ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂದೆಯೇ ನನ್ನ ಮೊದಲ ಗುರು’

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ ಚೈತ್ರಾ ಭಟ್ ತಮ್ಮ ಕೈಯಲ್ಲಿ ಹನ್ನೊಂದು ಚಿನ್ನದ ಪದಕಗಳನ್ನು ಹಿಡಿದು ವೇದಿಕೆಯಿಂದ ಕೆಳಗಿಳಿದು ಬಂದಾಗ, ಅವರ ತಂದೆ ಗಣಪತಿ ಭಟ್‌ ಮಗಳನ್ನು ಎದೆಗವಚಿಕೊಂಡು ಆನಂದಭಾಷ್ಪ ಸುರಿಸಿದರು.

ತಾಯಿ ಪ್ರಭಾವತಿ ಅವರ ಕಣ್ಣಾಲಿಗಳು ತೇವಗೊಂಡಿದ್ದವು. ಈ ದೃಶ್ಯ ಕಂಡ ವಿದ್ಯಾರ್ಥಿಗಳು ಚಪ್ಪಾಳೆಯ ಮಳೆಗರೆದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.

2014–15ನೇ ಸಾಲಿನಲ್ಲಿ ಪದವಿ ಪೂರೈಸಿದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕೆರೆಹೊಂಡ ಗ್ರಾಮದ ಚೈತ್ರಾ 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ.  ಸದ್ಯ ನವದೆಹಲಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಎಂ.ಎಸ್ಸಿ ಓದುತ್ತಿದ್ದು, ಸಸ್ಯ ಸಂರಕ್ಷಣೆ ವಿಷಯದಲ್ಲಿ ಸಂಶೋಧನೆ ಮಾಡುವ ಇಂಗಿತ ಅವರದು.

‘ಕೃಷಿ ಪದವಿ ಪಡೆಯುವುದರ ಜತೆಗೆ ಅದಕ್ಕೆ ಅಗತ್ಯ ಇರುವ ಪ್ರಾಯೋಗಿಕ ಜ್ಞಾನವನ್ನು ನನ್ನಲ್ಲಿ ತುಂಬಿದವರು ನನ್ನ ತಂದೆ. ಅವರಿಂದಲೇ ಈ  ಸಾಧನೆ ಸಾಧ್ಯವಾದುದು. ನನ್ನ ತಂದೆಯೇ ಪದವಿಯ ಮೊದಲ ಗುರು’ ಎಂದು ಚೈತ್ರಾ ತಮ್ಮ ತಂದೆಯ ಕುರಿತು ಅಭಿಮಾನದ ಮಾತುಗಳನ್ನಾಡಿದರೆ, ‘ಮಗಳು ಪಿಯುಸಿ ನಂತರ ವೈದ್ಯಕೀಯ ಕೋರ್ಸ್‌ಗೆ ಸೇರಲಿ ಎಂಬುದು ನನ್ನ ಅಪೇಕ್ಷೆಯಾಗಿತ್ತು. ಆದರೆ ಆಕೆ ಕೃಷಿಯಲ್ಲಿ ಪದವಿ ವ್ಯಾಸಂಗದ ಬಗ್ಗೆ ಒಲವು ತೋರಿದಳು. ಅವಳ ಆಸೆಯಂತೆ ಇಲ್ಲಿಗೆ ಸೇರಿಸಿದೆವು. ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಚೂಟಿ ಇದ್ದ ಮಗಳ ಸಾಧನೆ ಹೆಮ್ಮೆ ತಂದಿದೆ’ ಎಂದು ಗಣಪತಿ ಭಟ್‌ ಸಂತಸ ವ್ಯಕ್ತಪಡಿಸಿದರು.

‘ಕಾಲೇಜಿನ ವಾತಾವರಣ ಅಧ್ಯಯನಕ್ಕೆ ಸೂಕ್ತವಾಗಿತ್ತು.  ಪಾಠಗಳನ್ನು ಗಮನವಿಟ್ಟು ಕೇಳುತ್ತಿದ್ದೆ. ಮನೆಯಲ್ಲಿನ ಕೃಷಿ ವಾತಾವರಣ ಹಾಗೂ ಓದು ಈ ಸಾಧನೆಗೆ ನೆರವಾಯಿತು’ ಎಂದು ತಮ್ಮ ಸಾಧನೆಯ ಬಗ್ಗೆ ಹೇಳಿದ ಚೈತ್ರಾ, ಕೃಷಿ ವಿ.ವಿ ಸ್ನೇಹ ತಂಡದ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ರೈತರಿಗೆ ನೆರವಾಗುವ ಸರಳ ಸಾಧನಗಳನ್ನು ಅಭಿವೃದ್ಧಿಪಡಿ ಸಿದ್ದನ್ನು ವಿವರಿಸಿದರು.

ಗೃಹ ವಿಜ್ಞಾನ ವಿಭಾಗದ ಚೈತ್ರಾ ರೈ ಆರು ಚಿನ್ನದ ಪದಕ ಪಡೆದಿದ್ದಾರೆ. ಸದ್ಯ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೈತ್ರಾ, ಪದವಿ ವ್ಯಾಸಂಗಕ್ಕೆ ಸೇರಿದ ದಿನದಂದೇ ಪದಕದ ಕನಸು ಕಂಡಿದ್ದರಂತೆ. ‘ಭಾರತವು ಜಗತ್ತಿನ ಮಧುಮೇಹ ರಾಜಧಾನಿಯಾಗುತ್ತಿದೆ. ಹೀಗಾಗಿ ಮಧುಮೇಹ ಸಮಸ್ಯೆ ಕುರಿತಂತೆ ಸಂಶೋಧನೆ ಕೈಗೊಳ್ಳಬೇಕೆಂದಿದ್ದೇನೆ’ ಎಂದು ಹೇಳಿದರು.
ಅತಿ ಹೆಚ್ಚು ಅಂಕಗಳೊಂದಿಗೆ ಕೃಷಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಉಪಾಸನಾ ಮಹಾಪಾತ್ರ 6 ಚಿನ್ನದ ಪದಕಗಳಿಗೆ ಭಾಜನರಾದರು.  

ಪಿಎಚ್‌.ಡಿಯ 53, ಸ್ನಾತಕೋತ್ತರ ಪದವಿಯ 283, ಪದವಿ ವಿಭಾಗದ  667 ವಿದ್ಯಾರ್ಥಿಗಳು ಸೇರಿ ದಂತೆ 1,003 ವಿದ್ಯಾರ್ಥಿಗಳಿಗೆ  ಪದವಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT