ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗಮಂಡಲ’ ಪ್ರದರ್ಶನ ರದ್ದು

ಗೋಮಾಂಸ ಭಕ್ಷಣೆಗೆ ನಾಟಕಕಾರ ಗಿರೀಶ್ ಕಾರ್ನಾಡ್‌ ಬೆಂಬಲಕ್ಕೆ ಆಕ್ಷೇಪ
Last Updated 30 ಏಪ್ರಿಲ್ 2015, 19:46 IST
ಅಕ್ಷರ ಗಾತ್ರ

ಉಡುಪಿ: ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರು ಗೋಮಾಂಸ ಸೇವನೆಯ ಪರವಾಗಿದ್ದಾರೆ ಎಂಬ ಕಾರಣ ಮುಂದಿಟ್ಟು ಅವರ ‘ನಾಗಮಂಡಲ’ ನಾಟಕ ಪ್ರದರ್ಶನಕ್ಕೆ ಮಣಿಪಾಲದ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. ಹೀಗಾಗಿ ಬುಧವಾರ ಈ ನಾಟಕದ ಪ್ರದರ್ಶನ ನಡೆಯಲಿಲ್ಲ.

ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಏಪ್ರಿಲ್‌ 30ರಂದು (ಬುಧವಾರ) ನಾಗಮಂಡಲ ನಾಟಕ ಪ್ರದರ್ಶನ ನಿಗದಿಯಾಗಿತ್ತು. 

ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ‘ನಾಗಮಂಡಲ’ ನಾಟಕವನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ಸುವರ್ಣ ಮಹೋತ್ಸವ ಆಚರಿಸುತ್ತಿರುವ ಉಡುಪಿಯ ರಂಗಭೂಮಿ ಸಂಸ್ಥೆ ಈ ನಾಟಕ ಪ್ರದರ್ಶಿಸಬೇಕಾಗಿತ್ತು. ರಂಗಭೂಮಿಯ ಜಂಟಿ ಕಾರ್ಯದರ್ಶಿಯೂ ಆಗಿರುವ ಎಚ್‌.ಪಿ. ರವಿರಾಜ್‌ ನಾಟಕದ ನಿರ್ದೇಶಕರಾಗಿದ್ದು, ನಾಟಕ ಈಗಾಗಲೇ 28 ಪ್ರದರ್ಶನಗಳನ್ನು ಕಂಡಿದೆ.

‘ನಾಗಮಂಡಲ’ ನಾಟಕ ಪ್ರದರ್ಶಿಸಿ ಎಂದು ದೇವಸ್ಥಾನದವರೇ ರವಿರಾಜ್‌ ಅವರನ್ನು ಕೇಳಿಕೊಂಡಿದ್ದರು. ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಳಿಸಿತ್ತು. ಈ ಬಗ್ಗೆ ಜಾಹೀರಾತು  ಸಹ ನೀಡಲಾಗಿತ್ತು. ನಂತರ ಕೆಲವು ಸಂಘಟನೆಗಳು ಮತ್ತು ದೇವಸ್ಥಾನದ ಕೆಲವು ಸದಸ್ಯರು ಈ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದುಎಂಬ ಒತ್ತಡ ಹೇರಿದರು ಎನ್ನಲಾಗಿದೆ.

‘ಕಾರ್ನಾಡ್‌ ಅವರ ಹೇಳಿಕೆಗೂ ನಾಟಕಕ್ಕೂ ಸಂಬಂಧ ಇಲ್ಲ. ಅವರ ಅಭಿಪ್ರಾಯ ತಪ್ಪು ಎನ್ನುವುದಾದರೆ ಬೇರೆ ರೀತಿ ಪ್ರತಿಭಟನೆ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ನಾಟಕ ಪ್ರದರ್ಶನ ಬೇಡ ಎಂದಿರುವುದು ಸರಿಯಲ್ಲ’ಎಂದು ರಂಗ ನಿರ್ದೇಶಕ ರವಿರಾಜ್‌ ಹೇಳಿದರು.

‘18 ಕಲಾವಿದರನ್ನು ನಾಟಕಕ್ಕಾಗಿ ಸಜ್ಜುಗೊಳಿಸಲಾಗಿತ್ತು. ಪೂರ್ವಾಭ್ಯಾಸ ನಡೆದಿತ್ತು. ಧ್ವನಿವರ್ಧಕ, ರಂಗಸಜ್ಜಿಕೆ, ವಾದ್ಯ ಮೇಳದವರಿಗೆ ಮುಂಗಡ ಹಣ ನೀಡಲಾಗಿತ್ತು. ಆದರೆ  ದಿಢೀರ್‌ ನಿರ್ಧಾರದಿಂದಾಗಿ ಆಘಾತವಾಯಿತು’ ಎಂದು ರವಿರಾಜ್‌ ಹೇಳಿದರು.
*

ವೈಯಕ್ತಿಕ ನಿಲುವುಗಳಿಗೂ ಕೃತಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ನಾನು ವಾಜಪೇಯಿ ಅವರ ಕವನ ಇಷ್ಟಪಡುತ್ತೇನೆ ಎಂದ ಮಾತ್ರಕ್ಕೆ ಬಿಜೆಪಿಯನ್ನು ಮೆಚ್ಚುತ್ತೇನೆ ಎಂದಲ್ಲ.
– ಕಾತ್ಯಾಯಿನಿ ಕುಂಜಿಬೆಟ್ಟು,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT