ್ನ ತಂದೆ ಮತ್ತು ತಾಯಿ ಕಾರಣ. ರಂಗಭೂಮಿ, ಕಿರುತೆರೆ, ಸಿನಿಮಾ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಬಿ.ವಿ. ಕಾರಂತರ ಜತೆ ಅಭಿನಯಿಸುವ ಅವಕಾಶ ಸ್ವಲ್ಪದರಲ್ಲಿ ತಪ್ಪಿ ಹೋಯಿತು. ಈ ಕೊರಗು ಇಂದಿಗೂ ನನ್ನನ್ನು ಕಾಡುತ್ತಿದೆ. ರಂಗಾಯಣ ಕಲಾವಿದರಂತೆ ನಾಟಕವನ್ನು ಶಾಸ್ತ್ರೀಯವಾಗಿ ಕಲಿಯದಿರುವ ಬಗ್ಗೆಯೂ ಬೇಸರವಿದೆ ಎಂದರು.

ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ್‌, ಉಪ ನಿರ್ದೇಶಕ ಎಸ್‌.ಐ. ಭಾವಿಕಟ್ಟಿ, ಶಿಬಿರದ ಸಂಚಾಲಕಿ ಸರೋಜಾ ಹೆಗಡೆ ಇತರರು ಇದ್ದರು.

ಜಗತ್ತಿನಲ್ಲಿ ಒಳ್ಳೆಯ ಗಂಡಂದಿರಿಲ್ಲ...!
ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ ದಿನಗಳಲ್ಲಿ ವಿದ್ಯಾರ್ಥಿಗಳು ಹಸ್ತಾಕ್ಷರ ಹಾಕಿಸಿಕೊಳ್ಳುತ್ತಿದ್ದರು. ಒಮ್ಮೆ ಒಬ್ಬ ವಿದ್ಯಾರ್ಥಿನಿಗೆ ‘ನಿನಗೆ ಒಳ್ಳೆಯ ಗಂಡ ಸಿಕ್ಕದಿರಲಿ’ ಎಂದು ಬರೆದೆ. ಆಗ ಆ ವಿದ್ಯಾರ್ಥಿನಿ ‘ಏನ್ಸಾರ್ ಇದು’ ಎಂದಳು. ಆಗ ‘ಜಗತ್ತಿನಲ್ಲಿ ಒಳ್ಳೆಯ ಗಂಡಂದಿರಿಲ್ಲ’ ಎಂಬ ಮತ್ತೊಂದು ಸಾಲು ಬರೆದೆ. ಆಗ ವಿದ್ಯಾರ್ಥಿನಿ ‘ನೀವೂ ಸಾರ್‌..!?’ ಅಂತ ಕೇಳಿದಳು. ಆಗ ‘ನೀನು ಒಳ್ಳೆಯ ಹೆಂಡತಿಯಾಗದ ಹೊರತು ಒಳ್ಳೆಯ ಗಂಡ ಸಿಗುವುದಿಲ್ಲ’ ಎಂದು ಬರೆದುಕೊಟ್ಟೆ ಎಂದು ಲೋಹಿತಾಶ್ವ ಹಾಸ್ಯ ಚಟಾಕಿ ಸಿಡಿಸಿದರು. ‘ನಿನ್ನ ಹಸ್ತಾಕ್ಷರ ಪಡೆದುಕೊಳ್ಳಲು ಜನ ಕ್ಯೂ ನಿಂತುಕೊಳ್ಳುವಂತೆ ನೀನು ಬೆಳೆಯಬೇಕು’ ಎಂದು ರಂಗಾಯಣ ನಿರ್ದೇಶಕ ಜನಾರ್ದನ್‌ ಅವರಿಗೆ ಚಿಕ್ಕಂದಿನಲ್ಲಿ ಆಟೋಗ್ರಾಫ್‌ ಬರೆದುಕೊಟ್ಟಿದ್ದೆ ಎಂದು ಲೋಹಿತಾಶ್ವ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT