ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿ ಶಾಂತಿಗೆ ಭಾರತ ಹೆಚ್ಚು ಶ್ರಮಿಸಬೇಕು’

Last Updated 30 ಅಕ್ಟೋಬರ್ 2014, 11:10 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಅರುಣಾಚಲ ಪ್ರದೇಶದಲ್ಲಿ 54 ಗಡಿ ಚೌಕಿಗಳ ನಿರ್ಮಿಸಲು ನಿರ್ಧರಿಸಿರುವ ಭಾರತದ ನಡೆಗೆ ಗುರುವಾರ ಕಳವಳ ವ್ಯಕ್ತಪಡಿಸಿರುವ ಚೀನಾ ಸೇನೆ, ಗಡಿಯಲ್ಲಿರುವ ಪರಿಸ್ಥಿತಿಯನ್ನು ಭಾರತ ಮತ್ತಷ್ಟು ಸಂಕೀರ್ಣಗೊಳಿಸಬಾರದು. ಅದು ‘ವಿವಾದಾತ್ಮಕ ಪ್ರದೇಶ’ ಆಗಿರುವುದರಿಂದ ಶಾಂತಿ ಕಾಯ್ದುಕೊಳ್ಳಲು ಶ್ರಮಿಸಬೇಕು ಎಂದು ಅಭಿಪ್ರಾಯ ಪಟ್ಟಿದೆ.

ಅರುಣಾಚಲ ಪ್ರದೇಶ ಗಡಿಯಲ್ಲಿ 54 ಹೊಸ ಗಡಿ ಠಾಣೆ ನಿರ್ಮಾಣಕ್ಕೆ ಗೃಹ ಸಚಿವಾಲಯ ಚಿಂತನೆ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ಈ ಸಂಬಂಧಿತ ವರದಿಯನ್ನು ಗಮನಿಸಿದ್ದೇವೆ. ಚೀನಾ–ಭಾರತದ ಪೂರ್ವಗಡಿಯಲ್ಲಿ ವಿವಾದ ಇನ್ನೂ ಹಸಿರಾಗಿದೆ’ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಯಾಂಗ್ ಯುಜಿನ್‌ ಪ್ರತಿಕ್ರಿಯಿಸಿದ್ದಾರೆ.

‘ಗಡಿ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಲು ಹೆಚ್ಚು ಶ್ರಮಿಸುವಂತೆ ಹಾಗೂ ಪರಿಸ್ಥಿತಿಯನ್ನು ಬಿಗಾಡಾಯಿಸುವಂಥ ಸನ್ನಿವೇಶವನ್ನು ಸೃಷ್ಟಿಸದಂತೆ ನಾವು ಭಾರತವನ್ನು ಕೋರುತ್ತೇವೆ’ ಎಂದು ಅವರು ನುಡಿದಿದ್ದಾರೆ.

ಗಡಿಯಲ್ಲಿ ಮೂಲಸೌಕರ್ಯ ಕಲ್ಪಿಸುತ್ತಿರುವ ಭಾರತದ ಬೆಳವಣಿಗೆಯ ಬಗ್ಗೆ ಚೀನಾ ಏಕೆ ಎಚ್ಚರಿಕೆ ವಹಿಸುತ್ತಿದೆ ಎಂಬ ಪ್ರಶ್ನೆಗೆ ಯಾಂಗ್, ‘ನೀವು ಹೇಳುತ್ತಿರುವ ರಸ್ತೆಗಳು ಚೀನಾ–ಭಾರತದ ಗಡಿಯ ಪೂರ್ವ ಭಾಗದಲ್ಲಿವೆ. ಆ ಪ್ರದೇಶ ಇನ್ನೂ ವಿವಾದಾತ್ಮಕವಾಗಿದೆ. ಈ ವಿವಾದಾತ್ಮಕ ಪ್ರದೇಶದ ಬಗೆಗಿನ ಚೀನಾದ ನಿಲುವು ಸ್ಪಷ್ಟ ಹಾಗೂ ದೃಢವಾಗಿದೆ’ ಎಂದಿದ್ದಾರೆ.

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದು ಚೀನಾ ವಾದಿಸುತ್ತಿದೆ.

‘ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಲು ಉಭಯ ರಾಷ್ಟ್ರಗಳು ಸಾಮರಸ್ಯ ತಳೆಯುವುದು ಅಗತ್ಯ. ಮತ್ತು ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ವ್ಯತಿರಿಕ್ತ ನಿಲುವುಗಳ ಬದಲಿಗೆ ಒಮ್ಮತಾಭಿಪ್ರಾಯಕ್ಕೆ ಬರಲು ಪ್ರಯತ್ನಿಸಬೇಕು’ ಎಂದಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಗಡಿ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 175 ಕೋಟಿ ರೂಪಾಯಿ ವೆಚ್ಚದಲ್ಲಿ 54 ಹೊಸ ಗಡಿ ಚೌಕಿ ನಿರ್ಮಿಸುವುದಾಗಿ ಭಾರತ ಸರ್ಕಾರ ಕಳೆದ ವಾರ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT