ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಸುಮಬಾಲೆ’ ವ್ಯಸನದಿಂದ ಕೂಡಿದೆ

ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಚ್.ಗೋವಿಂದಯ್ಯ ಟೀಕೆ
Last Updated 20 ಮಾರ್ಚ್ 2016, 19:38 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅವರ ಕಾವ್ಯ, ಸಾಹಿತ್ಯ ನಿಜವಾದ ದಲಿತ ಸಂವೇದನೆಯ ಪ್ರತೀಕವಲ್ಲ. ಮಾದರಿಯೂ ಅಲ್ಲ. ದಲಿತ ಸಾಹಿತ್ಯದ ಅಭಿವ್ಯಕ್ತಿಯೇ ಅಲ್ಲ. ದೇವನೂರರ ‘ಕುಸುಮಬಾಲೆ’ ಕೀಳರಿಮೆಯ ವ್ಯಸನದಿಂದ ಕೂಡಿದ್ದರೆ, ಸಿದ್ದಲಿಂಗಯ್ಯ ಅವರ ಕಾವ್ಯ ನಿಜವಾದ ಅರ್ಥದಲ್ಲಿ ಕಾವ್ಯವೇ ಅಲ್ಲ’ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಚ್.ಗೋವಿಂದಯ್ಯ ಟೀಕಿಸಿದರು.

ನಗರದ ಮಯೂರಿ ಯಾತ್ರಿನಿವಾಸದ ಸಭಾಂಗಣದಲ್ಲಿ ಶನಿವಾರ ಸಂಜೆ ಮಾತಂಗ ಸಾಹಿತ್ಯ ಪರಿಷತ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರನ ಕಾವ್ಯಗಳೇ ದಲಿತ ಸಾಹಿತ್ಯದ ಮಾದರಿಗಳು ಮತ್ತು ನೈಜ ಕಾವ್ಯಗಳು’ ಎಂದು ಅಭಿಪ್ರಾಯಪಟ್ಟರು.

‘ಆ ಕಾಲದಲ್ಲಿ ದಲಿತರ ಓಲೈಸುವುದಕ್ಕಾಗಿ (ಪ್ಲೀಸ್‌) ಮೇಲ್ಜಾತಿಯವರು ಸಿದ್ದಲಿಂಗಯ್ಯ ಅವರ ಕಾವ್ಯವನ್ನು ಹೊತ್ತು ಮೆರೆದರು. ಅದಕ್ಕೆ ಅವರು ಕವಿಯಾದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಇವೆಲ್ಲಾ ದೇವನೂರು ಅವರಿಗೆ ಬಂದ ಅವಕಾಶಗಳು. ಆದರೆ, ಅವರು ಕಣ್ಣು ಹೊರಳಿಸಿದ್ದಕ್ಕಾಗಿ ಪಕ್ಕದಲ್ಲಿದ್ದ ಸಿದ್ದಲಿಂಗಯ್ಯ ಅವರಿಗೆ ಅವಕಾಶ ಸಿಕ್ಕಿತು. ನಂತರ ಇದೇ ಮಾದರಿಯಲ್ಲಿ ಬೇರೆ ಅವಕಾಶಗಳು ದೊರೆತವು’ ಎಂದು ಅವರು ವ್ಯಂಗ್ಯವಾಡಿದರು.

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ‘ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಕ್ಕಿಂತ ಕನ್ಹಯ್ಯಾ ಕುಮಾರ್ ಹೋರಾಟವೇ ಶ್ರೇಷ್ಠವಾಗಿದೆ. ಹಜಾರೆ ಹೋರಾಟ ಸಂವಿಧಾನವನ್ನು ದೂರುವಂತಿತ್ತು. ಆದರೆ, ಕನ್ಹಯ್ಯಾನ ಹೋರಾಟದಲ್ಲಿ ತುಂಬಾ ಸ್ಪಷ್ಟತೆ ಇದೆ. ದನಿವಂಚಿತರ, ಬಡವರು, ದಲಿತರು, ಮಹಿಳೆಯರು ಸೇರಿದಂತೆ ಪ್ರಜಾಪ್ರಭುತ್ವದ ನೀತಿಯ ಪರವಾಗಿ ಆತ ಹೋರಾಟಕ್ಕೆ ನಿಂತಿದ್ದಾನೆ’ ಎಂದು ಹೇಳಿದರು.

ಮಾತಂಗ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಕೆ.ಹಂಪಣ್ಣ, ಕವಿ ಪ್ರೊ.ಕೆ.ಬಿ.ಸಿದ್ದಯ್ಯ, ಬಿ.ಟಿ.ನಂದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT