ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋದಾವರಿ’ಗೆ ‘ಕಟರ್ ಹೆಡ್‌’ ಅಳವಡಿಕೆ

ನಮ್ಮ ಮೆಟ್ರೊ: ಸಂಪಿಗೆ ರಸ್ತೆ ಬಳಿ ತಿಂಗಳಲ್ಲಿ ಸುರಂಗ ಕೊರೆಯುವ ಕೆಲಸ ಆರಂಭ
Last Updated 27 ಜುಲೈ 2015, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಮೆಟ್ರೊ’ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಗೋದಾವರಿ’ಗಾಗಿ ಇಟಲಿಯಿಂದ ತರಿಸಿಕೊಂಡಿರುವ  ‘ಕಟರ್‌ ಹೆಡ್‌’ (ಯಂತ್ರದ  ಕೊರೆಯುವ ಮುಂಭಾಗ) ಅನ್ನು ಅಳವಡಿಸಲಾಗಿದೆ.

ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ‘ಗೋದಾವರಿ’ಯ ‘ಕಟರ್‌ ಹೆಡ್‌’ ವರ್ಷದ ಹಿಂದೆ ಜಖಂಗೊಂಡಿತ್ತು. ಕಟರ್‌ ಹೆಡ್‌ ಅನ್ನು ಫೆಬ್ರುವರಿಯಲ್ಲಿ ಇಟಲಿಯಿಂದ ತರಿಸಿಕೊಳ್ಳಲಾಗಿತ್ತು. ಇದೀಗ ಕಟರ್ ಹೆಡ್‌ ಅಳವಡಿಕೆಯಾಗಿದೆ. 2016ರ ಮಾರ್ಚ್‌ ತಿಂಗಳೊಳಗೆ ಮೊದಲನೇ ಹಂತದ ಯೋಜನೆಯನ್ನು ಪೂರ್ಣ ಗೊಳಿಸಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಗೋದಾವರಿ ಯಂತ್ರ ಸುರಂಗ ಕೊರೆಯುವ ಕೆಲಸ ಆರಂಭಿಸಲು ಇನ್ನೂ ಒಂದು ತಿಂಗಳು ಬೇಕು. ಸಾಕಷ್ಟು ಪೂರ್ವಭಾವಿ ಕೆಲಸಗಳು ನಡೆಯಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

‘ನಾಲ್ಕೈದು ತಿಂಗಳಲ್ಲಿ ಯಂತ್ರವು ಮೆಜೆಸ್ಟಿಕ್‌ ನಿಲ್ದಾಣವನ್ನು ತಲುಪಲಿದೆ’  ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ತಿಂಗಳೊಳಗೆ ಗೋದಾವರಿ ಸುರಂಗ ಕೊರೆಯುವ ಕೆಲಸ ಮತ್ತೆ ಆರಂಭಿಸಲಿದೆ. ಗಡುವಿನೊಳಗೆ ಮೊದಲನೇ ಹಂತದ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್ ಖರೋಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಖೋಡೆ ವೃತ್ತದ ಸಮೀಪದ ಲಕ್ಷ್ಮಣ್‌ ಸ್ಲಂ ಪಕ್ಕದಲ್ಲಿ 60 ಅಡಿಗಳಷ್ಟು ನೆಲದಾಳದಲ್ಲಿ ಬಂಡೆ ಕಲ್ಲನ್ನು ಕೊರೆಯುವಾಗ ‘ಕಟರ್‌ ಹೆಡ್‌’ಗೆ ಹಾನಿಯಾಗಿತ್ತು. ಇದರಿಂದ ಯಂತ್ರವು ಹಿಂದಕ್ಕಾಗಲಿ ಮುಂದಕ್ಕಾಗಲಿ ಹೋಗದಷ್ಟು ಕೆಟ್ಟುಹೋಯಿತು.
ಕೆಡುವ ಮುನ್ನ ‘ಗೋದಾವರಿ’ಯು 350 ಮೀಟರುಗಳಷ್ಟು ಉದ್ದದ ಸುರಂಗ ನಿರ್ಮಿಸಿತ್ತು. ಬಾಕಿ ಉಳಿದ 615 ಮೀಟರುಗಳಷ್ಟು ಉದ್ದದ ಸುರಂಗವನ್ನು ಈಗ ನಿರ್ಮಿಸಬೇಕಿದೆ.

ಮೊದಲಿನ ಯೋಜನೆ ಪ್ರಕಾರ ‘ಗೋದಾವರಿ’ಯೇ ಜೋಡಿ ಮಾರ್ಗದ ಮತ್ತೊಂದು ಸುರಂಗವನ್ನೂ ನಿರ್ಮಿಸಬೇಕಿತ್ತು. ಆದರೆ, ಈ ಯಂತ್ರ ಕೆಟ್ಟು ನಿಂತಿದ್ದರಿಂದ ಮತ್ತೊಂದು ಸುರಂಗವನ್ನು ‘ಮಾರ್ಗರೀಟಾ’ ಎಂಬ ಟಿಬಿಎಂನಿಂದ ನಿರ್ಮಿಸಲಾಗುತ್ತಿದೆ.

ಕೆ.ಆರ್‌.ಮಾರ್ಕೆಟ್‌ ನಿಲ್ದಾಣದಿಂದ ಚಿಕ್ಕಪೇಟೆವರೆಗೆ ‘ಕೃಷ್ಣಾ’ ಟಿಬಿಎಂ  ಹಾಗೂ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ವರೆಗೆ ‘ಕಾವೇರಿ’ ಟಿಬಿಎಂ ಸುರಂಗ ನಿರ್ಮಾಣ ಕಾರ್ಯದಲ್ಲಿ ನಿರತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT