ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಥಾಯ್ಲೆಂಡ್‌ ಪಾತ್ರೆಯಲ್ಲಿ ಭಾರತದ ಕಲೆ’

Last Updated 7 ಮಾರ್ಚ್ 2015, 9:51 IST
ಅಕ್ಷರ ಗಾತ್ರ

ಬೆಂಗಳೂರು: ‘ಥಾಯ್ಲೆಂಡ್‌ನ ಖಾವ್‌ ಸಾಮ್‌ ಕಾವೊ ಪ್ರದೇಶದಲ್ಲಿ ಉತ್ಖನನ ಮಾಡುವಾಗ ಸಿಕ್ಕಿರುವ ಅಲಂಕಾರಿಕ ಕಂಚಿನ ಪಾತ್ರೆಗಳ ಮೇಲೆ ಭಾರತದ ಧಾರ್ಮಿಕ ಸಂಪ್ರದಾಯಗಳಿಗೆ ಸಂಬಂಧಿಸಿದ ಚಿತ್ರ­ಗಳಿವೆ’ ಎಂದು ಲಂಡನ್‌ ವಿಶ್ವವಿದ್ಯಾಲಯ ಕಾಲೇಜಿನ ಪುರಾತತ್ವ ವಿಭಾಗದ ಸಂಶೋಧಕ ಇಯಾನ್‌ ಗ್ಲೋವರ್‌ ಹೇಳಿದರು.

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಅವರು ಸಿ.ವಿ. ಸುಂದರಮ್‌ ಸ್ಮಾರಕ ವಿಶೇಷ ಉಪನ್ಯಾಸ ನೀಡಿದರು.
‘ಲೋಹ ಯುಗದಲ್ಲೇ ಖಾವ್‌ ಸಾಮ್‌ ಕಾವೊ ಒಂದು ಪ್ರಮುಖ ಬಂದರಾಗಿತ್ತು. ಆ ವೇಳೆಗಾಗಲೇ ಅಲ್ಲಿ ಬಹುರಾಷ್ಟ್ರೀಯ ವಹಿವಾಟು ನಡೆಯುತ್ತಿದ್ದು­ದಕ್ಕೆ ಹಲವು ಸಾಕ್ಷ್ಯಗಳು ಸಿಕ್ಕಿವೆ’ ಎಂದು ತಿಳಿಸಿದರು.

‘ಖಾವ್‌ ಸಾಮ್‌ ಕಾವೊದಲ್ಲಿ ನಡೆದ ಉತ್ಖನನ­ದಲ್ಲಿ ಸಿಕ್ಕ ಕಂಚಿನ ಪಾತ್ರೆಗಳ ಮೇಲೆ ಭಾರತದ ಕಮಲ, ಚಕ್ರ, ಆನೆ, ಕುದುರೆ ಹಾಗೂ ಪುರುಷ–ಮಹಿಳೆಯರ ಚಿತ್ರಗಳಿವೆ. ಭಾರತದ ಪಶ್ಚಿಮ ಬಂಗಾಲ, ಓಡಿಶಾ ಹಾಗೂ ಕೇರಳದಲ್ಲಿ ಈಗಲೂ ತಯಾರಿಸುವ ಕಂಚಿನ ಪಾತ್ರೆಗಳಿಗೂ ಥಾಯ್ಲೆಂಡ್‌ನ ಉತ್ಖನನದಲ್ಲಿ ಸಿಕ್ಕ ಕಂಚಿನ ಪಾತ್ರೆಗಳಿಗೂ ಸಾಕಷ್ಟು ಸಾಮ್ಯವಿದೆ’ ಎಂದು ವಿವರಿಸಿದರು.

‘ಥಾಯ್ಲೆಂಡ್‌ನಲ್ಲಿ ಪ್ರಚಲಿತದಲ್ಲಿದ್ದ ಕಂಚಿನ ಪಾತ್ರೆಗಳ ತಯಾರಿಕಾ ವಿಧಾನ ಭಾರತದ ತಂತ್ರಗಾರಿಕೆಯನ್ನೇ ಹೋಲುತ್ತಿತ್ತು. ಭಾರತದಿಂದ ಹೋಗಿದ್ದ ಕುಶಲಕರ್ಮಿಗಳು ಅಲ್ಲಿನವರಿಗೆ ಈ ತಂತ್ರಗಾರಿಕೆಯನ್ನು ಹೇಳಿಕೊಟ್ಟಿರಬೇಕು’ ಎಂದು ಗ್ಲೋವರ್‌ ಅಭಿಪ್ರಾಯಪಟ್ಟರು.

‘ಸಾಂಚಿ, ಮಥುರಾ, ಚಂದ್ರಕೇತುಘರ್‌ ಮೊದಲಾದ ಪ್ರದೇಶಗಳ ಕಲೆಯನ್ನೂ ಥಾಯ್ಲೆಂಡ್‌ ಪಾತ್ರೆಗಳ ಮೇಲೆ ಕಾಣಬಹುದಾಗಿದೆ. ಮಹಿಳೆಯರು ಧರಿಸುತ್ತಿದ್ದ ಅಲಂಕಾರಿಕ ಆಭರಣಗಳು ಸಹ ಉತ್ಖನನದಲ್ಲಿ ದೊರೆತಿವೆ. ಥಾಯ್ಲೆಂಡ್‌ನ ಲೋಹದ ಕುಸುರಿ ಕಲೆಯಲ್ಲಿ ಭಾರತದ ಗಾಢ ಪ್ರಭಾವ ಇತ್ತು ಎನ್ನುವುದಕ್ಕೆ ಇವುಗಳು ದ್ಯೋತಕವಾಗಿವೆ’ ಎಂದು ಹೇಳಿದರು.

ಸುಂದರಮ್‌ ಅವರ ವ್ಯಕ್ತಿತ್ವದ ಕುರಿತು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಬಲದೇವ್‌ ರಾಜ್‌ ಹಾಗೂ ಪ್ರೊ. ಎಸ್‌. ರಂಗನಾಥನ್‌ ಮಾತನಾಡಿದರು. ಪ್ರೊ. ಶಾರದಾ ಶ್ರೀನಿವಾಸನ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT